ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್| ಲಾಕ್‌ಡೌನ್‌ನಿಂದ ಶಾಲಾ, ಕಾಲೇಜುಗಳಿಗೂ ರಜೆ| ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಕಾಲೇಜು ಆರಂಭ| ಯುಜಿಸಿಯಿಂದ ಕಾಲೇಜು ಪುನರಾರಂಭಕ್ಕೆ ಡೇಟ್ ಫಿಕ್ಸ್
ನವದೆಹಲಿ(ಏ.30): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಬದಲಾವಣೆ ಮಾಡಿದೆ. ಅದರಂತೆ ಹೊಸದಾಗಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಿಂದ ಹಾಗೂ ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಗಸ್ಟ್‌ನಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದೆ ಎಂದು ಯುಜಿಸಿ ತಿಳಿಸಿದೆ.
ಕೊರೋನಾ ವೈರಸ್ ಮಹಾಮಾರಿ ಮತ್ತು ಲಾಕ್‌ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಹಾಗೂ ವಿಸ್ತೃತ ಮಾರ್ಗಸೂಚಿಯನ್ನು ಯುಜಿಸಿ ಬುಧವಾರ ಬಿಡುಗಡೆ ಮಾಡಿದೆ. ಅಂತಿಮ ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದೆ.
undefined
ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಾಲಿ ಹಾಗೂ ಹಿಂದಿನ ಸೆಮಿಸ್ಟರ್‌ಗಳ ಆಂತರಿಕ ಮೌಲ್ಯ ಮಾಪನಗಳನ್ನು ಆಧರಿಸಿ ಶ್ರೇಯಾಂಕವನ್ನು ನೀಡಲಾಗುವುದು. ಕೊರೋನಾ ವೈರಸ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ರಾಜ್ಯಗಳಲ್ಲಿ ಜುಲೈನಲ್ಲಿ ಪರೀಕ್ಷೆಗಳು ನಡೆಯಲಿವೆ. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪರೀಕ್ಷೆಗಳು ನಡೆಯಲಿವೆ. ಒಂದು ವೇಳೆ ಮೂಲ ಸೌಕರ್ಯಗಳು ಲಭ್ಯವಿದ್ದರೆ ಆನ್‌ಲೈನ್ ಮೂಲಕ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ಬಗ್ಗೆ ವಿಶ್ವವಿದ್ಯಾಲಯಗಳು ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಯುಜಿಸಿ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾದ ಬಳಿಕ ವಾರದಲ್ಲಿ ಆರು ದಿನಗಳು ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಜೊತೆಗೆ ಲಾಕ್‌ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳು ಸಿಬ್ಬಂದಿ ಪ್ರಯಾಣ ಇತಿಹಾಸವನ್ನು ದಾಖಲಿಸಲಾಗುತ್ತದೆ. ಇದೇ ವೇಳೆ ಎಂಫಿಲ್ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಆರು ತಿಂಗಳ ಹೆಚ್ಚುವರಿ ಅವಧಿಯನ್ನು ನೀಡಲಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲ ವೈವಾವನ್ನು ನಡೆಸಲಾಗುತ್ತದೆ ಎಂದು ಹೇಳಿದೆ.