Latest Videos

ಡಿ'ಗ್ಯಾಂಗ್‌ನ ಒಬ್ಬೊಬ್ಬ ಆರೋಪಿಯದೂ ಒಂದೊಂದು ಅವತಾರ: ದರ್ಶನ್ ಜತೆ ಬಂಧಿತರ ವಿಸ್ತೃತ ಮಾಹಿತಿ

By Kannadaprabha NewsFirst Published Jun 17, 2024, 6:46 AM IST
Highlights

ಕೆಲ ಸಿನಿಮಾಗಳಲ್ಲಿ ಕ್ಲಾಪ್‌ ಬಾಯ್ ಆಗಿ ಕೂಡ ಅವರು ದುಡಿದಿದ್ದರು. ಕಷ್ಟದ ಹಾದಿಯಲ್ಲಿ ಸ್ಟಾರ್ ನಟನಾಗಿ ಪ್ರವರ್ಧಮಾನಕ್ಕೆ ಬಂದು ದರ್ಶನ್‌ ಇತಿಹಾಸ ಬರೆದಿದ್ದರು. ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿ ನೆಲೆಸಿರುವ ದರ್ಶನ್‌..

ತಮ್ಮ ಪ್ರಿಯತಮೆಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಪೋಟೋ ಹಾಕಿದ ಕಾರಣಕ್ಕೆ ತಮ್ಮದೇ ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿನನ್ನು ಹತ್ಯೆಗೈದ ಆರೋಪದ ಪೊಲೀಸರ ಅತಿಥಿಗಳಾಗಿರುವ ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಗ್ಯಾಂಗ್ ಸದಸ್ಯರ ಸ್ವವಿವರ ಸಂಪೂರ್ಣ ಚಿತ್ರಣ ಹೀಗಿದೆ. ಈ ಪೈಕಿ 9ನೇ ಆರೋಪಿ ಚಿತ್ರದುರ್ಗದ ರಾಜು ಎಂಬಾತ ತಲೆಮರೆಸಿಕೊಂಡಿದ್ದಾನೆ.

ಎ1-ಪವಿತ್ರಾಗೌಡ (33)
ಬೆಂಗಳೂರು ಹೊರವಲಯದ ಕನಕಪುರ ರಸ್ತೆ ತಲಘಟ್ಟಪುರದ ಪವಿತ್ರಾಗೌಡ, ಮಾಡೆಲಿಂಗ್ ಮೂಲಕ ಬಣ್ಣ ಲೋಕಕ್ಕೆ ಪ್ರವೇಶಿಸಿದ್ದಳು. ಬಿಸಿಎ ಪದವೀಧರೆಯಾದ ಪವಿತ್ರಾ, ಮೊದಲಿಗೆ ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿದ್ದಳು. ಆಕೆಗೆ ‘ಮಿಸ್ ಬೆಂಗಳೂರು’ ಪಟ್ಟ ಮೂಡಿಗೇರಿತ್ತು. ನಿರ್ದೇಶಕ ಉಮೇಶ್‌ಗೌಡರವರ ‘ಅಗಮ್ಯ’ ಚಿತ್ರ ಮೂಲಕ ರಂಗ ಪ್ರವೇಶವಾಯಿತು. ಆದರೆ ಮೊದಲ ಚಿತ್ರದಲ್ಲೇ ಆಕೆಗೆ ಸೋಲು ಎದುರಾಯಿತು. ಆನಂತರ ತಮಿಳಿನ ‘54321’ ಹೆಸರಿನ ಚಿತ್ರದಲ್ಲಿ ನಟಿಸಿದ್ದಳು. ಆನಂತರ ಕನ್ನಡ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದಳು. ನಟ ರಮೇಶ್‌ ಅರವಿಂದ್‌, ಎಸ್‌ ನಾರಾಯಣ್‌ ಹಾಗೂ ಮೋಹನ್‌ ನಟನೆಯ ‘ಛತ್ರಿಗಳು ಸಾರ್‌ ಛತ್ರಿಗಳು’, ಸಾರಾ ಗೋವಿಂದು ಪುತ್ರ ಅನೂಪ್‌ ನಟನೆಯ ‘ಸಾಗುವ ದಾರಿಯಲ್ಲಿ’, ವಿಠಲ್‌ ಭಟ್‌ ನಿರ್ದೇಶನದ ‘ಪ್ರೀತಿ ಕಿತಾಬು’ ಚಿತ್ರಗಳಲ್ಲಿ ನಟಿಸಿದಳು. ಈ ಚಿತ್ರಗಳ ನಂತರ ‘ನಾನು ಮತ್ತು ಗುಂಡ’ ಚಿತ್ರದ ನಿರ್ದೇಶಕ ಶ್ರೀನಿವಾಸ ತಮ್ಮಯ್ಯ ಅವರ ‘ಬತ್ತಾಸು’ ಚಿತ್ರಕ್ಕೆ ನಾಯಕಿಯಾಗಿದ್ದಳು. ಆದರೆ ಆ ಸಿನಿಮಾ ಅದ್ದೂರಿಯಾಗಿ ಮೂಹರ್ತ ಕಂಡರೂ ಸೆಟ್ಟೇರಲಿಲ್ಲ. ಈ ನಡುವೆ ವಸ್ತ್ರ ವಿನ್ಯಾಸಕಿಯಾಗಿಯೂ ಗುರುತಿಸಿಕೊಂಡಿದ್ದ ಪವಿತ್ರಾಗೌಡ, ಉತ್ತರಪ್ರದೇಶ ಮೂಲದ ಸಾಫ್ಟ್‌ವೇರ್‌ ಉದ್ಯೋಗಿ ಸಂಜಯ್‌ ಸಿಂಗ್ ಜತೆ ವಿವಾಹವಾಗಿದ್ದರು. ಈ ದಂಪತಿಗೆ ಹೆಣ್ಣು ಮಗುವಿದೆ. ಆದರೆ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೊದಲ ಪತಿಯಿಂದ ದೂರವಾಗಿದ್ದ ಆಕೆ, ತರುವಾಯ ದರ್ಶನ್‌ ಸಾಂಗತ್ಯಕ್ಕೆ ಬಂದಳು.

ದರ್ಶನ್ ಜತೆ ಪ್ರೇಮಕ್ಕೆ 10 ವರ್ಷಗಳ ತುಂಬಿವೆ ಎಂದು ಆಕೆಯೇ ಹೇಳಿಕೊಂಡಿದ್ದಳು. ಇದೇ ವಿಷಯವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜತೆ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ವಾರ್‌ ಸಹ ನಡೆದಿತ್ತು. ರಾಜರಾಜೇಶ್ವರಿ ನಗರದಲ್ಲಿ ಬ್ಯೂಟಿಕ್‌ ನಡೆಸುತ್ತಿರುವ ಆಕೆ, ತನ್ನ ಮಗಳು ಹಾಗೂ ತಾಯಿ ಜತೆ ನೆಲೆಸಿದ್ದಾಳೆ. ದರ್ಶನ್‌ ದಾಂಪತ್ಯದಲ್ಲಿ ಮಧ್ಯ ಪ್ರವೇಶಿಸಿದ್ದಾಳೆ ಎಂದು ಆರೋಪಿಸಿ ಪವಿತ್ರಾಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅಭಿಮಾನಿಗಳು ಟೀಕಿಸುತ್ತಿದ್ದರು. ಅದೇ ರೀತಿ ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಸಹ ಒಬ್ಬಾತನಾಗಿದ್ದ. ತಮಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಪೋಟೋ ಕಳುಹಿಸಿದ್ದ ಆತನ ಬಗ್ಗೆ ದರ್ಶನ್ ಅವರಿಗೆ ಪವಿತ್ರಾ ಹೇಳಿದ್ದಳು. ಈಕೆಯ ಮಾತು ಕೇಳಿ ಕೆರಳಿದ ದರ್ಶನ್‌, ಕೊನೆಗೆ ತಮ್ಮ ಅಭಿಮಾನಿಯ ಪ್ರಾಣವನ್ನು ತೆಗೆದ ಎಂಬ ಆರೋಪಕ್ಕೆ ತುತ್ತಾಗಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಪ್ರಚೋದನೆ ನೀಡಿದ್ದ ಪವಿತ್ರಾ, ಈ ಕೃತ್ಯದಲ್ಲಿ ದರ್ಶನ್ ಹೆಸರು ಬಾರದಂತೆ ಮುಚ್ಚಿಹಾಕಲು ಸಂಚು ರೂಪಿಸಿದ್ದಳು ಎಂಬ ಆರೋಪವಿದೆ.

Darshan Case: ರೇಣುಕಾಸ್ವಾಮಿ ರಕ್ತಸಿಕ್ತ ಬಟ್ಟೆ ಪತ್ತೆ, ಮೊಬೈಲ್‌ ಮಾತ್ರ ಇನ್ನೂ ನಾಪತ್ತೆ!

ಎ.2- ದರ್ಶನ್ ತೂಗುದೀಪ (47)
22 ವರ್ಷಗಳ ಹಿಂದೆ ‘ಮೆಜೆಸ್ಟಿಕ್’ ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕನ ಪಟ್ಟ ಪಡೆದ ದರ್ಶನ್‌, ಈಗ ಚಾಲೆಜಿಂಗ್ ಸ್ಟಾರ್ ಆಗಿದ್ದಾರೆ. ಇದುವರೆಗೆ 57 ಸಿನಿಮಾಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಗಳು ಹಾಗೂ ಕೆಲ ಚಲನಚಚಿತ್ರಗಳಲ್ಲಿ ಸಹನಟರಾಗಿ ನಟಿಸಿದ್ದರು. ಅಲ್ಲದೆ ಕೆಲ ಸಿನಿಮಾಗಳಲ್ಲಿ ಕ್ಲಾಪ್‌ ಬಾಯ್ ಆಗಿ ಕೂಡ ಅವರು ದುಡಿದಿದ್ದರು. ಕಷ್ಟದ ಹಾದಿಯಲ್ಲಿ ಸ್ಟಾರ್ ನಟನಾಗಿ ಪ್ರವರ್ಧಮಾನಕ್ಕೆ ಬಂದು ದರ್ಶನ್‌ ಇತಿಹಾಸ ಬರೆದಿದ್ದರು. ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿ ನೆಲೆಸಿರುವ ದರ್ಶನ್‌, ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನಲ್ಲಿ ತೋಟದ ಮನೆ ಹೊಂದಿದ್ದಾರೆ. ಯಶಸ್ಸಿನ ಹಿಂದೆ ಅವರ ಬೆನ್ನಿಗೆ ನೂರೆಂಟು ವಿವಾದಗಳು ಅಂಟಿಕೊಂಡಿವೆ. ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾರೆ. ತಮ್ಮ ಪ್ರಿಯತಮೆಗೆ ಇನ್‌ಸ್ಟಾಗ್ರಾಂ ನಲ್ಲಿ ಅಶ್ಲೀಲ ಪೋಟೋ ಹಾಗೂ ಕಾಮೆಂಟ್ ಮಾಡಿದ ಕಾರಣಕ್ಕೆ ಸಿಟ್ಟಿಗೆದ್ದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ತಮ್ಮ ಸಹಚರರ ಮೂಲಕ ಬೆಂಗಳೂರಿಗೆ ಕರೆಸಿ ಬಳಿಕ ಹಲ್ಲೆ ನಡೆಸಿ ಹತ್ಯೆಗೈದ ಆರೋಪ ಬಂದಿದೆ. ಅಲ್ಲದೆ ಈ ಕೇಸ್‌ನಲ್ಲಿ ತಮ್ಮ ಹೆಸರು ಹೇಳದಂತೆ ಶರಣಾಗುವಂತೆ ಸಹಚರರಿಗೆ 30 ಲಕ್ಷ ರು ನೀಡಿ ಅವರು ಮತ್ತಷ್ಟು ಸಂಕಷ್ಟ ತುತ್ತಾಗಿದ್ದಾರೆ. ಕೊಲೆ ಮಾಡಿದ್ದಲ್ಲದೆ ಅದನ್ನು ಮುಚ್ಚಿ ಹಾಕುವ ಎಲ್ಲ ತಂತ್ರಗಳನ್ನು ಮಾಡಿ ಕೊನೆ ವಿಫಲಗೊಂಡು ಖಾಕಿ ಬಲೆಗೆ ಬಿದ್ದಿದ್ದಾರೆ. ಬೆಳ್ಳಿ ಪರದೆಯಲ್ಲಿ ಖಳನಾಯಕರ ವಿರುದ್ಧ ಅಬ್ಬರಿಸಿ ಹೀರೋ ಆಗಿದ್ದ ದರ್ಶನ್‌ ಈಗ ರಿಯಲ್ ಲೈಪ್‌ನಲ್ಲಿ ವಿಲನ್ ಆಗಿದ್ದಾರೆ.

ಎ.3- ಪುಟ್ಟಸ್ವಾಮಿ ಅಲಿಯಾಸ್ ಪವನ್ (29)
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಗ್ರಾಮದ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ಬನಶಂಕರಿ 6ನೇ ಹಂತದಲ್ಲಿ ವಾಸವಾಗಿದ್ದ. ಹಲವು ವರ್ಷಗಳಿಂದ ನಟ ದರ್ಶನ್‌ ಬಳಿ ಆತ ಕೆಲಸ ಮಾಡಿಕೊಂಡಿದ್ದ. ಒಂದರ್ಥದಲ್ಲಿ ಈತ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡರ ನಡುವಿನ ಸೇತುವೆ. ದರ್ಶನ್ ಮನೆಯಲ್ಲಿ ಮಾತ್ರವಲ್ಲದೆ ಪವಿತ್ರಾ ಗೌಡ ಮನೆ ಕಾರ್ಯಗಳಿಗೆ ಸಹ ಆತ ಹೆಗಲು ಕೊಡುತ್ತಿದ್ದ. ಇದಕ್ಕಾಗಿ ಇಬ್ಬರಿಗೆ ಆತ ಆಪ್ತ ಭಂಟನಾಗಿದ್ದ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾಗೌಡಳನ್ನು ಗುರಿಯಾಗಿಸಿಕೊಂಡು ದರ್ಶನ್‌ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದ ಸಂಗತಿಯನ್ನು ದರ್ಶನ್‌ಗೆ ಪವನ್‌ ಮಾಹಿತಿಕೊಟ್ಟಿದ್ದ. ಅದೇ ರೀತಿ ಚಿತ್ರದುರ್ಗದ ರೇಣುಕಾಸ್ವಾಮಿ ವಿಚಾರವನ್ನು ಸಹ ಪವನ್ ಮೂಲಕವೇ ದರ್ಶನ್‌ಗೆ ಮುಟ್ಟಿಸಿದ್ದಳು ಎಂಬ ಮಾಹಿತಿ ಇದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ ಪವನ್‌, ಆತ ಮೃಪಟ್ಟ ಬಳಿಕ ಪ್ರಕರಣದಲ್ಲಿ ದರ್ಶನ್‌ ಬದಲಿಗೆ ಶರಣಾಗಲು ಹುಡುಗರನ್ನು ಸೆಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಪೊಲೀಸರಿಗೆ ಶರಣಾಗಿದ್ದ ಕೇಶವ, ನಿಖಿಲ್ ಹಾಗೂ ಕಾರ್ತಿಕ್‌ಗೆ ಪವನ್‌ ಪರಿಚಿತರಾಗಿದ್ದರು. ಈ ಮೂವರಿಗೆ ಹಣದಾಸೆ ತೋರಿಸಿ ದರ್ಶನ್ ಹೆಸರು ಹೇಳದಂತೆ ಪವನ್‌ ಸೂಚಿಸಿದ್ದ ಎಂದು ಮೂಲಗಳು ಹೇಳಿವೆ.

ಎ.4- ರಾಘವೇಂದ್ರ (43)
ಚಿತ್ರದುರ್ಗದ ಕೊಳಿ ಬುರುಜಿನ ಹಟ್ಟಿ ನಿವಾಸಿ ರಘು ಅಲಿಯಾಸ್ ರಾಘವೇಂದ್ರ (43). ವೃತ್ತಿಯಲ್ಲಿ ಆಟೋ ಚಾಲಕ. ನಟ ದರ್ಶನ್ ಕಟ್ಟಾ ಅಭಿಮಾನಿಯಾಗಿದ್ದ ಆತ, ದರ್ಶನ್‌ ಪರಿಚಿತರ ವಲಯದಲ್ಲಿದ್ದ. ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನೂ ಆಗಿದ್ದ. ದರ್ಶನ್ ಸಿನಿಮಾಗಳು ಬಿಡುಗಡೆಯಾದಾಗ ಕಟೌಟ್ ಕಟ್ಟಿಸುವುದು, ಹಾಲೆರೆಯುವುದು ಮುಂತಾದ ಕೆಲಸ ಮಾಡಿಕೊಂಡಿದ್ದ. ಆಟೋ ಓಡಿಸಿ ದುಡಿದು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ರಾಘವೇಂದ್ರ ಸಾಕುತ್ತಿದ್ದ. ದರ್ಶನ್ ಹುಚ್ಚು ಹಚ್ಚಿಕೊಂಡಿರುವವರು ಈತನ ಬಳಿ ಬಂದು ನಟನ ಪರಿಚಯ ಮಾಡಿಸಿಕೊಡು ಎಂದು ದುಂಬಾಲು ಬಿದ್ದರೆ ಅವರಿಂದ ಒಂದಿಷ್ಟು ಖರ್ಚಿಗೆ ದುಡ್ಡು ತೆಗೆದುಕೊಳ್ಳುತ್ತಿದ್ದ. ಹಾಗಂತ ಮೋಸ ಮಾಡುತ್ತಿರಲಿಲ್ಲ. ಎಲ್ಲಿ ದರ್ಶನ್ ಶೂಟಿಂಗ್ ಇರುತ್ತೋ ಅಲ್ಲಿಗೆ ಅಭಿಮಾನಿಗಳನ್ನು ಕರೆದೊಯ್ದು ಪರಿಚಯಿಸಿ ಫೋಟೋ ಕ್ಲಿಕ್ಕಿಸಿಕೊಂಡು ವಾಪಸಾಗುತ್ತಾನೆ. ದರ್ಶನ್ ಹುಟ್ಟು ಹಬ್ಬ ಬಂದಾಗಲೆಲ್ಲ ಬೆಂಗಳೂರಿಗೆ ಒಂದಿಷ್ಟು ಮಂದಿ ಕರೆದೊಯ್ದು ಸಂಭ್ರಮಿಸಿದ ಉದಾಹರಣೆಗಳಿವೆ. ಇದರಾಚೆಗೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಈತನ ಹೆಸರಿಲ್ಲ. ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಿಕೊಂಡು ಬಂದು ದರ್ಶನ್‌ಗೆ ಒಪ್ಪಿಸಿದ್ದ ಆರೋಪ ಆತನ ಮೇಲೆ ಬಂದಿದೆ. ಅಲ್ಲದೆ ಈ ಕೃತ್ಯದಲ್ಲಿ ದರ್ಶನ್ ರವರನ್ನು ಉಳಿಸಲು ಪೊಲೀಸರಿಗೆ ರಾಘವೇಂದ್ರ ಶರಣಾಗಿದ್ದ. ಇದಕ್ಕಾಗಿ ಆತನಿಗೆ ಹಣ ಕೊಡುವುದಾಗಿ ದರ್ಶನ್‌ ಹಾಗೂ ಅವರ ಆಪ್ತರು ಭರವಸೆ ಕೊಟ್ಟಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಎ.5- ನಂದೀಶ್‌
ಮಂಡ್ಯ ತಾಲೂಕು ಚಾಮಲಾಪುರ ಗ್ರಾಮದ ನಂದೀಶ್‌, ಕಡು ಬಡತನ ಹಿನ್ನಲೆ ಹೊಂದಿದ್ದಾನೆ. ಆತನ ಹುಟ್ಟೂರಿನಲ್ಲಿ ತುಂಡು ಭೂಮಿ ಸಹ ಇಲ್ಲ. ಹಲವು ವರ್ಷಗಳಿಂದ ನಟ ದರ್ಶನ್‌ ಬಳಿ ಕೆಲಸ ಮಾಡಿಕೊಂಡು ನಂದೀಶ ಜೀವನ ಕಟ್ಟಿಕೊಂಡಿದ್ದ. ಬದುಕು ಕೊಟ್ಟವನೇ ಈಗ ಆತನ ಪಾಲಿಗೆ ವಿಲನ್ ಆಗಿದ್ದಾನೆ. ಸರ್ಕಾರದ ಮಂಜೂರು ಮಾಡಿದ್ದ ನಿವೇಶನದಲ್ಲಿ ಚಿಕ್ಕದೊಂದು ಸೂರು ಕಟ್ಟಿಕೊಂಡು ನಂದೀಶನ ಹೆತ್ತವರು ನೆಲೆಸಿದ್ದಾರೆ. ಅವರು ಕೃಷಿ ಕೂಲಿ ಕೆಲಸಗಾರರು. ಹೀಗೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ನಂದೀಶ್, ಮೊದಲು ಕೇಬಲ್ ಕೆಲಸ ಮಾಡಿಕೊಂಡಿದ್ದ. ಈತನಿಗೆ ದರ್ಶನ್ ಮೇಲೆ ಹುಚ್ಚು ಅಭಿಮಾನವಿತ್ತು. ನಟ ದರ್ಶನ್ ಅನ್ನು ಭೇಟಿ ಮಾಡಲು ಕೆಲಸಕ್ಕೆ ಚಕ್ಕರ್ ಹಾಕಿ ಹೋಗುತ್ತಿದ್ದನೆಂಬ ಮಾಹಿತಿಯೂ ಇದೆ. ಕೊನೆಗೆ ದರ್ಶನ್‌ ಸಂಪರ್ಕ ಬೆಳೆದು ಅವರ ಮನೆಯಲ್ಲಿ ಕೆಲಸಕ್ಕೆ ನಂದೀಶ ಸೇರಿದ. ಮಂಡ್ಯದಲ್ಲಿ ಕಳೆದ ಲೋಕಸಭಾ ಚುನಾವಣೆ ಪ್ರಚಾರ ವೇಳೆ ದರ್ಶನ್‌ ನೆರಳಿನಂತೆ ನಂದೀಶ್ ಇದ್ದ. ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೂ ಆಗಿದ್ದ ಎನ್ನಲಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ಮಾತ್ರವಲ್ಲದೆ ಕರೆಂಟ್ ಶಾಕ್ ನೀಡಿದ ಆರೋಪಕ್ಕೆ ನಂದೀಶ್ ತುತ್ತಾಗಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ ಆತನನ್ನು ಬಿಡದಿ ಬಳಿ ಪೊಲೀಸರು ಬಂಧಿಸಿದ್ದರು. ಕರೆಂಟ್ ಶಾಕ್ ಕೊಟ್ಟಿದ್ದ ಸಾಧನಕ್ಕೆ ತಲಾಶ್ ನಡೆದಿದೆ.

ಎ.6- ಜಗದೀಶ ಅಲಿಯಾಸ್ ಜಗ್ಗ (35)
ಜಗದೀಶ್ ಅಲಿಯಾಸ್ ಚಿತ್ರದುರ್ಗದ ಅಗಸನಕಲ್ಲು ಬಡಾವಣೆ ನಿವಾಸಿ. ಆಟೋ ಚಾಲಕ. ಈತನ ಪತ್ನಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾಳೆ. ಮದುವೆಯಾಗಿ 9 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅಲ್ಲದೇ ಅಪ್ಪ, ಅಮ್ಮ ಕೂಡಾ ಜೊತೆಯಲ್ಲಿ ವಾಸವಾಗಿದ್ದಾರೆ. ದರ್ಶನ್ ಹುಚ್ಚು ಅಭಿಮಾನಿ. ಹಾಗಾಗಿ ತನ್ನ ಇಡೀ ಆಟೋದಲ್ಲಿ ದರ್ಶನ್ ಭಾವಚಿತ್ರ ಅಂಟಿಸಿಕೊಂಡಿದ್ದಾನೆ. ಹಿಂದೊಮ್ಮೆ ಈತ ಕೂಡಾ ದರ್ಶನ್ ಅಭಿಮಾನಿ ಬಳಗದ ಚಿತ್ರದುರ್ಗ ಅಧ್ಯಕ್ಷನಾಗಿದ್ದ. ಹಾಗಾಗಿ ರಘು ಮತ್ತು ಜಗ್ಗ ಆತ್ಮೀಯ ಸ್ನೇಹಿತರು. ಚಿತ್ರದುರ್ಗದಲ್ಲಿ ದರ್ಶನ್ ಸಿನಿಮಾ ಬಿಡುಗಡೆಯಾದರೆ ಇವರದು ಜಂಟಿ ಕಾರ್ಯಾಚರಣೆ. ಇವನು ಆಗಾಗ್ಗೆ ಬೆಂಗಳೂರಿಗೆ ಹೋಗಿ ದರ್ಶನ್ ಭೇಟಿ ಮಾಡುತ್ತಿದ್ದ, ಸ್ನೇಹಿತರನ್ನು ಕರೆದೊಯ್ದು ದರ್ಶನ್ ಜೊತೆ ಪೋಟೋ ತೆಗೆಸಿಕೊಂಡು ವಾಪಸ್ಸಾಗುತ್ತಿದ್ದ. ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅಪಹರಣದಲ್ಲಿ ಜಗ್ಗನ ಪಾತ್ರವಿದೆ ಎಂದು ಆರೋಪಿಸಲಾಗಿದೆ. ದರ್ಶನ್ ಕರೆಯುತ್ತಿದ್ದಾರೆ ಬಾ ಹೋಗೋಣ ಎಂದು ಹೇಳಿ ಜಗ್ಗನನ್ನು ರಘು ಕರೆದುಕೊಂಡು ಹೋಗಿದ್ದ. ಮನೆಯಿಂದ ಕಾರಿನವರೆಗೆ ರೇಣುಕಾಸ್ವಾಮಿಯನ್ನು ಅಪಹರಿಸಲು ಜಗ್ಗನ ಆಟೋ ಬಳಸಲಾಗಿದೆ ಎನ್ನಲಾಗಿದೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಬಿಟ್ಟು ದರ್ಶನ್‌ ಅವರನ್ನು ಮಾತನಾಡಿಸಿ ಜಗ್ಗ ಚಿತ್ರದುರ್ಗಕ್ಕೆ ಮರಳಿದ್ದ.

ಎ.7- ಅನು ಕುಮಾರ್‌ ಅಲಿಯಾಸ್ ಅನು (32)
ಚಿತ್ರದುರ್ಗ ನಗರದ ಸಿಹಿನೀರು ಹೊಂಡದ ಸಮೀಪ ಪುಟ್ಟ ಜೋಪಡಿ ಮನೆಯಲ್ಲಿ ಅನು ಕುಮಾರ್ ಕುಟುಂಬ ನೆಲೆಸಿದೆ. ಆಟೋ ಚಾಲಕನಾಗಿದ್ದ ಆತನೇ ಆ ಬಡ ಕುಟುಂಬಕ್ಕೆ ಆಧಾರವಾಗಿದ್ದ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪುತ್ರನ ಬಂಧನ ವಿಚಾರ ತಿಳಿದು ಆಘಾತದಿಂದ ತಂದೆ ಚಂದ್ರಣ್ಣ ಪ್ರಾಣ ಕಳೆದುಕೊಂಡಿದ್ದರು. ಅನುವಿಗೆ ನಟ ಧನ್ವೀರ್ ಕಂಡರೆ ಬಹಳ ಇಷ್ಟ. ಧನ್ವೀರ್ ಹಾಗೂ ದರ್ಶನ್ ಸಂಬಂಧ ಚೆನ್ನಾಗಿರುವುದರಿಂದ ಮೆಚ್ಚಿನ ನಟ ಧನ್ವೀರ್ ನೋಡಬೇಕೆಂದರೆ ದರ್ಶನ್ ಭೇಟಿಯಾಗಬೇಕೆಂದು ಭಾವಿಸಿದ್ದ. ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಹಾಗೂ ಈತನ ನಡುವೆ ಮೊದಲಿನಿಂದಲೂ ಒಡನಾಟವಿತ್ತು. ರೇಣುಕಾಸ್ವಾಮಿಯನ್ನು ನಟ ದರ್ಶನ್ ಬಳಿಗೆ ಕರೆದುಕೊಂಡು ಹೋಗುತ್ತಿದ್ದೇವೆ, ಬರ್ತಿಯಾ ಎಂದು ಹೇಳಿದಾಗ ಸಹಜವಾಗಿಯೇ ಖುಷಿಯಿಂದ ಹೋಗಿದ್ದಾನೆ. ರೇಣುಕಾಸ್ವಾಮಿ ಅಪಹರಣದಲ್ಲಿ ಅನು ಪಾಲ್ಗೊಂಡಿದ್ದ ಎಂಬ ಆರೋಪವಿದೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿನನ್ನು ದರ್ಶನ್‌ಗೆ ಒಪ್ಪಿಸಿದ ಬಳಿಕ ಅನು ಚಿತ್ರದುರ್ಗಕ್ಕೆ ಮರಳಿದ್ದ. ಈತ ಇದುವರೆಗೆ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಂಡ ಮಾಹಿತಿ ಇಲ್ಲ.

ಎ.8- ರವಿ ಅಲಿಯಾಸ್ ರವಿಶಂಕರ್ (36)
ಚಿತ್ರದುರ್ಗ ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಗ್ರಾಮದವನಾದ ರವಿಶಂಕರ್ ಕಾರು ಚಾಲಕ. ಸ್ವಂತಕ್ಕೊಂದು ಕಾರು ಇಟ್ಟುಕೊಂಡು ಬಾಡಿಗೆ ಓಡಿಸುತ್ತಿದ್ದಾನೆ. ಕುರುಬರಹಟ್ಟಿಯಲ್ಲೇ ವಾಸವಾಗಿದ್ದಾನೆ. ಉಳಿದಂತೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಸ್ಥಳೀಯವಾಗಿ ಸಂಭಾವಿತ ಎಂದು ಹೊಗಳುತ್ತಾರೆ. ದರ್ಶನ್ ಹಾಗೂ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಸೇರಿ ಇತರೆ ಆರೋಪಿಗಳ ಜತೆ ಹೆಚ್ಚಿನ ಒಡನವಾಟವಿಲ್ಲ. ಆದರೆ ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣಕ್ಕೆ ತನ್ನ ಕಾರು ಬಾಡಿಗೆಗೆ ಹೋಗಿ ಈಗ ಕೊಲೆ ಪ್ರಕರಣದಲ್ಲಿ ರವಿ ಸಿಲುಕುವಂತಾಗಿದೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆದೊಯ್ಯುವಾಗ ಮೂರನೆಯವರು ಬಾಡಿಗೆ ಮಾತನಾಡಿದ್ದಾರೆ. ಬೆಂಗಳೂರಿಗೆ ಬಾಡಿಗೆ ಇದೆ. ಹೋಗಿ ಬರಬೇಕು ಎಂದಿದ್ದಾರೆ. ಕಿಡ್ನಾಪರ್ ರಾಘವೇಂದ್ರ ನೇರವಾಗಿ ಈತನನ್ನು ಸಂಪರ್ಕಿಸಿಲ್ಲ. ಬೇರೊಬ್ಬರ ಮೂಲಕ ನಂಬರ್ ಪಡೆದು ಕುಂಚಿಗನಹಾಳು ಸಮೀಪದ ಪೆಟ್ರೋಲ್ ಬಂಕ್ ಬಳಿ ಬರುವಂತೆ ಸೂಚಿಸಿದ್ದಾನೆ. ತಲಾ ಕಿ.ಮೀ 10 ರು ನಂತೆ ಬಾಡಿಗೆ ಮಾತನಾಡಿ ರವಿ ಹೋಗಿದ್ದ. ಪಟ್ಟಣಗೆರೆ ಗೋಡೌನ್ ಗೆ ಹೋಗುವವರೆಗೆ ರೇಣುಕಾಸ್ವಾಮಿಯನ್ನು ದರ್ಶನ್ ಸೂಚನೆ ಮೇರೆಗೆ ಅಪಹರಿಸಲಾಗುತ್ತಿದೆ ಎಂಬ ವಿಚಾರವೇ ರವಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ. .ಅಲ್ಲಿಂದ ಮರಳುವಾಗ ರಾಘವೇಂದ್ರ ಬಳಿ ಬಾಡಿಗೆ ಹಣ ಕೊಡಲು ಸತಾಯಿಸಿ ಪಡೆದಿದ್ದಾನೆ. ಆನಂತರ ರೇಣುಕಾಸ್ವಾಮಿ ಕೊಲೆಯಾಗಿದ್ದು ಕೇಳಿ ರವಿ ಆಘಾತಗೊಂಡಿದ್ದ. ಈತನ ಕಾರಿನಲ್ಲೇ ಮೃತದೇಹ ಸಾಗಿಸಲು ಸೂಚಿಸಿದ್ದಾಗ ರವಿ ನಿರಾಕರಿಸಿ ಚಿತ್ರದುರ್ಗಕ್ಕೆ ಮರಳಿದ್ದ ಎನ್ನಲಾಗಿದೆ.

ಎ.10- ಪಟ್ಟಣಗೆರೆ ವಿನಯ್‌ (38)
ರಾಜರಾಜೇಶ್ವರಿ ನಗರ ಸುತ್ತಮುತ್ತ ಪ್ರದೇಶದಲ್ಲಿ ವಿನಯ್‌ ಸ್ಥಳೀಯ ಮುಖಂಡನಾಗಿದ್ದ. ಆತನ ಸೋದರ ಮಾವ ಪಟ್ಟಣಗೆರೆ ಜಯಣ್ಣ ಜಮೀನುದಾರ. ರಿಯಲ್ ಎಸ್ಟೇಟ್‌ ಹಾಗೂ ಫೈನಾನ್ಸ್‌ ವ್ಯವಹಾರದಲ್ಲಿ ತೊಡಗಿದ್ದ ವಿನಯ್‌, ರಾಜರಾಜೇಶ್ವರಿ ನಗರದಲ್ಲಿ ಐಷರಾಮಿ ಸೋನಿಬ್ರೋಕ್ ಹೆಸರಿನ ಪಬ್ ಅನ್ನು ನಡೆಸುತ್ತಿದ್ದಾನೆ. ಆರ್‌.ಆರ್‌.ನಗರದಲ್ಲೇ ದರ್ಶನ್‌ ನೆಲೆಸಿದ್ದರಿಂದ ಅವರಿಗೆ ವಿನಯ್ ಪರಿಚಯವಾಗಿತ್ತು. ಸ್ಥಳೀಯವಾಗಿ ಪ್ರಭಾವಿಯಾಗಿದ್ದ ಕಾರಣ ಆತ್ಮೀಯ ಒಡನಾಟ ಬೆಳೆಯಿತು. ಇನ್ನು ತನ್ನ ಸೋದರ ಮಾವ ಕಟ್ಟಿದ್ದ ಕನ್ನಡಪರ ಸಂಘಟನೆಯಲ್ಲಿ ವಿನಯ್‌ ಸಕ್ರಿಯವಾಗಿದ್ದ. ಪಟ್ಟಣಗೆರೆಯಲ್ಲಿ ವಿನಯ್‌, ಸೋದರ ಮಾವನಿಗೆ ಸೇರಿದ ಶೆಡ್‌ ಅನ್ನು ಆತ ನಿರ್ವಹಿಸುತ್ತಿದ್ದ. ದರ್ಶನ್ ಪ್ರಿಯತಮೆ ಪವಿತ್ರಾ ಗೌಡಳಿಗೆ ಅಶ್ಲೀಲ ಕಾಮೆಂಟ್‌ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್‌ಗೆ ಕರೆ ತರುವಾಗ ರಾಘವೇಂದ್ರ ಹಾಗೂ ಪವನ್ ಜತೆ ವಿನಯ್ ಸಂಪರ್ಕದಲ್ಲಿದ್ದ. ಪಟ್ಟಣಗೆರೆಗೆ ರೇಣುಕಾಸ್ವಾಮಿ ಬಂದಾಗ ವಿನಯ್‌ ಒಡೆತನದ ಪಬ್‌ನಲ್ಲಿ ದರ್ಶನ್‌ ಮದ್ಯ ಸೇವಿಸುತ್ತ ಊಟ ಮಾಡುತ್ತಿದ್ದರು. ಆನಂತರ ವಿನಯ್ ಜತೆ ಪವಿತ್ರಾಗೌಡ ಳನ್ನು ಕರೆದುಕೊಂಡು ಶೆಡ್‌ಗೆ ದರ್ಶನ್ ತೆರಳಿದ್ದರು. ಆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಕೊಂದ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ವಿನಯ್ ಪ್ರಮುಖ ಪಾತ್ರವಹಿಸಿದ್ದ. ತನಗೆ ಪರಿಚಯವಿದ್ದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ ದರ್ಶನ್‌ ಪರವಾಗಿ ನಾಲ್ವರು ಶರಣಾಗುವಂತೆ ವಿನಯ್ ಮಾಡಿದ್ದರು. ಅಲ್ಲದೆ ಮೃತದೇಹ ಸಾಗಿಸಿದ ಬಳಿಕ ದರ್ಶನ್ ಜತೆ ವಿನಯ್ ನಿರಂತರ ಸಂಪರ್ಕದಲ್ಲಿದ್ದ ಎಂಬ ಆರೋಪ ಕೇಳಿ ಬಂದಿದೆ.

ಎ.11 ನಾಗರಾಜ ಅಲಿಯಾಸ್ ನಾಗಿ (41)
ಮೈಸೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್‌ನಾಗಬೇಕು ಎಂದು ಕನಸು ಕಂಡಿದ್ದ ನಟ ದರ್ಶನ್ ಪರಮಾಪ್ತನಾದ ನಾಗರಾಜು ಅಲಿಯಾಸ್ ನಾಗ ಈಗ ಕೊಲೆ ಆರೋಪ ಹೊತ್ತು ಪೊಲೀಸರ ಅತಿಥಿಯಾಗಿದ್ದಾನೆ. ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ನಾಗರಾಜ್, ಆರಂಭ ದಿನಗಳಲ್ಲಿ ಪೆಟ್ರೋಲ್ ಬಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಸ್ನೇಹಿತರ ಮೂಲಕ ದರ್ಶನ್ ಆಪ್ತವಲಯಕ್ಕೆ ಸೇರಿದ ಆತ, 15 ವರ್ಷಗಳಿಂದ ದರ್ಶನ್ ಜೊತೆಯಲ್ಲೇ ಇದ್ದಾನೆ. ಒಂದು ರೀತಿಯ ದರ್ಶನ್‌ ಮ್ಯಾನೇರ್ ಆಗಿದ್ದ ಎನ್ನಲಾಗಿದೆ. ಚಲನಚಿತ್ರಗಳ ಕಾಲ್‌ ಶೀಟ್‌ ದಿನಾಂಕ, ದರ್ಶನ್‌ ಊಟ, ವಾಸ್ತವ್ಯ, ಪ್ರವಾಸ ಹೀಗೆ ಪ್ರತಿಯೊಂದು ದರ್ಶನ್‌ ರವರ ವೈಯಕ್ತಿಕ ಕೆಲಸಗಳನ್ನು ನಾಗರಾಜ ನಿರ್ವಹಿಸುತ್ತಿದ್ದ. ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ಕೆಂಪಯ್ಯನಹುಂಡಿಯಲ್ಲಿರುವ ದರ್ಶನ್ ತೋಟದ ಮನೆ ನಿರ್ವಹಣೆ ಮಾಡುತ್ತಿದ್ದ ನಾಗರಾಜ್, ದರ್ಶನ್ ಅಭಿಮಾನಿ ಸಂಘಗಳಿಗೆಲ್ಲ ಸಂಪರ್ಕ ಸೇತುವೆಯಂತಿದ್ದ. ದರ್ಶನ್‌ರವರ ಅತ್ಯಂತ ನಂಬಿಕಸ್ಥ ಭಂಟ. ನಟ ದರ್ಶನ್, ನಾಗರಾಜ್‌ ಗಾಗಿ ಮೈಸೂರಿನಲ್ಲಿ ಬಾರ್ ಇಟ್ಟುಕೊಟ್ಟಿದ್ದರು. ವ್ಯವಹಾರ ಕೈ ಹಿಡಿಯದ ಹಿನ್ನೆಲೆಯಲ್ಲಿ ಮತ್ತೆ ದರ್ಶನ್ ಜೊತೆಯಲ್ಲಿದ್ದ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ನಾಗರಾಜ್, ರಾಜ್ಯ ಕುರುಬರ ಸಂಘಕ್ಕೆ ಮೈಸೂರಿನಿಂದ ಸ್ಪರ್ಧಿಸಿ ನಿರ್ದೇಶಕನಾಗಿ ಆಯ್ಕೆಯಾಗಿದ್ದ. ಮೈಸೂರು ಮಹಾನಗರ ಪಾಲಿಕೆಯ 21ನೇ ವಾರ್ಡ್‌ ನಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದು, ದರ್ಶನ್ ಮೂಲಕವೇ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ. ಆದರೆ, ಪಾಲಿಕೆ ಚುನಾವಣೆ ಘೋಷಣೆ ಮುನ್ನವೇ ಆತ ಕಂಬಿ ಎಣಿಸುವಂತಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಗರಾಜ್ ಪ್ರಮುಖಪಾತ್ರವಹಿಸಿದ್ದಾನೆ. ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ನಡೆಸಿದ ಬಳಿಕ ಮೃತದೇಹ ಸಾಗಾಣಿಕೆ ಹೀಗೆ ಪ್ರತಿ ಹಂತದಲ್ಲಿ ನಾಗರಾಜ ಪಾತ್ರವಹಿಸಿದ್ದಾನೆ ಎಂಬ ಆರೋಪ ಬಂದಿದೆ.

ಏ.12 ದರ್ಶನ್‌ ಕಾರು ಚಾಲಕ ಲಕ್ಷ್ಮಣ
ಬೆಂಗಳೂರಿನ ಆರ್‌ಪಿಸಿ ಲೇಔಟ್‌ ಬಳಿ ನೆಲೆಸಿದ್ದ ಲಕ್ಷ್ಮಣ, ಹಲವು ವರ್ಷಗಳಿಂದ ದರ್ಶನ್ ಕಾರು ಚಾಲಕನಾಗಿದ್ದ. ತಮ್ಮ ಪರಿಚಿತರ ಮೂಲಕ ಆತನಿಗೆ ದರ್ಶನ್ ಸ್ನೇಹವಾಗಿತ್ತು. ಅಂದಿನಿಂದ ದರ್ಶನ್ ಬಳಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್‌, ನಟನ ಮನೆ ನಿರ್ವಹಣೆಯ ಹೊಣೆಗಾರಿಕೆ ಸಹ ನಿರ್ವಹಿಸುತ್ತಿದ್ದ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆಯಲ್ಲಿ ಕೂಡ ಲಕ್ಷ್ಮಣ್ ಪಾಲ್ಗೊಂಡಿದ್ದ. ಅಲ್ಲದೆ ಕೃತ್ಯ ಎಸಗಿದ ಬಳಿಕ ಪ್ರಕರಣದಲ್ಲಿ ದರ್ಶನ್‌ ರಕ್ಷಿಸಲು ಮುಂದಾದ ಲಕ್ಷ್ಮಣ್‌, ಪೊಲೀಸರಿಗೆ ಶರಣಾಗುತ್ತಿದ್ದ ನಾಲ್ವರಿಗೆ ದರ್ಶನ್ ಹೆಸರು ಹೇಳದಂತೆ ಪವಿತ್ರಾಗೌಡ ಜತೆ ಹಣದಾಸೆ ತೋರಿಸಿದ್ದರು ಎಂಬ ಆರೋಪ ಬಂದಿದೆ. ಈ ಕೃತ್ಯ ಎಸಗಿದ ಬಳಿಕ ದರ್ಶನ್ ಮನೆಯಲ್ಲಿ ನಡೆದ ಆಪ್ತರ ಸಭೆಯಲ್ಲಿ ಲಕ್ಷ್ಮಣ್ ಕೂಡ ಇದ್ದ. ಈ ಕೃತ್ಯ ಎಸಗಿ ಮೈಸೂರು ಕಡೆ ಪರಾರಿಯಾಗುತ್ತಿದ್ದ ಲಕ್ಷ್ಮಣ್‌ನನ್ನು ಬಿಡದಿ ಟೋಲ್‌ ಹತ್ತಿರ ಪೊಲೀಸರು ಬಂಧಿಸಿ ಕರೆತಂದಿದ್ದರು.

ಎ.13 ಬಿಜೆಪಿ ಶಾಸಕರ ಸಂಬಂಧಿ ದೀಪಕ್‌ (39)
ರಾಜರಾಜೇಶ್ವರಿನಗರದ ಬಿಇಎಂಎಲ್‌ ಲೇಔಟ್‌ 3ನೇ ಕ್ರಾಸ್ ನಿವಾಸಿ ದೀಪಕ್‌ (39) ದರ್ಶನ್‌ ಆಪ್ತ ಬಳಗದಲ್ಲಿ ಮತ್ತೊಬ್ಬ ಸದಸ್ಯ. ಈತ ಬೆಂಗಳೂರಿನ ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಹತ್ತಿರದ ಸಂಬಂಧಿ ಎನ್ನಲಾಗಿದೆ. ರಿಯಲ್ ಎಸ್ಟೇಟ್‌, ಫೈನಾನ್ಸ್ ವ್ಯವಹಾರದಲ್ಲಿ ತೊಡಗಿದ್ದ ದೀಪಕ್‌, ಈಗ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದಿರುವ ಶೆಡ್‌ ಅನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ. ಬ್ಯಾಂಕ್ ಸಾಲ ಪಾವತಿಸದ ವಾಹನಗಳನ್ನು ಜಪ್ತಿ ಮಾಡಿ ಬಳಿಕ ಸಾಲ ಪಾವತಿ ನಂತರ ಅವರು ಬಿಡುಗಡೆಗೊಳಿಸುತ್ತಿದ್ದರು. ಹಲವು ವರ್ಷಗಳಿಂದ ಈ ಶೆಡ್‌ ಅನ್ನು ದೀಪಕ್ ನಿರ್ವಹಿಸುತ್ತಿದ್ದ. ಹಲವು ವರ್ಷಗಳಿಂದ ಪಟ್ಟಣೆಗೆರೆ ವಿನಯ್‌ ಮೂಲಕ ಆತನಿಗೆ ದರ್ಶನ್ ಸ್ನೇಹವಾಗಿತ್ತು. ನಂತರ ಎಲ್ಲರೂ ಆತ್ಮೀಯ ಸ್ನೇಹಿತರಾಗಿದ್ದರು. ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಿಸಿ ಕರೆತಂದಾಗ ಪಟ್ಟಣಗೆರೆಯ ದೀಪಕ್ ಪಾಲುದಾರಿಕೆ ಶೆಡ್‌ ಕರೆದೊಯ್ಯುವಂತೆ ಸೂಚಿಸಲಾಗಿತ್ತು. ಅಂದು ಪಟ್ಟಣಗೆರೆ ವಿನಯ್‌ ಒಡೆತನದ ಪೆಬ್‌ನಲ್ಲಿ ದರ್ಶನ್‌ ಜತೆ ದೀಪಕ್ ಕೂಡ ಇದ್ದ ಎನ್ನಲಾಗಿದೆ. ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ ಕರೆಂಟ್ ಶಾಕ್ ನೀಡಿದವರ ಪೈಕಿ ದೀಪಕ್‌ ಸಹ ಒಬ್ಬಾತ ಎಂಬ ಆರೋಪ ಬಂದಿದೆ. ಅಲ್ಲದೆ ಇದೇ ಪ್ರಕರಣದಲ್ಲಿ ಪೊಲೀಸರಿಗೆ ಶರಣಾದ ನಾಲ್ವರಿಗೆ ದೀಪಕ್ ಮೂಲಕವೇ ಹಣ ಸಂದಾಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಎ.14 ಸಾಫ್ಟ್‌ವೇರ್‌ ಉದ್ಯೋಗಿ ಪ್ರದೂಷ್
ಗಿರಿನಗರದಲ್ಲಿ ತನ್ನ ಕುಟುಂಬದ ಜತೆ ನೆಲೆಸಿರುವ ಪ್ರದೂಪ್‌, ಇತ್ತೀಚಿನ ವರ್ಷಗಳಲ್ಲಿ ನಟ ದರ್ಶನ್ ಆಪ್ತಕೂಟದಲ್ಲಿ ಪ್ರಮುಖನಾಗಿದ್ದ. ಸಾಫ್ಟ್‌ವೇರ್ ಕಂಪನಿಯಲ್ಲಿ ದೊಡ್ಡ ಮೊತ್ತದ ಪಗಾರ ಎಣಿಸುವ ಉದ್ಯೋಗಿಯಾಗಿರುವ ಪ್ರದೂಪ್‌ಗೆ ಬಣ್ಣ ಲೋಕದಡೆಗೆ ವಿಶೇಷ ಆಸಕ್ತಿ ಇತ್ತು. ನಟಿಸುವ ಗೀಳಿನಿಂದಲೇ ಆತನಿಗೆ ದರ್ಶನ್ ಸಂಪರ್ಕ ಬೆಳೆದಿತ್ತು. ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ ದರ್ಶನ್ ಅಭಿನಯದ ಬೃಂದಾವನ, ಬುಲ್‌ಬುಲ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಆತ ನಟಿಸಿದ್ದ. ಇನ್ನು ಕೆಲ ವರ್ಷಗಳು ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರ ಆಪ್ತ ಸಹಾಯಕನಾಗಿ ಸಹ ಪ್ರದೂಪ್ ಕೆಲಸ ಮಾಡಿದ್ದ. ರಾಜಕೀಯಕ್ಕಿಂತ ಆತನಿಗೆ ಸಿನಿಮಾ ಸೆಳೆತ ಹೆಚ್ಚಿತ್ತು. ರೇಣುಕಾಸ್ವಾಮಿ ಹತ್ಯೆ ಕೃತ್ಯದಲ್ಲಿ ಪ್ರದೂಪ್ ಪಾತ್ರವಹಿಸಿದ್ದಾನೆ. ಈ ಹತ್ಯೆ ಕೃತ್ಯದಲ್ಲಿ ದರ್ಶನ್ ಕಾಪಾಡಲು ಪ್ರದೂಪ್‌ ಯತ್ನಿಸಿದ್ದ. ಈ ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ನೋಡಿಕೊಳ್ಳಲು ತನ್ನ ಮನೆಯಲ್ಲಿ ಪ್ರದೂಪ್‌ಗೆ 30 ಲಕ್ಷ ರು ಹಣವನ್ನು ದರ್ಶನ್ ಕೊಟ್ಟಿದ್ದರು. ಪ್ರದೂಪ್ ಮನೆಯಲ್ಲಿ ದರ್ಶನ್ ಕೊಟ್ಟಿದ್ದ 30 ಲಕ್ಷ ರು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಹಣ ಜಪ್ತಿ ಮಾಹಿತಿಯನ್ನು ಕೋರ್ಟ್‌ಗೆ ಪೊಲೀಸರು ತಿಳಿಸಿದ್ದಾರೆ.

ಎ.15 ಕೂಲಿಕೆಲಸ ಮಾಡಿಕೊಂಡಿದ್ದ ಕಾರ್ತಿಕ್‌
ಪಟ್ಟಣಗೆರೆ ಶೆಡ್‌ನಲ್ಲಿ ಗಿರಿನಗರದ ಚಾಮುಂಡಿನಗರದ ಜಿ ಬ್ಲಾಕ್‌ನ ಕಾರ್ತಿಕ್‌ ಅಲಿಯಾಸ್‌ ಕಪ್ಪೆ ಶೆಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ಹಿಂದೆ ಈತನ ಮೇಲೆ ತಲಘಟ್ಟಪುರ ಠಾಣೆಯಲ್ಲಿ ಸಣ್ಣ ಗಲಾಟೆ ನಡೆಸಿದ ಪ್ರಕರಣವಿದೆ. ಅದೂ ಹೊರತುಪಡಿಸಿದರೆ ಕ್ರಿಮಿನಲ್ ಚರಿತ್ರೆ ಇಲ್ಲ. ಕೂಲಿ ಕೆಲಸ ಮಾಡಿಕೊಂಡು ಆತ ಜೀವನ ಸಾಗಿಸುತ್ತಿದ್ದ. ಹಣಕ್ಕಾಗಿ ಕೊಲೆ ಆರೋಪ ಹೊತ್ತು ದರ್ಶನ್‌ ಪರವಾಗಿ ಜೈಲಿಗೆ ಹೋಗಲು ಸಹ ಕಾರ್ತಿಕ್ ಮುಂದಾಗಿದ್ದ. ಅಲ್ಲದೆ ಪೊಲೀಸರಿಗೆ ಶರಣಾಗಿ ದರ್ಶನ್ ಹೆಸರು ಹೇಳದಂತೆ ಕಾರ್ತಿಕ್‌ಗೆ ದರ್ಶನ್ ಪ್ರಿಯತಮೆ ಪವಿತ್ರಾಗೌಡ ಹಾಗೂ ಆಪ್ತ ಪವನ್ 5 ಲಕ್ಷ ರು ಹಣ ಆಮಿಷವೊಡ್ಡಿದ್ದರು. ಆತನಿಗೆ ದೀಪಕ್ ಮೂಲಕ ಹಣ ಸಹ ಸಂದಾಯವಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಬಳಿಕ ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್ ಸಮೀಪದ ಮೋರಿಗೆ ಮೃತದೇಹ ವಿಲೇವಾರಿ ಮಾಡಿದವರ ಪೈಕಿ ಕಾರ್ತಿಕ್ ಸಹ ಒಬ್ಬಾತನಾಗಿದ್ದಾನೆ ಎಂದು ತಿಳಿದು ಬಂದಿದೆ.

ಎ.16 ದರ್ಶನ್‌ಗಾಗಿ ಜೈಲಿಗೆ ಹೋಗಲು ಸಿದ್ಧನಾದ ಕೇಶವಮೂರ್ತಿ (27).
ಗಿರಿನಗರದ ಹೀರಣ್ಣನಗುಡ್ಡದ ಕೇಶವಮೂರ್ತಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಟ ದರ್ಶನ್ ಅಭಿಮಾನಿಯಾಗಿದ್ದ ಆತ ಅದೇ ಅಭಿಮಾನದಲ್ಲೇ ಕೊಲೆ ಪ್ರಕರಣದ ಆರೋಪ ಹೊತ್ತು ಜೈಲಿಗೆ ಹೋಗಲು ಸಹ ಸಿದ್ದನಾಗಿದ್ದ. ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಮೂಲಕ ಈ ಕೃತ್ಯದಲ್ಲಿ ಕೇಶವ ಸಿಲುಕಿದ್ದಾನೆ. ಹಣದಾಸೆ ತೋರಿಸಿ ದರ್ಶನ್ ಹೆಸರು ಹೇಳದೆ ಪೊಲೀಸರಿಗೆ ಶರಣಾಗುವಂತೆ ದರ್ಶನ್ ಆಪ್ತರು ಸೂಚಿಸಿದ್ದರು. ಅಲ್ಲದೆ ಪಟ್ಟಣಗೆರೆ ಶೆಡ್‌ನಿಂದ ಸುಮನಹಳ್ಳಿ ಸಮೀಪದ ಮೋರಿಗೆ ಮೃತದೇಹ ತಂದು ಎಸೆದವರಲ್ಲಿ ಕೇಶವ ಮೂರ್ತಿ ಸಹ ಒಬ್ಬನಾಗಿದ್ದ. ಬಳಿಕ ಕಾಮಾಕ್ಷಿಪಾಳ್ಯ ಸೋಮವಾರ ರಾತ್ರಿ ಕೇಶವ ಮೂರ್ತಿ ಶರಣಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೇಣುಕಾಸ್ವಾಮಿಗೆ ವಿದ್ಯುತ್‌ ಶಾಕ್‌ ಕೊಟ್ಟಿದ್ದು ಬೆಂಗಳೂರಿನ ಬಿಜೆಪಿ ಶಾಸಕರ ಸಂಬಂಧಿ ದೀಪಕ್

ಎ.17 ಶವ ಬಿಸಾಡಿದ ನಿಖಿಲ್ ನಾಯಕ್ (21)
ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆ ಬಳಿಕ ಸುಮನಹಳ್ಳಿ ಜಂಕ್ಷನ್‌ ಸಮೀಪದ ಮೋರಿಗೆ ಮೃತದೇಹ ತಂದು ಬಿಸಾಡಿದ ಹಾಗೂ ನಟ ದರ್ಶನ್‌ ಹೆಸರು ಹೇಳದಂತೆ ಪೊಲೀಸರಿಗೆ ಶರಣಾದವರ ಪೈಕಿ ನಿಖಲ್ ನಾಯಕ್ ಸಹ ಒಬ್ಬನಾಗಿದ್ದಾನೆ. ಈತ ಕೂಡ ದರ್ಶನ್‌ ತಂಡಕ್ಕೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್‌ ಮೂಲಕ ಸೇರಿದ್ದಾನೆ. ರೇಣುಕಾಸ್ವಾಮಿ ಹತ್ಯೆ ಬಳಿಕ ಪವನ್‌, ನಿಖಿಲ್‌ಗೆ ಕರೆ ಮಾಡಿ ಶೆಡ್‌ ಬಳಿಗೆ ಕರೆಸಿಕೊಂಡಿದ್ದ. ಅಲ್ಲದೆ ಮೊದಲಿನಿಂದಲೂ ನಿಖಲ್ ಸಹ ದರ್ಶನ್ ಅಭಿಮಾನಿಯಾಗಿದ್ದ. ಬಳಿಕ ನಿಖಲ್‌ಗೆ 5 ಲಕ್ಷ ರು ಹಣ ಕೊಡುವುದಾಗಿ ಹೇಳಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗುವಂತೆ ದರ್ಶನ್ ಆಪ್ತ ಮಾಡಿದ್ದರು. ಆದರೆ ವಿಚಾರಣೆ ವೇಳೆ ಆತ ದರ್ಶನ್ ಹೆಸರು ಬಾಯ್ಬಿಟ್ಟಿದ್ದ ಎನ್ನಲಾಗಿದೆ.

click me!