ರೂಪದರ್ಶಿಯ ಕೊಂದು, ಏರ್ ಟಿಕೆಟ್ ಹರಿದು ಹಾಕಿದ್ದ ಓಲಾ ಚಾಲಕ !
ರೂಪದರ್ಶಿ ಪೂಜಾ ಸಿಂಗ್ ಅವರನ್ನು ಕೊಂದ ಬಳಿಕ ಹಂತಕ ಕ್ಯಾಬ್ ಚಾಲಕ ನಾಗೇಶ್, ಹತ್ಯೆ ಕೃತ್ಯ ಮುಚ್ಚಿ ಹಾಕಲು ಸಾಕ್ಷ್ಯ ನಾಶಕ್ಕೆ ಯತ್ನಿಸಿ, ಆಕೆಯ ಬಳಿ ಇದ್ದ ಏರ್ ಟಿಕೆಟ್ ಕೂಡ ಹರಿದು ಹಾಕಿದ್ದ.
ಬೆಂಗಳೂರು [ಆ.25]: ಕೊಲ್ಕತ್ತಾ ಮೂಲದ ರೂಪದರ್ಶಿ ಪೂಜಾ ಸಿಂಗ್ ಅವರನ್ನು ಕೊಂದ ಬಳಿಕ ಹಂತಕ ಕ್ಯಾಬ್ ಚಾಲಕ ನಾಗೇಶ್, ಹತ್ಯೆ ಕೃತ್ಯ ಮುಚ್ಚಿ ಹಾಕಲು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಸಂಗತಿ ಬಾಗಲೂರು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಪರಪ್ಪನ ಅಗ್ರಹಾರ ಸಮೀಪದ ಹೋಟೆಲ್‌ನಲ್ಲಿ ಆ.31ರ ಬೆಳಗಿನ ಜಾವ ಪೂಜಾಸಿಂಗ್ ಅವರನ್ನು ಕಾರಿಗೆ ಹತ್ತಿಸಿಕೊಂಡ ಆರೋಪಿ, ಬಳಿಕ ಹಣದಾಸೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಪ್ರವೇಶದ ದ್ವಾರದ ಕಾಡಯರಪ್ಪನಹಳ್ಳಿ ಸಮೀಪ ಕರೆದೊಯ್ದು ಆಕೆಯನ್ನು ಹತ್ಯೆ ಮಾಡಿದ್ದ.
ನಂತರ ಗುರುತು ಪತ್ತೆಯಾಗದಂತೆ ಪೂಜಾಸಿಂಗ್ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದಲ್ಲದೆ, ಬ್ಯಾಗ್, ಮೊಬೈಲ್ ಕಳವು ಮಾಡಿದ್ದ. ಕೊಲ್ಕತ್ತಾಗೆ ತೆರಳಲು ಬುಕ್ ಮಾಡಿದ್ದ ವಿಮಾನ ಟಿಕೆಟ್ ಅನ್ನು ಸಹ ಹರಿದು ಹಾಕಿದ್ದ. ಈ ಟಿಕೆಟ್ ಪತ್ತೆಯಾದರೆ ಮೃತಳ ಹೆಸರು ಹಾಗೂ ಮೊಬೈಲ್ ನಂಬರ್ ಎಲ್ಲವೂ ಸಿಗುತ್ತದೆ ಎಂಬ ಕಾರಣಕ್ಕೆ ಹರಿದು ಹಾಕಿದೆ ಎಂದು ಆರೋಪಿ ನಾಗೇಶ್ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಈಶಾನ್ಯ ವಿಭಾಗ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಕೃತ್ಯದ ನಂತರ ಮತ್ತೆ ಓಲಾ ಸಂಸ್ಥೆಗೆ ಆತ ಲಾಗಿನ್ ಆಗಲಿಲ್ಲ. ಲಾಗಿನ್ ಆದರೆ ಸಿಕ್ಕಿ ಬೀಳುತ್ತೇನೆ ಎಂಬ ಭಯಕ್ಕೆ ಓಲಾ ಆ್ಯಪ್ ಅನ್ನು ಆಫ್ ಮಾಡಿದ್ದ. ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಆತ ಅಸಹಜವಾಗಿ ವರ್ತಿಸುತ್ತಿದ್ದ. ಈ ಹಿಂದೆ ಏನಾದರು ಪ್ರಯಾಣಿಕರ ಸುಲಿಗೆ, ಕಿರುಕುಳ ನೀಡಿದರ ಬಗ್ಗೆ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಯಾವುದೇ ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ ಎಂದು ಡಿಸಿಪಿ ಸ್ಪಷ್ಟಪಡಿಸಿದ್ದಾರೆ.
50 ಸಾವಿರ ಬಹುಮಾನ
ಸವಾಲಾಗಿದ್ದ ಕೊಲ್ಕತ್ತಾ ಮೂಲದ ರೂಪದರ್ಶಿ ಕೊಲೆ ಪ್ರಕರಣ ಬೇಧಿಸಿದ ಬಾಗಲೂರು ಇನ್ಸ್‌ಪೆಕ್ಟರ್ ಬಿ.ರಾಮಮೂರ್ತಿ ನೇತೃತ್ವದ ತಂಡ ತನಿಖಾ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಯುಕ್ತ ಭಾಸ್ಕರ್ ರಾವ್ ತಮ್ಮ ಕಚೇರಿಗೆ ಶನಿವಾರ ಇನ್‌ಸ್ಪೆಕ್ಟರ್ ಅವರನ್ನು ಕರೆಸಿ 50 ಸಾವಿರ ನಗದು ಬಹುಮಾನ ನೀಡಿ ಅಭಿನಂದಿಸಿದರು.