ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ!

By Santosh Naik  |  First Published Jul 11, 2022, 8:31 PM IST

ರೈಲು ಟಿಕೆಟ್ ಬುಕ್ ಮಾಡಲು ಹೋದವನು ತೆರಳಿದವನನ್ನು ರೈಲ್ವೇ ಸ್ಟೇಷನ್‌ ಮುಂಭಾಗದಲ್ಲಿಯೇ ಬೆನ್ನಟ್ಟಿಸಿಕೊಂಡು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.
 


ಕಲಬುರಗಿ (ಜು.11): ಕಾಂಗ್ರೆಸ್ ನಾಯಕನೊಬ್ಬನನ್ನ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿ ಅಟ್ಟಾಡಿಸಿಕೊಂಡು ಮಾರಕಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆಗೈದ ಭೀಭತ್ಸ ಘಟನೆ ಕಲ್ಬುರ್ಗಿ ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ನಡೆದಿದೆ. ಶಹಾಬಾದ ರೈಲ್ವೆ ನಿಲ್ದಾಣದ ಮುಂಬಾಗದಲ್ಲಿ ಹಾಡು ಹಗಲೇ ನಡೆದ ಈ ಘಟನೆಯಿಂದ ಶಹಾಬಾದ ಪಟ್ಟಣದ ಜನತೆ ಬೆಚ್ಚಿ ಬೀಳುವಂತಾಗಿದೆ.  42 ವರ್ಷದ ಗಿರೀಶ್ ಕಂಬನೂರ್ ಕೊಲೆಯಾದ ದುರ್ದೈವಿ. ಈತನ ಪತ್ನಿ ಶಹಾಬಾದ ನಗರ ಸಭೆಯ ಹಾಲಿ ಅಧ್ಯಕ್ಷೆಯಾಗಿದ್ದಾರೆ. ಕೊಲೆಯಾದ ಗಿರೀಶ ಕಂಬನೂರ ಸಹ ಈ ಹಿಂದೆ ಶಹಾಬಾದ ನಗರ ಸಭೆಯ ಅಧ್ಯಕ್ಷನಾಗಿದ್ದ. ಈತ ಮಾಜಿ ಸಚಿವ ಸಿ. ಗುರುನಾಥ್ ಅವರ ಸಹೋದರ ಸಂಬಂಧಿ ಎನ್ನಲಾಗಿದೆ. ಹಳೆ ವೈಷಮ್ಯವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.  ಮರಳು ಮಾಫಿಯಾದ ಟೀಂನವರ ಜೊತೆ ಈ ಹಿಂದೆ ಒಮ್ಮೆ ಸಂಘರ್ಷ ಆಗಿತ್ತು. ಕಳೆದ 2019ರಲ್ಲಿ ಈತನ ಮೇಲೆ ಮರಣಾಂತಿಕ ಹಲ್ಲೆ ನಡೆಸಲಾಗಿತ್ತು. ಆಗಲು ಸಹ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೆ ಯತ್ನ ನಡೆಸಲಾಗಿತ್ತು. ಆದರೆ ಅದೃಷ್ಟ ವಶಾತ್ ಒಂದೂವರೆ ತಿಂಗಳ ಕಾಲ ನಿರಂತರ ಚಿಕಿತ್ಸೆಯ ನಂತರ ಗುಣಮುಖವಾಗಿ ಆಸ್ಪತ್ರೆಯಿಂದ ಗಿರೀಶ್ ಹೊರ ಬಂದಿದ್ದ. 

2 ವರ್ಷಗಳ ಹಿಂದೆ ಸಹೋದರನ ಕೊಲೆ: ಕಳೆದ 2 ವರ್ಷದ ಹಿಂದೆ ಗಿರೀಶ್ (Girish Kambanur) ಸಹೋದರ ಸತೀಶ್ ಕಂಬನೂರ್ ನನ್ನೂ ಸಹ ದುಷ್ಕರ್ಮಿಗಳು ಇದೇ ಶಹಬಾದ್ ಪಟ್ಟಣದಲ್ಲಿ(shahabad) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. 

Latest Videos

undefined


ಗಿರಿಶ ಬಳಿ ಪಿಸ್ತೂಲ್ ಇತ್ತು:
ತನಗೆ ಜೀವ ಭಯ ಇರುವ ಹಿನ್ನೆಲೆ ಗಿರೀಶ್ ಕಂಬನೂರ್ ಯಾವಾಗಲೂ ತನ್ನ ಬಳಿ ಪರವಾನಿಗೆ ಹೊಂದಿರುವ ಪಿಸ್ತೂಲು (Pistol) ಇಟ್ಟುಕೊಂಡಿರುತ್ತಿದ್ದ. ಇವತ್ತು ಸಹ ಆತನ ಬಳಿ ಪಿಸ್ತೂಲು ಇತ್ತು. ಆದರೆ ಸೊಂಟಕ್ಕೆ ಕೈ ಹಾಕಿ ಪಿಸ್ತೂಲು ತೆಗೆಯುವ ಮುನ್ನವೇ ಹಂತಕರು ಆತನಿಗೆ ಮಾರಕಾಸ್ತ್ರಗಳಿಂದ ಏಟು ಕೊಟ್ಟು ಹತ್ಯೆ ಮಾಡಿದ್ದಾರೆ. 

ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಲು ಹೋದವನು ಹೋಗಿದ್ದು ಯಮಲೋಕಕ್ಕೆ: ಬೆಂಗಳೂರಿಗೆ ತೆರಳಲು ಟಿಕೆಟ್ (Train Ticket To Bengaluru) ಬುಕ್ ಮಾಡುವುದಕ್ಕಾಗಿ ಗಿರೀಶ್ ಕಂಬನೂರ್ ತನ್ನ ಸ್ನೇಹಿತನೊಂದಿಗೆ ಶಹಬಾದ್ ರೈಲು ನಿಲ್ದಾಣಕ್ಕೆ ( shahabad railway station) ತೆರಳಿದ್ದ. ಟಿಕೆಟ್‌ ರಿಸರ್ವೇಶನ್ ಮಾಡಿಸಿಕೊಂಡು ರೈಲು ನಿಲ್ದಾಣದಿಂದ ಹೊರ ಬರುವ ಹೊತ್ತಲ್ಲೇ ಹತ್ತರಿಂದ ಹನ್ನೆರಡು ಜನ ಯುವಕರ ಗುಂಪು,  ದಾಳಿ ಮಾಡಿದೆ.  ಹಲ್ಲೆಯ ಮುನ್ಸೂಚನೆ ಅರಿತ ಗಿರೀಶ್ ಸೊಂಟಕ್ಕೆ ಕೈಹಾಕಿ ಪಿಸ್ತೂಲು ತೆಗೆಯಲು ಯತ್ನಿಸಿದ್ದಾನೆ. ಈತನ ಬಳಿ ಸದಾ ಪಿಸ್ತೂಲು ಇರುತ್ತದೆ ಎನ್ನುವ ಅರಿವಿದ್ದ ಹಂತಕರು, ಮೊದಲು ಏಟು ಕೊಟ್ಟಿದ್ದೆ ಈತನ ಬಲಗೈಗೆ. ಏನಾಗುತ್ತಿದೆ ಎಂದು ಅರಿತುಕೊಳ್ಳುವ ಮುನ್ನವೇ ಹಂತಕ ಪಡೆ ರೈಲು ನಿಲ್ದಾಣದ ಮುಂಭಾಗದಲ್ಲಿಯೇ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. 

ಇದನ್ನೂ ಓದಿ: ಮನೆಕೆಲಸಕ್ಕೆ ಅಪರಿಚಿತರ ಸೇರಿಸಿಕೊಳ್ಳುವ ಮುನ್ನ ಎಚ್ಚರ : ಬೆಂಗಳೂರಿನಲ್ಲಿ ಮುಂಬೈ ಗ್ಯಾಂಗ್ ಅಂದರ್

ಹಂತಕರು ಮೂರು ತಲ್ವಾರ್‌, ಮಚ್ಚು ಲಾಂಗ್‌ಗಳನ್ನು ಅದೇ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಹಂತಕರು ಪರಾರಿಯಾಗುತ್ತಿದ್ದಂತೆಯೇ ಕೂಡಲೇ ಗಿರೀಶ್ ನನ್ನ ಚಿಕಿತ್ಸೆಗಾಗಿ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಆತ ಸಾವಿಗಿಡಾಗಿದ್ದಾನೆ ಎನ್ನುವದನ್ನು ವೈದ್ಯರು ದೃಢಪಡಿಸಿದ್ದಾರೆ.

ಇದನ್ನೂ ಓದಿ: Bengaluru; ಲಾರಿ ಚಾಲಕನಿಗೆ ಥಳಿಸಿ ಹಣ ಸುಲಿದ ಅಪ್ರಾಪ್ತ ಸೇರಿ 3 ಸೆರೆ

ಶಹಾಬಾದ್ ಉದ್ರಿಕ್ತ: ಕೊಲೆಯ ಬೆನ್ನಲ್ಲೇ ಶಹಬಾದ್ ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಹಬಾದ್ ಪಟ್ಟಣದಾದಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.‌

click me!