ಬೇಕಾಬಿಟ್ಟಿ ಆನ್‌ಲೈನ್‌ ಕ್ಲಾಸ್‌ಗೆ ಬ್ರೇಕ್: ದಿನ, ಸಮಯ ಎಲ್ಲವೂ ನಿಗಧಿ!

By Kannadaprabha NewsFirst Published Oct 29, 2020, 7:13 AM IST
Highlights

ಬೇಕಾಬಿಟ್ಟಿಆನ್‌ಲೈನ್‌ ಕ್ಲಾಸ್‌ಗೆ ಕಡಿವಾಣ| ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ| ಎಲ್‌ಕೆಜಿ ಯುಕೆಜಿಗೆ ವಾರಕ್ಕೆ 3 ದಿನ ಆನ್‌ಲೈನ್‌ ಕ್ಲಾಸ್‌| 1-5ನೇ ಕ್ಲಾಸ್‌ ಆನ್‌ಲೈನ್‌ ಅವಧಿ 30 ನಿಮಿಷಕ್ಕಿಳಿಕೆ| ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ

ಬೆಂಗಳೂರು(ಅ.29): ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣ ಪುಟ್ಟಬದಲಾವಣೆಗೊಳೊಂದಿಗೆ ಪರಿಷ್ಕೃತ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು, ತಜ್ಞರ ವರದಿ ಆಧರಿಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಬೇಕಾಬಿಟ್ಟಿಆನ್‌ಲೈನ್‌ ಕ್ಲಾಸ್‌ನಿಂದ ಮಕ್ಕಳಿಗೆ ನೇತ್ರ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆ ಎದುರಾಗುತ್ತಿರುವ ದೂರು ಕೇಳಿಬಂದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ.

ಹೊಸ ಸುತ್ತೋಲೆಯಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ -ಯುಕೆಜಿ) ತರಗತಿ ಮಕ್ಕಳಿಗೆ ಈ ಮೊದಲು ವಾರದಲ್ಲಿ 1 ದಿನ ಮಾತ್ರ ಇದ್ದ ಆನ್‌ಲೈನ್‌ ತರಗತಿಯನ್ನು ಈಗ 3 ದಿನಗಳಿಗೆ ಹಾಗೂ 3ರಿಂದ 5ನೇ ತರಗತಿ ಮಕ್ಕಳಿಗೆ ವಾರದಲ್ಲಿ 3 ದಿನ ಇದ್ದ ಶಿಕ್ಷಣವನ್ನು 5 ದಿನಕ್ಕೆ ಹೆಚ್ಚಿಸಲಾಗಿದೆ. ಇನ್ನು 1ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಈ ಮೊದಲು 30ರಿಂದ 45 ನಿಮಿಷಗಳು ಇದ್ದ ಪ್ರತಿ ಪಿರಿಯಡ್‌ ಸಮಯವನ್ನು 30 ನಿಮಿಷಕ್ಕೆ ಇಳಿಸಲಾಗಿದೆ. ಉಳಿದ ತರಗತಿಗಳಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಯಾವ ಕ್ಲಾಸ್‌ಗೆ ಎಷ್ಟುಸಮಯ?:

ಸುತ್ತೋಲೆಯ ವಿವರವನ್ನು ನೋಡುವುದಾದರೆ, ಪೂರ್ವ ಪ್ರಾಥಮಿಕ (ಎಲ್‌ಕೆಜಿ- ಯುಕೆಜಿ) ತರಗತಿ ಮಕ್ಕಳಿಗೆ ವಾರದಲ್ಲಿ 3 ದಿನ ಮಾತ್ರ ದಿನಕ್ಕೆ 30 ನಿಮಿಷ ಮೀರದಂತೆ ಒಂದು ಅವಧಿ (ಪಿರಿಯಡ್‌) ಶಿಕ್ಷಣ ನೀಡಬೇಕು. ಈ ವೇಳೆ ಪೋಷಕರು ಉಪಸ್ಥಿತರಿರುವುದು ಕಡ್ಡಾಯ.

ಅದೇ ರೀತಿ 1 ಮತ್ತು 2ನೇ ತರಗತಿ ಮಕ್ಕಳಿಗೆ ವಾರದಲ್ಲಿ 3 ದಿನ- ದಿನವೊಂದಕ್ಕೆ ಎರಡು ಅವಧಿಯಲ್ಲಿ (ಪ್ರತಿ ಪಿರಿಯಡ್‌ 30 ನಿಮಿಷ); 3ರಿಂದ 5ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ- ದಿನವೊಂದಕ್ಕೆ ಎರಡು ಅವಧಿಯಂತೆ (ಪ್ರತಿ ಪಿರಿಯಡ್‌ 30 ನಿಮಿಷ), 6ರಿಂದ 8ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ- ದಿನವೊಂದಕ್ಕೆ 3 ಅವಧಿಯಂತೆ (ಪ್ರತಿ ಪಿರಿಯಡ್‌ 30ರಿಂದ 45 ನಿಮಿಷ), 9 ಮತ್ತು 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ- ನಾಲ್ಕು ಅವಧಿಯಂತೆ (ಪ್ರತಿ ಪಿರಿಯಡ್‌ 30 ರಿಂದ 45 ನಿಮಿಷ ಮೀರದಂತೆ) ಆನ್‌ಲೈನ್‌ ತರಗತಿ ನಡೆಸಲು ಸುತ್ತೋಲೆ ಹೊರಡಿಸಲಾಗಿದೆ.

ಇನ್ನು, ಶಾಲೆಗಳು ಆನ್‌ಲೈನ್‌ ಶಿಕ್ಷಣ ನಡೆಸುವಾಗ ಈಗಾಗಲೇ ಕಳೆದ ಜೂನ್‌ 27ರಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಶಾಲೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಇಲಾಖೆ ಆಯುಕ್ತ ಅನ್ಬುಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ವಾರ ತಡವಾದ ಸುತ್ತೋಲೆ:

ಎಲ್‌ಕೆಜಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನಡೆಸಲು ಅನುಮತಿ ನೀಡಿ ಕಳೆದ ಜೂನ್‌ 27ರಂದು ಆದೇಶ ಹೊರಡಿಸಿದ್ದ ಸರ್ಕಾರ, ಯಾವ್ಯಾವ ತರಗತಿ ಮಕ್ಕಳಿಗೆ ವಾರದಲ್ಲಿ ಎಷ್ಟುದಿನ ಹಾಗೂ ಎಷ್ಟುಸಮಯ ಆನ್‌ಲೈನ್‌ ಶಿಕ್ಷಣ ನಡೆಸಬೇಕೆಂದು ತಜ್ಞರ ವರದಿ ಆಧರಿಸಿ ವಿವರವಾದ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಆದರೆ, ಈ ಮಾರ್ಗಸೂಚಿ ಅನುಸರಿಸದ ಶಾಲೆಗಳು ತಮಗೆ ತೋಚಿದ ದಿನ ಸಮಯದಲ್ಲಿ ಅದರಲ್ಲೂ ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿ ಆನ್‌ಲೈನ್‌ ತರಗತಿ ನಡೆಸುತ್ತಿರುವ ಬಗ್ಗೆ ಹಾಗೂ ಇದರಿಂದ ಮಕ್ಕಳ ಕಣ್ಣುಗಳು ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬಂದಿದ್ದವು. ಶಾಲೆಗಳ ಈ ಕ್ರಮ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಲೆಕ್ಕಿಸದೆ ತಮಗೆ ತೋಚಿದಂತೆ ಆನ್‌ಲೈನ್‌ ಶಿಕ್ಷಣ ನಡೆಸುತ್ತಿರುವ ಶಾಲೆಗಳಿಗೆ ಕಡಿವಾಣ ಹಾಕಲು ತಕ್ಷಣವೇ ವಿವರವಾದ ಸುತ್ತೋಲೆ ಹೊರಡಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಅ.21ರಂದು ಪತ್ರದ ಮೂಲಕ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅದರಂತೆ ಅ.22ರಂದೇ ಇಲಾಖೆ ಆಯುಕ್ತರ ಅನ್ಬುಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆನ್ನಲಾದರೂ ಒಂದು ವಾರ ತಡವಾಗಿ ಇದು ಬಹಿರಂಗಪಡಿಸಲಾಗಿದೆ.

click me!