Bengaluru Crime: ಪತಿಯ ಜತೆ ಸೇರಿ ಪ್ರಿಯಕರನ ಹತ್ಯೆ: ಶವದೊಂದಿಗೆ 6 ಕಿ.ಮೀ. ಟ್ರಿಪಲ್‌ ರೈಡ್‌!

By Kannadaprabha News  |  First Published Jan 9, 2023, 7:44 AM IST

 ಹಣಕ್ಕಾಗಿ ಪರಪುರುಷರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಿದ್ದ ಪ್ರಿಯಕರನನ್ನು ಪತಿಯ ಜತೆ ಸೇರಿ ಕೊಲೆಗೈದು ದ್ವಿಚಕ್ರ ವಾಹನದಲ್ಲಿ 6 ಕಿ.ಮೀ. ಮೃತದೇಹವನ್ನು ಸಾಗಿಸಿ ರಸ್ತೆ ಬದಿ ಎಸೆದು ಪರಾರಿಯಾಗಿದ್ದ ದಂಪತಿ ಸೇರಿ ಮೂವರನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಜ.9) : ಹಣಕ್ಕಾಗಿ ಪರಪುರುಷರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಿದ್ದ ಪ್ರಿಯಕರನನ್ನು ಪತಿಯ ಜತೆ ಸೇರಿ ಕೊಲೆಗೈದು ದ್ವಿಚಕ್ರ ವಾಹನದಲ್ಲಿ 6 ಕಿ.ಮೀ. ಮೃತದೇಹವನ್ನು ಸಾಗಿಸಿ ರಸ್ತೆ ಬದಿ ಎಸೆದು ಪರಾರಿಯಾಗಿದ್ದ ದಂಪತಿ ಸೇರಿ ಮೂವರನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ರೀನಾ(Reena) (29), ಆಕೆಯ ಪತಿ ಗಂಗೇಶ್‌(Gangesh)((32) ಹಾಗೂ ಈತನ ಸ್ನೇಹಿತ ಬಿಜೋಯ್‌ ಕುಮಾರ್‌(Bijoy kumar)(28) ಬಂಧಿತರು. ಆರೋಪಿಗಳು ಜ.3ರಂದು ಅಸ್ಸಾಂ ಮೂಲದ ನಿಬಾಶೀಸ್‌ ಪಾಲ್‌ (32) ಎಂಬಾತನನ್ನು ಕೊಲೆಗೈದು ಮೃತದೇಹವನ್ನು ದ್ವಿಚಕ್ರ ವಾಹನದಲ್ಲಿ ಬಸಾಪುರದ ನೈಸ್‌ ರಸ್ತೆಗೆ ಸಾಗಿಸಿ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಇನ್‌ಸ್ಪೆಕ್ಟರ್‌ ನಂಜೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಘಟನೆ ನಡೆದ 48 ತಾಸಿನೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

Crime News: ಬೆಂಗಳೂರಿನಲ್ಲಿ ಕೊಲೆ ಮಾಡಿ ಹೆಣದ ಜೊತೆ ತ್ರಿಬಲ್ ರೈಡ್: ಆರೋಪಿಗಳ ಬಂಧನ

ಉತ್ತರ ಪ್ರದೇಶ(Uttara pradesh)ದ ಮೂಲದ ಗಂಗೇಶ್‌-ರೀನಾ ದಂಪತಿ ಉದ್ಯೋಗ ಅರೆಸಿ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಎಲೆಕ್ಟ್ರಾನಿಕ ಸಿಟಿ(electronic city) ಬಳಿಯ ದೊಡ್ಡತೊಗೂರು ಬಳಿ ನೆಲೆಸಿದ್ದರು. ರೀನಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದರೆ, ಗಂಗೇಶ್‌ ಪೇಟಿಂಗ್‌ ಕೆಲಸ ಮಾಡುತ್ತಿದ್ದ. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಕೊಲೆಯಾದ ನಿಬಾಶೀಸ್‌ ಪಾಲ್‌ ಅವಿವಾಹಿತನಾಗಿದ್ದು, ಕೋರಿಯರ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿಯಾದ ಗಂಗೇಶ್‌ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಈ ನಡುವೆ ಯುವತಿಯೊಬ್ಬಳ ಕಡೆಯಿಂದ ಪಾಲ್‌ಗೆ ರೀನಾ ಪರಿಚಯವಾಗಿದ್ದು, ಕಾಲಕ್ರಮೇಣ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಹೀಗಾಗಿ ಪಾಲ್‌ ಆಗಾಗ ರೀನಾ ಮನೆಗೆ ಬಂದು ಹೋಗುತ್ತಿದ್ದ. ಈ ವಿಚಾರ ಗಂಗೇಶ್‌ ಗೊತ್ತಿತ್ತು.

ಹಣಕ್ಕೆ ಒತ್ತಾಯ:

ಈ ನಡುವೆ ಗಂಗೇಶ್‌ ಕೆಲಸದ ನಿಮಿತ್ತ ಉತ್ತರ ಪ್ರದೇಶಕ್ಕೆ ತೆರಳಿದ್ದ. ಈ ಸಮಯದಲ್ಲಿ ರೀನಾ, ಕೂಡ್ಲು ಬಳಿಯ ಅಂಬೇಡ್ಕರ ನಗರದಲ್ಲಿರುವ ಪಾಲ್‌ ಮನೆಗೆ ಬಂದು ಅಲ್ಲೇ ಉಳಿದುಕೊಂಡಿದ್ದಳು. ನೆರೆಹೊರೆಯವರು ಕೇಳಿದರೆ ಪಾಲ್‌ ಹಾಗೂ ರೀನಾ ತಾವು ದಂಪತಿ ಎಂದು ಹೇಳಿಕೊಳ್ಳುತ್ತಿದ್ದರು. ಕೆಲ ದಿನಗಳ ಕಾಲ ಪಾಲ್‌ ಹಾಗೂ ರೀನಾ ಆರಾಮವಾಗಿದ್ದರು. ಬಳಿಕ ಪಾಲ್‌ ಹಣಕ್ಕಾಗಿ ರೀನಾಳನ್ನು ಪೀಡಿಸಲು ಆರಂಭಿಸಿದ್ದ. ಬೇರೆಯವರ ಜತೆಗೆ ದೈಹಿಕ ಸಂಪರ್ಕ ಬೆಳೆಸಿದರೆ ಹೆಚ್ಚಿನ ಹಣ ಸಿಗುತ್ತದೆ ಎಂದು ರೀನಾಳನ್ನು ವೇಶ್ಯಾವಾಟಿಕೆ ನಡೆಸಲು ಒತ್ತಾಯಿಸುತ್ತಿದ್ದ. ಇದರಿಂದ ಆಕ್ರೋಶಗೊಂಡ ರೀನಾ, ಪಾಲ್‌ನನ್ನು ಕೊಲ್ಲಲು ನಿರ್ಧರಿಸಿದ್ದಳು. ಪತಿ ಗಂಗೇಶ್‌ಗೆ ಕರೆ ಮಾಡಿ ಪಾಲ್‌ ತನ್ನನ್ನು ವೇಶ್ಯಾವಾಟಿಕೆ ನಡೆಸಲು ಒತ್ತಾಯಿಸುತ್ತಿರುವ ವಿಚಾರ ತಿಳಿಸಿದ್ದಾಳೆ. ಈ ವೇಳೆ ಇಬ್ಬರು ಪಾಲ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

ಪೂರ್ವನಿರ್ಧರಿತ ಸಂಚಿನಂತೆ ರೀನಾ, ಜ.2ರಂದು ಬೆಳಗ್ಗೆ ಪತಿ ಗಂಗೇಶ್‌ನನ್ನು ಪಾಲ್‌ ಮನೆಗೆ ಕರೆಸಿಕೊಂಡಿದ್ದಳು. ಅಂದು ರಾತ್ರಿ ಪಾಲ್‌ಗೆ ದತ್ತೂರಿ ಬೀಜದ ಪುಡಿ ಬೆರೆಸಿದ ಊಟ ನೀಡಿದ್ದಾಳೆ. ಈ ವೇಳೆ ಪಾಲ್‌ಗೆ ಮತ್ತು ಬಂದಂತಾಗಿ ನಿತ್ರಾಣನಾಗಿದ್ದಾನೆ. ಈ ವೇಳೆ ದಂಪತಿ ಸೀರೆ ಮತ್ತು ವೈರ್‌ನಿಂದ ಪಾಲ್‌ನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂಪತಿ ಗೋಳಾಟ ಕಂಡು ಬೈಕ್‌ನಲ್ಲಿ ಶವ ಸಾಗಿಸಿದ

ಪಾಲ್‌ ಹತ್ಯೆ ಬಳಿಕ ಸ್ನೇಹಿತ ಬಿಜೋಯ್‌ ಕುಮಾರ್‌ಗೆ ಕರೆ ಮಾಡಿರುವ ಗಂಗೇಶ್‌, ಮಗುವಿಗೆ ಆರೋಗ್ಯ ಸರಿಯಿಲ್ಲ. ಆಸ್ಪತ್ರೆಗೆ ಕರೆದೊಯ್ಯಬೇಕು ಬಾ ಎಂದು ಕರೆದಿದ್ದಾನೆ. ಈತನ ಮಾತು ನಂಬಿ ತಕ್ಷಣ ದ್ವಿಚಕ್ರ ವಾಹನದಲ್ಲಿ ಪಾಲ್‌ ಮನೆ ಬಂದಿರುವ ಬಿಜೋಯ್‌, ಮನೆಯಲ್ಲಿ ಪಾಲ್‌ನ ಮೃತದೇಹ ಕಂಡು ಹೌಹಾರಿದ್ದಾನೆ. ಮೃತದೇಹವನ್ನು ಸಾಗಿಸಲು ಸಹಾಯ ಮಾಡುವಂತೆ ದಂಪತಿ ಕೇಳಿಕೊಂಡಿದ್ದಾರೆ. ಆರಂಭದಲ್ಲಿ ಸಹಾಯ ನಿರಾಕರಿಸಿದ ಬಿಜೋಯ್‌, ದಂಪತಿ ಗೋಳಾಟ ನೋಡಿ ಶವ ಸಾಗಿಸಲು ಒಪ್ಪಿಕೊಂಡಿದ್ದಾನೆ. ಬಳಿಕ ಪಾಲ್‌ ಮೃತದೇಹವನ್ನು ದ್ವಿಚಕ್ರ ವಾಹನದ ಮಧ್ಯೆ ಕೂರಿಸಿಕೊಂಡು ಬಿಜೋಯ್‌ ಮತ್ತು ಗಂಗೇಶ್‌ ಸುಮಾರು ಆರು ಕಿ.ಮೀ. ಸಂಚರಿಸಿ ನೈಸ್‌ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದರು.

Bengaluru Crime: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆ: ಮಕ್ಕಳಿಂದಲೇ ಜೈಲು ಸೇರಿದ ತಾಯಿ

ಶಿಕಾರಿಪುರದಲ್ಲಿ ಅಡಗಿದ್ದವರ ಸೆರೆ

ಪಾಲ್‌ ಶವ ವಿಲೇವಾರಿ ಬಳಿಕ ಗಂಗೇಶ್‌ ದಂಪತಿ ಟಾಟಾ ಏಸ್‌ ವಾಹನ ಬಾಡಿಗೆ ಪಡೆದು ಮನೆಯ ಸಾಮಾನು ತುಂಬಿಕೊಂಡು ರಾತ್ರೋರಾತ್ರಿ ನಗರ ತೊರೆದು ಶಿವಮೊಗ್ಗದ ಶಿಕಾರಿಪುರ ತಲುಪಿದ್ದರು. ಮಾರನೇ ದಿನ ಜ.3ರಂದು ಬೆಳಗ್ಗೆ ದಾರಿಹೋಕರು ನೈಸ್‌ ರಸ್ತೆ ಬಳಿ ಅಪರಿಚಿತ ಶವ ಕಂಡು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮೃತದೇಹ ಪಾಲ್‌ ಎಂಬಾತನದು ಎಂಬುದು ಗೊತ್ತಾಗಿದೆ. ಈ ವೇಳೆ ಪಾಲ್‌ ಮನೆಯ ಬಳಿ ತೆರಳಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಟಾಟಾ ಏಸ್‌ ವಾಹನದಲ್ಲಿ ಇಬ್ಬರು ಸಾಮಾಗ್ರಿ ತುಂಬಿಕೊಂಡು ತೆರಳುತ್ತಿರುವುದು ಸೆರೆಯಾಗಿತ್ತು. ಆ ಟಾಟಾ ಏಸ್‌ ಚಾಲಕನ ಸಂಪರ್ಕಿಸಿ ವಿಚಾರಿಸಿದಾಗ ಶಿಕಾರಿಪುರದ ವಿಳಾಸ ನೀಡಿದ್ದಾನೆ. ಈ ವಿಳಾಸ ಆಧರಿಸಿ ಶಿಕಾರಿಪುರಕ್ಕೆ ತೆರಳಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.

click me!