ಆನೇಕಲ್‌[ಮೇ.14]: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತಿಯನ್ನು ಪತ್ನಿಯೇ ಪ್ರಿಯಕರನೊಡನೆ ಸೇರಿ ಕತ್ತು ಕೊಯ್ದು ದಾರುಣವಾಗಿ ಹತ್ಯೆಗೈದಿರುವ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಬಾಗೇಪಲ್ಲಿ ಮೂಲದ ಶ್ರೀನಿವಾಸ್‌ (30) ಕೊಲೆಯಾದ ದುರ್ದೈವಿ. ಶ್ರೀನಿವಾಸ್‌ ಅವರ ಪತ್ನಿ ಪ್ರತಿಭಾ ಹಾಗೂ ಆಕೆಯ ಪ್ರಿಯಕರ ಬಾಲಕೃಷ್ಣ ಕೊಲೆ ಮಾಡಿದ ಆರೋಪಿಗಳು.

ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಬಾಗೇಪಲ್ಲಿ ಮೂಲದ ಶ್ರೀನಿವಾಸ್‌ ಹಾಗೂ ಪ್ರತಿಭಾ ದಂಪತಿ ಹೀಲಲಿಗೆ ಗ್ರಾಮದಲ್ಲಿ ವಾಸ ಮಾಡುತ್ತಿದ್ದು, ದಂಪತಿಗೆ ಒಂದು ಗಂಡು ಹಾಗೂ ಹೆಣ್ಣು ಮಗುವಿದೆ. ಇತ್ತೀಚೆಗೆ ಪ್ರತಿಭಾ ಹಾಗೂ ಪಕ್ಕದ ಮನೆಯ ಬಾಲಕೃಷ್ಣ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿದ್ದು, ಇದನ್ನು ಶ್ರೀನಿವಾಸ್‌ ಪ್ರಶ್ನಿಸಿದ್ದರು. ಇದರಿಂದ ಆಕ್ರೋಶಿತರಾದ ಆರೋಪಿಗಳು ಸೂರ್ಯನಗರ ಬಿಎಂಟಿಸಿ ಬಸ್‌ ನಿಲ್ದಾಣದ ಸಮೀಪ ಶ್ರೀನಿವಾಸ್‌ರನ್ನು ಕರೆಸಿ ಚಾಕುವಿನಿಂದ ಇರಿದು ಶ್ರೀನಿವಾಸ್‌ನನ್ನು ಕೊಲೆ ಮಾಡಿ, ಶವವನ್ನು ಬೊಮ್ಮಸಂದ್ರದ ಕೆರೆಗೆ ಎಸೆದಿದ್ದರು.

ಹೆಂಡತಿ ಕೊಲ್ಲಲು ಸ್ಕೆಚ್‌:

ಶ್ರೀನಿವಾಸ್‌ನನ್ನು ಕೊಲೆ ಮಾಡುವ ಸಂದರ್ಭದಲ್ಲಿ ಬಾಲಕೃಷ್ಣ ತನ್ನ ಜತೆಯಲ್ಲಿ ಆತನ ಹೆಂಡತಿ ಲಕ್ಷ್ಮೇದೇವಿಯನ್ನು ಕರೆದುಕೊಂಡು ಹೋಗಿದ್ದ. ಶ್ರೀನಿವಾಸ್‌ನನ್ನು ಕೊಲೆ ಮಾಡಿದ ಬಳಿಕ ತನ್ನ ಹೆಂಡತಿಯನ್ನು ಕೊಲೆ ಮಾಡಲು ಆರೋಪಿ ಸಂಚು ರೂಪಿಸಿದ್ದ, ಆದರೆ ಆ ವೇಳೆ ಹೆಂಡತಿ ಮಡಲಿನಲ್ಲಿದ್ದ ತನ್ನ ಒಂದು ವರ್ಷದ ಗಂಡು ಮಗುವಿನ ಮುಖವನ್ನು ನೋಡಿ ಆಕೆಯನ್ನು ಕೊಲೆ ಮಾಡದೇ ಬಿಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೊನೆಗೆ ಲಕ್ಷ್ಮೇದೇವಿ ಕೂಡಲೇ ಮನೆ ಮಾಲೀಕರಿಗೆ ಬೋಗ್ಯದ ಹಣ ಹಿಂದಿರುಗಿಸುವಂತೆ ಒತ್ತಡವೇರಿದ್ದು, ಅನುಮಾನಗೊಂಡ ಮನೆ ಮಾಲೀಕರು ಪ್ರಶ್ನೆ ಮಾಡಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.