ಇಷ್ಟು ದಿನ ಪರೀಕ್ಷೆಗಳಿಗೆ ಕೊರೋನಾ ಭೀತಿ ಇತ್ತು. ಇದೀಗ ಮಳೆ ಕಾಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನ ಮುಂದೂಡಲಾಗಿದೆ.
ಮಂಗಳೂರು, (ಸೆ.20): ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ 21-9-2020 ರಂದು ನಿಗದಿಯಾಗಿದ್ದ ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಈ ಬಗ್ಗೆ ಇಂದು (ಭಾನುವಾರ) ಮಂಗಳೂರು ವಿಶ್ವವಿದ್ಯಾನಿಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಸೆ. 21 ರ ಸೋಮವಾರ ನಿಗದಿಯಾಗಿದ್ದ ಪರೀಕ್ಷೆಗಳು ಮಾತ್ರ ಮುಂದೂಡಿಕೆಯಾಗಿದ್ದ, ಪರಿಷ್ಕೃತ ದಿನಾಕವನ್ನು ಶೀಘ್ರದಲ್ಲಿ ನಿಗದಿಪಡಿಸಲಾಗುವುದು. ಉಳಿದಂತೆ ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿಶ್ವವಿದ್ಯಾನಿಲಯ ಸ್ಪಷ್ಟಪಡಿಸಿದೆ.
ಮುಂದಿನ ವಾರ ಭಾರೀ ಮಳೆ ಸಾಧ್ಯತೆ: ರೆಡ್ ಅಲರ್ಟ್ ಘೋಷಣೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಳ್ಳಿ, ಕೊಳ್ಳಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ಜನಜೀವನ, ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಇದರ ಮಧ್ಯೆಯೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂಬುದಾಗಿ ತಿಳಿಸಿರುವ ಹವಾಮಾನ ಇಲಾಖೆ, ಮುಂದಿನ ಮೂರು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಅದರಲ್ಲೂ ಉಡುಪಿ ಸೇರಿದಂತೆ ಮಲೆನಾಡು ಭಾಗದಲ್ಲಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳ ಮನೆಗಳು, ಆಸ್ತಿ-ಪಾಸ್ತಿ ಮುಳುಗಡೆಯಾಗಿದೆ.