ವಾಲ್ಮೀಕಿ ಮೀಸಲಾತಿ ಆಯ್ತು, ಈಗ ಕುರುಬ, ಬ್ರಾಹ್ಮಣ ಮಿಸಲಾತಿ ಕೂಗೆಬ್ಬಿಸಿದ ಯತ್ನಾಳ್

Published : Oct 11, 2022, 09:43 AM IST
ವಾಲ್ಮೀಕಿ ಮೀಸಲಾತಿ ಆಯ್ತು, ಈಗ ಕುರುಬ, ಬ್ರಾಹ್ಮಣ ಮಿಸಲಾತಿ ಕೂಗೆಬ್ಬಿಸಿದ ಯತ್ನಾಳ್

ಸಾರಾಂಶ

ವಾಲ್ಮೀಕಿ ಸಮುದಾಯದ ಒತ್ತಾಯಕ್ಕೆ ಮಣಿದು ಎಸ್ಸಿ, ಎಸ್ಟಿಮೀಸಲು ಹೆಚ್ಚಿಸಲು ನಿರ್ಧರಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮೀಸಲಾತಿ ವಿಚಾರದಲ್ಲಿ ಹೊಸ ತಲೆನೋವು ಶುರುವಾಗಿದೆ. ಒಕ್ಕಲಿಗರಿಂದ ಮೀಸಲಾತಿ ಹೆಚ್ಚಳದ ಆಗ್ರಹ ಕೇಳಿ ಬಂದ ಬಳಿಕ ಇದೀಗ ಕುರುಬ ಹಾಗೂ ಬ್ರಾಹ್ಮಣ ಸಮುದಾಯಕ್ಕೂ ಮೀಸಲಾತಿ ನೀಡಬೇಕೆಂಬ ಒತ್ತಾಯ ಬಂದಿದೆ.

ದಾವಣಗೆರೆ/ವಿಜಯಪುರ (ಅ.11) : ವಾಲ್ಮೀಕಿ ಸಮುದಾಯದ ಒತ್ತಾಯಕ್ಕೆ ಮಣಿದು ಎಸ್ಸಿ, ಎಸ್ಟಿಮೀಸಲು ಹೆಚ್ಚಿಸಲು ನಿರ್ಧರಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮೀಸಲಾತಿ ವಿಚಾರದಲ್ಲಿ ಹೊಸ ತಲೆನೋವು ಶುರುವಾಗಿದೆ. ಒಕ್ಕಲಿಗರಿಂದ ಮೀಸಲಾತಿ ಹೆಚ್ಚಳದ ಆಗ್ರಹ ಕೇಳಿ ಬಂದ ಬಳಿಕ ಇದೀಗ ಕುರುಬ ಹಾಗೂ ಬ್ರಾಹ್ಮಣ ಸಮುದಾಯಕ್ಕೂ ಮೀಸಲಾತಿ ನೀಡಬೇಕೆಂಬ ಒತ್ತಾಯ ಬಂದಿದೆ. ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕಲ್ಪಿಸಬೇಕೆಂದು ಹಾಲುಮತ ಮಹಾಸಭಾ ಆಗ್ರಹಿಸಿದರೆ, ಬ್ರಾಹ್ಮಣರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕೆಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಗೆಬ್ಬಿಸಿದ್ದಾರೆ.

ಕುಲಶಾಸ್ತ್ರೀಯ ಅಧ್ಯಯನದ ವರದಿ ಅಂಗೀಕರಿಸಲು ಆಗ್ರಹ

ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಕುರುಬ ಸಮಾಜವು ಪರಿಶಿಷ್ಟಪಂಗಡಗಳ ಪಟ್ಟಿಯಲ್ಲೇ ಇದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಬೇಕು. ಒಂದು ವೇಳೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಹಾಲುಮತ ಮಹಾಸಭಾವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈ ಸಂಬಂಧ ರಾಜ್ಯಾದ್ಯಂತ 30 ಜಿಲ್ಲೆಗಳಲ್ಲೂ ಏಕಕಾಲಕ್ಕೆ ಆಯಾ ಜಿಲ್ಲಾಡಳಿತ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಯಿತು.

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಮಹಾಸಭಾ ಮುಖಂಡರು, ಎಸ್‌ಟಿ ಮೀಸಲಾತಿ ಪಟ್ಟಿಯಲ್ಲಿರುವ ಕುರುಬರ ಮೀಸಲಾತಿಯನ್ನು ರಾಜ್ಯವ್ಯಾಪಿ ವಿಸ್ತರಿಸಲು ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದೇವೆ. 2018ರಲ್ಲಿ ಸರ್ಕಾರವು ಎಸ್‌ಟಿ ಮೀಸಲಾತಿಗಾಗಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶಿಸಿತ್ತು. ಅದರಂತೆ ರಾಜ್ಯ ಬುಡಕಟ್ಟು ಸಂಶೋಧನಾ ಇಲಾಖೆ ಅಧ್ಯಯನವನ್ನೂ ನಡೆಸಿದೆ ಎಂದರು.

ಮೀಸಲಾತಿ ವಿಚಾರವಾಗಿ ಹರಿಹರದ ಕನಕ ಗುರುಪೀಠದಲ್ಲಿ ನಡೆದಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಕುಲಶಾಸ್ತ್ರೀಯ ಅಧ್ಯಯನ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ನಿರಂಜನಾನಂದ ಪುರಿ ಸ್ವಾಮೀಜಿ, ಈಶ್ವರಾನಂದ ಪುರಿ ಸ್ವಾಮೀಜಿ ಹಕ್ಕೊತ್ತಾಯದ ನಿರ್ಣಯ ಮಾಡಿದ್ದರು. ಸೆ.11ರಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದರು. ಸಾಮಾಜಿಕ ನ್ಯಾಯದಡಿ ಎಸ್ಸಿ-ಎಸ್ಟಿಮೀಸಲಾತಿ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದ ಮುಖ್ಯಮಂತ್ರಿಗಳು ಈಗಾಗಲೇ ಪೂರ್ಣಗೊಂಡ ಕುರುಬರ ಕುಲಶಾಸ್ತ್ರೀಯ ಅಧ್ಯಯನದ ವರದಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.

ಮುಸ್ಲಿಂರ 2ಬಿ ಮೀಸಲಾತಿ ತೆಗೆದುಹಾಕಬೇಕು: ಸಂಚಲನ ಸೃಷ್ಟಿಸಿದ ಯತ್ನಾಳ್ ಹೇಳಿಕೆ

ಅಲ್ಪಸಂಖ್ಯಾತ ಸ್ಥಾನ ನೀಡಿ:

ಈ ಮಧ್ಯೆ, ಮುಸ್ಲಿಮರನ್ನು ಅಲ್ಪಸಂಖ್ಯಾತರ ಪಟ್ಟಿಯಿಂದ ಹೊರಗಿಡಬೇಕೆಂದು ಆಗ್ರಹಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬ್ರಾಹ್ಮಣರನ್ನು ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ವಾದ ಮಂಡಿಸಿದ್ದಾರೆ. ಶೇ.2ರಿಂದ 3ರಷ್ಟಿರುವ ಬ್ರಾಹ್ಮಣರು ನಿಜವಾಗಿಯೂ ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆಯಾಗಬೇಕು. ಮುಸ್ಲಿಮರು ಅಲ್ಪಸಂಖ್ಯಾತರು ಅಲ್ಲವೇ ಅಲ್ಲ, ಒಂದು ಜನಾಂಗದಷ್ಟಿರುವ ಅವರು ಅಲ್ಪಸಂಖ್ಯಾತರು ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.

PREV
Read more Articles on
click me!

Recommended Stories

ವಿಭೂತಿಗಳಲ್ಲೇ ಐಕ್ಯರಾದ ಭಾರತದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ! ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಕಾಂಗ್ರೆಸ್‌ನ ಕಟ್ಟಾಳು ಶಾಮನೂರು ಶಿವಶಂಕರಪ್ಪ: ದಾವಣಗೆರೆಯ ಅಜೇಯ ರಾಜಕೀಯ ದಂತಕಥೆ