ಸರ್ಕಾರಿ ಶಾಲೆ ಮಕ್ಕಳಿಂದ ತಿಂಗಳಿಗೆ 100 ರು ಸಂಗ್ರಹ

By Kannadaprabha NewsFirst Published Oct 21, 2022, 9:58 AM IST
Highlights

ಶಾಲಾಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿ ವೆಚ್ಚಕ್ಕಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರಿಂದ ದಾನ, ದೇಣಿಗೆ ರೂಪದಲ್ಲಿ ಎಸ್‌ಡಿಎಂಸಿಗಳ ಮೂಲಕ ಮಾಸಿಕ ತಲಾ 100 ರು. ಹಣ ಸಂಗ್ರಹಕ್ಕೆ ಅವಕಾಶ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 

ಬೆಂಗಳೂರು (ಅ.21): ಶಾಲಾಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿ ವೆಚ್ಚಕ್ಕಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರಿಂದ ದಾನ, ದೇಣಿಗೆ ರೂಪದಲ್ಲಿ ಎಸ್‌ಡಿಎಂಸಿಗಳ ಮೂಲಕ ಮಾಸಿಕ ತಲಾ 100 ರು. ಹಣ ಸಂಗ್ರಹಕ್ಕೆ ಅವಕಾಶ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ಇದು ಕಡ್ಡಾಯವಲ್ಲ. ಸ್ವ ಇಚ್ಛೆಯಿಂದ ಯಾವುದೇ ಪೋಷಕರು ಹಣ ನೀಡಬಹುದಾಗಿರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಪ್ರತಿ ವರ್ಷ ಸರ್ಕಾರ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ, ಕೆಲವೊಮ್ಮೆ ಶಾಲೆಗಳ ಸ್ಥಳೀಯ ಅಗತ್ಯತೆಯಂತೆ ಹೆಚ್ಚುವರಿ ಹಣಕಾಸಿನ ನೆರವು ಅಗತ್ಯವಾಗುತ್ತದೆ. ಹಾಗಾಗಿ ಪ್ರತಿ ವಿದ್ಯಾರ್ಥಿಗಳ ಪೋಷಕರಿಂದ ದಾನ, ದೇಣಿಗೆ, ಕೊಡುಗೆ ರೂಪದಲ್ಲಿ ಮಾಸಿಕ 100 ರು. ಹಣವನ್ನು ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಖಾತೆಗೆ ಸಂದಾಯ ಮಾಡಿಕೊಂಡು ಶಾಲಾಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಬಳಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಉಸಿರಾಟದ ತೊಂದರೆಯಾಗಿ ಸರ್ಕಾರಿ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಪೋಷಕರಿಂದ ಸಂಗ್ರಹಿಸಿದ ಹಣವನ್ನು ಮೊದಲ ಆದ್ಯತೆಯಲ್ಲಿ ಕುಡಿಯುವ ನೀರು, ಶೌಚಾಲಯ, ಶಾಲೆ ಶುಚಿತ್ವ, ವಿದ್ಯುತ್‌ ಬಿಲ್‌, ಶಾಲಾ ಪರಿಕರಗಳ ತುರ್ತು ರಿಪೇರಿ, ಬಿಸಿಯೂಟ ಸೇವಿಸಲು ಮಕ್ಕಳಿಗೆ ಪೂರಕವಾದ ವಸ್ತುಗಳ ಖರೀದಿ, ಅಗತ್ಯ ಬೋಧನಾ ಉಪಕರಣಗಳ ಖರೀದಿ, ಗಣಕಯಂತ್ರಗಳ ಖರೀದಿ, ಅಗತ್ಯವಿದ್ದಲ್ಲಿ ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಿಸಿಕೊಂಡು ಗೌರವ ಸಂಭಾವನೆ ನೀಡಲು ಬಳಸಿಕೊಳ್ಳಬಹುದೆಂದು ಸೂಚಿಸಲಾಗಿದೆ.

ಈಗಾಗಲೇ ದಾನ ನೀಡುತ್ತಿದ್ದಾರೆ: ಈ ಸುತ್ತೋಲೆ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಇದು ಹೊಸದಲ್ಲ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಊರಿನ ನಾಗರಿಕರು, ದಾನಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಸೇರಿ ಯಾರು ಬೇಕಾದರೂ ಇಲಾಖೆಯ ‘ನನ್ನ ಶಾಲೆ-ನನ್ನ ಕೊಡುಗೆ’ ಯೋಜನೆಯಡಿ ಹಣಕಾಸಿನ ನೆರವು ನೀಡಬಹುದು ಎಂದರು. ಈಗಾಗಲೇ ಕೆಲವೆಡೆ ಆಯಾ ಶಾಲಾ ಪೋಷಕರೇ ಮಾಸಿಕ ಹಣ ನೀಡಿ ತಮ್ಮ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ಶಾಲೆಗಳಲ್ಲಿ ದೊರಕಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅಧಿಕೃತ ಮಾನ್ಯತೆ ನೀಡುವಂತೆ ಪೋಷಕರಿಂದ ಹಾಗೂ ಪೋಷಕರೇ ಸದಸ್ಯರಾಗಿರುವ ಎಸ್‌ಡಿಎಂಸಿಗಳಿಂದ ಮನವಿಗಳು ಬಂದಿದ್ದವು. 

ಕೊರೋನಾ ಕಡಿಮೆಯಾಗುತ್ತಿದ್ದಂತೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕುಸಿತ..!

ಇದನ್ನು ಆಧರಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಇಲ್ಲಿ ಯಾವುದೇ ಬಡ ಪೋಷಕರಿಂದ ಹಣ ವಸೂಲಿ ಅಥವಾ ಕಡ್ಡಾಯವಾಗಿ ಮಾಸಿಕ ಇಂತಿಷ್ಟುಹಣ ನೀಡಲೇಬೆಂಬ ನಿಯಮ ಅಲ್ಲ. ಕೊಡುವುದು ಬಿಡುವುದು ಅವರ ಇಚ್ಛೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಎರಡನೇ ಆದ್ಯತೆಯಲ್ಲಿ ತರಗತಿ ಬೆಂಚ್‌, ಡೆಸ್ಕ್‌ಗಳ ಖರೀದಿ, ಆಟದ ಮೈದಾನ ಸಿದ್ಧತೆ, ಇ-ಕಲಿಕಾ ಕೇಂದ್ರ ಸ್ಥಾಪನೆ, ಗ್ರಂಥಾಲಯ, ವಾಚನಾಲಯ ಬಲವರ್ಧನೆ, ಸ್ಕೌಟ್ಸ್‌, ಗೈಡ್ಸ್‌, ಎನ್‌ಎಸ್‌ಎಸ್‌/ಎನ್‌ಸಿಸಿ, ಕ್ರೀಡಾ ಮಕ್ಕಳಿಗೆ ಅಗತ್ಯ ಸಾಮಗ್ರಿ ಖರೀದಿ, ಶಾಲಾವನ ಬಲವರ್ಧನೆ ಸೇರಿದಂತೆ ಇತರೆ ಕಾರ್ಯಗಳಿಗೆ ಹಣ ಬಳಸಿಕೊಳ್ಳಬಹುದೆಂದು ತಿಳಿಸಲಾಗಿದೆ.

click me!