ಕೊರೊನಾದಿಂದ ಆತಂಕ ಮತ್ತು ತಲ್ಲಣಗಳ ಮಧ್ಯ ಬದುಕುತ್ತಿರುವ ಜನಸಮುದಾಯಕ್ಕೆ ವೈದ್ಯರು, ಪೋಲೀಸರು, ಆಶಾ ಕಾರ್ಯಕರ್ತರು ಕೊರೊನಾ ವಾರಿಯರ್ಸ… ಆಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಶಿಕ್ಷಕರಾಗಿ ನಾವೇಕೆ ಸುಮ್ಮನಿರಬೇಕು.
- ಡಾ. ನಿಂಗು ಸೊಲಗಿ, ಮುಂಡರಗಿ
ಶಾಲೆಗೆ ಬರಲಾಗದೇ ಮನೆಯಲ್ಲಿಯೂ ಸುಮ್ಮನೇ ಇರಲಾಗದೇ ತೊಳಲಾಡುತ್ತಿರುವ ಮಕ್ಕಳಿಗೆ ಅವರ ವಠಾರ ಅಥವಾ ಮನೆಯಂಗಳದ ಸೂಕ್ತ ಜಾಗದಲ್ಲೇ ಸೂಕ್ತ ಅಂತರ ಹಾಗೂ ಜಾಗೃತಿ ಕ್ರಮಗಳನ್ನು ಅನುಸರಿಸುವ ಮೂಲಕ ಅನೌಪಚಾರಿಕ ಶಿಕ್ಷಣ ನೀಡುವ ಕಲಿಕಾ ಕೇಂದ್ರಗಳನ್ನು ನಾವೇಕೆ ತೆರೆಯಬಾರದು’ ಎಂದು ಆಲೋಚಿಸುತ್ತ ಮೂಡಿದ ಪರಿಕಲ್ಪನೆ ಈ ’ವಠಾರ ಶಾಲೆ’. ಈ ಕುರಿತು ನಮ್ಮ ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೆಳೆಯರ ಹಾಗೂ ಆಸಕ್ತರ ಒಂದು ಸಣ್ಣ ಗುಂಪಿನಲ್ಲಿ ನಡೆದ ಚರ್ಚೆ ಈಗ ವಿಸ್ತೃತ ರೂಪ ಪಡೆದುಕೊಳ್ಳುತ್ತಿದೆ.
undefined
ಶಾಲಾ ಮಕ್ಕಳಿಗೆ ‘ಲರ್ನ್ ಫ್ರಂ ಹೋಮ್’?: ಕೇಂದ್ರದ ಚಿಂತನೆ, ಶೀಘ್ರ ಮಾರ್ಗಸೂಚಿ
ವಠಾರ ಶಾಲೆಯ ಸ್ವರೂಪ:
ಒಂದೇ ವಠಾರ ಅಥವಾ ಓಣಿಯ ಯಾವುದೇ ತರಗತಿ ಓದುವ ಅಥವಾ ಯಾವುದೇ ಶಾಲೆಗೆ ಹೋಗುವ ಗರಿಷ್ಟ10-15 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅದೇ ವಠಾರದ ಸೂಕ್ತ ಜಾಗವೊಂದರಲ್ಲಿ ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಈ ಮೂಲಕ ಮಕ್ಕಳಲ್ಲಿ ಕಲಿಯುವಿಕೆಯ ಆಸಕ್ತಿ ಉಳಿಸಿ ಬೆಳೆಸಿಕೊಳ್ಳುವಂತೆ ಮಾಡಿ ಸ್ವಯಂ ಕಲಿಕೆಯ ಮೂಲಕ ತನ್ನ ಬಿಡುವಿನ ಸಮಯವನ್ನು ಸಾರ್ಥಕಗೊಳಿಸಿಕೊಳ್ಳುವಂತೆ ಮಾಡುವುದು. ಇದು ಇರುವ ಶಾಲೆಗಳ ಪರ್ಯಾಯ ಶಾಲೆಗಳಾಗಿರದೇ ಸಮುದಾಯದ ನೆರವಿನಲ್ಲಿ ತಮ್ಮ ಮಕ್ಕಳ ಶಿಕ್ಷಣಕ್ಕೆ ಕಟ್ಟಿಕೊಂಡ ಶೈಕ್ಷಣಿಕ ಮಾರ್ಗದರ್ಶಿ ಕೇಂದ್ರಗಳಷ್ಟೇ. ಶಾಲೆಗಳು ಆರಂಭವಾದ ಮೇಲೂ ಇವುಗಳನ್ನು ಅಗತ್ಯಾನುಸಾರ ಸಮುದಾಯದ ಒತ್ತಾಸೆಯನ್ನವಲಂಬಿಸಿ ಮುಂದುವರಿಸಿಕೊಂಡು ಹೋಗಬಹುದು.
ವಠಾರ ಶಾಲೆಯ ಅಗತ್ಯತೆ:
ಮಕ್ಕಳು ಮೂರು ತಿಂಗಳಿಂದ ಶಾಲಾ ಶಿಕ್ಷಣದಿಂದ ದೂರವಿದ್ದು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಪಾಲಕ ಪೋಷಕರೊಂದಿಗೆ ಕಳೆದ ಈ ದಿನಗಳು ಸಾರ್ಥಕವೆಂದೇ ಭಾವಿಸೋಣ.ಆದರೆ ಇದು ಇನ್ನೆಷ್ಟುದಿನ ಎಂಬುದು ಪ್ರಶ್ನೆ. ಲಾಕ… ಡೌನ… ತೆರವಿನ ನಂತರ ತಂದೆ ತಾಯಿ ಪೋಷಕರು ತಮ್ಮ ಕೆಲಸದತ್ತ ಮುಖ ಮಾಡಿದ್ದಾರೆ. ಬಹುತೇಕ ಮಕ್ಕಳಿಗೆ ಮನೆಯಲ್ಲಿ ಹೇಳಿ ಕೇಳುವವರು ಇಲ್ಲವಾಗಿ ಏನೆಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಇಂಥ ಮಕ್ಕಳಿಗೆ, ಪಾಲಕ-ಪೋಷಕರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯತೆಯಿದೆ.
ಆನ್‌ಲೈನ್ ಶಿಕ್ಷಣದಿಂದಿರುವ ಅಪಾಯಗಳೇನು?
ಎಷ್ಟೆಲ್ಲ ಸಮರೋಪಾದಿಯಲ್ಲಿ ಕಾರ್ಯ ಮಾಡುತ್ತಿದ್ದರೂ ಕೊರೊನಾ ಇನ್ನೂ ವಿಸ್ತಾರವಾಗುತ್ತಲೇ ಇದೆ. ಇದರಿಂದಾಗಿ ಶಾಲೆಗಳು ಆರಂಭವಾಗುವಲ್ಲಿ ಇನ್ನೂ ತಡವಾಗುವ ಮುನ್ಸೂಚನೆಗಳು ಕಾಣುತ್ತಿವೆ. ಇದರಿಂದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಟಿ.ವಿ.ಪಾಠ, ಆನ್‌ಲೈನ… ಪಾಠಗಳೂ ಸೇರಿದಂತೆ ಕಲಿಯಲು ನೆರವಾಗುವ ವಿವಿಧ ಅವಕಾಶಗಳ ಬಗ್ಗೆ ಚಿಂತನೆ ನಡೆಸಿದೆ. ಆದರೆ ನಮ್ಮ ಇದು ಎಲ್ಲ ವಯೋಮಾನದ ಕಲಿಕೆಗೆ ನೆರವಾಗಬಲ್ಲ ಸಾಧನವಾಗಲಾರದು. ಮೇಲಾಗಿ ಇದನ್ನು ಬಳಸಿಕೊಳ್ಳುವ ಅವಕಾಶ ಎಲ್ಲರಲ್ಲು ಇಲ್ಲ ಎಂಬುದು. ಜೊತೆಗೆ ಇದು ಪರಿಪೂರ್ಣ ಕಲಿಕಾ ಮಾಧ್ಯಮವಾಗುವು ಉಚಿತವಲ್ಲ. ಈ ಹಿನ್ನೆಲೆಯಲ್ಲಿ ಮುಖಾ ಮುಖಿ ಕಲಿಕೆಯ ಅವಕಾಶಗಳನ್ನು ಹುಡುಕುವ ಅಗತ್ಯತೆ ಇದೆ.
ಈ ವಠಾರ ಶಾಲೆಯ ಪರಿಕಲ್ಪನೆ ಈ ಚಿಂತನೆಯ ಭಾಗವಾಗಿ ಮೂಡಿ ಬಂದಿದ್ದು ಇಲಾಖೆಗೆ ಇದೂ ಒಂದು ಕಲಿಕಾ ಸಾಧ್ಯತೆಯಾಗಿ ಸ್ಥಾನ ಪಡೆಯಬಹುದು. ಹಾಗಾಗಿ ಇಲಾಖೆಯೊಟ್ಟಿಗೆ ಕೈಜೋಡಿಸಿ ಕ್ರಿಯಾಶೀಲ ಶಿಕ್ಷಕರು, ವಿದ್ಯಾವಂತ ಯುವಕ ಯುವತಿಯರು ತಮ್ಮದೇ ಆದ ಪರಿಸರದಲ್ಲಿ ಕಾರ್ಯ ಕೈಗೊಳ್ಳುವ ಅಗತ್ಯವಿದೆ. ಕೊರೊನಾ ಹರಡದಂತೆ ಸೂಚಿಸಿರುವ ನಿರ್ದೇಶನಗಳನ್ನು ಪಾಲಿಸುವಂತೆ ಮಕ್ಕಳು ಹಾಗೂ ಮಕ್ಕಳ ಪಾಲಕ ಪೋಷಕರಲ್ಲಿ ಜಾಗೃತಿ ಮೂಡಿಸಿ ಸಣ್ಣ ಸಣ್ಣ ಗುಂಪುಗಳಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.
ಏನೆಲ್ಲ ಚಟುವಟಿಕೆಗಳಿರಬಹುದು:
ಪಠ್ಯ ಪೂರಕ-ಪೋಷಕ ಚಟುವಟಿಕೆಗಳಿಂದ ಸ್ವಯಂ ಕಲಿಕೆಗೆ ಬೆಂಬಲವಾಗಲು ನೆರವಾಗುವಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಈ ಚಟುವಟಿಕೆಗಳು ಸಂತಸ ಕಲಿಕೆಯ ಸಾಧನಗಳಾಗಿರಬೇಕೆಂಬುದು ವಿಶೇಷ. ಈ ಹಿನ್ನೆಲೆಯಲ್ಲಿ ದಿನದ ಎರಡು ಗಂಟೆಗಳಿಗೆ ಪೂರಕವಾಗಿ ಕೆಳಕಂಡಂತೆ ಸಮಯಗಳನ್ನು ಗುರುತಿಸಲು ಪ್ರಯತ್ನಿಸಿರುವೆ. ಇವುಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಚಟುವಟಿಕಾ ಸಮಯಗಳನ್ನು ಗುರುತಿಸಿಕೊಂಡು ಕಾರ್ಯ ಪ್ರವೃತ್ತರಾಗಬಹುದು. ಈ ಚಟುವಟಿಕಾ ಸಮಯಗಳನ್ನು ಹೀಗೆ ಪಟ್ಟಿಮಾಡಬಹುದು.
UPSC ಪರೀಕ್ಷೆಯಲ್ಲಿ ಕೇಳುವ ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ ?
1. ಕಥಾ ಸಮಯ : ಕತೆಹೇಳು-ಕಥೆ ಕಟ್ಟು.
2. ಗೀತ ಸಮಯ : ರಾಗ ಹಾಕಿ, ಗೀತೆ ಹಾಡು.
3. ಓದಿನ ಸಮಯ : ವಾಚನಾಭಿನಯ-ಅಭಿನಯ ವಾಚನ
4. ಕವಿತಾ ಸಮಯ : ಕವಿತೆ ಕಟ್ಟು, ಕವಿತೆ ಹೇಳು.
5. ದೇಸಿ ಆಟದ ಸಮಯ : ಮನೆಂಗಳದ ಆಟ, ಸವಿ ರಸದೂಟ.
6. ಮಾಡಿ ಆಡುವ ಸಮಯ : ಕಸದಲ್ಲಿ ರಸ, ತೆಗಿಯೊ ಸೃಜನಾತ್ಮಕ ಆಟ.
7. ಗೀಚಾಟ ಸಮಯ : ಗೀಚಿದ್ದೆಲ್ಲಾ ಚಿತ್ರವಲ್ಲ, ಗೀಚಾಟವಿಲ್ಲದೇ ಚಿತ್ರವಾಗುವದಿಲ್ಲ.
8. ಮೋಜಿನ ಸಮಯ : ವಿಜ್ಞಾನದ ಮೋಜಿನಾಟ, ಗಣಿತದ ಮಜಾಗಟ.
9. ಮಾತಿನ ಸಮಯ : ಮಾತೇ ಮಾಣಿಕ್ಯ, ಬದುಕಿಗೆ ಲಾಲಿತ್ಯ.
10. ಸಿನೆಮಾ ಸಮಯ : ಸಿನೇಮಾ ನೋಡು-ಸಂವಾದ ಮಾಡು.
11. ಪತ್ರಿಕೆ ಸಮಯ : ಹುಡುಕಾಟ-ತಡಕಾಟ.
12. ನೃತ್ಯ ಸಮಯ : ಸಮೂಹ ನೃತ್ಯ-ಸಮನ್ವಯದ ಸತ್ಯ (ಅಂತರ ಕಾಪಾಡಲಾಗದಿದ್ದರೆ ಇದು ಬೇಡ.)
13. ನಕ್ಕು ನಗಿಸುವ ಸಮಯ : ವಿನೋದ-ವಿಕಾಸ
14. ನಾಟಕದ ಸಮಯ : ಪಠ್ಯ ನಾಟಕದಿಂದ ಗಟ್ಟಿಕಲಿಕೆ
15. ಕಾಗದ ಕುಸುರಿ ಸಮಯ : ಕತ್ತರಿಸು ಕಾಗದ ರೂಪಿಸು ಕಲಾಕೃತಿ.
16. ಮಗ್ಗಿ ಸುಗ್ಗಿ : ಮಗ್ಗಿ ಕಲಿ ವ್ಯವಹಾರದಲ್ಲಿ ನಲಿ.
ಈ ಎಲ್ಲ ಚಟುವಟಿಕಾ ಸಮಯಗಳಿಗೆ ಪೂರಕವಾಗಿ ರೂಪಿಸಿಕೊಂಡ ಚಟುವಟಿಗೆಗಳನ್ನು ದೈಹಿಕ ಅಂತರದೊಂದಿಗೆ ಅನುಷ್ಠಾನಗೊಳಿಸಬಹುದು. ಇವಿಷ್ಟೇ ಅಲ್ಲ ಇದಕ್ಕೆ ಪೂರಕವಾಗಿ ಇನ್ನೂ ಹೆಚ್ಚು ವೈವಿದ್ಯಮಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಬಹುದು.