OTP ಜಗಳ: ತಮಿಳುನಾಡಲ್ಲಿ ಟೆಕ್ಕಿ ಕೊಂದ ಕ್ಯಾಬ್ ಡ್ರೈವರ್!

By Santosh NaikFirst Published Jul 5, 2022, 12:10 PM IST
Highlights

ಗುಡುವಂಚೇರಿಯ 34 ವರ್ಷದ ಎಚ್ ಉಮೇಂದರ್ ಅನ್ನು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ ಭವ್ಯ (34), ಇಬ್ಬರು ಮಕ್ಕಳು ಮತ್ತು ಭವ್ಯ ಅವರ ಸಹೋದರಿ  ಜೊತೆ ಸುತ್ತಾಟಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಚೆನ್ನೈ (ಜುಲೈ 5): ಕ್ಯಾಬ್‌ ಹತ್ತುವ ಮುನ್ನ ಬುಕ್ಕಿಂಗ್‌ಗಾಗಿ  ಪಡೆದ ಒಟಿಪಿ ( OTP ) ಹಾಗೂ ಪ್ರಯಾಣಿಕರ ಸಂಖ್ಯೆಯನ್ನು ( dispute over accommodating passengers ) ತಿಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ಓಲಾ (OLA Cab Driver) ಚಾಲಕನೊಬ್ಬ, ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ ಪ್ರಯಾಣಿಕನೊಬ್ಬನನ್ನು ದಾರುಣವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಕೊಯಮತ್ತೂರಿನ ( Coimbatore ) ಖಾಸಗಿ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿದ್ದ ಗುಡುವಂಚೇರಿಯ (Guduvanchery)  34 ವರ್ಷದ ಉಮೇಂದರ್ ಮೃತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಓಲ್ಡ್‌ ಮಹಾಬಲಿಪುರಂ ರಸ್ತೆಯಲ್ಲಿ(Old Mahabalipuram Road)  ಈ ಘಟನೆ ನಡೆದಿದ್ದು, ಉಮೇಂದರ್‌ ಅವರ ಕುಟುಂಬದ ಎದುರೇ ಈ ಹತ್ಯೆ ನಡೆದಿದೆ.

ಇತ್ತೀಚೆಗಷ್ಟೇ ಪ್ರವಾಸಕ್ಕಾಗಿ ಚೆನ್ನೈಗೆ ಭೇಟಿ ನೀಡಿದ್ದ ಉಮೇಂದರ್‌, ಭಾನುವಾರ ಪತ್ನಿ ಭವ್ಯಾ, ತನ್ನ ಇಬ್ಬರು ಮಕ್ಕಳು ಹಾಗೂ ಭವ್ಯಾ ಅವರ ಸಹೋದರಿಯ ಕುಟುಂಬದೊಂದಿಗೆ ನವಲೂರಿನ ಮರೀನಾ ಮಾಲ್‌ಗೆ ತೆರಳಿದ್ದರು. ಸಂಜೆ ಉಮೇಂದರ್ ಗುಡುವಂಚೇರಿಗೆ ಮರಳಲು ಓಲಾ ಕ್ಯಾಬ್ ಅನ್ನು ಬುಕ್ ಮಾಡಿದ್ದರು.

ಕಾರು ಪಿಕಪ್ ಸ್ಟಾಪ್ ತಲುಪಿದ ತಕ್ಷಣ ಕಾರಿನ ನೋಂದಣಿ ಸಂಖ್ಯೆಯನ್ನು ಗಮನಿಸಿದ ಉಮೇಂದರ್ ಬಾಗಿಲು ತೆರೆದು ಮಕ್ಕಳೊಂದಿಗೆ ವಾಹನದೊಳಗೆ ಬಂದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕ್ಯಾಬ್ ಡ್ರೈವರ್ ರವಿ (41) ವಾಹನದೊಳಗೆ ಹೋಗುವ ಮೊದಲು ಒಟಿಪಿ ಹಂಚಿಕೊಳ್ಳಲು ಉಮೇಂದರ್ ಅವರನ್ನು ಕೇಳಿದರು. ಇದರ ಬೆನ್ನಲ್ಲಿಯೇ ಇಬ್ಬರ ನಡುವೆ ವಾಗ್ವಾದ ತಾರಕಕ್ಕೆ ಏರಿತು. ತೀವ್ರ ವಾಗ್ವಾದದ ನಂತರ ಉಮೇಂದರ್,  ಬುಕಿಂಗ್ ( Booking ) ರದ್ದುಗೊಳಿಸುವಂತೆ ರವಿಗೆ ಹೇಳಿ ಕಾರಿನಿಂದ ಕೆಳಗಿಳಿದಿದ್ದರು.

ಕೋಪ ತಡೆಯಲಾರದೆ ರವಿ ಕಾರಿನಿಂದ ಕೆಳಗಿಳಿದು ಮೊಬೈಲ್‌ನಿಂದ ಉಮೇಂದರ್‌ಗೆ ಹೊಡೆದು ಮುಖಕ್ಕೆ ಗುದ್ದಿದ್ದಾನೆ ಎನ್ನಲಾಗಿದೆ. ಇದರಿಂದ ಉಮೇಂದರ್ ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಕೆಲಂಬಾಕ್ಕಂ ಪೊಲೀಸರು ( Kelambakkam police ) ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ರವಿಯನ್ನು ಬಂಧಿಸಿದ್ದಾರೆ. ರವಿ ಸೇಲಂ ಮೂಲದವನಾಗಿದ್ದು, ಸೇಂಟ್ ಥಾಮಸ್ ಮೌಂಟ್‌ನಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರೂಪದರ್ಶಿಯ ಕೊಂದು, ಏರ್‌ ಟಿಕೆಟ್‌ ಹರಿದು ಹಾಕಿದ್ದ ಓಲಾ ಚಾಲಕ !

ತನ್ನ ಅನುಮತಿಯಿಲ್ಲದೆ ಕ್ಯಾಬ್‌ ಬುಕ್‌ ಮಾಡಿದವರು ವಾಹನವನ್ನು ಹತ್ತಿದ್ದಾರೆ ಎನ್ನುವುದಕ್ಕೆ ಕೆರಳಿದ ಎನ್‌.ರವಿ (41) ಮೊದಲು ಒಟಿಪಿ ಹೇಳಿ, ನಂತರ ವಾಹನವನ್ನು ಹತ್ತಿ ಎಂದು ಹೇಳಿದ್ದಲ್ಲದೆ, ಕ್ಯಾಬ್‌ನಲ್ಲಿ ಹತ್ತಿದ್ದವರನ್ನು ಕೆಳಗಿಳಿಸಿದ್ದ. ಇದರಿಂದ ಸಿಟ್ಟಾಗಿದ್ದ ಉಮೇಂದರ್‌, ಕಾರ್‌ನ ಬಾಗಿಲಿಗೆ ಬಡಿದಿದ್ದರು ಎಂದು ಪೊಲೀಸರು ಹೇಳಿದ್ದರು. ನೀವು ಹೆಚ್ಚು ಜನರಿದ್ದೀರಿ, ಕ್ಯಾಬ್‌ನ ಬದಲಾಗಿ ಎಸ್‌ಯುವಿಯನ್ನು ಬುಕ್‌ ಮಾಡಬೇಕಿತ್ತು ಎಂದು ಹೇಳುವ ಮೂಲಕ ರವಿ, ಉಮೇಂದರ್‌ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಮಾತಿನ ಚಕಮಕಿ ಹೆಚ್ಚಾದಂತೆ ರವಿ, ಉಮೇಂದರ್‌ ಮೇಲೆ ಮೊಬೈಲ್‌ನಿಂದ ಹಲ್ಲೆ ಮಾಡಿದ್ದಾರೆ.

ನಮ್ಮ ಕುಟುಂಬವನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಓಲಾ ಕ್ಯಾಬ್, ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಬೆಂಗಳೂರು ವ್ಯಕ್ತಿ!

ಭವ್ಯಾ ಅವರು ನೀಡಿದ ದೂರಿನ ಪ್ರಕಾರ, ರವಿ ಹಲವು ಬಾರಿ ಉಮೇಂದರ್‌ಗೆ ಗುದ್ದಿದ ಕಾರಣದಿಂದ ಅವರು ಪ್ರಜ್ಞಾಹೀನರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗ ಮಧ್ಯೆಯಲ್ಲೇ ಅವರು ಸಾವನ್ನಪ್ಪಿದ್ದಾರೆ. ಇದರ ನಡುವೆ ಚಾಲಕ ರವಿ ಪರಾರಿಯಾಗಲು ಯತ್ನಿಸಿದ ವೇಳೆ, ಸ್ಥಳೀಯ ಕೈಗೆ ಸಿಕ್ಕಿಬಿದ್ದಿದ್ದಾನೆ.

click me!