ಹಾವೇರಿ (ನ.6) : ಶಿಗ್ಗಾಂವಿ ತಾಲೂಕು ಅಡವಿಸೋಮಾಪುರ ಬಳಿ ಮೂರು ತಿಂಗಳ ಹಿಂದೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಗುರುತು ಸಿಗದಂತೆ ಸುಟ್ಟು ಹಾಕಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸಲು ಯಶಸ್ವಿಯಾಗಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಕೊಲೆ ಮಾಡಿಸಿದ್ದ ಮಹಿಳೆ ಸೇರಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ!
undefined
ಈ ಕುರಿತು ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ ಎಸ್ಪಿ ಹನುಮಂತರಾಯ, ಕಳೆದ ಆಗಸ್ಟ್ 25ರಂದು ಶಿಗ್ಗಾಂವಿ ತಾಲೂಕು ತಡಸ ಪೊಲೀಸ್ ಠಾಣೆ ವ್ಯಾಪ್ತಿಯ ಅಡವಿಸೋಮಾಪುರ ಗ್ರಾಮದ ಬಳಿ ಶ್ಯಾಡಂಬಿ ಕೆರೆಯಿಂದ ಹರಿದು ಹೊನ್ನಾಪುರ ಕೆರೆಗೆ ಬರುವ ನೀರಿನ ಕಾಲುವೆ ಮೇಲೆ ಶವ ಪತ್ತೆಯಾಗಿತ್ತು. 35-40ವರ್ಷದ ವಯಸ್ಸಿನ ವ್ಯಕ್ತಿಯನ್ನು ಕೊಲೆ ಮಾಡಿ ಮರುದಿನ ಟೈರ್, ಪೆಟ್ರೋಲ್ ತಂದು ಸುಟ್ಟು ಸಾಕ್ಷ್ಯ ನಾಶ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಕುರಿತು ಸಮೀಪದ ಹೊಲದ ಮಾಲೀಕ ಪರ್ವತಗೌಡ ಪಾಟೀಲ ಎಂಬುವರು ದೂರು ದಾಖಲಿಸಿದ್ದರು. ಪ್ರಕರಣ ಭೇದಿಸಲು ರಚಿಸಿದ್ದ ಪೊಲೀಸರ ತಂಡ ತನಿಖೆ ನಡೆಸಿದಾಗ ಇದೊಂದು ವ್ಯವಸ್ಥಿತವಾಗಿ ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ ಎಂದರು.
ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದ ವ್ಯಕ್ತಿ ಸಕ್ರಪ್ಪ ಗಂಗಪ್ಪ ಲಮಾಣಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈತನ ಪತ್ನಿ ಶೀಲವ್ವ ಸಕ್ರಪ್ಪ ಲಮಾಣಿ ಎಂಬುವಳು ಆರೋಪಿಯೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಹಾಗೂ ಆತನ ಸಹಚರರು ಸೇರಿ ಅಡವಿಸೋಮಾಪುರದ ಬಳಿ ಕೊಲೆ ಮಾಡಿ ಪೊದೆಯಲ್ಲಿ ಬಚ್ಚಿಟ್ಟಿದ್ದರು. ಮರುದಿನ ಟೈರ್, ಪೆಟ್ರೋಲ್ ತಂದು ಸುಟ್ಟಿದ್ದರು. ಆದರೆ, ಅರೆ ಬೆಂದ ಸ್ಥಿತಿಯಲ್ಲಿದ್ದ ಶವದ ಕಾಲು ಹಾಗೂ ಪ್ಯಾಂಟ್ ನೋಡಿ ಆತನ ಕುಟುಂಬದವರು ಸಕ್ರಪ್ಪ ಲಮಾಣಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ ಎಂದರು.
ಸಕ್ರಪ್ಪ ಲಮಾಣಿ ಕಾಣೆಯಾಗಿರುವ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾಣೆಯಾಗಿರುವ ಮಾಹಿತಿ ಸಂಗ್ರಹಿಸಿಕೊಂಡು ಸಂಶಯುಕ್ತ ಆರೋಪಿತರನ್ನು ವಿಚಾರಣೆ ನಡೆಸಿದಾಗ ವಿಷಯ ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದ ಸುರೇಶ ಈರಪ್ಪ ಲಮಾಣಿ, ಶೀಲವ್ವ ಸಂಕ್ರಪ್ಪ ಲಮಾಣಿ, ಗೋದಪ್ಪ ಸೋಮಪ್ಪ ಲಮಾಣಿ, ಶಿಗ್ಗಾಂವಿ ತಾಲೂಕು ನೀರಲಗಿ ಗ್ರಾಮದ ಚಂದ್ರಪ್ಪ ನಿಂಗಪ್ಪ ಮಿರ್ಜಿ, ವಿನಾಯಕ ಚನ್ನಪ್ಪ ಮಿರ್ಜಿ, ಸತ್ಯಪ್ಪ ರಾಮಣ್ಣ ಸತ್ಯಪ್ಪನವರ, ನಾಗಪ್ಪ ಚೆನ್ನಬಸಪ್ಪ ಹೊನ್ನಾಪುರ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೊಲೆಗೆ ಬಳಸಿದ ಟಾಟಾ ಆ್ಯಪೆ ವಾಹನ, ಬೈಕ್, ಒಂದು ಕೊಡಲಿಯನ್ನು ಜಪ್ತಿ ಮಾಡಲಾಗಿದ್ದು, ಶಿಗ್ಗಾಂವಿ ಡಿಎಸ್‌ಪಿ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.
ಈ ಪ್ರಕರಣ ಪತ್ತೆ ಹಚ್ಚುವಲ್ಲಿ ಶಿಗ್ಗಾಂವಿ ಸಿಪಿಐ ಬಿ.ಕೆ. ಹಳಬನ್ನವರ, ಪಿಎಸ್‌ಐ ಸಂಪತ್ ಆನಿಕಿವಿ, ತಡಸ ಪಿಎಸ್‌ಐ ಸಿದ್ದಪ್ಪ, ಸಿಬ್ಬಂದಿ ಕೆ.ಜಿ. ಸಂಶಿ, ಕಾಶಿನಾಥ ಗಾಮನಗಟ್ಟಿ, ಎನ್.ವೈ. ಡಂಬಳ, ವೆಂಕಟೇಶ ಲಮಾಣಿ, ಎಸ್.ಎಸ್. ಗೊಂದಳಿ, ರವಿ ಬೆಳವಲಕೊಪ್ಪ, ಶಂಭುಲಿಂಗ ಯಲಿವಾಳ, ಫಕ್ಕಿರೇಶ ಕಳ್ಳಿಮನಿ, ಮಹೇಶ ಹೊರಕೇರಿ, ರಾಜೇಸಾಬ ಸುಂಕದ, ಪ್ರಭುಗೌಡ ಪಾಟೀಲ, ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ ಪ್ರಮುಖ ಪಾತ್ರವಹಿಸಿದ್ದು, ಅವರ ಕಾರ್ಯವನ್ನು ಶ್ಲಾಘಿಘಿಸುತ್ತೇವೆ ಎಂದರು.
ಲವ್ವರ್‌ಗಾಗಿ ಗಂಡನ ಕೊಲೆಗೆ ಪತ್ನಿಯಿಂದಲೇ ಸುಫಾರಿ; ಪ್ರಾಣ ಉಳಿಸಿದ್ದು ಕುಡಿತದ ಚಟ
ಮಿಸ್ಸಿಂಗ್ ಕೇಸ್ ಮಾಹಿತಿ ಕೊಡಿ..
ನಾವು ಕಾಣೆಯಾಗಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಜಿಲ್ಲೆಯಲ್ಲಿ ಯಾರಾದರೂ ಕಾಣೆಯಾದರೆ ಅವರ ಕುಟುಂಬದವರು ತಕ್ಷಣ ಅವರ ಭಾವಚಿತ್ರದೊಂದಿಗೆ ಸಂಪೂರ್ಣ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು. ಆಗ ಮಾತ್ರ ಆದಷ್ಟುಬೇಗ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದರು. ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ. ಸಂತೋಷ, ಡಿವೈಎಸ್ಪಿ ಎಂ.ಎಸ್. ಪಾಟೀಲ, ಡಿಎಸ್‌ಪಿ ಮಂಜುನಾಥ್ ಇದ್ದರು.