ಆನ್‌ಲೈನ್‌ ಶಿಕ್ಷಣದಿಂದಿರುವ ಅಪಾಯಗಳೇನು?

ಪುಟ್ಟಪುಟ್ಟಮಕ್ಕಳಿಗೆ ಆನ್‌ಲೈನ್‌ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಮುನ್ನ ಸರ್ಕಾರ ಮನೋವೈದ್ಯರ, ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಪಾಲಿಸುವುದು ಬಹು ಮುಖ್ಯ. ಇಲ್ಲಿ ಬುದ್ಧಿಯೊಂದೇ ಅಲ್ಲ, ಮಗುವಿನ ಕಣ್ಣು, ಕಿವಿ ಸುಸ್ಥಿರತೆಯ ಬಗ್ಗೆಯೂ ಗಂಭೀರವಾಗಿ ಚಿಂತಿಸಲೇಬೇಕು.

Pro and cons of online education

ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ಅನಿವಾರ‍್ಯವಾಗಿ ಅನೇಕ ಪರಾರ‍ಯಯಗಳನ್ನು ಹುಟ್ಟಿಹಾಕಿದೆ. ಅವುಗಳಲ್ಲಿ ಒಂದು ಶೈಕ್ಷಣಿಕ ವಲಯಕ್ಕೆ ಸಂಬಂಧಿಸಿದ ಆನ್‌ಲೈನ್‌ ಶಿಕ್ಷಣ. ತರಗತಿ-ಕ್ಯಾಂಪಸ್‌ ಬಿಟ್ಟು ಹೊರಗುಳಿದ ವಿದ್ಯಾರ್ಥಿಗಳನ್ನು ಪಠ್ಯದ ಕೊಂಡಿ ಕಳಚದಂತೆ ಜೋಡಿಸುವ ಈ ಕ್ರಮ ಭಾಗಶಃ ಯಶಸ್ವಿಯಾದರೂ, ಇದನ್ನೇ ಸಾರ್ವತ್ರಿಕಗೊಳಿಸುವ ಯೋಚನೆ, ಹುನ್ನಾರ ತೀರಾ ಅಪಾಯಕಾರಿಯೂ ಹೌದು.

ಮೊದಲಿನ ಸ್ಥಿತಿಯಲ್ಲಿ ಮಕ್ಕಳನ್ನು ಗುಂಪಾಗಿ ರಾಶಿ ಹಾಕಿ, ಮತ್ತೆ ತರಗತಿಯೊಳಗಡೆ ಕಲಿಸುವುದು, ಕೂಡಿ ಹಾಕುವುದು ಕೊರೋನಾ ಹಬ್ಬಲು ಸುಲಭ ದಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಶೈಕ್ಷಣಿಕ ಭವಿಷ್ಯಕ್ಕಿಂತ ಮಕ್ಕಳ ಜೀವ ಮುಖ್ಯ ಎಂಬುದು ನಿರ್ವಿವಾದ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕಲಿಕೆಯ ದಾರಿಯನ್ನು ಬದಲಾಯಿಸಿ ಆನ್‌ಲೈನ್‌- ತಾಂತ್ರಿಕ ದಾರಿಯಲ್ಲಿ ತಲುಪಿಸುವ ಪ್ರಯತ್ನ ನರ್ಸರಿಯಿಂದ ವಿಶ್ವವಿದ್ಯಾಲಯಗಳವರೆಗೆ ನಡೆಯುತ್ತಿದೆ. ಈ ಉದ್ದೇಶಕ್ಕಾಗಿಯೇ ಹೊಸ ಹೊಸ ಸಾಫ್ಟ್‌ವೇರ್‌ಗಳು ಹುಟ್ಟಿಕೊಳ್ಳುತ್ತಿವೆ.

'ಮುಂದಿನ ತಿಂಗಳು ಪರೀಕ್ಷಾ ವೇಳಾಪಟ್ಟಿ ಘೋಷಿಸಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ'

ಹೊಸ ದಾರಿಯ ಅಪಾಯ

ಕಾಯಿಲೆ ನಿಮಿತ್ತ ಮಕ್ಕಳ ಪಾಲಿಗೆ ಒಂದು ವರ್ಷ ವ್ಯಯವಾಗುವುದು ಮುಖ್ಯವೋ, ಕಲಿಕೆ ಪಠ್ಯವನ್ನು ಹೇಗಾದರೂ ಪೂರೈಸಿ ಪದವಿ ಶಿಕ್ಷಣದ ಬಡ್ತಿಯನ್ನು ನೀಡುವುದು ಮುಖ್ಯವೋ ಎಂಬ ಪ್ರಶ್ನೆ ಬಂದಾಗ, ಇದರಿಂದಾಗುವ ನೈತಿಕ, ಸಾಂಸ್ಕೃತಿಕ, ಸಾಮಾಜಿಕ ಪರಿಣಾಮಗಳ ಚಿಂತನೆ ಬಹಳ ಮುಖ್ಯ. ಸರ್ಕಾರ, ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು ಈಗ ಸಮಯ ವ್ಯಯವಾಗದಂತೆ ಇಂಥ ಸುಲಭ ಪರಾರ‍ಯಯ ದಾರಿ ಹುಡುಕಿವೆಯೇ ಹೊರತು, ಈ ಹೊಸ ದಾರಿಯಿಂದ ಉದ್ಭವಿಸಬಹುದಾದ ನೈತಿಕ ನಷ್ಟವನ್ನು ಲೆಕ್ಕಹಾಕಿಲ್ಲ.

ಎಲ್ಲವನ್ನೂ ಭೌತಿಕವಾಗಿಯೇ ಗಣಿಸುವ ವಿಜ್ಞಾನದ ಬಹುದೊಡ್ಡ ತರ್ಕ ಅಥವಾ ಅಪಾಯ ನೈತಿಕ ಮತ್ತು ಸಾಂಸ್ಕೃತಿಕ ಜೀವಂತಿಕೆ ಅಗತ್ಯದ ಕಡೆಗಿರುವ ಅವಗಣನೆ. ಉದ್ಯೋಗ, ವೇತನ, ಆರ್ಥಿಕ, ಸಮಯ ನಷ್ಟದಂಥ ವಿಕೋಪದ ಸಂದರ್ಭದಲ್ಲಿ ಇವೆಲ್ಲವನ್ನೂ ಸಮನ್ವಗೊಳಿಸುವ ಪ್ರಭುತ್ವದ ತರಾತುರಿ ಕಂಡು ಭಯವಾಗುತ್ತಿದೆ. ವೇತನ ಪಡೆಯುವ ಶಿಕ್ಷಕರನ್ನು ಹೇಗಾದರೂ ದುಡಿಸಬೇಕು, ಬಳಸಬೇಕು ಎಂಬ ಆಡಳಿತಾತ್ಮಕ ತುರ್ತಿನ ಸಂದರ್ಭದಲ್ಲಿ ಅದೇ ಸರ್ಕಾರದ ಸಚಿವರಾದ ಸುರೇಶ್‌ ಕುಮಾರ್‌ ಅವರು, ‘ದಯವಿಟ್ಟು ಯಾವುದೇ ಶಾಲೆಯವರು ಪುಟ್ಟಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಶುರು ಮಾಡಬೇಡಿ’ ಎಂದಿರುವುದು ಮಾನವೀಯ.

ಸಮ್ಮುಖ ಮಂಥನದ ಸಾಧ್ಯತೆ

ಹೇಳಿಕೇಳಿ ನಾನು ಪದವಿ ಕಾಲೇಜೊಂದರಲ್ಲಿ ಕನ್ನಡ ಸಾಹಿತ್ಯ ಕಲಿಸುವ ಭಾಷಾ ಪ್ರಾಧ್ಯಾಪಕ. ಕಳೆದ 23 ವರ್ಷಗಳ ಕಲಿಕಾನುಭವದಲ್ಲಿ ಯಾವತ್ತೂ ನಾನು ಯಂತ್ರದ ತಲೆ-ಬಾಯಿಯಲ್ಲಿ ಮಾತನಾಡಿದವನಲ್ಲ. ಬೇಂದ್ರೆ, ಕುವೆಂಪು, ಕಾರಂತ, ಪಂಪ, ಕುಮಾರವ್ಯಾಸ, ಅಲ್ಲಮ, ಬಸವ ಎಲ್ಲರೂ ತರಗತಿಯೊಳಗಡೆಯ ಸಮ್ಮುಖ ಸಂವಹನಕ್ಕೆ ಒಗ್ಗುವಷ್ಟುಪಿಪಿಟಿಗೆ ಅಥವಾ ಆನ್‌ಲೈನ್‌ಗೆ ಒಗ್ಗುವವರೇ ಅಲ್ಲ.

ಸದ್ಯಕ್ಕೆ ಮಕ್ಕಳಿಗೆ ಬೇಡ ಆನ್‌ಲೈನ್ ಎಂಬ ಜೈಲು ಶಿಕ್ಷಣ

‘ಉಪ’ ಅಂದರೆ ಹತ್ತಿರ, ‘ನ್ಯಾಸ’ ಅಂದರೆ ‘ಇಡುವುದು’ ಎಂದರ್ಥ. ‘ಮೂಗು ಇಲ್ಲದವನಿಗೆ ಕನ್ನಡಿಯ ತೋರಲೇಕೆ’ ಎಂಬ ವಚನವನ್ನು ಪಾಠ ಮಾಡುವಾಗ ನಾನು ಮಕ್ಕಳ ಎದುರು ಇರಲೇಬೇಕು, ಧ್ಯಾನ ಮಾಡಿಸಬೇಕು. ಗುರು-ಶಿಷ್ಯ ಭೌತಿಕವಾಗಿ ಒಂದೇ ಕಡೆ ಕೂತು ಆಗುವ, ಸಾಗುವ ಶಿಕ್ಷಣದಲ್ಲಿ ಕೇವಲ ಕಲಿಸುವ ಮಾತ್ರವಲ್ಲ, ಗುರು ಮಕ್ಕಳಿಂದ ದಿನಾ ಕಲಿಯುವ, ಬೆಳೆಯುವ ಕ್ರಿಯೆಯೂ ನಡೆಯುತ್ತದೆ. ಬೇಂದ್ರೆ- ಅಲ್ಲಮರ ನಿಜವಾದ ಕಾವ್ಯ ಧ್ವನಿ ಹುಟ್ಟಿಕೊಳ್ಳುವುದೇ ಸಮ್ಮುಖ ಸಂವಹನದಲ್ಲಿ. ಪ್ರಶ್ನೆ, ಉಪಪ್ರಶ್ನೆ, ಕೂಡು ಚರ್ಚೆ, ಸಂವಾದ, ಅಧ್ಯಯನ, ಹೊಳವು ಸಮ್ಮುಖ ಮಂಥನದ ಸಾಧ್ಯತೆಗಳು.

ಆನ್‌ಲೈನ್‌ ತರಗತಿಗಳೇ ಶಾಶ್ವತ?

ಕೊರೋನಾ ಕಾಲದ ಆನ್‌ಲೈನ್‌ ಸಾಧ್ಯತೆಗಳು ಕೇವಲ ಪ್ರಯೋಗ. ಇವೇನಾದರೂ, ಯಶಸ್ವಿಯಾದರೆ ಇದನ್ನೇ ಭವಿಷ್ಯದಲ್ಲಿ ಪೂರ್ಣದಾರಿಯನ್ನಾಗಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಕಟ್ಟಡ, ಕ್ಯಾಂಪಸ್‌, ಪ್ರಯೋಗಾಲಯ, ಗರಿಷ್ಠ ಮಾನವ ಸಂಪನ್ಮೂಲ ಯಾವುದೂ ಬೇಡದ ಈ ಯಂತ್ರದ ದಾರಿ ಪ್ರಭುತ್ವದ ಪಾಲಿಗೆ ಲಾಭದಾಯಕವೂ ಹೌದು. ಆರ್ಥಿಕ ಸಂಕಷ್ಟದ ದಾರಿಯಲ್ಲಿ ಇದನ್ನು ಬೇಡ ಎನ್ನಲು ನೀನು ಯಾರು ಎನ್ನುವವರೂ ಇದ್ದೇ ಇದ್ದಾರೆ. ಆದರೆ ಎಲ್ಲವನ್ನೂ ಹಣದ ದಾರಿಯಲ್ಲೇ ಗುಣಿಸುವ ವ್ಯಾವಹಾರಿಕ ಮನಸ್ಥಿತಿ ಶಿಕ್ಷಣದ ವಿಷಯದಲ್ಲಿ ಸರ್ಕಾರಕ್ಕೆ ಖಂಡಿತ ಭೂಷಣವಲ್ಲ.

ದಶಕದ ಹಿಂದಿನ ಘಟನೆಯೊಂದು ನೆನಪಿಗೆ ಬರುತ್ತಿದೆ. ಕರಾವಳಿ ಮೂಲದ ಪ್ರಸಿದ್ಧ ಇಂಜಿನಿಯರಿಂಗ್‌ ಕಾಲೇಜೊಂದರ ಪ್ರಾಧ್ಯಾಪಕರೊಬ್ಬರನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿಯನ್ನಾಗಿ ನೇಮಕ ಮಾಡಿದರು. ಅಧಿಕಾರ ವಹಿಸಿಕೊಂಡ ಎರಡನೇ ದಿನವೇ ಅವರು ಮಾಧ್ಯಮಗೋಷ್ಠಿಯಲ್ಲಿ, ‘ಇನ್ನು ಮುಂದೆ ಈ ವಿವಿಯಲ್ಲಿ ಪದವಿ ತರಗತಿಗಳಿಗೆ ಭಾಷೆ ಕಲಿಕೆ ಇರುವುದಿಲ್ಲ’ ಎಂದರು.

ಮಕ್ಕಳು ಒಂದನೇ ತರಗತಿಯಿಂದ ಪಿಯುಸಿವರೆಗೆ ಭಾಷೆಯನ್ನು ಕಲಿಯುವುದರಿಂದ ಮತ್ತೆ ಅದನ್ನೇ ಪದವಿಗೂ ಕಲಿಸುವ ಅಗತ್ಯ ಇರುವುದಿಲ್ಲ ಎಂದರು. ಬಹುಶಃ ಬರಗೂರು ರಾಮಚಂದ್ರಪ್ಪನವರು ಇರಬೇಕು, ಒಂದಷ್ಟುಚಿಂತಕರನ್ನು ಸೇರಿಸಿ ಈ ಹೇಳಿಕೆ ವಿರುದ್ಧ ತೀವ್ರ ತರಹದ ಹೋರಾಟ ಮಾಡಿದರು. ನಂತರ ನೂತನ ವಿ.ಸಿ. ಆ ಹೇಳಿಕೆಯನ್ನು ವಾಪಸ್‌ ಪಡೆದರು.

ಭಾರತದಂಥ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದೊಳಗೆ ಇರುವಷ್ಟುಭಾಷೆ, ಮತ, ಧರ್ಮ, ಜಾತಿ ಸಂಸ್ಕೃತಿ, ಆಚರಣೆ ಬಹುಶಃ ಜಗತ್ತಿನ ಬೇರೆ ಯಾವುದೇ ದೇಶಗಳಲ್ಲಿ ಇರಲಾರದು. ಈ ದೇಶದ ಜೀವಶಕ್ತಿಯೇ ಮಾನವಿಕ ವಿಷಯಗಳು. ಕನ್ನಡ, ಹಿಂದಿ, ಸಂಸ್ಕೃತ, ಇತಿಹಾಸ, ಸಮಾಜಶಾಸ್ತ್ರ, ರಾಜ್ಯ ಶಾಸ್ತ್ರ ಮುಂತಾದ ಮಾನವಿಕ ವಿಷಯಗಳು ನಮ್ಮ ಹೊಸ ತಲೆಮಾರಿನ ಕಿಸೆ ತುಂಬುವ ದಾರಿಯಾಗದೇ ಹೋಗಬಹುದು. ಆದರೆ ಅವೆಲ್ಲವೂ ಅವರ ಹೃದ¿ಕ್ಕೆ ಸಂವೇದನೆಗಳನ್ನು ತುಂಬುವ ಜೀವ ಭಾಷೆಯಾಗಬಹುದು.

ಕಲಾ ವಿಭಾಗದ ಸರ್ವನಾಶ?

ಮೊನ್ನೆಮೊನ್ನೆಯವರೆಗೆ ಯಾವ ತರಗತಿಯಲ್ಲಿ ನಿಂತು ‘ಮಕ್ಕಳೇ ಮೊಬೈಲ್‌ ಮುಟ್ಟಬೇಡಿ. ಕೆಲವೊಮ್ಮೆ ಅದು ಆಟದ ಗೊಂಬೆಗಿಂತ ಅಪಾಯಕಾರಿ; ಸಮಯ, ಸಂಬಂಧ, ಸಹವಾಸ ನಾಶ ಮಾಡುವ ಆ ಸ್ವಯಂತ್ರ ಬೇಡವೇ ಬೇಡ’ ಎಂದು ಹೇಳಿದ್ದೇನೆ. ವಿಶ್ವವಿದ್ಯಾಲಯ- ಶಿಕ್ಷಣ ಇಲಾಖೆಯ ಸುತ್ತೋಲೆಗಳನ್ನು ಉಲ್ಲೇಖಿಸಿ ತರಗತಿಯೊಳಗಡೆ ಮೊಬೈಲ್‌ ತರಲೇಬೇಡಿ ಎಂದು ಎಚ್ಚರಿಸಿದ್ದೇನೆ.

ಈಗ ಅವರ ಅದೇ ಮೊಬೈಲ್‌ಗೆ ನಾನು ಭಾಸನ ‘ಊರು ಭಂಗ’ ನಾಟಕದ ಟಿಪ್ಪಣಿಗಳನ್ನು ತುರುಕಿಸಬೇಕಾದ ಅನಿವಾರ‍್ಯತೆ ಸೃಷ್ಟಿಯಾಗಿದೆ. ಮೊದಲೇ ವಿಜ್ಞಾನ, ವಾಣಿಜ್ಯ, ತಾಂತ್ರಿಕ-ವೈದ್ಯಕೀಯ ಭರಾಟೆಯಲ್ಲಿ ಮಾನವಿಕ ಕೋರ್ಸ್‌ಗಳು ಬಾಗಿಲು ಹಾಕುತ್ತಿರುವುದು ಗೊತ್ತೇ ಇದೆ. ಬಹುತೇಕ ಪಿಯು-ಪದವಿ ಕಾಲೇಜುಗಳಲ್ಲಿ ಆಟ್ಸ್‌ರ್‍ ವಿಭಾಗಕ್ಕೆ ಮಕ್ಕಳೇ ಇಲ್ಲ. ಕರ್ನಾಟಕದಲ್ಲಿ ಬಹುತೇಕ ಕನ್ನಡ ಭಾಷಾ ಐಚ್ಛಿಕ ತರಗತಿಗಳು ಮುಚ್ಚೇ ಹೋಗಿವೆ. ಇಂಥ ವಿಷಮ ಸಂದರ್ಭದಲ್ಲಿ ಕೊರೋನಾ ಕೃಪಾಪೋಷಿತ ಆನ್‌ಲೈನ್‌ ತರಗತಿಗಳು ಕಲಾ ವಿಭಾಗದ ಸರ್ವನಾಶಕ್ಕೆ ಕಾರಣವಾಗುವ ಸಂದರ್ಭ ಸನ್ನಿಹಿತವಾಗಿದೆ.

ಪುಟ್ಟಪುಟ್ಟಮಕ್ಕಳಿಗೆ ಮೊಬೈಲ್‌-ಕಂಪ್ಯೂಟರ್‌ ದಾರಿಯಲ್ಲಿ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಮುನ್ನ ಸರ್ಕಾರ ಮನೋವೈದ್ಯರ, ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಪಾಲಿಸುವುದು ಬಹು ಮುಖ್ಯ. ಇಲ್ಲಿ ಬುದ್ಧಿಯೊಂದೇ ಅಲ್ಲ, ಮಗುವಿನ ಕಣ್ಣು, ಕಿವಿಯ ಸುಸ್ಥಿರತೆಯ ಬಗ್ಗೆಯೂ ಗಂಭೀರವಾಗಿ ಚಿಂತಿಸಲೇಬೇಕು. ನೈತಿಕ ಕಾರಣಕ್ಕೆ ಮಗುವಿನ ಕೈಗೆ ಮೊಬೈಲ್‌ ಕೊಡದ ಪೋಷಕರು, ಅದು ಶೈಕ್ಷಣಿಕ ಪರಿಕರವಾದಾಗ ಕೊಡಲೇಬೇಕಾಗುತ್ತದೆ. ಆಗ ಕೆಡುವ ದಾರಿ ಸುಲಭವಾಗುತ್ತದೆ.

- ನರೇಂದ್ರ ರೈ ದೇರ್ಲ, ಪುತ್ತೂರು

Latest Videos
Follow Us:
Download App:
  • android
  • ios