9ನೇ ವರ್ಷಕ್ಕೆ ಟೀಚರ್‌, 16 ವರ್ಷಕ್ಕೆ ಹೆಡ್‌ಮಾಸ್ಟರ್! ಪ್ರಪಂಚದ ಅತೀ ಕಿರಿಯ ಶಿಕ್ಷಕ ಇವರೇ

By Suvarna NewsFirst Published Sep 11, 2022, 11:31 AM IST
Highlights

*ಪಶ್ಚಿಮ ಬಂಗಾಳದ ಬಾಬಲ್ ಅಲಿ ತಮ್ಮ 9 ವರ್ಷ ವಯಸ್ಸಿನಲ್ಲೇ ಪಾಠ ಹೇಳಲು ಶುರು ಮಾಡಿದರು
*ಅಲಿ 16 ವರ್ಷಕ್ಕೆ ಕಾಲಿಟ್ಟಾಗ ವಿಶ್ವದ ಅತ್ಯಂತ ಕಿರಿಯ ಹೆಡ್‌ಮಾಸ್ಟರ್ ಎಂದು ಕರೆದ ಬಿಬಿಸಿ
*ಬಾಬಾರ್ ಅಲಿಗೆ ಈಗ 29 ವರ್ಷ, ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ
 

ಅತಿ ಚಿಕ್ಕ ವಯಸ್ಸಿನಲ್ಲಿ ಮುಖ್ಯೋಪಾಧ್ಯಾಯ ಆಗುವುದು ಕಷ್ಟದ ಮಾತು. ಆದ್ರೆ ಇಲ್ಲೊಬ್ಬರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಹೆಡ್ ಮಾಸ್ಟರ್ ಆಗಿದ್ದಲ್ಲದೆ, ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ 29 ವರ್ಷದ ಬಾಬರ್ ಅಲಿ (Babar Ali), ಇಂಥ ಸಮಾಜಮುಖಿ ಕಾರ್ಯಗಳನ್ನ ಮಾಡಿ ಎಲ್ಲರ ಗಮನ ಸೆಳೆದಿರುವ ಮುಖ್ಯಶಿಕ್ಷಕ. ನೋಡುಗರಿಗೆ ಇವರುಸಾಮಾನ್ಯ ವ್ಯಕ್ತಿ ಯಂತೆ ಕಾಣಿಸುತ್ತಾರೆ. ಆದರೆ ಇವರು ಸಾಮಾನ್ಯರಲ್ಲ. ಅತಿ ಚಿಕ್ಕ ವಯಸ್ಸಿಗೆ ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಎಂಬ ಬಿರುದು ಪಡೆದವರು. 16 ವರ್ಷ ವಯಸ್ಸಿನವರಾಗಿದ್ದಾಗ ಬಿಬಿಸಿ, ಇವರಿಗೆ ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಬಾಬರ್ ಅಲಿ ಕೇವಲ 9 ವರ್ಷದವರಾಗಿದ್ದಾಗಲೇ ಮಕ್ಕಳಿಗೆ ಪಾಠ ಹೇಳಿಕೊಡಲು ಶುರು ಮಾಡಿದ್ರು. ಪೇರಲ ಮರವೊಂದರ ಕೆಳಗೆ ಪುಟ್ಟ ಶಾಲೆಯಲ್ಲಿ ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದಾರೆ. ವಾಸ್ತವವಾಗಿ ಅಲಿ ಅವರ ಬ್ಯಾಚ್‌ಮೇಟ್‌ಗಳು ಇನ್ನೂ ಓದುತ್ತಿರುವಾಗ ಅಥವಾ ಕೆಲಸ ಹುಡುಕುತ್ತಿರುವ ಸಮಯದಲ್ಲಿ, ಬಾಬರ್ ಅಲಿ ಅದಾಗಲೇ ತಮ್ಮ ಹಳ್ಳಿಯಲ್ಲಿ ಮಕ್ಕಳಿಗೆ ಉಚಿತವಾಗಿ ಕಲಿಸುವ ಮತ್ತು ಮಾರ್ಗದರ್ಶನ ನೀಡುವ ಪ್ರಮುಖ ಸ್ಥಾನವನ್ನು ಪಡೆದಿದ್ದರು. ಶಿಕ್ಷಣದ ಮೂಲಕ ಬಡತನದ ವಿರುದ್ಧ ಹೋರಾಡುವುದೇ ಅವರ ಜೀವನದ ಧ್ಯೇಯವಾಗಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಅಶ್ವಥ್ ನಾರಾಯಣ

ಅವರಿಗೆ ಒಂಬತ್ತು ವರ್ಷದವರಾಗಿದ್ದಾಗ ಒಂದು ದಿನ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಕೆಲ ಮಕ್ಕಳು ಹೊಲದಲ್ಲಿ ಕೆಲಸ ಮಾಡುವುದನ್ನು ನೋಡಿದರಂತೆ. ಮರುದಿನವೂ ಮಕ್ಕಳು ಹಾಗೇ ದುಡಿಯುವುದನ್ನು ನೋಡಿದ್ದಾರೆ. ಮಕ್ಕಳು ಹೆತ್ತವರಿಗೆ ಜಮೀನಿನ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ರು. ಇದನ್ನು ನೋಡಿದ ಅಲಿಗೆ ಇದು ಅನ್ಯಾಯವೆಂದು ಅನಿಸಿದೆ.  ಹೀಗಾಗಿ ಅವರು ತಮ್ಮನ್ನು ತಾವೇ ಬದಲಾಯಿಸಲು ನಿರ್ಧರಿಸಿದರಂತೆ. ಆನಂತರ ಪುಟ್ಟ ಶಾಲೆಯೊಂದನ್ನು ತೆರೆದು ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದ್ದಾರೆ. ಅದರ ಪ್ರತಿಫಲವೇ  ಬಾಬರ್ ಅಲಿಯವರ 'ಆನಂದ ಶಿಕ್ಷಾ ನಿಕೇತನ' (Anand Shiksha Niketan).

ಆನಂದ್ ಶಿಕ್ಷಾ ನಿಕೇತನ್ ಎಂದರೆ ಸಂತೋಷದ ಕಲಿಕೆಗಾಗಿ ಶಾಲೆ. ಇಲ್ಲಿ ಶಿಕ್ಷಣದ ಜೊತೆಗೆ, ಅಲಿ ತನ್ನ ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆಯನ್ನು ತರುವ ಬಗ್ಗೆ ಕಾಳಜಿ ವಹಿಸಿದ್ದರು.  ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿ,  ತಮ್ಮ ಶಾಲೆಯನ್ನು ಗುರುತಿಸಬೇಕೆಂದು ಅಲಿ ಬಹಳ ಪ್ರಯತ್ನ ಪಟ್ಟರು. ಪ್ರೌಢ ಶಿಕ್ಷಣ ಮಂಡಳಿ, ಉಚಿತ ಕಲಿಕಾ ಕಿಟ್‌ಗಳು, ಶಾಲಾ ಸಮವಸ್ತ್ರಗಳು, ಆಹಾರ ಮತ್ತು ಅದರ ವಿದ್ಯಾರ್ಥಿಗಳಿಗೆ ಇತರ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತದೆ. ಪಶ್ಚಿಮ ಬಂಗಾಳ ಸರ್ಕಾರವು ಪ್ರತಿ ವಿದ್ಯಾರ್ಥಿಗೆ ಪ್ರತಿದಿನ ಶಾಲೆಗೆ ಹಾಜರಾಗಲು ನಾಲ್ಕು ಕೆಜಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಹೊಂದಿದೆ. ಅಲಿ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡಾಗ, ಅವರು ತಮ್ಮ ಶಾಲೆಯನ್ನು ಸ್ಥಳೀಯ ಸರ್ಕಾರದಿಂದ ಗುರುತಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು, ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಿದರು. 

NEET Results 2022: ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಹಮದಾಬಾದ್‌ನ 52 ವರ್ಷದ ಉದ್ಯಮಿ

ಅಂದಹಾಗೇ ಬಾಬರ್ ಅಲಿ ಸ್ವಾಮಿ ವಿವೇಕಾನಂದರ ಕಟ್ಟಾ ಅನುಯಾಯಿ ಮತ್ತು ಅವರ ಜಿಲ್ಲೆಯ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಕೆಲಸವನ್ನು ಮುಂದುವರೆಸಲು ಎದುರು ನೋಡುತ್ತಿರುವ ಉತ್ತಮ ಶಿಕ್ಷಕ. ಈ ವರ್ಷ ಬಾಬರ್ ತನ್ನ ಬೋಧನಾ ಪ್ರಯಾಣದ 20 ವರ್ಷಗಳನ್ನು ಪೂರೈಸಲಿದ್ದಾರೆ. ಅವರ ಶಾಲೆ ಆನಂದ ಶಿಕ್ಷಾ ನಿಕೇತನದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಬಹುಪಾಲು ಮಹಿಳಾ ಶಿಕ್ಷಕರಿದ್ದಾರೆ. ಬಾಬರ್ ಅಲಿ, ಶಿಕ್ಷಕರಿಗೆ ಮಾತ್ರವಲ್ಲದೆ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಸ್ಫೂರ್ತಿಯ ಮೂಲವಾಗಿದ್ದಾರೆ. ಒಮ್ಮೆ ನೀವು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ತಲುಪಲು ನಿರ್ಧರಿಸಿದರೆ ನೀವು ಯಾವಾಗಲೂ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಅನ್ನೋದಕ್ಕೆ ಅವರ ಪ್ರಯತ್ನಗಳು ಮತ್ತು ಕಥೆಯೇ ನಮಗೆ ಸ್ಪೂರ್ತಿ ಅಂದ್ರೆ ತಪ್ಪಾಗಲಿಕ್ಕಿಲ್ಲ.

click me!