* ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ
* ವೈರಲ್ ಆಯ್ತು ಆರೋಪಿಯ ಪೋಸ್ಟ್
* ಸರಳ ವಾಸ್ತು ಗುರೂಜಿ ಹತ್ಯೆ ಮಾಡುವ ಸುಳಿವು ನೀಡಿದ್ದನಾ ಆರೋಪಿ?
ಬೆಂಗಳೂರು(ಜು.06): ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆ ಆಸ್ತಿಗಾಗಿ ನಡೆಯಿತೇ? ಅಥವಾ ವೈಯಕ್ತಿಕ ದ್ವೇಷ ಕಾರಣವೋ? ಅಥವಾ ಇನ್ನೇನಾದರೂ ವಿಷಯಕ್ಕೆ ಕೊಲೆಯಾಗಿದೆಯೇ? ಹೀಗೆ ಹಲವು ಪ್ರಶ್ನೆಗಳು ಹರಿದಾಡುತ್ತಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಚಂದ್ರಶೇಖರ ಗುರೂಜಿ ಅವರನ್ನು 20 ಸೆಕೆಂಡ್‌ನಲ್ಲಿ 40ರಿಂದ 50 ಬಾರಿ ಇರಿಯಬೇಕೆಂದರೆ ಅವರಲ್ಲಿ ಗುರೂಜಿ ಬಗ್ಗೆ ಎಷ್ಟೊಂದು ದ್ವೇಷ, ಸಿಟ್ಟು ಇತ್ತೆಂನ್ನುವುದು ಸ್ಪಷ್ಟವಾಗುತ್ತದೆ. ಬರೀ ಆಸ್ತಿ ವಿವಾದ ಇದ್ದರೆ ಇಷ್ಟೊಂದು ದ್ವೇಷ ಇರುತ್ತದೆಯೇ? ಅಥವಾ ಆಸ್ತಿಯೊಂದಿಗೆ ಬೇರೆ ಏನಾದರೂ ವೈಯಕ್ತಿಕ ದ್ವೇಷ ಇರಬಹುದೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಎಲ್ಲಾ ಸವಾಲುಗಳ ನಡುವೆಯೇ ಸದ್ಯ ಹತ್ಯೆಗೈದ ಆರೋಪಿಯ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿದ್ದು, ಆರೋಪಿ ಈ ಮೊದಲೇ ಕೊಲೆ ಮಾಡುವ ಬಗ್ಗೆ ಸುಳಿವು ನೀಡಿದ್ದನಾ ಎಂಬ ಅನುಮಾನವೂ ಹುಟ್ಟಿಕೊಂಡಿದೆ.
ಗುರೂಜಿ ಹತ್ಯೆ: ನನ್ನ ಗಂಡನಿಗಿಂತ ಜಾಸ್ತಿ ಗುರೂಜಿ ನಂಬುತ್ತಿದ್ದೆ: ಆರೋಪಿ ಪತ್ನಿ ಹೇಳಿಕೆ
ಫೇಸ್‌ಬುಕ್ ಪೋಸ್ಟ್‌ನಲ್ಲೇನಿದೆ?
ಹೌದು ಆರೋಪಿಗಳಲ್ಲೊಬ್ಬನಾದ ಮಹಂತೇಶ್ ಶಿರೂರ ಸಂಭವಾಮಿ ಯುಗೇ ಯುಗೇ ಎಂದು ಮಾಡಿದ್ದ ಪೋಸ್ಟ್ ಸದ್ಯ ಭಾರೀ ಚರ್ಚೆ ಹುಟ್ಟು ಹಾಕಿದೆ. ನಾಲ್ಕು ದಿನಗಳ ಹಿಂದೆ ಆರೋಪಿ ತನ್ನ ಪೋಸ್ಟ್‌ನಲ್ಲಿ 'ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನೂ ವಿಳಂಬ ಏಕೆ ಭಗವಂತ..? ಆದಷ್ಟು ಬೇಗಾ ಅವತರಿಸು ಪ್ರಭು..! ಸಂಭವಾಮಿ ಯುಗೇ.. ಯುಗೇ...' ಎಂದು ಬರೆದುಕೊಂಡಿದ್ದಾನೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುಳಿವು?
ಆರೋಪಿ ಮಹಾಂತೇಶ ಶಿರೂರ ಕಳೆದ 5 ದಿನಗಳ ಹಿಂದೆ ತನ್ನ ಫೇಸ್‌ಬುಕ್‌ನಲ್ಲಿ ಈ ರೀತಿಯ ಪೋಸ್ಟ್ ಮಾಡಿದ್ದ. ಚಂದ್ರಶೇಖರ ಗುರೂಜಿ ಅವರ ಹತ್ಯೆ ನಡೆಯುತ್ತಿದ್ದಂತೆ ಆರೋಪಿ ಮಾಡಿದ್ದ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿದೆ. ಅಲ್ಲದೇ ಚಂದ್ರಶೇಖರ ಗುರೂಜಿ ಅವರ ಹತ್ಯೆ ಪಕ್ಕಾ ಪೂರ್ವ ನಿಯೋಜಿತ ಕೃತ್ಯ ಎಂಬ ಅನುಮಾನ ಜನರಲ್ಲಿ ಹುಟ್ಟಿದೆ.
ಆರೋಪಿಗಳ್ಯಾರು?
ಆರೋಪಿಗಳಿಬ್ಬರೂ ಗುರೂಜಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಇವರಲ್ಲಿ ಮಹಾಂತೇಶ ಶಿರೂರು ಎಂಬಾತ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದವನು (ತಾಯಿಯ ತವರುಮನೆ). ಈತನಿಗೆ ತಾಯಿ, ಅಣ್ಣ, ತಂಗಿ ಇದ್ದಾರೆ. ತಂದೆ ಇಲ್ಲ. ಮಧ್ಯಮ ವರ್ಗದ ಕುಟುಂಬವಿದು. ಡಿಗ್ರಿ ಓದಿದ್ದ ಈತನಿಗೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ.
ಆಗ ಸರಳ ವಾಸ್ತು ಸಂಸ್ಥೆಯ ಪ್ರತಿನಿಧಿಯಾಗಿ ಕೆಲಸಕ್ಕೆ ಸೇರುತ್ತಾನೆ. ನೋಡು ನೋಡುತ್ತಿದ್ದಂತೆ ಗುರೂಜಿಯ ಆಪ್ತ ಬಳಗದಲ್ಲಿ ಗುರುತಿಕೊಳ್ಳುತ್ತಾನೆ. ಹಂತ ಹಂತವಾಗಿ ವಿವಿಧ ಹುದ್ದೆಗಳಿಗೂ ಬಡ್ತಿ ಹೊಂದುತ್ತಾನೆ. ಸರಳ ವಾಸ್ತುವಿನ ಒಬ್ಬ ಪ್ರತಿನಿಧಿಯಾಗಿದ್ದ ಈತ ಬಳಿಕ ಕರ್ನಾಟಕ ರಾಜ್ಯದ ಪ್ರತಿನಿಧಿಗಳ ಹಾಗೂ ಬಳಿಕ ಭಾರತದಲ್ಲಿನ ಎಲ್ಲ ಪ್ರತಿನಿಧಿಗಳ ಮುಖ್ಯಸ್ಥ (ಹೆಡ್) ಆಗಿ ಬಡ್ತಿ ಹೊಂದುತ್ತಾನೆ. ಯಾವಾಗ ಭಾರತದಲ್ಲಿನ ಪ್ರತಿನಿಧಿಗಳ ಮುಖ್ಯಸ್ಥನಾಗುತ್ತಾನೋ ಆಗ ಈತನ ಕಾರ್ಯಸ್ಥಾನ ಮುಂಬೈಗೆ ಸ್ಥಳಾಂತರವಾಗುತ್ತದೆ.
ಸರಳವಾಸ್ತು ಗುರೂಜಿ ಸಹಸ್ರಾರು ಕೋಟಿ ಒಡೆಯ: ಸಿಂಗಾಪುರಕ್ಕೆ ತೆರಳಿ ವಾಸ್ತುಶಾಸ್ತ್ರಜ್ಞರಾದರು
ಈ ನಡುವೆ ಸರಳ ವಾಸ್ತು ಹುಬ್ಬಳ್ಳಿಯಲ್ಲಿನ ಕಚೇರಿಯಲ್ಲಿ ವನಜಾಕ್ಷಿ ಎಂಬ ಯುವತಿ ಇಲ್ಲಿನ ತಂಡದ ಮುಖ್ಯಸ್ಥಳಾಗಿ ಕೆಲಸ ಮಾಡುತ್ತಿರುತ್ತಾಳೆ. ಮಹಾಂತೇಶ ಹಾಗೂ ವನಜಾಕ್ಷಿ ನಡುವೆ ಪ್ರೇಮಾಂಕುರವಾಗುತ್ತದೆ. ಗುರೂಜಿಯೇ ಮುಂದೆ ನಿಂತು 2013ರಲ್ಲಿ ಮಹಾಂತೇಶ ಹಾಗೂ ವನಜಾಕ್ಷಿ ಮದುವೆ ಮಾಡಿಸುತ್ತಾರೆ. ಬಳಿಕ 2016ರ ವರೆಗೆ ಮಹಾಂತೇಶ ಇವರೊಂದಿಗೆ ಕೆಲಸ ಮಾಡುತ್ತಾನೆ. ಅಲ್ಲಿಂದ ಹೊರಬರುತ್ತಾನೆ. ಈ ನಡುವೆ ಈತನ ಪತ್ನಿ ವನಜಾಕ್ಷಿ ಶಿರೂರ ಕೂಡ 2019ರ ನಂತರ ಗುರೂಜಿಯ ಅವರ ಕಂಪನಿಯಲ್ಲಿ ಕೆಲಸ ಬಿಟ್ಟು ಹೊರಬರುತ್ತಾಳೆ.
ಮಂಜುನಾಥ ಯಾರು?
ಈ ನಡುವೆ ಮಹಾಂತೇಶ ಜತೆಗೂಡಿ ಕೊಲೆ ಮಾಡಿರುವ ಮತ್ತೊಬ್ಬ ಆರೋಪಿ ಮಂಜುನಾಥ ಮರೇವಾಡ ಕೂಡ ಗುರೂಜಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಾತ. ಈತನೂ 2016ರ ವರೆಗೆ ಗುರೂಜಿ ಬಳಿಯೇ ಕೆಲಸಕ್ಕಿದ್ದ. ಈತ ಗುಜರಾತ್ ರಾಜ್ಯದ ಪ್ರತಿನಿಧಿಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದನಂತೆ. ಗುರೂಜಿ ಅವರ ಆಪ್ತ ಬಳಗದಲ್ಲಿ 12ರಿಂದ 15 ಜನರಿರುತ್ತಿದ್ದರಂತೆ. ಯಾವುದೇ ನಿರ್ಧಾರ, ಏನೇ ಯೋಜನೆಯಿದ್ದರೂ ಇವರಷ್ಟೇ ಮೊದಲು ಚರ್ಚಿಸಿ ನಿರ್ಧರಿಸುತ್ತಿದ್ದರಂತೆ. ಆ ಗುಂಪಲ್ಲಿ ಈ ಇಬ್ಬರು ಇದ್ದರು ಎಂದು ಮೂಲಗಳು ತಿಳಿಸುತ್ತವೆ.
ನೋಟ್ ಬ್ಯಾನ್ ಹಾಗೂ ಕೊರೋನಾದಿಂದಾಗಿ ಸರಳ ವಾಸ್ತು ಉದ್ಯಮಕ್ಕೆ ಹೊಡೆತಬಿದ್ದಿತ್ತು. ಆಗ ಕೆಲವೊಂದಿಷ್ಟುಜನ ನೌಕರರನ್ನು ಕೆಲಸದಿಂದ ತೆಗೆದಿದ್ದರು. ಆಗ ಕೆಲಸ ಬಿಟ್ಟವರಲ್ಲಿ ಮಹಾಂತೇಶ ಹಾಗೂ ಮಂಜುನಾಥ ಕೂಡ ಸೇರಿದ್ದರು.
Chandrashekhar Guruji Murder: 40 ಸೆಕೆಂಡ್‌ನಲ್ಲಿ 60 ಬಾರಿ ಚುಚ್ಚಿ ಕೊಲೆ, CCTVಯಲ್ಲಿ ಸೆರೆಯಾಯ್ತು ದೃಶ್ಯ
ತಮ್ಮದೇ ಗುಂಪು:
2016ರಲ್ಲಿ ಕೆಲಸ ಬಿಟ್ಟಮಹಾಂತೇಶ ಮೊದಲಿಗೆ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ. ಅದು ಸರಿಯಾಗಿ ನಡೆಯದಿದ್ದಕ್ಕೆ ಬಂದ್ ಮಾಡಿದ್ದ. ಬಳಿಕ ಮಹಾಂತೇಶ ಹಾಗೂ ಮಂಜುನಾಥ ಇಬ್ಬರು ಸೇರಿಕೊಂಡು ಸರಳ ವಾಸ್ತುವಿನಲ್ಲಿ ಕೆಲಸ ಬಿಟ್ಟಕೆಲವರನ್ನು ಕಟ್ಟಿಕೊಂಡು ತಮ್ಮದೇ ಗುಂಪು ಕಟ್ಟಿಕೊಂಡು ಗ್ರಾಹಕರನ್ನು ಹುಡುಕಿ ವಾಸ್ತು ಪರಿಹಾರ ಸೂಚಿಸುತ್ತಿದ್ದರೆನ್ನಲಾಗಿದೆ. ಜತೆಗೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ಗುರೂಜಿ ಜತೆಗೂ ಕೆಲವೊಂದಿಷ್ಟುಭೂವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಇದೇ ಕೊಲೆಗೆ ಕಾರಣ ಎಂಬುದು ಪೊಲೀಸರ ಶಂಕೆ. ಒಟ್ಟಿನಲ್ಲಿ ಗುರೂಜಿ ಕೊಲೆ ಆಪ್ತ ಬಳಗದಲ್ಲಿ ತಲ್ಲಣಗೊಳಿಸಿರುವುದಂತೂ ಸತ್ಯ.
ಬೇನಾಮಿ ಆಸ್ತಿ?
ಹುಬ್ಬಳ್ಳಿಯ ಹಲವೆಡೆ ಗುರೂಜಿ ತಮ್ಮ ಆಪ್ತ ಬಳಗದ ಮೂಲಕ ಕೆಲವೊಂದಿಷ್ಟುಅಪಾರ್ಚ್‌ಮೆಂಟ್ ಸೇರಿದಂತೆ ವಿವಿಧ ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡುತ್ತಿದ್ದರಂತೆ. ಇವರೊಂದಿಗೆ ಕೆಲಸ ಮಾಡುತ್ತಿದ್ದವರ ಹೆಸರಲ್ಲೇ ಆಸ್ತಿ ಮಾಡಿದ್ದರೆನ್ನಲಾಗಿದೆ. ಇದೀಗ ಉದ್ಯಮ ಸರಿಯಾಗಿ ನಡೆಯದಿರುವುದಕ್ಕೆ ಚಂದ್ರಶೇಖರ ಗುರೂಜಿ ಒಂದೊಂದು ಆಸ್ತಿಯನ್ನು ಪಡೆದು ಮಾರಾಟ ಮಾಡಲು ಯೋಚಿಸಿದ್ದರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಕೆಲಸದಿಂದ ತೆಗೆದಿದ್ದರು?
ಸರಳ ವಾಸ್ತು, ಸರಳಜೀವನ ಚಾನಲ್, ಸರಳ ಅಕಾಡೆಮಿ, ಸಿಜಿ ಕನ್ಸಲ್ಟೆನ್ಸಿ ಹೀಗೆ ನಾಲ್ಕೈದು ಕಂಪನಿಗಳನ್ನು ಚಂದ್ರಶೇಖರ ಗುರೂಜಿ ತೆರೆದಿದ್ದರು. ಸಾವಿರಾರು ಜನ ಕೆಲಸಕ್ಕಿದ್ದರು. ಆದರೆ ನೋಟ್ ಬ್ಯಾನ್ ಹಾಗೂ ಕೊರೋನಾದಿಂದಾಗಿ ಸಾಕಷ್ಟುಜನರನ್ನು ಕೆಲಸದಿಂದ ತೆಗೆದುಹಾಕಿದ್ದರು. ಸರಳ ಜೀವನ ಚಾನಲ್ ಬಂದ್ ಆಗಿದ್ದರೆ, ಸರಳ ವಾಸ್ತು ಮೊದಲಿನಷ್ಟುನಡೆಯುತ್ತಿರಲಿಲ್ಲವಂತೆ. ಸುಮಾರು ಸಾವಿರಕ್ಕೂ ಅಧಿಕ ನೌಕರರನ್ನು ಸರಳವಾಸ್ತುವಿನಿಂದ ತೆಗೆದಿದ್ದರಂತೆ.
ಆರೋಪಿಗಳ ಪತ್ತೆಗೆ ವಿಶೇಷ ತಂಡ
ವಿದ್ಯಾನಗರ ಪೊಲೀಸರು ರಾಮದುರ್ಗದ ಬಸವೇಶ್ವರ ಸರ್ಕಲ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹಂತಕರನ್ನು ಹಿಡಿಯಲು ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದಲ್ಲಿ ಐದು ತಂಡಗಳನ್ನು ರಚನೆ ಮಾಡಲಾಗಿತ್ತು. ಹುಬ್ಬಳ್ಳಿಯ ಎಂಟೂ ದಿಕ್ಕಿನಲ್ಲಿ ನಾಕಾಬಂಧಿ ಹಾಕಲಾಗಿತ್ತು. ಅಕ್ಕ-ಪಕ್ಕದ ಜಿಲ್ಲೆಗಳ ಪೊಲೀಸರಿಗೂ ಮಾಹಿತಿ ರವಾನೆ ಮಾಡಲಾಗಿತ್ತು ಎಂದು ಹುಬ್ಬಳ್ಳಿಯ ಪೊಲೀಸ್ ಕಮಿಷನರ್ ಲಾಬೂರಾಮ್ ಮಾಹಿತಿ ನೀಡಿದ್ದಾರೆ.