ಸಿಇಟಿ ಪರೀಕ್ಷೆ ಅಬಾಧಿತ: ಹೈಕೋರ್ಟ್ ಗ್ರೀನ್ ಸಿಗ್ನಲ್

By Suvarna NewsFirst Published Jul 29, 2020, 10:49 PM IST
Highlights

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2020) ಅಬಾಧಿತವಾಗಿ ನಿಗದಿಯಂತೆ ನಡೆಯಲಿದೆ.  ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಬಹುದು
 

ಬೆಂಗಳೂರು, (ಜುಲೈ.29): ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ನಾಳೆ ಮತ್ತು ನಾಡಿದ್ದು (ಜುಲೈ 30-31) ಸಿಇಟಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಿ ನಿರಾತಂಕವಾಗಿ ಪರೀಕ್ಷೆ ಬರೆಯಬಹುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ಪರೀಕ್ಷೆಯ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿ ವಿಲೇವಾರಿ ಮಾಡಿದ ಕೋರ್ಟ್, ಸರಕಾರಕ್ಕೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದ  ನಂತರ ಆನ್‌ಲೈನ್‌ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಡೀ ಪರೀಕ್ಷೆಯ ಪ್ರಕ್ರಿಯೆ ನ್ಯಾಯಾಲಯ ನೀಡಿರುವ ಸೂಚನೆಗಳಂತೆಯೇ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಕೊರೋನಾ ಸೋಂಕಿತ ವಿದ್ಯಾರ್ಥಿಗೂ ಸಿಇಟಿ ಪರೀಕ್ಷೆ ಬರೆಯುವ ಅವಕಾಶ 

ಫಿಟ್ನೆಸ್‌ ಸರ್ಟಿಫಿಕೇಟ್ ಕಡ್ಡಾಯವಲ್ಲ:
ಕಂಟೈನ್ಮೆಂಟ್‌ ಝೋನ್‌ʼನಿಂದ ಬರುವ ವಿದ್ಯಾರ್ಥಿಗಳ ಫಿಟ್ನೆಸ್‌ ಸರ್ಟಿಫಿಕೇಟ್’ನ್ನು ಪರೀಕ್ಷಾ ಕೇಂದ್ರದಲ್ಲಿ ಕೇಳುವಂತಿಲ್ಲ, ಅದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿದ್ಯಾರ್ಥಿಗಳು ಆ ಸರ್ಟಿಫಿಕೇಟ್ ಅನ್ನು ತರಲಿ, ಬಿಡಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಡಿಸಿಎಂ ಹೇಳಿದರು.

ಪ್ರವೇಶ ಪತ್ರ ತೋರಿಸುವ ಯಾವ ವಿದ್ಯಾರ್ಥಿಯ ಪ್ರವೇಶವನ್ನೂ ತಡೆಯುವಂತಿಲ್ಲ. ಅವರು ಕೋವಿಡ್‌ ಪಾಸಿಟೀವ್‌ ಇರಲಿ ಅಥವಾ ’ಎ’ ಸಿಂಪ್ಟೆಮಿಕ್‌ ಆಗಿರಲಿ, ಇಲ್ಲವೇ ಶೀತ-ಕೆಮ್ಮು ಮತ್ತಿತರೆ ಲಕ್ಷಣಗಳಿರಲಿ ಅವರನ್ನು ಕಡ್ಡಾಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಿಡಲೇಬೇಕು. ಸೋಂಕಿತರಿಗೆ ಮತ್ತು ಸೋಂಕಿನ ಲಕ್ಷಣಗಳು ಇರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಲಾಗುವುದು. ಈ ಎಲ್ಲ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿಸಲಾಗಿದೆ. ಕೋವಿಡ್ ಪಾಸಿಟೀವ್‌ ಇರುವ ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿ ಮಾಡಲಾಗಿದೆ ಎಂದು ಅವರು  ಮಾಹಿತಿ ನೀಡಿದರು.

ಎಸ್‌ʼಓಪಿ ಪಾಲನೆ:
ಈಗಾಗಲೇ ಜಾರಿಯಲ್ಲಿರುವ ಪರಿಷ್ಕೃತ ಎಸ್‌ʼಓಪಿ ಪ್ರಕಾರ ಕಂಟೈನ್ಮೆಂಟ್‌ ಝೋನ್‌ʼನಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಜತೆ ಬಂದು ಪರೀಕ್ಷೆಗೆ ಹಾಜರಾಗಬಹುದು. ಇವರು ತಮ್ಮ ಮನೆಯಿಂದ ಹೊರಬಂದ ಕೂಡಲೇ ಯಾರೇ ತಡೆದರೂ ಪ್ರವೇಶ ಪತ್ರ ತೋರಿಸಿದರೆ ಸಾಕು, ಅವರನ್ನು ಯಾರೂ ತಡೆಯುವುದಿಲ್ಲ. ಇನ್ನುಕೋವಿಡ್‌ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಾಹನದಲ್ಲಿ ಕರೆತಂದು, ಪರೀಕ್ಷೆ ಮುಗಿದ ನಂತರ ವಾಪಸ್‌ ಅವರ ಜಾಗಕ್ಕೆ ಬಿಡಲಾಗುವುದು. ಬೆಂಗಳೂರು ಸೇರಿ ರಾಜ್ಯ ಎಲ್ಲ ಜಿಲ್ಲೆಗಳಲ್ಲಿಎಲ್ಲ ದಿಕ್ಕುಗಳಿಂದ ಪರೀಕ್ಷಾ ಕೇಂದ್ರಗಳಿಗೆ ಕೆಎಸ್’ಆರ್’ಟಿಸಿ ಮತ್ತು ಬಿಎಂಟಿಸಿ ವತಿಯಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಮುಖ್ಯಸ್ಥರು ಸೇರಿ ಸಾರಿಗೆ, ಪೊಲೀಸ್‌, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಉನ್ನತಮಟ್ಟದ ತಂಡವನ್ನು ರಚಿಸಲಾಗಿದೆ. ಆ ತಂಡದ ಉಸ್ತುವಾರಿಯಲ್ಲಿ ಪರೀಕ್ಷೆ ನಿರಾತಂಕವಾಗಿ ನಡೆಯಲಿದೆ ಎಂದು ಡಿಸಿಎಂ ತಿಳಿಸಿದರು.

 40 ಪಾಸಿಟೀವ್‌ ವಿದ್ಯಾರ್ಥಿಗಳು:
ರಾಜ್ಯಾದ್ಯಂತ 40 ಮಂದಿ ಕೋವಿಡ್‌-19 ಪಾಸಿಟೀವ್‌ ಆಗಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಇವರೆಲ್ಲರನ್ನೂ ಪ್ರತ್ಯೇಕ ಕೋಣೆಯಲ್ಲಿ ಕೂರಿಸಲಾಗುವುದು. ಇತರ ವಿದ್ಯಾರ್ಥಿಗಳ ಜತೆ ಇವರ ಸಂಪರ್ಕಕ್ಕೆ ಅವಕಾಶವೇ ಇರುವುದಿಲ್ಲ. ಎಲ್ಲರೂ ಹಾಜರಾಗುವ ನಿಗದಿತ ಕೇಂದ್ರದ ಬದಲು ಬೇರೆ ಜಾಗದಲ್ಲಿ ಅವರನ್ನು ಕೂರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಸಿಇಟಿ ಹೆಲ್ಪ್ ಲೈನ್:
ಸಿಇಟಿ ಪರೀಕ್ಷೆ ಸಂಬಂಧ ಏನೇ ಅನುಮಾನಗಳು, ತೊಂದರೆ ಇದ್ದರೆ ಈ ದೂರವಾಣಿ ಸಂಖ್ಯೆಗಳಿಗೆ ದೂರವಾಣಿ ಕರೆ‌ ಮಾಡಬಹುದು ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಹೇಳಿದರು.
ಹೆಲ್ಪ್ ಲೈನ್:  080 23460460, 080 23564583

click me!