ನೂತನ ತಾಲೂಕಿಗೆ ನನ್ನ ಕ್ಷೇತ್ರದ ಹಳ್ಳಿ ಸೇರಿಸಿದಲ್ಲಿ ರಕ್ತಪಾತವೇ ಆಗಲಿದೆ ಎಂದು ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ [ನ.06]: ನೂತನ ಮಂಚೇನಹಳ್ಳಿ ತಾಲೂಕಿಗೆ ಗೌರಿಬಿದನೂರು ತಾಲೂಕಿನ ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡಿದರೆ ಭಾರತ- ಪಾಕಿಸ್ತಾನ ವಿಭಜನೆ ವೇಳೆ ನಡೆದ ರಕ್ತಪಾತದ ಮಾದರಿಯಲ್ಲಿ ಗೌರಿಬಿದನೂರಿನಲ್ಲಿಯೂ ರಕ್ತಪಾತ ನಡೆಯಲಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಮಂಚೇನಹಳ್ಳಿ ನೂತನ ತಾಲೂಕಿಗೆ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಸೇರಿದಂತೆ ಹಲವು ಗ್ರಾಮಗಳನ್ನು ಸೇರ್ಪಡೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಮಂಗಳವಾರ ತೊಂಡೇಬಾವಿ ಗ್ರಾಮ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವಶಂಕರರೆಡ್ಡಿ, ಮಂಚೇನಹಳ್ಳಿ ತಾಲೂಕಿಗೆ ಗೌರಿಬಿದನೂರಿನ ಹಳ್ಳಿಗಳನ್ನು ಸೇರಿಸಿದರೆ ರಕ್ತಕ್ರಾಂತಿ ಆಗಲಿದೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವೇ ಜವಾಬ್ದಾರಿ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ಕಾರ ಅಧಿಕಾರದ ಮದದಿಂದ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದೆ. ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ಓಲೈಕೆಗಾಗಿ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡುವ ಜೊತೆಗೆ ಗೌರಿಬಿದನೂರಿನ ಗ್ರಾಮಗಳನ್ನು ಸೇರ್ಪಡೆಗೊಳಿಸಿದೆ ಎಂದು ಕಿಡಿ ಕಾರಿದರು.