ಕೆವಿಜಿ ಪ್ರಿನ್ಸಿಪಾಲ್ ಹತ್ಯೆ ಪ್ರಕರಣ: ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್‌ ಸೇರಿ 6 ಮಂದಿ ಜೈಲಿಗೆ

By Kannadaprabha NewsFirst Published Oct 7, 2023, 12:58 PM IST
Highlights

ದಶಕದ ಹಿಂದೆ ನಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ  ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್‌. ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾ ಪ್ರಸಾದ್‌ ಸೇರಿದಂತೆ 6 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಹೈಕೋರ್ಟ್.

ಬೆಂಗಳೂರು (ಅ.7): ದಶಕದ ಹಿಂದೆ ನಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್‌. ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾ ಪ್ರಸಾದ್‌ ಸೇರಿದಂತೆ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಪ್ರಕರಣದಲ್ಲಿ ರೇಣುಕಾಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ (ಪುತ್ತೂರು ಉಪ ವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಹಣಕ್ಕಾಗಿ ನೀಟ್‌ ತಯಾರಿಯಲ್ಲಿದ್ದ ವಿದ್ಯಾರ್ಥಿ ಅಪಹರಿಸಿ

ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ.ರೇಣುಕಾಪ್ರಸಾದ್‌, ಮನೋಜ್‌ ರೈ, ಎಚ್‌.ಆರ್. ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ ಮತ್ತು ಶಂಕರ ಅವರನ್ನು ಮೃತ ಎ.ಎಸ್‌. ರಾಮಕೃಷ್ಣ ಅವರ ಹತ್ಯೆ ಹಾಗೂ ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳೆಂದು ತೀರ್ಮಾನಿಸಿ 2023ರ ಸೆ.27ರಂದು ಹೈಕೋರ್ಟ್‌ ಆದೇಶಿಸಿತ್ತು. ಗುರುವಾರ ಶಿಕ್ಷೆ ವಿಧಿಸುವ ಕುರಿತು ದೋಷಿಗಳ ವಾದ ಆಲಿಸಿದ ಹೈಕೋರ್ಟ್‌, ಕೊಲೆ ಮತ್ತು ಅಪರಾಧಿಕ ಒಳಸಂಚು ಅಪರಾಧಕ್ಕೆ ಎಲ್ಲ ಆರು ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರು. ದಂಡ ವಿಧಿಸಿ ಆದೇಶಿಸಿತು.

ಅಲ್ಲದೆ, ಕೊಲೆ ಮತ್ತು ಒಳಸಂಚಿಗೆ ರೇಣುಕಾ ಪ್ರಸಾದ್‌ ಅವರೇ ಮುಖ್ಯ ಕಾರಣವಾಗಿದ್ದಾರೆ. ಹೀಗಾಗಿ, ಅವರು ಮೃತ ರಾಮಕೃಷ್ಣ ಅವರ ಪತ್ನಿಗೆ 10 ಲಕ್ಷ ರು. ಪರಿಹಾರ ಪಾವತಿಸಬೇಕು ಎಂದು ನಿರ್ದೇಶಿಸಿರುವ ನ್ಯಾಯಪೀಠ, ತಲೆ ಮರೆಸಿಕೊಂಡಿರುವ ಐದನೇ ಆರೋಪಿ ಶರಣ್‌ ಪೂಜಾರಿ ಬಂಧನಕ್ಕೆ ವಾರೆಂಟ್‌ ಹೊರಡಿಸುವಂತೆ ಪುತ್ತೂರು ಸೆಷನ್ಸ್‌ ಕೋರ್ಟ್‌ಗೆ ಸೂಚಿಸಿದೆ.

ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕ ವೃದ್ಧ ದಂಪತಿ ಮೇಲೆ

ಚಿಕಿತ್ಸೆ ಕಲ್ಪಿಸಲು ಸೂಚನೆ: ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವವರ ಪೈಕಿ ಡಾ. ರೇಣುಕಾಪ್ರಸಾದ್‌ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಗುರುವಾರ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ರೇಣುಕಾಪ್ರಸಾದ್‌ 63 ವರ್ಷ ವಯಸ್ಸಿನವರಾಗಿದ್ದು, ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಶಿಕ್ಷೆ ಘೋಷಣೆಯ ಬಳಿಕ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದ್ದರಿಂದ ಅವರಿಗೆ ಚಿಕಿತ್ಸಾ ವ್ಯವಸ್ಥೆ ಮಾಡಬೇಕು ಎಂದು ಶಿಕ್ಷೆ ಪ್ರಕಟವಾದ ಬಳಿಕ ಅವರ ಪರ ವಕೀಲರು ನ್ಯಾಯಾಧೀಶರಲ್ಲಿ ಕೇಳಿಕೊಂಡಾಗ, ಡಾ. ರೇಣುಕಾಪ್ರಸಾದ್‌ಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಜೈಲು ಅಧೀಕ್ಷಕರಿಗೆ ನ್ಯಾಯಾಧೀಶರು ಆದೇಶ ನೀಡಿದರು. ಅದರಂತೆ ರಾತ್ರಿ 11 ಗಂಟೆಗೆ ರೇಣುಕಾಪ್ರಸಾದ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಜೀವಾವಧಿ ಶಿಕ್ಷೆಗೊಳಗಾದವರನ್ನು ಮಂಗಳೂರು ಸಬ್ ಜೈಲಿನಲ್ಲಿ ಇರಿಸಿಕೊಳ್ಳುವಂತಿಲ್ಲವಾದುದರಿಂದ ಜೀವಾವಧಿಗೊಳಗಾದ ಉಳಿದ ನಾಲ್ವರನ್ನು ಶಿವಮೊಗ್ಗ ಸೆಂಟ್ರಲ್ ಜೈಲ್‌ಗೆ ಕಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಗುರುವಾರ ನ್ಯಾಯಾಲಯಕ್ಕೆ ಹಾಜರಾಗದ ಆಕಾಶ ಭವನ ಶರಣ್ ಬಂಧನಕ್ಕೆ ಸರ್ಚ್ ವಾರಂಟ್ ಹೊರಡಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಪ್ರಕರಣದ ವಿವರ: ಸುಳ್ಯದ ಅಮರ ಶಿಲ್ಪಿ ಎಂದೇ ಪ್ರಖ್ಯಾತರಾಗಿರುವ ದಿವಂಗತ  ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡೆಮಿ ಆಫ್‌ ಲಿಬೆರಲ್‌ ಎಜುಕೇಷನ್‌ ಸ್ಪ್ಲಿಂಟರ್‌ ಇನ್‌ಸ್ಟಿಟ್ಯೂಷನ್ಸ್‌ ಸ್ಥಾಪಿಸಿದ್ದರು. ಅವರ ಮರಣ ನಂತರ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆ ಹಿರಿಯ ಪುತ್ರ ಕೆ.ವಿ. ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್‌ಗೆ ವಿಭಜನೆಯಾಗಿತ್ತು. ಆದರೆ  ಎ.ಎಸ್‌. ರಾಮಕೃಷ್ಣ ಭಟ್‌  ಅವರು ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮತ್ತು ಕುಟುಂಬಕ್ಕೆ ಆತ್ಮೀಯರಾಗಿದ್ದರು. ಆಸ್ತಿ ವಿಭಜನೆ ಬಗ್ಗೆ ಮತ್ತು ಸಹೋದರರ ಮಧ್ಯೆ ಮನಸ್ತಾಪಕ್ಕೆ ರಾಮಕೃಷ್ಣ ಅವರೇ ಕಾರಣ ಎಂದು  ರೇಣುಕಾ ಪ್ರಸಾದ್‌ ಅವರ ನಂಬಿಕೆಯಾಗಿತ್ತು.

ಆಸ್ತಿ ಹಾಗೂ ಶೈಕ್ಷಣಿಕ ಸಂಸ್ಥೆ ಹೊಣೆಗಾರಿಕೆ ವಿಭಜನೆ ವಿಚಾರವಾಗಿ ರಾಮಕೃಷ್ಣ ಬಗ್ಗೆ ಮನಸ್ತಾಪ ಹೊಂದಿದ್ದ ರೇಣುಕಾ ಪ್ರಸಾದ್‌, ಕೊಲೆ ಸುಪಾರಿ ನೀಡಿದ್ದರು. 2011ರ ಏ.28ರಂದು ರಾಮಕೃಷ್ಣ ಅವರ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು.

click me!