ಅನರ್ಹರ ಕ್ಷೇತ್ರ ಸರ್ಕಾರದಿಂದ ಭಾರೀ ಅನುದಾನ

By Kannadaprabha NewsFirst Published Nov 8, 2019, 12:53 PM IST
Highlights

ರಾಜ್ಯದಲ್ಲಿ ಅನರ್ಹಗೊಂಡ ಶಾಸಕರ ಕ್ಷೇತ್ರಗಳಿಗೆ ಸರ್ಕಾರದವು ಪ್ರವಾಹ ಪರಿಹಾರದ ಮೊತ್ತವಾಗಿ ಅತಿ ಹೆಚ್ಚಿನ ಪ್ರಮಾಣದ ಅನುದಾನ ಬಿಡುಗಡೆ ಮಾಡಿದೆ ಎನ್ನಲಾಗಿದ್ದು ಇದರ ಹಿಂದೆ ಮಾಸ್ಟರ್ ಪ್ಲಾನ್ ಇದೆ ಎಂದು ಮುಖಂಡರೋರ್ವರು ಹೇಳಿದ್ದಾರೆ. 

ಹರಿಹರ [ನ.08]:  ಅನರ್ಹ ಶಾಸಕರ ಕ್ಷೇತ್ರಗಳಿಗೆ ಕೋಟಿ ಕೋಟಿ ಅನುದಾನವನ್ನು ಸಿಎಂ ಯಡಿಯೂರಪ್ಪ ನೀಡುತ್ತಿರುವುದನ್ನು ನೋಡಿದರೆ ಉಪ ಚುನಾವಣೆಯಲ್ಲಿ ಗೆಲ್ಲುವ ಹುನ್ನಾರ ಎಂಬುದು ಪ್ರತಿಯೊಬ್ಬರಿಗೂ ತಿಳಿಯುವ ವಿಷಯ ಎಂದು ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಆರೋಪಿಸಿದರು. 

ಇಲ್ಲಿನ ಗಾಂಧಿನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಸಮಯ ದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಶಾಸಕರಿಗೆ ಅನುದಾನ ನೀಡದೇ ಇರುವ ಮುಖ್ಯಮಂತ್ರಿ, ಅನರ್ಹ ಶಾಸಕರ ಕ್ಷೇತ್ರಗಳಿಗೆ ಕೋಟಿ ಕೋಟಿ ಅನುದಾನ ನೀಡುತ್ತಿದ್ದಾರೆಂದರು. ದೇಶದಲ್ಲಿ ಬೆಂಬಲ ಬೆಲೆ ಸಿಗದಿರುವುದರಿಂದ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸೌಲಭ್ಯಗಳು ದೊರೆಯುತ್ತಿಲ್ಲ. 

ಪೆಟ್ರೋಲ್, ಡಿಸೇಲ್ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ, ಇದರ ಬಗ್ಗೆ ಯಾವುದೇ ರೀತಿ ಚಿಂತನೆಗಳು ಬಿಜೆಪಿ ಸರ್ಕಾರ ದಲ್ಲಿ ನಡೆಯುತ್ತಿಲ್ಲ ಎಂದು ದೂರಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದೆ ಎರಡು ತಿಂಗಳಿಂದ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಪ್ರವಾಹಕ್ಕೆ ಸಿಲುಕಿ ಸುಮಾರು 30 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಹೊಲ, ಮನೆ, ಆಸ್ತಿಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿ ಯಾಗಲಿ, ಸಂಪುಟದ ಸಚಿವರಾಗಲಿ ಚಿಂತಿಸದೆ ಕೇವಲ 17 ಜನ ಅನರ್ಹ ಶಾಸಕರ ಬಗ್ಗೆ ಚಿಂತಿಸುತ್ತಾ ಸುಪ್ರೀಂ ಕೋರ್ಟ್‌ಗೆ ಅಲೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.  ಯಡಿಯೂರಪ್ಪ ನೇತತ್ವದ ಬಿಜೆಪಿ ಸರ್ಕಾರ ಯಾವಾಗ ಪತನವಾಗುವುದೋ ಎನ್ನುವ ಭೀತಿಯಿಂದ ಸಚಿವರು ಹಾಗೂ ಶಾಸಕರು ದಿನದೂಡುತ್ತಾ ಕೇವಲ ಭಾಷಣಗಳಲ್ಲಿ ಅವಧಿ ಪೂರ್ಣಗೊಳಿಸುತ್ತೇವೆ ಎನ್ನುತ್ತಿದ್ದಾರೆ ಎಂದರು. 

ಶಾಸಕ ಎಸ್. ರಾಮಪ್ಪ, ಮುಸ್ಲಿಂ ಧರ್ಮಗುರು ಶಂಶುದ್ದೀನ್ ಸಾಹೇಬ್, ಮುಖಂಡರಾದ ಮಂಜುನಾಥ್, ನಜೀರ್ ಸಾಬ್ ಹಲಗೇರಿ, ಮುನಾಫ್, ನಜೀರ್ ಹುಸೇನ್, ರಾಮಣ್ಣ ಅಲ್ಲದೆ ಅನೇಕ ಮುಖಂಡರು ಉಪಸ್ಥಿತರಿದ್ದರು.

click me!