ಇವಿ ಮಾರುಕಟ್ಟೆಗೆ ಬರಲಿದೆ ಟಾಟಾದ ಮತ್ತೆರಡು ಹೊಸ ಕಾರ್‌; ಸಿಂಗಲ್‌ ಚಾರ್ಜ್‌ನಲ್ಲಿ 500 ಕಿಮೀಗಿಂತಲೂ ಹೆಚ್ಚು ಮೈಲೇಜ್

Published : Jun 03, 2026, 10:09 PM IST
Tata Car

ಸಾರಾಂಶ

ಟಾಟಾ ಮೋಟಾರ್ಸ್ ಶೀಘ್ರದಲ್ಲೇ 'ಸಿಯೆರಾ ಇವಿ' ಮತ್ತು 'ಸಫಾರಿ ಇವಿ' ಎಂಬ ಎರಡು ಶಕ್ತಿಶಾಲಿ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ. ಸುಮಾರು 500 ರಿಂದ 600 ಕಿ.ಮೀ.ವರೆಗಿನ ಅದ್ಭುತ ಡ್ರೈವಿಂಗ್ ರೇಂಜ್ ಮತ್ತು ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಕಾರ್‌ ರಿಲೀಸ್‌ ಆಗಲಿದೆ.

ಮುಂಬೈ (ಜೂ.3): ಭಾರತೀಯ ಆಟೋಮೊಬೈಲ್ ರಂಗದ ದೈತ್ಯ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ತನ್ನ ಎಲೆಕ್ಟ್ರಿಕ್ ಕಾರ್ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲು ಸಿದ್ಧತೆ ನಡೆಸಿದೆ. ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ‘ಸಿಯೆರಾ ಇವಿ’ (Sierra EV) ಮತ್ತು ‘ಸಫಾರಿ ಇವಿ’ (Safari EV) ಎಂಬ ಎರಡು ಅತ್ಯಂತ ಶಕ್ತಿಶಾಲಿ ಹಾಗೂ ಬಲಿಷ್ಠ ಕಾರುಗಳನ್ನು ಲಾಂಚ್ ಮಾಡಲಿದೆ. ಆಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಲಿರುವ ಈ ಎರಡೂ ಕಾರ್‌ಗಳ ಮೇಲೆ ಸದ್ಯ ಗ್ರಾಹಕರ ಕಣ್ಣು ನೆಟ್ಟಿದೆ.

ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಟಾಟಾ ಮೋಟಾರ್ಸ್ ಈ ಎರಡು ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಪರಿಚಯಿಸುತ್ತಿದೆ. ಈ ಮುಂಬರುವ ಮಾಡೆಲ್‌ಗಳಲ್ಲಿ ಈಗಾಗಲೇ ಘೋಷಣೆಯಾಗಿರುವ ಸಿಯೆರಾ ಇವಿ ಸುಮಾರು 500 ಕಿಲೋಮೀಟರ್ ಹಾಗೂ ಸಫಾರಿ ಇವಿ ಬರೋಬ್ಬರಿ 600 ಕಿಲೋಮೀಟರ್‌ಗಳಷ್ಟು ಅದ್ಭುತ ಡ್ರೈವಿಂಗ್ ರೇಂಜ್ (ಮೈಲೇಜ್) ನೀಡುವ ಸಾಧ್ಯತೆಯಿದೆ. ಅತ್ಯುತ್ತಮ ರೇಂಜ್ ಮತ್ತು ಹೈಟೆಕ್ ಫೀಚರ್ಸ್‌ಗಳಿಂದಾಗಿ ಟಾಟಾದ ಈ ಎರಡೂ ಹೊಸ ಕಾರುಗಳ ಬಗ್ಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಈಗಿನಿಂದಲೇ ಭಾರಿ ಚರ್ಚೆ ಮತ್ತು ಕುತೂಹಲ ಆರಂಭವಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಈ ಸೆಗ್ಮೆಂಟ್‌ನಲ್ಲಿ ಈಗಾಗಲೇ ದೇಶದ ಅತಿ ದೊಡ್ಡ ಇವಿ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ತನ್ನ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಲು ಮುಂಬರುವ ವರ್ಷಕ್ಕಾಗಿ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆ. 2030ರ ವೇಳೆಗೆ ತನ್ನ ಒಟ್ಟು ವಾಹನ ಪೋರ್ಟ್‌ಫೋಲಿಯೊದಲ್ಲಿ ಎಲೆಕ್ಟ್ರಿಕ್ ಮಾಡೆಲ್‌ಗಳ ಪಾಲನ್ನು ಶೇಕಡಾ 30 ರಷ್ಟು ಹೆಚ್ಚಿಸುವ ಗುರಿಯನ್ನು ಟಾಟಾ ಹೊಂದಿದೆ. ಈ ಕಾರ್ಯತಂತ್ರದ ಭಾಗವಾಗಿಯೇ ಕಂಪನಿಯು ಸದ್ಯದಲ್ಲೇ ಸಿಯೆರಾ ಹಾಗೂ ಸಫಾರಿಯ ಎಲೆಕ್ಟ್ರಿಕ್‌ ಮಾದರಿಯನ್ನು ರಸ್ತೆಗಿಳಿಸಲಿದೆ.

ಜೂನ್‌ನಲ್ಲಿ ಎಂಟ್ರಿ ಕೊಡಬಹುದು 'ಸಿಯೆರಾ ಇವಿ'

ಟಾಟಾ ಸಿಯೆರಾ ಇವಿ ಕಾರು ಕಳೆದ ಹಲವು ದಿನಗಳಿಂದ ಆಟೋ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಂಪನಿಯು ಇದನ್ನು ಮುಂಬರುವ ಜೂನ್ 2026 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದರ ಬ್ಯಾಟರಿ ಮತ್ತು ಮೋಟಾರ್‌ನ ಅಧಿಕೃತ ವಿವರಗಳನ್ನು ಕಂಪನಿ ಇನ್ನೂ ಹಂಚಿಕೊಂಡಿಲ್ಲವಾದರೂ, ಸದ್ಯದಲ್ಲೇ ಬರಲಿರುವ ಹ್ಯಾರಿಯರ್ ಇವಿ (Harrier EV) ಕಾರಿನಂತೆಯೇ ಇದಕ್ಕೂ 65kWh ಮತ್ತು 75kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡಬಹುದು ಎಂದು ನಂಬಲಾಗಿದೆ. ಹೊಸ ಸಿಯೆರಾ ಇವಿ ಕಾರು ರಿಯರ್-ವೀಲ್ ಡ್ರೈವ್ (RWD) ಮತ್ತು ಆಲ್-ವೀಲ್‌ ಡ್ರೈವ್ (AWD) ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಈ ಕಾರು ಒಂದು ಬಾರಿ ಪೂರ್ಣ ಚಾರ್ಜ್ (Full Charge) ಮಾಡಿದರೆ 500 ಕಿಲೋಮೀಟರ್‌ವರೆಗೆ ಡ್ರೈವಿಂಗ್ ರೇಂಜ್ ಒದಗಿಸಲಿದ್ದು, ದೂರದ ಪ್ರಯಾಣವನ್ನು ಅತ್ಯಂತ ಸುಲಭ ಹಾಗೂ ಆರಾಮದಾಯಕವಾಗಿಸಲಿದೆ.

ಆಧುನಿಕ ಸೌಲಭ್ಯಗಳ ಮಹಾಪೂರ

ಸಿಯೆರಾ ಇವಿ ಕಾರಿನಲ್ಲಿ ಹಲವು ನವೀನ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇದರಲ್ಲಿ ವೆಹಿಕಲ್-ಟು-ಲೋಡ್ (V2L) ಮತ್ತು ವೆಹಿಕಲ್-ಟು-ವೆಹಿಕಲ್ (V2V) ಚಾರ್ಜಿಂಗ್‌ನಂತಹ ಅತ್ಯಾಧುನಿಕ ಫೀಚರ್ಸ್ ಸಿಗಲಿದ್ದು, ಇದರ ಸಹಾಯದಿಂದ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಥವಾ ಇತರ ಎಲೆಕ್ಟ್ರಿಕ್ ವಾಹನಗಳನ್ನೂ ಸಹ ಚಾರ್ಜ್ ಮಾಡಬಹುದಾಗಿದೆ. ಇನ್ನು ವಿನ್ಯಾಸದ (Design) ಬಗ್ಗೆ ಹೇಳುವುದಾದರೆ, ಇದು ಕ್ಲೋಸ್ಡ್ ಫ್ರಂಟ್ ಗ್ರಿಲ್, ಹೊಸ ಶೈಲಿಯ ಬಂಪರ್, ವಿಶೇಷ ಇವಿ ಬ್ಯಾಜಿಂಗ್ ಮತ್ತು ಏರೋಡೈನಾಮಿಕ್ ಅಲಾಯ್ ವೀಲ್‌ಗಳನ್ನು ಹೊಂದಿರಲಿದೆ. ಇದರ ಒಳಗಿನ ಕ್ಯಾಬಿನ್‌ ಅನ್ನು ಪ್ರೀಮಿಯಂ ಹಾಗೂ ಫ್ಯೂಚರಿಸ್ಟಿಕ್ (ಭವಿಷ್ಯದ ಮಾದರಿ) ಆಗಿ ರೂಪಿಸಲು ಹೆಚ್ಚಿನ ಒತ್ತು ನೀಡಲಾಗಿದೆ.

ಹಬ್ಬದ ಸೀಸನ್‌ನಲ್ಲಿ ಲಾಂಚ್ ಆಗಬಹುದು 'ಸಫಾರಿ ಇವಿ'

ಟಾಟಾ ಕಂಪನಿಯ ಅತ್ಯಂತ ಜನಪ್ರಿಯ 7-ಸೀಟರ್ ಎಸ್‌ಯುವಿ ಆಗಿರುವ 'ಸಫಾರಿ' ಕೂಡ ಶೀಘ್ರದಲ್ಲೇ ಎಲೆಕ್ಟ್ರಿಕ್ ಲುಕ್‌ನಲ್ಲಿ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇದರ ಉತ್ಪಾದನೆಯು (Production) ಆಗಸ್ಟ್ 2026 ರಿಂದ ಪ್ರಾರಂಭವಾಗಬಹುದು, ಹಾಗೂ ಮುಂಬರುವ ಹಬ್ಬಗಳ ಸೀಸನ್‌ನಲ್ಲಿ (Festive Season) ಇದನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಈ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಕಂಪನಿಯ ಸುಧಾರಿತ 'Acti.ev+' ಪ್ಲಾಟ್‌ಫಾರ್ಮ್ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ. ಪವರ್‌ಟ್ರೇನ್ ಮತ್ತು ಬ್ಯಾಟರಿ ಪ್ಯಾಕ್ ವಿಷಯದಲ್ಲಿ ಇದು ಹ್ಯಾರಿಯರ್ ಇವಿ ಕಾರಿಗೆ ಸಾಕಷ್ಟು ಹೋಲಿಕೆಯನ್ನು ಹೊಂದಿರಲಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಇದರ ಡ್ರೈವಿಂಗ್ ರೇಂಜ್ ಸುಮಾರು 600 ಕಿಲೋಮೀಟರ್ ಇರಬಹುದು ಎಂದು ಅಂದಾಜಿಸಲಾಗಿದೆ.

ಸುರಕ್ಷತೆ ಮತ್ತು ಕಂಫರ್ಟ್‌ಗೆ ಸೂಪರ್ ಪ್ಯಾಕೇಜ್

ಸಫಾರಿ ಇವಿ ಕಾರಿನಲ್ಲಿ ಮಲ್ಟಿ-ಲಿಂಕ್ ರಿಯರ್ ಸಸ್ಪೆನ್ಷನ್ ಮತ್ತು ವಿವಿಧ ಟೆರೈನ್ ಮೋಡ್‌ಗಳು (Terrain Modes) ಇರಲಿದ್ದು, ಇವು ಯಾವುದೇ ರೀತಿಯ ಕಠಿಣ ರಸ್ತೆ ಪರಿಸ್ಥಿತಿಗಳಲ್ಲೂ ಅತ್ಯುತ್ತಮ ಹಾಗೂ ಸುಗಮ ಡ್ರೈವಿಂಗ್ ಅನುಭವವನ್ನು ನೀಡಲಿವೆ. ಫೀಚರ್ಸ್‌ಗಳ ಪಟ್ಟಿಯನ್ನು ನೋಡುವುದಾದರೆ, ಇದರಲ್ಲಿ 540-ಡಿಗ್ರಿ ಕ್ಯಾಮೆರಾ, ಲೆವೆಲ್-2 ಎಡಿಎಎಸ್ (ADAS), ಒಟಿಎ (OTA) ಅಪ್ಡೇಟ್ಸ್, ಕ್ಲೋಸ್ಡ್ ಗ್ರಿಲ್ ಮತ್ತು ವಿಶೇಷ ಇವಿ ವಿನ್ಯಾಸದ ಎಲಿಮೆಂಟ್‌ಗಳು ಒಳಗೊಂಡಿರಲಿವೆ. ಈ ಎಲ್ಲಾ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಸಫಾರಿ ಇವಿ ಕಾರು ಟಾಟಾ ಕಂಪನಿಯ ಮುಂದಿನ ಹೊಸ ಫ್ಲ್ಯಾಗ್‌ಶಿಪ್ (ಮುಖ್ಯ) ಎಲೆಕ್ಟ್ರಿಕ್ ಎಸ್‌ಯುವಿ ಆಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ.

 

PREV
Read more Articles on
click me!

Recommended Stories

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!
ಸ್ಕಾರ್ಪಿಯೋ, ಥಾರ್ ಅಬ್ಬರಕ್ಕೆ ನಡುಗಿದ ಆಟೋ ಮಾರುಕಟ್ಟೆ: ಖುಷಿಯಿಂದ ಹಿಗ್ಗಿದ ಆನಂದ್‌ ಮಹೀಂದ್ರಾ