ಗುರೂಜಿ ಹತ್ಯೆ: ನನ್ನ ಗಂಡನಿಗಿಂತ ಜಾಸ್ತಿ ಗುರೂಜಿ ನಂಬುತ್ತಿದ್ದೆ: ಆರೋಪಿ ಪತ್ನಿ ಹೇಳಿಕೆ

* ಅವರನ್ನು ನನ್ನ ಗಂಡ ಏಕೆ ಕೊಲೆ ಮಾಡಿದರು ಎಂಬುದು ಗೊತ್ತಿಲ್ಲ

* ನನ್ನ ಗಂಡನಿಗೆ ಅಷ್ಟು ಕ್ರೂರವಾಗಿ ಕೊಲೆ ಮಾಡುವ ಬುದ್ದಿ ಏಕೆ ಬಂತೋ ಗೊತ್ತಿಲ್ಲ

* ಗುರೂಜಿಯವರು ನನ್ನ ಹೆಸರಲ್ಲಿ ಯಾವುದೇ ಆಸ್ತಿ ಮಾಡಿಲ್ಲ

I Believed Guruji More Than My Husband Says Saral Vastu Chandrashekhar Guruji Murderer Wife pod

ಹುಬ್ಬಳ್ಳಿ(ಜು.06): ಸರಳವಾಸ್ತುವಿನಿಂದ ದೇಶವಿದೇಶಗಳಲ್ಲಿ ಖ್ಯಾತರಾಗಿದ್ದ ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ (57) ಅವರನ್ನು ಅವರ ಆಪ್ತರೇ ಮಂಗಳವಾರ ಹಾಡಹಗಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಉಣಕಲ್‌ ಕೆರೆ ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ನ ರಿಸೆಪ್ಶನ್‌ನಲ್ಲಿ ಹತ್ತಾರು ಮಂದಿಯ ಮುಂದೆಯೇ ನಡೆದ ಈ ಭೀಕರ ಕೊಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು ಕೆಲ ಕ್ಷಣಗಳಲ್ಲೇ ವೈರಲ್‌ ಆಗಿ ಛೋಟಾ ಮುಂಬೈ ಎಂದೇ ಖ್ಯಾತವಾಗಿರುವ ವಾಣಿಜ್ಯ ನಗರಿ ಹುಬ್ಬಳ್ಳಿ ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಹತ್ಯೆಗೈದ ಆರೋಪಿ ಪತ್ನಿ ಹೇಳಿದ್ದೇನು?

ಇನ್ನು ಈ ಕೊಲೆ ವಿಚಾರವಾಗಿ ಪ್ರತಿಕ್ರಿಯಿಸಿದ ವನಜಾಕ್ಷಿ ನನ್ನ ಪ್ರೀತಿಯ ಗುರುಗಳು ಅವರು. ಅವರನ್ನು ನನ್ನ ಗಂಡ ಏಕೆ ಕೊಲೆ ಮಾಡಿದರು ಎಂಬುದು ಗೊತ್ತಿಲ್ಲ. ನನ್ನ ಗಂಡನಿಗೆ ಅಷ್ಟು ಕ್ರೂರವಾಗಿ ಕೊಲೆ ಮಾಡುವ ಬುದ್ದಿ ಏಕೆ ಬಂತೋ ಗೊತ್ತಿಲ್ಲ. ಗುರೂಜಿಯವರು ನನ್ನ ಹೆಸರಲ್ಲಿ ಯಾವುದೇ ಆಸ್ತಿ ಮಾಡಿಲ್ಲ, ತೋರಿಸುತ್ತಿರುವುದೆಲ್ಲಾ ಸುಳ್ಳು. ಪ್ಲಾಟ್ ನಲ್ಲಿರುವ ಕೊಠಡಿಯನ್ನು ಬ್ಯಾಂಕ್ ನಲ್ಲಿ ಲೋನ್ ಕಟ್ಟಿ ತೀರಿಸಿದ್ದೇವೆ. ನನ್ನ ಗಂಡ ಆ ರೀತಿ ಕೊಲೆ ಮಾಡಬಾರದು. ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಆ ಮನುಷ್ಯನಿಗೆ ಆ ಬುದ್ದಿ ಏಕೆ ಬಂತೋ ಗೊತ್ತಿಲ್ಲ. ಮನೆಯಲ್ಲಿ ಯಾವತ್ತು ಆ ರೀತಿ ಅಸಮಾಧಾನದ ಬಗ್ಗೆ ಮಾತನಾಡಿಲ್ಲ ಎಂದಿದ್ದಾರೆ. 

Chandrashekhar Guruji Murder: 40 ಸೆಕೆಂಡ್‌ನಲ್ಲಿ 60 ಬಾರಿ ಚುಚ್ಚಿ ಕೊಲೆ, CCTVಯಲ್ಲಿ ಸೆರೆಯಾಯ್ತು ದೃಶ್ಯ

ಅಲ್ಲದೇ ಕೆಲಸ ಬಿಟ್ಟ ನಂತರವು ನಾನು ಗುರೂಜಿ ಜೊತೆ ಟಚ್ ನಲ್ಲಿದ್ದೆ. ನನ್ನನ್ನು ಗುರೂಜಿ ತುಂಬಾ ನಂಬಿದ್ದರು. ಗುರೂಜಿ ಎಲ್ಲವು ಸರಿಹೋಗುತ್ತದೆ ಎಂದು ನನಗೆ ಧೈರ್ಯ ಹೇಳಿದ್ದರು. ನನ್ನ ಗಂಡನಿಗಿಂತ ಜಾಸ್ತಿ ಗುರೂಜಿ ನಂಬುತ್ತಿದ್ದೆ. ನನ್ನ ಗಂಡ ಯಾವ ವಿಚಾರವನ್ನು ನನ್ನ ಕಡೆ ಶೇರ್ ಮಾಡುತ್ತಿರಲಿಲ್ಲ. ಎಲ್ಲಾ ವಿಚಾರಗಳನ್ನು ನಾನು ಗುರೂಜಿ ಕಡೆ ಹೇಳುತ್ತೇನೆ ಎಂದು ಯಾವ ವಿಚಾರ ಹೇಳುತ್ತಿರಲಿಲ್ಲ. ಆಪಾರ್ಟಮೆಂಟ್ ವಿಚಾರಕ್ಕೆ ಪ್ರಕರಣ ದಾಖಲಿಸಿದ್ದು ವೈಯಕ್ತಿಕ ಅಲ್ಲ. ಇಲ್ಲಿನ ಅಸೋಸಿಯೇಷನ್ ಇಲ್ಲ  ಎಂಬ ಕಾರಣಕ್ಕೆ  ಆ ತೀರ್ಮಾನ ತೆಗೆದುಕೊಂಡಿದ್ದರು. ಗುರೂಜಿ ಕೊಲೆಯಾಗಿರುವುದಕ್ಕೆ ನನಗೆ ಬೇಸರವಿದೆ ದುಃಖವಿದೆ ಎಂದ ವನಜಾಕ್ಷಿ ಕಣ್ನೀರಿಟ್ಟಿದ್ದಾರೆ. 

ಎಫ್‌ಐಆರ್‌ನಲ್ಲೇನಿದೆ?

ಚಂದ್ರಶೇಖರ ಗುರೂಜಿ ಹತ್ಯೆ ಕುರಿತು ಅವರ ಸಹೋದರ ಸಂಬಂಧಿ ಸಂಜಯ ಅಂಗಡಿ ಎಂಬುವವರು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಂದ್ರಶೇಖರ ಅಂಗಡಿ ಅವರು ‘ಚಂದ್ರಶೇಖರ ಗೌರಿ ಪ್ರೈ. ಲಿ.’ (ಸಿ ಜಿ.ಪರಿವಾರ ಪ್ರೈ.ಲಿ.) ಎನ್ನುವ ಹೆಸರಿನಲ್ಲಿ ಸರಳ ವಾಸ್ತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದು ಸೇರಿ ಇನ್ನಿತರ ಇತರೆ ಕಂಪನಿಗಳಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2008ರಲ್ಲಿ ಮಹಾಂತೇಶ ಶಿರೂರ ಎಂಬಾತನನ್ನು ಕೆಲಸಕ್ಕೆ ತೆಗೆದುಕೊಂಡಿದ್ದರು. ಬಳಿಕ 2015ರಲ್ಲಿ ಇವರನ್ನು ಈ ಕಂಪನಿಗೆ ವೈಸ್‌ ಪ್ರೆಸಿಡೆಂಟ್‌ ಎಂದು ನೇಮಕ ಮಾಡಲಾಗಿತ್ತು.

ಸರಳವಾಸ್ತು ಗುರೂಜಿ ಸಹಸ್ರಾರು ಕೋಟಿ ಒಡೆಯ: ಸಿಂಗಾಪುರಕ್ಕೆ ತೆರಳಿ ವಾಸ್ತುಶಾಸ್ತ್ರಜ್ಞರಾದರು

ಆದರೆ ಮಹಾಂತೇಶ ಈ ಕಂಪನಿಗೆ ಸರಳ ವಾಸ್ತು ಮಾಡಿಸಲು ಬರುತ್ತಿದ್ದ ಜನರಿಂದ ತಾನೇ ಹಣ ತೆಗೆದುಕೊಂಡು ತಮ್ಮ ಸ್ವಂತಕ್ಕೆ ಉಪಯೋಗಿಸುತ್ತಿದ್ದ. ಇವರೊಂದಿಗೆ ಮಂಜುನಾಥ ಮರೇವಾಡ ಎಂಬಾತ ಕೂಡ ಸೇರಿ ಇನ್ನೂ 20ರಿಂದ 25 ಜನರು ಶಾಮೀಲಾಗಿದ್ದರು. ಈ ಬಗ್ಗೆ ಚಂದ್ರಶೇಖರ ಗುರೂಜಿ ಹಾಗೂ ನನಗೆ ವಿಷಯ ಗೊತ್ತಾಗಿತ್ತು. ಹೀಗಾಗಿ ಇವರನ್ನು ಕೆಲಸದಿಂದ ತೆಗೆಯಲಾಗಿತ್ತು. ಇದೇ ಸಿಟ್ಟನ್ನು ಇಟ್ಟುಕೊಂಡು ಮಹಾಂತೇಶ ಶಿರೂರ ಹುಬ್ಬಳ್ಳಿ ಗೋಕುಲ ರೋಡ್‌ನ ಜೆ.ಪಿ. ನಗರದಲ್ಲಿರುವ ಚಂದ್ರಶೇಖರ ಅವರು ಕಟ್ಟಿಸಿದ್ದ ಅಪಾರ್ಚ್‌ಮೆಂಟ್‌ದಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲ, ಮಳೆ ನೀರು ಇಂಗುದಾಣ ಇಲ್ಲ, ಸೋಲಾರ್‌ ಇಲ್ಲ ಎಂದು ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ. ಈ ಪ್ರಕರಣ ಹಿಂಪಡೆಯಲು ಹಣ ಕೇಳುತ್ತಿದ್ದು, ಹಣ ಕೊಡದೇ ಇದ್ದಾಗ ಚಂದ್ರಶೇಖರ ಅವರಿಗೆ ಆಗಾಗ ಜೀವ ಬೆದರಿಕೆ ಒಡ್ಡುತ್ತಿದ್ದ. ಇದೇ ಕಾರಣಕ್ಕೆ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಸೇರಿಕೊಂಡು ಚಂದ್ರಶೇಖರ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಚಂದ್ರಶೇಖರ ಹಾಗೂ ಅವರ ಪತ್ನಿ ಅಂಕಿತಾ ಉಳಿದುಕೊಂಡಿದ್ದ ಶ್ರೀನಗರದಲ್ಲಿರುವ ಪ್ರೆಸಿಡೆಂಟ್‌ ಹೋಟೆಲ್‌ ರಿಸೆಪ್ಶನ್‌ ಹಾಲಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿ ತಮ್ಮ ಬಳಿ ಕರೆಸಿಕೊಂಡು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ದೂರಲ್ಲಿ ಉಲ್ಲೇಖಿಸಲಾಗಿದೆ.

ಐಪಿಸಿ 1860 34, 302 ಸೇರಿ ಇತರೆ ಸೆಕ್ಷನ್‌ಗಳಲ್ಲಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇಂದು ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ

ಭೀಕರ ಹತ್ಯೆಗೀಡಾದ ಸರಳ ವಾಸ್ತುವಿನ ಚಂದ್ರಶೇಖರ ಗುರೂಜಿ ಅವರ ಅಂತ್ಯಕ್ರಿಯೆ ಬುಧವಾರ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿನ ಅವರ ಒಡೆತನದ ಜಮೀನಿನಲ್ಲಿ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಅವರ ಆಪ್ತರಾಗಿರುವ ಮೋಹನ ಲಿಂಬಿಕಾಯಿ ತಿಳಿಸಿದ್ದಾರೆ..

ಮೊದಲು ಕಿಮ್ಸ್‌ನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಮುಂಬೈನಲ್ಲಿರುವ ಅವರ ಪುತ್ರಿ ಹಾಗೂ ಸಂಬಂಧಿಕರಿಗೆ ಇಲ್ಲಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯ ನಡುವಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios