ಸರ್ಕಾರಿ ಶಾಲಾ ಮಕ್ಕಳು ವಂಚಿತರು; ಆನ್‌ಲೈನ್‌ ಶಿಕ್ಷಣಕ್ಕೆ ಪೋಷಕರ ವಿರೋಧ

By Kannadaprabha News  |  First Published Jul 9, 2020, 9:16 AM IST

ಆನ್‌ಲೈನ್‌ ಶಿಕ್ಷಣಕ್ಕೆ ಪೋಷಕರ ವಿರೋಧ | ಸರ್ಕಾರದಲ್ಲೇ ಆನ್‌ಲೈನ್‌ ಬಗ್ಗೆ ಗೊಂದಲವಿದೆ | ಮೊದಲು ಬೇಡವೆಂದು ಈಗ ಆನ್‌ಲೈನ್‌ಗೆ ಒಲವು | ರಾಜ್ಯಾದ್ಯಂತ ಪೋಷಕರ ಅಸಮಾಧಾನ| ಸರ್ಕಾರಿ ಶಾಲಾ ಮಕ್ಕಳು ಇದರಿಂದ ವಂಚಿತರು: ಅಳಲು


ಬೆಂಗಳೂರು (ಜು. 09):  ಆನ್‌ಲೈನ್‌ ತರಗತಿ ಸಂಬಂಧ ತಜ್ಞರ ಸಮಿತಿ ವರದಿ ಸಲ್ಲಿಕೆಯಾಗುವ ಜೊತೆಗೆ ಹೈಕೋರ್ಟ್‌ ಕೂಡ ರಾಜ್ಯ ಸರ್ಕಾರದ ಆನ್‌ಲೈನ್‌ ಶಿಕ್ಷಣದ ಆದೇಶಕ್ಕೆ ತಡೆ ಹಿಡಿಯದಿರುವುದು ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಈ ಬಗ್ಗೆ ವಿರೋಧಗಳು ವ್ಯಕ್ತವಾಗಿವೆ.

‘ಒಂದು ಕಡೆ ರಾಜ್ಯ ಸರ್ಕಾರ ಆನ್‌ಲೈನ್‌ ಶಿಕ್ಷಣವಿಲ್ಲ ಎನ್ನುತ್ತಿದೆ. ಮತ್ತೊಂದೆಡೆ ತಜ್ಞರ ವರದಿ ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿದಂತೆ ವರದಿ ನೀಡಿದೆ. ಈ ವರದಿಯನ್ನು ಆಧರಿಸಿ ಖಾಸಗಿ ಶಾಲೆಗಳು ಈಗಾಗಲೇ ಆನ್‌ಲೈನ್‌ ಶಿಕ್ಷಣಕ್ಕೆ ಚಾಲನೆ ನೀಡಿರುವುದರಿಂದ ಮಕ್ಕಳನ್ನು ಆನ್‌ಲೈನ್‌ ತರಗತಿಗಳಿಗೆ ಸೇರಸಬೇಕೇ ಅಥವಾ ಬೇಡವೇ ಎಂಬ ಗೊಂದಲ ನಿರ್ಮಾಣವಾಗಿದೆ’ ಎಂದು ಪೋಷಕರು ಹೇಳಿದ್ದಾರೆ.

Tap to resize

Latest Videos

undefined

‘ರಾಜ್ಯಾದ್ಯಂತ ಪೋಷಕರು, ಶಿಕ್ಷಣ ಸಂಘಟನೆಗಳು, ಸಾರ್ವಜನಿಕರು ಮತ್ತು ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರವು ಪೂರ್ವ ಪ್ರಾಥಮಿಕ ತರಗತಿಗಳಿಂದ ಐದನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ರದ್ದುಗೊಳಿಸಿತ್ತು. ಇದೀಗ 1ರಿಂದ 10ನೇ ತರಗತಿವರೆಗೆ ವಯೋಮಾನಕ್ಕೆ ಅನುಗುಣವಾಗಿ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ಸಂಬಂಧ ತಜ್ಞರ ವರದಿ ಕೂಡ ಆನ್‌ಲೈನ್‌ ಶಿಕ್ಷಣಕ್ಕೆ ಶಿಫಾರಸು ಮಾಡಿದೆ. ಹೈಕೋರ್ಟ್‌ ಕೂಡ ಆನ್‌ಲೈನ್‌ ಶಿಕ್ಷಣ ವಿದ್ಯಾರ್ಥಿಗಳ ಮೂಲಭೂತ ಹಕ್ಕಾಗಿದೆ. ರದ್ದುಗೊಳಿಸಿದರೆ ಶಿಕ್ಷಣದ ಹಕ್ಕು ಉಲ್ಲಂಘನೆಯಾಗಲಿದೆ ಎಂದು ಹೇಳಿರುವುದರಿಂದ ನಮಗೆ ದಿಕ್ಕು ತೋಚದಂತಾಗಿದೆ’ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರದ ಆದೇಶಗಳಿಗೆ ತಡೆ ನೀಡಿ ಆನ್‌ಲೈನ್‌ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹೈಕೋರ್ಟ್

ಸರ್ಕಾರಿ ವಿದ್ಯಾರ್ಥಿಗಳ ವಂಚಿತರು:

‘ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಸೇರಿ ಅಂದಾಜು 57 ಸಾವಿರ ಶಾಲೆಗಳಿವೆ. ಇದರಲ್ಲಿ ವ್ಯಾಸಂಗ ಮಾಡುತ್ತಿರುವ 65.56 ಲಕ್ಷ ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗುವ ಆತಂಕವಿದೆ’ ಎಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಪಾಲಕರೊಬ್ಬರು ಹೇಳಿದರು.

ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸುತ್ತಿವೆ. ಆದರೆ, ಸರ್ಕಾರಿ ಶಾಲೆಗಳು ಆನ್‌ಲೈನ್‌ ಶಿಕ್ಷಣದ ಬಗ್ಗೆ ಚಿಂತನೆಯನ್ನು ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆ ಮಕ್ಕಳ ಪೋಷಕರು ಏನು ಮಾಡಬೇಕೆಂಬ ಅತಂತ್ರ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಪೋಷಕ ಮಣಿಕಾಂತ್‌.

‘ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ನಮ್ಮಲ್ಲಿ ಹಣವಿಲ್ಲ. ಅಲ್ಲದೆ, ಆನ್‌ಲೈನ್‌ ಶಿಕ್ಷಣಕ್ಕೆ ಹೆಚ್ಚುವರಿಯಾಗಿ ಶುಲ್ಕ ಪಾವತಿಸಲು ಕೂಡ ನಮ್ಮಲ್ಲಿ ಹಣವಿಲ್ಲ. ಹೀಗಾಗಿ, ಏನು ಮಾಡಬೇಕೆಂಬ ಪ್ರಶ್ನೆಗೆ ಉತ್ತರವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೋಷಕರ ಮೇಲೆ ಒತ್ತಡ:

ಖಾಸಗಿ ಶಾಲೆಗಳು ಈಗಾಗಲೇ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿವೆ. ಇದರಿಂದ ಪೋಷಕರ ಮೇಲೆ ಆರ್ಥಿಕ ಹೊರೆ ಜೊತೆಗೆ ಹೊಣೆಗಾರಿಕೆ ಕೂಡ ಹೆಚ್ಚಳವಾಗಿದೆ. ಖಾಸಗಿ ಶಾಲೆಗಳು ಯೂ ಟ್ಯೂಬ್‌ ಮೂಲಕ ವಿಡಿಯೋ ಲಿಂಕ್‌ ಕಳುಹಿಸಿ ಮಕ್ಕಳಿಗೆ ತಿಳಿಸಿಕೊಡುವಂತೆ ಸೂಚಿಸುತ್ತಿದ್ದಾರೆ. ಇದು ಪೋಷಕರಿಗೆ ತಲೆ ನೋವಾಗಿ ಪರಿಣಿಮಿಸಿದೆ. ಅನಕ್ಷರಸ್ಥ ಪೋಷಕರು ಮಕ್ಕಳಿಗೆ ಯಾವ ರೀತಿಯಲ್ಲಿ ಕಲಿಸಿಕೊಡಬೇಕು ಎಂಬ ತಲೆಬುಡ ಅರ್ಥವಾಗುತ್ತಿಲ್ಲ. ಆದರೆ, ಖಾಸಗಿ ಶಾಲೆಗಳು ಮಾತ್ರ ಇಂತಹ ಪೋಷಕರ ನೋವುಗಳಿಗೆ ಮಾತ್ರ ಸ್ಪಂದಿಸುತ್ತಿಲ್ಲ. ಹೀಗಾಗಿ, ಆನ್‌ಲೈನ್‌ ಶಿಕ್ಷಣ ಮಾರಕವಾಗಿದೆ ಎನ್ನುತ್ತಾರೆ ಬೀದಿ ವ್ಯಾಪಾರ ಮಾಡುವ ಪೋಷಕ ಮರಿಯಪ್ಪ.

ರಾಜ್ಯದಲ್ಲೂ ಶೇ.35 ಪಠ್ಯ ಕಡಿತಕ್ಕೆ ಚಿಂತನೆ: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸುಳಿವು

ಪೋಷಕರ ಸಂಘಟನೆ ವಿರೋಧ: ಈ ನಡುವೆ, ಆನ್‌ಲೈನ್‌ ಶಿಕ್ಷಣದ ಬಗ್ಗೆ ತಜ್ಞರು ನೀಡಿರುವ ವರದಿಗೆ ‘ಆರ್‌ಟಿಇ ಸ್ಟೂಡೆಂಟ್ಸ್‌ ಆ್ಯಂಡ್‌ ಪೇರೆಂಟ್ಸ್‌ ಅಸೋಸಿಯೇಷನ್‌’ ವಿರೋಧ ವ್ಯಕ್ತಪಡಿಸಿದೆ.

‘ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಬೇಡವೆಂದು ರಾಜ್ಯ ಸರ್ಕಾರವೇ ರದ್ದು ಮಾಡಿದೆ. ಉಳಿದ ತರಗತಿಗೆ ಮಾತ್ರ ಮಾರ್ಗಸೂಚಿಗಳನ್ನು ರಚಿಸುವಂತೆ ಕೋರಿ ತಜ್ಞರ ಸಮಿತಿ ರಚನೆ ಮಾಡಿತ್ತು. ಇದೀಗ ತಜ್ಞರ ವರದಿಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಬದಲಾಗಿ ಪಾಲಕರ ಜತೆಗೆ ಆನ್‌ಲೈನ್‌ ತರಗತಿ ನಡೆಸಬಹುದು ಎಂದು ಹೇಳಿರುವುದು ಸರ್ಕಾರ ನಿಲುವಿಗೆ ವಿರುದ್ಧವಾಗಿದೆ. ಈ ಮೊದಲು ಆನ್‌ಲೈನ್‌ ತರಗತಿ ಬೇಡ ಎನ್ನುತ್ತಿದ್ದ ಶಿಕ್ಷಣ ತಜ್ಞರೇ ಇದು ಇರಲಿ ಎಂಬ ರೀತಿಯಲ್ಲಿ ವರದಿ ರೂಪಿಸಿದ್ದಾರೆ. ಇದರಿಂದ ಖಾಸಗಿ ಶಾಲೆಗಳಿಗೆ ಲಾಭವಾಗಿದೆ. ಸರ್ಕಾರ ಯಾವುದೇ ಕಾರಣಕ್ಕೂ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಬಾರದು’ ಎಂದು ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ ಒತ್ತಾಯಿಸಿದ್ದಾರೆ.

click me!