ಆ.15 ರೊಳಗೆ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ; ಕಳೆದ ಬಾರಿ ಅವಕಾಶ ವಂಚಿತರಿಗೆ ಆದ್ಯತೆ

By Kannadaprabha News  |  First Published Aug 1, 2020, 10:07 AM IST

ಆ.15 ರೊಳಗೆ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ | ಸಿದ್ಧತೆ ನಡೆಸಲು ಸಚಿವ ಸುರೇಶ್‌ ಸೂಚನೆ | ಕಳೆದ ಬಾರಿ ಅವಕಾಶ ವಂಚಿತರಿಗೆ ಆದ್ಯತೆ


ಬೆಂಗಳೂರು (ಆ. 01): ಪ್ರಸಕ್ತ ವರ್ಷದ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯನ್ನು ಆ.15 ರೊಳಗೆ ಪ್ರಕಟಿಸಬೇಕು ಹಾಗೂ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಲ್ಲದೆ, ಕಳೆದ ಬಾರಿ ಕಡ್ಡಾಯ ವರ್ಗಾವಣೆಯಲ್ಲಿ ಅವಕಾಶ ವಂಚಿತರಾಗಿದ್ದ ಸಾವಿರಾರು ಶಿಕ್ಷಕರಿಗೆ ಈ ಬಾರಿಯ ವರ್ಗಾವಣೆಯಲ್ಲಿ ಅವಕಾಶ ನೀಡುವಂತೆಯೂ ನಿರ್ದೇಶಿಸಿದ್ದಾರೆ. ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈ ನಿರ್ದೇಶನ ನೀಡಿದರು.

Latest Videos

undefined

ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಆ. 20 ರೊಳಗೆ ಜಾರಿ: ಸಚಿವ

ಕಳೆದ ಬಾರಿ ಕಡ್ಡಾಯ ವರ್ಗಾವಣೆ ಇದ್ದ ಹಿನ್ನೆಲೆಯಲ್ಲಿ ಸಾಕಷ್ಟುಶಿಕ್ಷಕರು ವರ್ಗಾವಣೆಯಿಂದ ಅವಕಾಶ ವಂಚಿತರಾಗಿದ್ದರು. ಇಂತಹ ಶಿಕ್ಷಕರಿಗೆ ಈ ಬಾರಿಯ ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಶಿಕ್ಷಕರ ಸ್ನೇಹಿ ವರ್ಗಾವಣೆ ನಿಯಮಗಳನ್ನು ರೂಪಿಸಿರುವುದರಿಂದ ತೊಂದರೆಯಾಗದಂತೆ ವರ್ಗಾವಣೆಯನ್ನು ನಡೆಸಲಾಗುತ್ತದೆ ಎಂದು ಸಚಿವ ಸುರೇಶ್‌ ಕುಮಾರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

ಶಿಕ್ಷಕರ ವರ್ಗಾವಣೆ ನಿಯಮಗಳು ಅಂತಿಮ ಗೊಂಡಿರುವುದರಿಂದ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ನಗರ ಪ್ರದೇಶದಲ್ಲಿ (ಎ ವಲಯ) ಹತ್ತಕ್ಕಿಂತ ಹೆಚ್ಚಿನ ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ವಿಭಾಗದಲ್ಲಿ ಹಳ್ಳಿಗಾಡು (ಸಿ-ವಲಯ) ಪ್ರದೇಶಗಳಿಗೆ ವರ್ಗಾವಣೆ ಮಾಡುವ ಕುರಿತು ಸಾಕಷ್ಟುಚರ್ಚೆಯಾಗಿ ಸತತ ಎರಡು ವರ್ಷ ವರ್ಗಾವಣೆಗೆ ಅಡ್ಡಿಯಾಗಿತ್ತು. ಕಳೆದ ವರ್ಷ ಸುರೇಶ್‌ಕುಮಾರ್‌ ಸಚಿವರಾದ ಬಳಿಕ ವರ್ಗಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.

ಅಲ್ಲದೆ, ಶಿಕ್ಷಕ ಸ್ನೇಹಿ ನಿಯಮಾವಳಿ ರೂಪಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಕಡ್ಡಾಯ ವರ್ಗಾವಣೆ ಪದವನ್ನು ತೆಗೆದು ವಲಯ ವರ್ಗಾವಣೆ ಎಂಬ ಪದವನ್ನು ಬಳಸಲಾಯಿತು. ಅಲ್ಲದೆ, 50 ವರ್ಷ ಮೇಲ್ಪಟ್ಟ ಶಿಕ್ಷಕಿಯರು, 55 ಮೇಲ್ಪಟ್ಟಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಪತಿ ಪತ್ನಿ ಪ್ರಕರಣಗಳಲ್ಲಿಯೂ ನಿಯಮಗಳನ್ನು ಸಾಕಷ್ಟುಸಡಿಲಿಕೆ ಮಾಡಲಾಗಿದೆ.

ಪ್ರಮುಖವಾಗಿ ಈ ಮೊದಲು ಶೇ.15 ಮಿತಿಯಲ್ಲಿದ್ದ ಅನಾರೋಗ್ಯ ಪೀಡಿತರು, ವಿಧವೆ ಶಿಕ್ಷಕಿಯರು ಹಾಗೂ ಶೇ. 40ಕ್ಕಿಂತ ಹೆಚ್ಚಿನ ಅಂಗವಿಕಲ ಶಿಕ್ಷಕರನ್ನು ವಿಶೇಷ ವರ್ಗಾವಣೆಗೆ ಸೇರಿಸಿರುವುದರಿಂದ ಹೆಚ್ಚಿನ ಶಿಕ್ಷಕರಿಗೆ ವರ್ಗಾವಣೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

click me!