ಎಲ್‌ಕೆಜಿ, ಯುಕೆಜಿ ಯಾವುದೇ ಕಾರಣಕ್ಕೆ ಆರಂಭಿಸುವುದಿಲ್ಲ: ಸುರೇಶ್‌ ಕುಮಾರ್‌!

By Kannadaprabha News  |  First Published Jun 7, 2020, 8:03 AM IST

ಶಾಲೆ ಆರಂಭ ನಿರ್ಧರಿಸಿಲ್ಲ; ಖಾಸಗಿ ಲಾಬಿಗೆ ಮಣಿದಿಲ್ಲ| ಎಲ್‌ಕೆಜಿ, ಯುಕೆಜಿ ಯಾವುದೇ ಕಾರಣಕ್ಕೆ ಆರಂಭಿಸುವುದಿಲ್ಲ: ಸುರೇಶ್‌ ಕುಮಾರ್‌


ಬಳ್ಳಾರಿ(ಜೂ.07): ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಲಾಬಿಗೆ ಮಣಿದಿದೆ ಎಂಬುದಾಗಿ ಕೇಳಿ ಬಂದಿರುವ ಆರೋಪವನ್ನು ಅಲ್ಲಗೆಳೆದಿರುವ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಶಾಲೆ ಆರಂಭಿಸುವ ಕುರಿತು ಸರ್ಕಾರ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳನ್ನು ಪುನರ್‌ ಆರಂಭಿಸುವ ವಿಚಾರದಲ್ಲಿ ನಾನು ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದಿಲ್ಲ. ಮಣಿಯುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ತಾಯಿ ಶಿಕ್ಷಕರಾಗಿದ್ದರು. ಅವರಿಂದಾಗಿಯೇ ನಾನು ಈ ಸ್ಥಾನದಲ್ಲಿದ್ದೇನೆ. ಶಿಕ್ಷಣ ಇಲಾಖೆಯ ಋುಣ ನನ್ನ ಮೇಲಿದೆ. ತೀರಿಸಲು ಅವಕಾಶವಿದೆ. ಅದನ್ನು ನಾನು ಖಂಡಿತ ಮಾಡುತ್ತೇನೆ ಎಂದರು.

Tap to resize

Latest Videos

ಇದೇವೇಳೆ ಎಲ್‌ಕೆಜಿ ಹಾಗೂ ಯುಕೆಜಿಗಳನ್ನು ಯಾವುದೇ ಕಾರಣಕ್ಕೂ ಆರಂಭಿಸಬಾರದು ಎಂದು ಸರ್ಕಾರ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ಆದರೆ 1ನೇ ತರಗತಿಯಿಂದ ಮೇಲ್ಪಟ್ಟತರಗತಿಗಳನ್ನು ಆರಂಭಿಸುವ ಕುರಿತು ಶಿಕ್ಷಣ ತಜ್ಞರ ಜತೆ ಸಮಾಲೋಚನೆ ಸಹ ನಡೆಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಪೋಷಕರ ಅಭಿಪ್ರಾಯದ ಮೊರೆ ಹೋಗಿದ್ದೇವೆ. ಎಲ್ಲ ಕಡೆ ಪೋಷಕರಿಂದಲೂ ಸದ್ಯಕ್ಕೆ ಶಾಲೆ ಶುರು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.

ಆನ್‌ಲೈನ್‌ ಕ್ಲಾಸ್‌ ನಿರ್ಧಾರ ಇಂದು:

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನೀಡುವ ಕುರಿತು ಸೋಮವಾರ ಸ್ಪಷ್ಟನಿರ್ಧಾರ ಹೊರ ಬೀಳಲಿದೆ. ಅಂದು ಸಭೆ ನಡೆಯಲಿದ್ದು, ಸರ್ಕಾರ ಸೂಕ್ತ ತೀರ್ಮಾನಕ್ಕೆ ಬರಲಿದೆ. ಆನ್‌ಲೈನ್‌ ತರಗತಿಯಿಂದ ಮಕ್ಕಳ ಮೇಲೆ ದುಷ್ಪರಿಣಾಮವಾಗಲಿದೆ ಎಂಬ ಸಾರ್ವತ್ರಿಕ ಅಭಿಪ್ರಾಯವಿದೆ. ಆನ್‌ಲೈನ್‌ ಯಾವ ಕ್ಲಾಸ್‌ನಿಂದ ಯಾವ ವಯಸ್ಸಿನಿಂದ ಮಾಡಬೇಕು ಎಂಬುದರ ಕುರಿತು ಅವರ ಮೇಲಾಗುವ ಮಾನಸಿಕ ಪರಿಣಾಮ ಕುರಿತು ಚರ್ಚಿಸಲಾಗುತ್ತಿದೆ ಎಂದರು.

click me!