ಮುಗಿಯದ ಕೊರೋನಾ ಗೋಳು: ಮೊಬೈಲಲ್ಲೇ ಪಾಠಕ್ಕೆ ಶಿಕ್ಷಣ ಇಲಾಖೆ ಅಣಿ..!

By Kannadaprabha NewsFirst Published Jun 10, 2021, 11:10 AM IST
Highlights

* ಮೊಬೈಲ್‌ ಆ್ಯಪ್‌ ಮೂಲಕ ಮನೆಯಿಂದಲೇ ಮಕ್ಕಳಿಗೆ ಪಾಠ
* ಆನ್‌ಲೈನ್‌ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಯಶಸ್ವಿಯಾದ ವಿದೇಶಗಳು
* ಸಂಪನ್ಮೂಲ ಶಿಕ್ಷಕರಿಗೆ ಹಾಗೂ ನಂತರ ಪಾಠ ಮಾಡುವ ಶಿಕ್ಷಕರಿಗೆ ಆನ್‌ಲೈನ್‌ ತರಬೇತಿ 
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.10):  ಮಹಾಮಾರಿ ಕೊರೋನಾ ಅಟ್ಟಹಾಸದಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಭಾರಿ ಪೆಟ್ಟು ಬಿದ್ದಿದೆ. 2 ವರ್ಷ ಮಕ್ಕಳ ಕಲಿಕೆಗೆ ಧಕ್ಕೆಯಾಗಿದೆ. ಇಷ್ಟಾದರೂ ಕೊರೋನಾ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲವಾದ್ದರಿಂದ ಆನ್‌ಲೈನ್‌ ಪಾಠಕ್ಕೆ ರಾಜ್ಯದ ಶಿಕ್ಷಣ ಇಲಾಖೆ ಸಜ್ಜಾಗುತ್ತಿದೆ. ‘ಉಜ್ವಲ ಪುನಶ್ಚೇತನ ತರಬೇತಿ’ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರನ್ನು ತರಬೇತಿಗೊಳಿಸುತ್ತಿದೆ.

ಸಾಂಪ್ರದಾಯಿಕವಾಗಿ ಪಾಠ ಮಾಡುವ ಸಾಮರ್ಥ್ಯ ಇರುವ ಶಿಕ್ಷಕರನ್ನು ಅತ್ಯಾಧುನಿಕ ಆನ್‌ಲೈನ್‌ ವ್ಯವಸ್ಥೆಯಲ್ಲಿ ಪಾಠ ಮಾಡುವಂತೆ ಅಣಿಗೊಳಿಸಲು ಅವರಿಗೆ ಈಗ ಆನ್‌ಲೈನ್‌ ತರಬೇತಿಯನ್ನು ಆಯಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ನೀಡಲಾಗುತ್ತಿದೆ.

ಮೊದಲ ಹಂತವಾಗಿ ಸಂಪನ್ಮೂಲ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಇವರ ಮೂಲಕ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮೊಬೈಲ್‌ ಪಾಠ ಕೇಳುವ ಅಭಿಪ್ರೇರಣೆಯನ್ನು ನಂತರದ ಹಂತದಲ್ಲಿ ಮೂಡಿಸಲಾಗುತ್ತದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುಹೂರ್ತ : ಯಾವಾಗ ನಡೆಯಲಿದೆ..?

ಕೊರೋನಾ ಇನ್ನೂ ನಾಲ್ಕಾರು ವರ್ಷ ಇರುತ್ತದೆ. ಇದು ಈಗಲೇ ಮುಗಿಯುವುದಿಲ್ಲ. ಹೀಗಾಗಿ, ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯ. ಅದರಲ್ಲೂ 3ನೇ ಅಲೆ ಮಕ್ಕಳನ್ನೇ ಟಾರ್ಗೆಟ್‌ ಮಾಡುತ್ತದೆ ಎನ್ನುವ ತಜ್ಞರ ಎಚ್ಚರಿಕೆಯಿಂದ ಶಿಕ್ಷಣ ಇಲಾಖೆ ಸದ್ದಿಲ್ಲದೆ ಹೊಸ ಸಮಸ್ಯೆ ನಿಭಾಯಿಸಿ, ಶೈಕ್ಷಣಿಕ ಕಲಿಕೆಯನ್ನು ಮುಂದುವರೆಸುವ ದಿಸೆಯಲ್ಲಿ ನಾನಾ ರೀತಿಯಲ್ಲಿ ತಯಾರು ಮಾಡಿಕೊಳ್ಳುತ್ತಿದೆ.

ಏನೇನು ತರಬೇತಿ?:

ಸಂಪನ್ಮೂಲ ಶಿಕ್ಷಕರಿಗೆ ಹಾಗೂ ನಂತರ ಪಾಠ ಮಾಡುವ ಶಿಕ್ಷಕರಿಗೆ ಆನ್‌ಲೈನ್‌ ತರಬೇತಿ ಈಗಾಗಲೇ ಪ್ರಾರಂಭ ಮಾಡಲಾಗಿದೆ. ಆನ್‌ಲೈನ್‌ ತರಗತಿ ನಿರ್ವಹಣೆ, ವಾಟ್ಸಆ್ಯಪ್‌ ಗ್ರೂಪ್‌ ರಚನೆ , ಪಾಲಕರೊಂದಿಗೆ ವೆಬಿನಾರ್‌ ಸಭೆ ನಡೆಸುವುದು, ಆನ್‌ಲೈನ್‌ ಮೂಲಕವೇ ಕೋವಿಡ್‌ ಮಾರ್ಗಸೂಚಿ ಪಾಠ. ಆನ್‌ಲೈನ್‌ ಮೂಲಕ ಸೇತುಬಂಧ ತರಗತಿ ನಡೆಸುವುದು. ಮಕ್ಕಳಿಗೆ ಪಾಠ ಮಾಡುವುದಕ್ಕಾಗಿಯೇ ಸಿದ್ಧ ಮಾಡುತ್ತಿರುವ ಆ್ಯಪ್‌ ಬಳಕೆ ತರಬೇತಿ. ಆನ್‌ಲೈನ್‌ ಮೂಲಕವೇ ನಿರಂತರ ಮೌಲ್ಯಮಾಪನ ಮಾಡುವುದು. ಹೀಗೆ ಹತ್ತಾರು ಬಗೆಯಾಗಿ ಆನ್‌ಲೈನ್‌ ಕಲಿಕೆಯನ್ನು ಮೊದಲು ಶಿಕ್ಷಕರಿಗೆ ಮಾಡಿಸಲಾಗುತ್ತದೆ.

ದಾನಿಗಳಿಂದ ಟ್ಯಾಬ್‌:

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪಾಲಕರ ಬಳಿ ಸ್ಮಾರ್ಟ್‌ ಪೋನ್‌ ಇರುವುದು ತೀರಾ ಕಡಿಮೆ. ಹೀಗಾಗಿ, ಇಂಥ ಮಕ್ಕಳಿಗೆ ಆಯಾ ಗ್ರಾಮದಲ್ಲಿಯೇ ದಾನಿಗಳನ್ನು ಗುರುತಿಸಿ, ಮಕ್ಕಳಿಗೆ ಟ್ಯಾಬ್‌ ದಾನ ಪಡೆಯುವಂತೆ ಆಯಾ ಶಾಲೆಯ ಶಿಕ್ಷಕರು ಮಾಡಬೇಕು. ಇದರಿಂದ ದೂರದರ್ಶನ ಮೂಲಕ ಮಾಡುವ ಪಾಠಗಳನ್ನು ಪ್ರತಿಯೊಂದು ವಿದ್ಯಾರ್ಥಿಯೂ ಆಲಿಸುವಂತೆ ಮಾಡುವುದು.

ಇದೆಲ್ಲ ಗಮನಿಸುತ್ತಲೇ ಶಿಕ್ಷಕರು ಮಕ್ಕಳ ಕಲಿಕೆಯನ್ನು ಆನ್‌ಲೈನ್‌ನಲ್ಲಿಯೇ ಮೌಲ್ಯಮಾಪನ ಮಾಡುವುದನ್ನು ಕಲಿಸುವುದು. ಇದರಿಂದ ಕೋವಿಡ್‌ ಇದ್ದರೂ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಹಾಗೂ ಮಕ್ಕಳ ಕಲಿಕೆಯ ಮೇಲೆ ಯಾವುದೇ ಪರಿಣಾಮ ಆಗದಂತೆ ನಿರಂತರತೆ ಬೆಳೆಸುವುದಕ್ಕೆ ಶಿಕ್ಷಣ ಇಲಾಖೆ ಸಜ್ಜುಗೊಳ್ಳುತ್ತಿದೆ.

ಪಿಯು ವಿದ್ಯಾರ್ಥಿಗಳಿಗೀಗ ‘ಬಹುಪರೀಕ್ಷೆ’ ಕಂಟಕ

ಹಲವು ದೇಶಗಳಲ್ಲಿ ಜಾರಿ:

ಈಗಾಗಲೇ ನಾನಾ ದೇಶಗಳಲ್ಲಿ ಈ ಆನ್‌ಲೈನ್‌ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಯಶಸ್ವಿಯಾಗಿವೆ. ಹೀಗಾಗಿ, ಅಲ್ಲಿ ಕೋವಿಡ್‌ ಸಂಕಷ್ಟದಲ್ಲಿಯೂ ಮಕ್ಕಳ ಕಲಿಕೆಯ ಮೇಲೆ ಅಷ್ಟೊಂದು ಪರಿಣಾಮ ಆಗಿಲ್ಲ. ಇನ್ನು ದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಥ ಆನ್‌ಲೈನ್‌ ಶಿಕ್ಷಣವನ್ನು ಯಶಸ್ವಿಯಾಗಿ ಮಾಡುತ್ತಿವೆ. ಆದರೆ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಹಾಗೂ ಪಾಠ ಮಾಡುತ್ತಿರುವ ಶಿಕ್ಷಕರನ್ನು ಈ ಆನ್‌ಲೈನ್‌ ವ್ಯವಸ್ಥೆಗೆ ಸಿದ್ಧ ಮಾಡುವ ದಿಸೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸದ್ದಿಲ್ಲದೆ ಸನ್ನದ್ಧವಾಗುತ್ತಿರುದು ಉತ್ತಮ ಬೆಳವಣಿಗೆಯೇ ಸರಿ.

ಕೊರೋನಾ ಯಾವಾಗ ಕೊನೆಗೊಳ್ಳುತ್ತದೆಯೋ ಗೊತ್ತಿಲ್ಲ. ಹೀಗಾಗಿ, ಆನ್‌ಲೈನ್‌ನಲ್ಲಿಯೇ ಪಾಠ ಮಾಡಲು ಶಿಕ್ಷಕರನ್ನು ಸಿದ್ಧ ಮಾಡುವುದಕ್ಕಾಗಿ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಅವರು ವೆಬಿನಾರ್‌, ಜೂಮ್‌, ಗೂಗಲ್‌ ಮೀಟ್‌, ಯುಟ್ಯೂಬ್‌ ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ತಯಾರು ಮಾಡಲಾಗುತ್ತದೆ. ಪವರ್‌ ಪಾಯಿಂಟ್‌ ಮೂಲಕ ಮಕ್ಕಳಿಗೆ ಪಾಠ ಮಾಡಲು ಚಿತ್ರಗಳನ್ನು ಬಳಕೆ ಮಾಡುವ ತರಬೇತಿಯನ್ನು ನೀಡಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಮುನಿರಾಬಾದ್‌) ಪ್ರಾಚಾರ್ಯ ಶ್ಯಾಮಸುಂದರ್‌ ತಿಳಿಸಿದ್ದಾರೆ.  

ಆನ್‌ಲೈನ್‌ ಪಾಠ ಮಾಡಲು ಶಿಕ್ಷಕರನ್ನು ಸಿದ್ಧ ಮಾಡಲಾಗುತ್ತಿದೆ. ಇದಕ್ಕಾಗಿ ಅವರಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ. ತಂತ್ರಜ್ಞಾನ ಬಳಕೆಯ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಸಂಪನ್ಮೂಲ ಶಿಕ್ಷಕದೇವರಡ್ಡಿ ಬಿಸರಳ್ಳಿ ಹೇಳಿದ್ದಾರೆ.
 

click me!