ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿಂದಿನ ಕಾರಣ ಏನು ಎನ್ನುವುದನ್ನು ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್ ತಿಳಿಸಿದರು.
ನಾಯಕನಹಟ್ಟಿ [ಅ20]: ಆತ್ಮಗೌರವಕ್ಕೆ ಧಕ್ಕೆ ಬಂದಿದ್ದರಿಂದ, ಕ್ಷೇತ್ರದ ಜನರಿಗೆ ಅಭಿವೃದ್ಧಿ ತೋರಿಸಲು ಸಾಧ್ಯವಾಗದೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.
ಪಟ್ಟಣದ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಸಮ್ಮಿಶ್ರ ಸರ್ಕಾರ ಕೇವಲ ರಾಮನಗರ, ಹಾಸನ, ಬೆಂಗಳೂರು ಸೇರಿದಂತೆ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ರಾಮನಗರ ಜಿಲ್ಲೆಗೆ ರು.8 ಸಾವಿರ ಕೋಟಿ ನೀಡಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ನಮ್ಮ ಕ್ಷೇತ್ರಕ್ಕೆ ರು.100 ಕೋಟಿ ಯೋಜನೆಗೆ ಒಪ್ಪಿಗೆ ನೀಡಲಿಲ್ಲ. ಕ್ಷೇತ್ರದ ಜನತೆಗೆ ಶಾಸಕನಾದ ನಂತರ ನ್ಯಾಯ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನಾನಾ ಸಮಾನ ಮನಸ್ಕರ ಜತೆಗೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಮ್ಮಿಶ್ರ ಸರ್ಕಾರವನ್ನು ರಾಜ್ಯದಿಂದ ಹೊರಹಾಕಿದ ನೆಮ್ಮದಿ ನಮಗಿದೆ. ಇದೀಗ ನಮ್ಮೆಲ್ಲ 17 ಶಾಸಕರ ಅನರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ ತೀರ್ಮಾನ ಕೈಗೊಳ್ಳಲಿದೆ. ಆದರೆ ಡಿ.5 ರಂದು ಜರುಗಲಿರುವ ಚುನಾವಣೆಯಲ್ಲಿ ಸ್ಪರ್ಧೆಗೆ ಯಾವುದೇ ಸಮಸ್ಯೆಯಿಲ್ಲ. ಹಿರೇಕೆರೂರ ಕ್ಷೇತ್ರದಿಂದ ಮೂರು ಬಾರಿ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. 36 ವರ್ಷಗಳ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕನಾಗಿ ಗೆದ್ದು ಬಂದಿದ್ದೆ. ಆದರೆ ಕ್ಷೇತ್ರದ ಬೇಡಿಕೆಗಳಿಗೆ ಸಮ್ಮಿಶ್ರ ಸರಕಾರದಲ್ಲಿ ಮನ್ನಣೆ ನೀಡಲಿಲ್ಲ ಎಂದು ಹಿಂದಿನ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ವಜ್ಞ ಏತ ನೀರಾವರಿಗೆ ಶೀಘ್ರ ಚಾಲನೆ: ರಾಜ್ಯ ಸರ್ಕಾರದ ವತಿಯಿಂದ ಸರ್ವಜ್ಞ ಏತ ನೀರಾವರಿ ಯೋಜನೆಗೆ ಶೀಘ್ರ ಸಚಿವ ಸಂಪುಟ ಒಪ್ಪಿಗೆ ನೀಡಲಿದೆ. ಈ ಹಿಂದೆ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಸರ್ವಜ್ಞ ಏತ ನೀರಾವರಿ ಯೋಜನೆಗೆ ಸಮ್ಮಿಶ್ರ ಸರ್ಕಾರದಲ್ಲಿ ಒಪ್ಪಿಗೆ ಸಿಗಲಿಲ್ಲ, ಹಲವಾರು ಬಾರಿ ಇದಕ್ಕಾಗಿ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜವಾಗಲಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ವಜ್ಞ ಏತ ನೀರಾವರಿ ಯೋಜನೆಗೆ ಮಂಗಳವಾರ ಒಪ್ಪಿಗೆ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.
ದೇವಾಲಯ ಸಮಿತಿ ಅಧ್ಯಕ್ಷ ಜಿ.ಪಿ.ರವಿಶಂಕರ್ ಹಾಗೂ ದೇವಾಲಯದ ಸಿಬ್ಬಂದಿ ಮತ್ತಿತರರಿದ್ದರು.