ಪಿಎನ್‌ಬಿ, ಮಲ್ಯಗಿಂತ ದೊಡ್ಡ ಗೋಲ್ಮಾಲ್‌: 34,615 ಕೋಟಿ ರು. ಮತ್ತೊಂದು ಮಹಾ ಬ್ಯಾಂಕಿಂಗ್‌ ವಂಚನೆ..!

Published : Jun 23, 2022, 07:02 AM ISTUpdated : Jun 23, 2022, 07:44 AM IST
ಪಿಎನ್‌ಬಿ, ಮಲ್ಯಗಿಂತ ದೊಡ್ಡ ಗೋಲ್ಮಾಲ್‌: 34,615 ಕೋಟಿ ರು. ಮತ್ತೊಂದು ಮಹಾ ಬ್ಯಾಂಕಿಂಗ್‌ ವಂಚನೆ..!

ಸಾರಾಂಶ

*   ಡಿಎಚ್‌ಎಫ್‌ಎಲ್‌ ಹಗರಣ, ಸಿಬಿಐ ತನಿಖೆ *   17 ಬ್ಯಾಂಕುಗಳಿಂದ ಸಾಲ ಪಡೆದು ಮೋಸ *  ಗೃಹ ಸಾಲ ನೀಡುವ ಫೈನಾನ್ಸ್‌ ಕಂಪನಿ ಡಿಎಚ್‌ಎಫ್‌ಎಲ್‌  

ನವದೆಹಲಿ(ಜೂ.23): ಪಿಎನ್‌ಬಿ, ವಿಜಯ್‌ ಮಲ್ಯ ಪ್ರಕರಣಗಳನ್ನೂ ನಾಚಿಸುವಂಥ ಭರ್ಜರಿ 34,615 ಕೋಟಿ ರು. ಮೊತ್ತದ ಬೃಹತ್‌ ಬ್ಯಾಂಕಿಂಗ್‌ ಹಗರಣವೊಂದನ್ನು ಸಿಬಿಐ ಬಯಲಿಗೆಳೆದಿದೆ. ಈ ಸಂಬಂಧ ಅದು ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿ.(ಡಿಎಚ್‌ಎಫ್‌ಎಲ್‌)ನ ಮಾಜಿ ಸಿಎಂಡಿ ಕಪಿಲ್‌ ವಾಧ್ವಾನ್‌, ನಿರ್ದೇಶಕ ಧೀರಜ್‌ ವಾಧ್ವಾನ್‌, ರಿಯಲ್‌ ಎಸ್ಟೇಟ್‌ ಉದ್ಯಮಿ ಸುಧಾಕರ್‌ ಶೆಟ್ಟಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ಹಗರಣದ ಬಗ್ಗೆ ಜೂ.20ರಂದು ಪ್ರಕರಣದ ದಾಖಲಿಸಿಕೊಂಡಿದ್ದ ಸಿಬಿಐ, ಬುಧವಾರ ಮುಂಬೈನ 12 ಸ್ಥಳಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ದಾಖಲೆ ಪತ್ರ ವಶಪಡಿಸಿಕೊಂಡಿದೆ. ಇದು ಸಿಬಿಐ ಇದುವರೆಗೆ ದೇಶದಲ್ಲಿ ಬ್ಯಾಂಕಿಂಗ್‌ ವಂಚನೆ ಪ್ರಕರಣದಲ್ಲಿ ದಾಖಲಿಸಿಕೊಂಡ ಬೃಹತ್‌ ಮೊತ್ತದ ಪ್ರಕರಣವಾಗಿದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನೀಡಿದ ದೂರಿನ ಆಧಾರದಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಚಿಟ್‌ ಫಂಡ್‌ ಹೆಸರಲ್ಲಿ 1.25 ಕೋಟಿ ವಂಚನೆ: ಮಹಿಳೆ ಬಂಧನ

ಏನಿದು ಪ್ರಕರಣ?:

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳು ಡಿಎಚ್‌ಎಫ್‌ಎಲ್‌ಗೆ 2010-18ರ ಅವಧಿಯಲ್ಲಿ ಒಟ್ಟು 42,871 ಕೋಟಿ ರು. ಸಾಲ ನೀಡಿದ್ದವು. ಆದರೆ ಈ ಹಣವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ. ಸಾರ್ವಜನಿಕರ ಹಣವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳಲಾಗಿದೆ. 2019ರ ಬಳಿಕ 42,871 ಕೋಟಿ ರು. ಸಾಲದ ಪೈಕಿ 34,615 ಕೋಟಿ ರು. ಹಣ ಮರುಪಾವತಿ ಮಾಡದೇ ವಂಚಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ವಂಚನೆ ಹೇಗೆ?:
ಡಿಎಚ್‌ಎಫ್‌ಎಲ್‌ ಮಾಜಿ ಸಿಎಂಡಿ ಕಪಿಲ್‌ ವಾಧ್ವಾನ್‌, ನಿರ್ದೇಶಕ ಧೀರಜ್‌ ವಾಧ್ವಾನ್‌ ವಿವಿಧ ಬ್ಯಾಂಕ್‌ಗಳಿಂದ 42,871 ಕೋಟಿ ರು. ಸಾಲ ಪಡೆದಿದ್ದರು. ಆದರೆ ಬಳಿಕ ಇತರೆ ಕೆಲವರ ಜೊತೆ ಕ್ರಿಮಿನಲ್‌ ಸಂಚು ರೂಪಿಸುವ ಮೂಲಕ ವಾಸ್ತವಾಂಶಗಳನ್ನು ಮುಚ್ಚಿಟ್ಟು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಹೀಗೆ ವರ್ಗಾಯಿಸಿದ ಹಣವನ್ನು ತಮ್ಮ ಹೆಸರಲ್ಲಿ ಭೂಮಿ ಮತ್ತು ಇತರೆ ಆಸ್ತಿ ಖರೀದಿಗೆ ಬಳಸಿಕೊಂಡಿದ್ದಾರೆ. ಬಳಿಕ ಈ ಸಾಲವನ್ನು ಅನುತ್ಪಾದಕ ಆಸ್ತಿ ಎಂದು ಬ್ಯಾಂಕ್‌ಗಳಿಗೆ ತೋರಿಸುವ ಮೂಲಕ ವಂಚಿಸಲಾಗಿದೆ. ಈ ಮೂಲಕ ಸಾರ್ವಜನಿಕರ ಹಣವನ್ನು ವೈಯಕ್ತಿಕ ಆಸ್ತಿ ಖರೀದಿಗೆ ಬಳಸಿರುವುದು ಸಾಬೀತಾಗಿದೆ. ಹೀಗೆ ವಂಚಿಸಿದ ಒಟ್ಟು ಮೊತ್ತ 34,615 ಕೋಟಿ ರು. ಎಂದು ಸಿಬಿಐ ಆರೋಪಿಸಿದೆ.

Ballari Pearl Scam; ಮುತ್ತಿನ ಮತ್ತಲ್ಲಿ ಕೋಟಿ ಕಳೆದುಕೊಂಡ ನೂರಾರು ಜನ!

ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಡಿಎಚ್‌ಎಫ್‌ಎಲ್‌ ಮಾಜಿ ಸಿಎಂಡಿ ಕಪಿಲ್‌ ವಾಧ್ವಾನ್‌, ನಿರ್ದೇಶಕ ಧೀರಜ್‌ ವಾಧ್ವಾನ್‌ ಬಂಧನದಲ್ಲಿದ್ದಾರೆ.

2019ರಲ್ಲೇ ಹಗರಣದ ಸುಳಿವು

ಡಿಎಚ್‌ಎಫ್‌ಎಲ್‌ನ ಪ್ರವರ್ತಕರು 30000 ಕೋಟಿ ರು.ಗೂ ಹೆಚ್ಚಿನ ಮೊತ್ತದ ಹಗರಣ ನಡೆಸಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ಸ್ಟಿಂಗ್‌ ಆಪರೇಷನ್‌ ಮೂಲಕ ಸುಳಿವು ನೀಡಿತ್ತು. ಆದರೆ ಅಕ್ರಮದ ಬಗ್ಗೆ 2022ರಲ್ಲಿ ಬ್ಯಾಂಕ್‌ಗಳು ದೂರು ನೀಡಿದ ಬಳಿಕ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಹೇಗೆ ವಂಚನೆ?

- ಗೃಹ ಸಾಲ ನೀಡುವ ಫೈನಾನ್ಸ್‌ ಕಂಪನಿ ಡಿಎಚ್‌ಎಫ್‌ಎಲ್‌
- 2010-18ರ ನಡುವೆ 42,871 ಕೋಟಿ ಸಾಲ ಪಡೆದಿದ್ದ ಕಂಪನಿ
- ನಕಲಿ ದಾಖಲೆ ಸೃಷ್ಟಿಸಿ ಈ ಹಣ ಬೇರೆ ಬೇರೆ ಕಡೆಗೆ ವರ್ಗಾವಣೆ
- ಕಂಪನಿ ನಿರ್ದೇಶಕರಿಂದ ಸಾಲದ ಹಣ ವೈಯಕ್ತಿಕ ಲಾಭಕ್ಕೆ ಬಳಕೆ
- 34,615 ಕೋಟಿ ಮರುಪಾವತಿ ಮಾಡದೆ ಬ್ಯಾಂಕ್‌ಗಳಿಗೆ ಟೋಪಿ
- ಬೇರೆ ಕೇಸಲ್ಲಿ ಈಗಾಗಲೇ ಕಂಪನಿಯ ಮುಖ್ಯಸ್ಥರು ಬಂಧನದಲ್ಲಿ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ