ಹುಬ್ಬಳ್ಳಿಯಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಯುವತಿಯ ಹತ್ಯೆ ಪ್ರಕರಣದಲ್ಲಿ ಸಿಐಡಿ ಪೊಲೀಸರು 494 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ಹುಬ್ಬಳ್ಳಿ (ಆ.24): ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಬಡ ಕುಟುಂಬದ ಯುವತಿಯ ಮನೆಗೆ ಬೆಳ್ಳಂಬೆಳಗ್ಗೆ ಹೊಕ್ಕ ಪಾಗಲ್ ಪ್ರೇಮಿಯೊಬ್ಬ ನನ್ನನ್ನು ಪ್ರೀತಿಸಿದ ನೀನು ಬದುಕಿರಲೇ ಬಾರದು ಎಂದು ಕುತ್ತಿಗೆ ಕೊಯ್ದು, ದೇಹಕ್ಕೆ ಚಾಕುವಿನಿಂದ ಭೀಕರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು. ಈ ಕೇಸಿಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು 85 ಸಾಕ್ಷಿಗಳನ್ನು ದಾಖಲಿಸಿ 494 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದಿದ್ದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು 494 ಪುಟಗಳ ದೋಷಾರೋಪ ಪಟ್ಟಿಯನ್ನು 3ನೇ ಸೆಷನ್ಸ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಬಡಕುಟುಂಬದಲ್ಲಿ ವಾಸ ಮಾಡುತ್ತಿದ್ದ ಅಂಜಲಿ ಅಂಬಿಗೇರಳನ್ನು ರೋಡ್ ರೋಮಿಯೋ ರೀತಿ ಸುತ್ತಾಡುತ್ತಿದ್ದ ಗಿರೀಶ್ ಎನ್ನುವ ಯುವಕ ಪ್ರೀತಿ ಮಾಡುವಂತೆ ದುಂಬಾಲು ಬಿದ್ದಿದ್ದನು. ಆದರೆ, ಅಂಜಲಿ ತಾನು ದುಡಿದು ವಯಸ್ಸಾದ ಅಜ್ಜಿ ಹಾಗೂ ತಂಗಿಯನ್ನು ನೋಡಿಕೊಳ್ಳಬೇಕಿತ್ತು. ಹೀಗಾಗಿ, ಯಾವುದೇ ದುಡಿಮೆ ಮಾಡದೇ, ಪೋಲಿಯಾಗಿ ಸುತ್ತಾಡುತ್ತಿದ್ದ ಗಿರೀಶನ ಪ್ರೀತಿ ಹಾಗೂ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಾಳೆ.
ಪ್ರಜ್ವಲ್ ರೇವಣ್ಣ ಕೇಸಿನ ಚಾರ್ಜ್‌ಶೀಟ್ ಸಲ್ಲಿಕೆ: ಹೊತ್ತಲ್ಲದ ಹೊತ್ತಲ್ಲಿ ಅತ್ಯಾಚಾರ, 123 ಸಾಕ್ಷಿ ಸಂಗ್ರಹ
ಇದರಿಂದ ಕೋಪಗೊಂಡ ಆಗಂತುಕ ಗಿರೀಶ್ ಅಂಜಲಿ ಅಂಬಿಗೇರಳ ಮನೆಗೆ ಬೆಳ್ಳಂಬೆಳಗ್ಗೆ ಎಂಟ್ರಿಕೊಟ್ಟು ಅಂಜಲಿ ಮಲಗಿದ್ದ ಸ್ಥಳಕ್ಕೆ ತೆರಳಿ ಮನಸೋ ಇಚ್ಛೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಅಂಜಲಿ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾಳೆ. ಚಾಕು ಚುಚ್ಚಿದ ದುಷ್ಕರ್ಮಿ ತನಗೆ ಜನರು ಧರ್ಮದೇಟು ಕೊಡುತ್ತಾರೆ ಎಂದರಿತು ಅಲ್ಲಿಂದ ಪರಾರಿ ಆಗಿದ್ದನು. ಇನ್ನು ಕೊಲೆ ಆರೋಪಿ ಹುಬ್ಬಳ್ಳಿಯಿಂದ ತಪ್ಪಿಸಿಕೊಂಡು ರೈಲಿನಲ್ಲಿ ಬೆಂಗಳೂರಿಗೆ ಹೋಗುವಾಗ ಜನರು ಈತನ ವರ್ತನೆಯನ್ನು ನೋಡಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ರಾಜ್ಯಾದ್ಯಂತ ಸುದ್ದಿ ಮಾಧ್ಯಮಗಳಲ್ಲಿ ಭೀಕರ ಕೊಲೆ ಕೇಸಿನ ಆರೋಪಿಯ ಫೋಟೋ ವೈರಲ್ ಆಗಿದ್ದು, ಕೊಲೆ ಮಾಡಿರುವ ವ್ಯಕ್ತಿ ಇವನೇ ಎಂದು ಗುರುತಿಸಿದ್ದಾರೆ. ಪೊಲೀಸರಿಗೆ ಒಪ್ಪಿಸಲು ಮಾತನಾಡಿಕೊಳ್ಳುತ್ತಿರುವಾಗ ಜನರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆಗ ರೈಲಿನಲ್ಲಿದ್ದ ಜನರು ಆತನನ್ನು ಥಳಿಸಿ ಚಲಿಸುವ ರೈಲಿನಿಂದ ಬೀಸಾಡಿದ್ದಾರೆ. ಇನ್ನು ದಾವಣಗೆರೆ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ಗಿರೀಶನನ್ನು ರೈಲ್ವೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಈತನ ಚಹರೆ ರಾಜ್ಯಾದ್ಯಂತ ಬಿತ್ತರಗೊಂಡಿದ್ದರಿಂದ ಕೊಲೆ ಆರೋಪಿ ಎಂಬುದನ್ನು ಗುರುತಿಸಿ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಡಿಲೀಟೆಡ್ ಫೋಟೋ ರಿಟ್ರೈವ್: ರಕ್ತಸಿಕ್ತ ದೇಹದಲ್ಲಿ ಕೈಮುಗಿದು ಪ್ರಾಣಭಿಕ್ಷೆ ಕೇಳಿದರೂ ಕರುಣೆ ತೋರದ ದರ್ಶನ್ ಗ್ಯಾಂಗ್!
ದಾವಣಗೆರೆಗೆ ತೆರಳಿದ್ದ ಹುಬ್ಬಳ್ಳಿ ಪೊಲೀಸರು ಆರೋಪಿ ಗಿರೀಶನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ, ವಿಚಾರಣೆ ನಡೆಸಿದಾಗ ತನ್ನ ಪ್ರೀತಿಗೆ ಒಪ್ಪಿಕೊಳ್ಳುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದೆನು. ಆದರೂ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಏರಿಯಾದಲ್ಲಿ ಹವಾ ಮೆಂಟೇನ್ ಮಾಡಲಾಗದೇ ನೋವುಂಟಾಗಿತ್ತು. ಆದ್ದರಿಂದ ಆಕೆಯ ಮನೆಗೆ ಹೊಕ್ಕು ಚಾಕು ಇರಿದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸುಮಾರು 98 ದಿನಗಳ ಕಾಲ ತನಿಖೆ ಮಾಡಿದ ಸಿಐಡಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.
ಅಂಜಲಿ ಕೊಲೆ ಕೇಸಿನ ತನಿಖಾಧಿಕಾರಿ ಸಿಐಡಿ ಡಿವೈಎಸ್‌ಪಿ ಎಂ.ಎಚ್. ಉಮೇಶ ಅವರಿಂದ ದೋಷಾರೋಪ ಪಟ್ಟಿಯನ್ನು 3ನೇ ಸೆಷನ್ಸ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ಸಿಸಿಟಿವಿ ದೃಶ್ಯಾವಳಿ, ಮರಣೋತ್ತರ ಪರೀಕ್ಷೆ ವರದಿ, ಎಫ್‌ಎಸ್‌ಎಲ್ ವರದಿ, ಮೊಬೈಲ್ ಫೋನ್, ಹತ್ಯೆಗೆ ಬಳಸಿದ ಚಾಕು ಸೇರಿದಂತೆ ಸುಮಾರು 85 ಸಾಕ್ಷ್ಯಗಳನ್ನು ಉಲ್ಲೇಖ ಮಾಡಲಾಗಿದೆ.