ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯೊಂದು ಚಾಲನೆ ವೇಳೆಯೇ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಕಿಸ್ ಮಾಡುತ್ತಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಆರೋಪಿ ತನ್ನ ಸ್ನೇಹಿತರನ್ನು ಕರೆಸಿ ಯುವಕನನ್ನು ಥಳಿಸಿ ಕೊಂದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಗಾಜಿಯಾಬಾದ್: ಇತ್ತೀಚೆಗೆ ರಾಷ್ಟ್ರ ರಾಜಧಾನಿಗೆ ಸಮೀಪವಿರುವ ಗಾಜಿಯಾಬಾದ್ ಅಪರಾಧ ರಾಜಧಾನಿಯಾಗಿ ಬದಲಾಗುತ್ತಿದ್ದು, ದಿನೇ ದಿನೇ ಇಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯೊಂದು ಚಾಲನೆ ವೇಳೆಯೇ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಕಿಸ್ ಮಾಡುತ್ತಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಆರೋಪಿ ತನ್ನ ಸ್ನೇಹಿತರನ್ನು ಕರೆಸಿ ಯುವಕನನ್ನು ಥಳಿಸಿ ಕೊಂದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
27 ವರ್ಷದ ವಿರಾಟ್ ಮಿಶ್ರಾ (Virat Mishra)ಕೊಲೆಯಾದ ಯುವಕ. ಸಹಿದಾಬಾದ್‌ನಲ್ಲಿ ಈ ಕೊಲೆ ಪ್ರಕರಣ ನಡೆದಿದೆ. ಸಹಿದಾಬಾದ್‌ನ (Sahibabad) ರಸ್ತೆಯಲ್ಲಿ ಸ್ಕೂಟಿಯಲ್ಲಿ ತಿರುಗಾಡುತ್ತಿದ್ದ ಜೋಡಿಯೊಂದು ಸಾರ್ವಜನಿಕ ಸ್ಥಳ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಸ್ಕೂಟಿ ಚಾಲನೆಯಲ್ಲಿದ್ದಾಗಲೇ ಪರಸ್ಪರ ಕಿಸ್ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಗಮನಿಸಿದ ವಿರಾಟ್ ಮಿಶ್ರಾ ಮುಜುಗರಕ್ಕೀಡಾಗಿದ್ದು, ಇದು ಜನವಸತಿ ಪ್ರದೇಶ, ಇಲ್ಲಿ ಹೀಗೆ ಅಸಭ್ಯವಾಗಿ ವರ್ತಿಸದಂತೆ ಆ ಜೋಡಿಗೆ ತಾಕೀತು ಮಾಡಿದ್ದಾರೆ.
ಚಲಿಸುವ ಸ್ಕೂಟಿ ಮೇಲೆ ಪ್ರೇಮಿಗಳ ರೊಮ್ಯಾನ್ಸ್, ಹುಡುಕಾಟ ಆರಂಭಿಸಿದ ಪೊಲೀಸ್!
ಇದರಿಂದ ಸಿಟ್ಟಿಗೆದ್ದ ಯುವಕ ತನ್ನ ಸ್ನೇಹಿತರನ್ನು ಕರೆಸಿ ವಿರಾಟ್ ಮಿಶ್ರಾಗೆ ಥಳಿಸಿ ಕೊಲೆ ಮಾಡಿದ್ದಾರೆ. ಕೊಲೆಯಾದ ವಿರಾಟ್ ಮಿಶ್ರಾ, ಸಹಿದಾಬಾದ್‌ನ ತರಕಾರಿ ಮಾರುಕಟ್ಟೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಸಂಜೆ ವೇಳೆ ಜಿಮ್ ಒಂದರಲ್ಲಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದ. ಶನಿವಾರ ಸಂಜೆ ಸಹಿದಾಬಾದ್‌ನ ಎಲ್ ಆರ್ ಕಾಲೇಜು (LR College)ಬಳಿ ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ಪ್ರತ್ಯಕ್ಷದರ್ಶಿ ಬಂಟಿ ಕುಮಾರ್ (Bunty Kumar) ಎಂಬಾತ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮನೀಶ್‌ಕುಮಾರ್ (Manish Kumar) ಎಂಬಾತ ಮಹಿಳೆಯೊಂದಿಗೆ ಸ್ಕೂಟಿಯಲ್ಲಿ ಸಂಚರಿಸುತ್ತ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ವಿರಾಟ್ ಮಿಶ್ರಾ, ಅವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ, ಜನವಸತಿ ಪ್ರದೇಶದಲ್ಲಿ ಈ ರೀತಿ ವರ್ತಿಸುವುದನ್ನು ಬಿಟ್ಟು ಬೇರೆಲ್ಲಾದರೂ ಹೋಗುವಂತೆ ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಮನೀಷ್‌ಕುಮಾರ್ ತನ್ನ ಹಲವು ಸ್ನೇಹಿತರನ್ನು ಕರೆಸಿದ್ದು, ಎಲ್ಲರೂ ಸೇರಿ ದೊಣ್ಣೆ ಇಟ್ಟಿಗೆಗಳಿಂದ ವಿರಾಟ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತನನ್ನು ಉಳಿಸುವುದಕ್ಕಾಗಿ ಮಧ್ಯಪ್ರವೇಶಿಸಿದಾಗ ಅವರು ನನ್ನ ಮೇಲೆಯೂ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಅವರು ಸ್ಥಳದಿಂದ ಓಡಿಹೋಗಿದ್ದಾರೆ ಎಂದು ಬಂಟಿ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಸ್ಕೂಟಿ ರಿಪೇರಿಗೆ ಹೋದ ಆಂಟಿಗೆ ಮೆಕ್ಯಾನಿಕ್ ಮೇಲೆ ಲವ್, ನಂತರ ನಡೆದಿದ್ದು ಯುಗಪುರುಷ ಸಿನಿಮಾ ಸ್ಟೈ ಲ್
ಮಿಶ್ರಾ ಅವರನ್ನು ಕೂಡಲೇ ಗಾಜಿಯಾಬಾದ್‌ನ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು ನಂತರ ಅಲ್ಲಿಂದ ದೆಹಲಿಯ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ತಡರಾತ್ರಿ ಅವರು ಸಾವನ್ನಪ್ಪಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಫಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 147 (ಗಲಭೆ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 307 (ಕೊಲೆ ಯತ್ನ), 506 (ಅಪರಾಧ ಬೆದರಿಕೆ) ಮತ್ತು 149 (ಕಾನೂನುಬಾಹಿರ ಅಪರಾಧ) ಅಡಿಯಲ್ಲಿ ಸಾಹಿಬಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಯತ್ನದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಅನ್ನು ಈಗ ಸೆಕ್ಷನ್ 302 (ಕೊಲೆ) ಆಗಿ ಪರಿವರ್ತಿಸಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ (ಸಾಹಿಬಾಬಾದ್) ಭಾಸ್ಕರ್ ವರ್ಮಾ ಹೇಳಿದ್ದಾರೆ. ಶಂಕಿತರನ್ನು ಮನೀಶ್ ಕುಮಾರ್, ಮನೀಶ್ ಯಾದವ್ (Manish Yadav), ಗೌರವ್ ಕಸನಾ (Gaurav Kasana), ಆಕಾಶ್ ಕುಮಾರ್ (Akash Kumar), ಪಂಕಜ್ ಸಿಂಗ್ (Pankaj Singh) ಮತ್ತು ವಿಪುಲ್ ಕುಮಾರ್ (Vipul Kumar) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯ ತಂದೆ ಸುದಾಮ ಮಿಶ್ರಾ ಮಾತನಾಡಿ, ದುರುಳರು ನನ್ನ ಮಗನನ್ನು ತೀವ್ರವಾಗಿ ಥಳಿಸಿದ್ದಲ್ಲದೇ ತಮ್ಮ ಬೈಕ್‌ನ ಸೈಲೆನ್ಸರ್‌ನ್ನು ಹೊರತೆಗೆದು ತಲೆಗೆ ಹೊಡೆದು ಕೊಂದಿದ್ದಾರೆ. ಕುಟುಂಬದಲ್ಲಿ ನನ್ನ ಮಗ ಮಾತ್ರ ಸಂಪಾದಿಸುವವನಾಗಿದ್ದ, ಅವನಿಂದಲೇ ಇಡೀ ಕುಟುಂಬದ ಜೀವನ ನಡೆಯುತ್ತಿತ್ತು ಎಂದು ದುಃಖ ತೊಡಿಕೊಂಡಿದ್ದಾರೆ.