ಇತಿಹಾಸ ಸೃಷ್ಟಿಸಿದ Maruti Suzuki ಕಾರು: ಲಾಂಚ್‌ ಆದ ಮೂರೇ ವರ್ಷಗಳಲ್ಲಿ 5 ಲಕ್ಷ ಯುನಿಟ್‌ ಮಾರಾಟ!

Published : Jun 12, 2026, 07:06 PM IST
Maruti Suzuki Fronx

ಸಾರಾಂಶ

ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಕೇವಲ 3 ವರ್ಷಗಳಲ್ಲಿ 5 ಲಕ್ಷ ಯುನಿಟ್‌ಗಳ ಮಾರಾಟದ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ತನ್ನ ವಿಶಿಷ್ಟ ಕ್ರಾಸ್‌ಓವರ್ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ಸ್ಪರ್ಧಾತ್ಮಕ ಬೆಲೆಯ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ.

ಬೆಂಗಳೂರು (ಜೂ.12): ಮಾರುತಿ ಸುಜುಕಿ ಸಂಸ್ಥೆಯ ಪ್ರೀಮಿಯಂ 'ನೆಕ್ಸಾ' (NEXA) ಡೀಲರ್‌ಶಿಪ್‌ನ ಅತ್ಯಂತ ಜನಪ್ರಿಯ ಕ್ರಾಸ್‌ಓವರ್ ಕಾರು 'ಫ್ರಾಂಕ್ಸ್' (Fronx) ಆಟೋಮೊಬೈಲ್ ಜಗತ್ತಿನಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಕೇವಲ 3 ವರ್ಷಗಳ ಒಳಗಾಗಿ ಈ ಕಾರು ಬರೋಬ್ಬರಿ 5 ಲಕ್ಷ ಯುನಿಟ್‌ಗಳ ಮಾರಾಟದ ಗಡಿಯನ್ನು ದಾಟಿ ಐತಿಹಾಸಿಕ ದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡುವ ಮೂಲಕ, ನೆಕ್ಸಾ ನೆಟ್‌ವರ್ಕ್‌ನಲ್ಲಿ ಅತಿ ವೇಗವಾಗಿ 5 ಲಕ್ಷದ ಗಡಿ ತಲುಪಿದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂಗೆ ಭಾರಿ ಪೈಪೋಟಿ

ಭಾರತೀಯ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಮಾರುತಿ ಫ್ರಾಂಕ್ಸ್, ತನ್ನ ವಿಶಿಷ್ಟ ಕ್ರಾಸ್‌ಓವರ್ ವಿನ್ಯಾಸ ಮತ್ತು ದೃಢವಾದ ಕಾರ್ಯಕ್ಷಮತೆಯ (Performance) ಬಲದಿಂದ ಆಟೋ ಮಾರುಕಟ್ಟೆಯನ್ನು ಆಳುತ್ತಿದೆ. ಈ ಸೆಗ್ಮೆಂಟ್‌ನಲ್ಲಿ ಮುಂಚೂಣಿಯಲ್ಲಿದ್ದ ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ವೆನ್ಯೂ ಮುಂತಾದ ಜನಪ್ರಿಯ ಕಾರುಗಳನ್ನು ಹಿಂದಿಕ್ಕಿ ಫ್ರಾಂಕ್ಸ್ ಮುನ್ನುಗ್ಗಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ (CNG) ಆವೃತ್ತಿಗಳಲ್ಲಿ ಲಭ್ಯವಿರುವ ಈ ಕಾರಿನ ಆರಂಭಿಕ ಬೆಲೆ ಕೇವಲ 6.85 ಲಕ್ಷ ರೂಪಾಯಿ (ಎಕ್ಸ್ ಶೋರೂಮ್) ಇರುವುದು ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ಮುಖ್ಯ ಕಾರಣವಾಗಿದೆ.

3 ವರ್ಷಗಳ ಯಶಸ್ಸಿನ ಹಾದಿ: ವರ್ಷವಾರು ಮಾರಾಟದ ಅಂಕಿ-ಅಂಶ

ಮಾರುತಿ ಸುಜುಕಿ ಫ್ರಾಂಕ್ಸ್‌ನ ಯಶೋಗಾಥೆ ಆರಂಭವಾಗಿದ್ದು 2023 ರ ಏಪ್ರಿಲ್‌ನಲ್ಲಿ. ಅಂದಿನಿಂದ ಇಂದಿನವರೆಗೆ ಕಾರಿನ ಮಾರಾಟದ ಗ್ರಾಫ್ ನಿರಂತರವಾಗಿ ಏರುಗತಿಯಲ್ಲಿದೆ 2023ರ ಆರಂಭಿಕ ವರ್ಷದಲ್ಲಿ 94,393 ಯುನಿಟ್‌ಗಳು ಮಾರಾಟವಾಗಿದ್ದರೆ, 2024ರಲ್ಲಿ 1,56,236, 2025ರಲ್ಲಿ 1,79,894 ಯುನಿಟ್‌ ಹಾಗೂ 2026ರ ಮೊದಲ 5 ತಿಂಗಳಲ್ಲಿ 82,306 ಯುನಿಟ್‌ಗಳು ಮಾರಾಟವಾಗಿ ದಾಖಲೆ ಬರೆದಿದೆ.

ಫೆಬ್ರವರಿ 2025 ರಲ್ಲಿ ಮೊದಲ ಬಾರಿಗೆ ಮಾಸಿಕ 20,000 ಯುನಿಟ್‌ಗಳ ಮಾರಾಟದ ಗಡಿ ದಾಟಿದ್ದ ಫ್ರಾಂಕ್ಸ್, ಇತ್ತೀಚೆಗೆ ಮುಕ್ತಾಯಗೊಂಡ ಮೇ 2026 ರಲ್ಲೂ ಸಹ 20,686 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ತನ್ನ ಮಾರುಕಟ್ಟೆ ಪ್ರಭುತ್ವವನ್ನು ಕಾಯ್ದುಕೊಂಡಿದೆ. ಕಳೆದ ತಿಂಗಳು ಈ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಕೀರ್ತಿಗೂ ಇದು ಭಾಜನವಾಗಿದೆ.

ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿಯ ಅದ್ಭುತ ಕ್ರಾಸ್‌ಓವರ್

ಮಾರುತಿ ಫ್ರಾಂಕ್ಸ್ ಕಾರಿನ ಯಶಸ್ಸಿನ ಹಿಂದೆ ಕಂಪನಿಯ ಸ್ಮಾರ್ಟ್ ಮಾರುಕಟ್ಟೆ ತಂತ್ರಗಾರಿಕೆ (Positioning) ಅಡಗಿದೆ. ಮಾರುತಿ ಸುಜುಕಿ ಈ ಕಾರನ್ನು ಸಾಂಪ್ರದಾಯಿಕ ಹ್ಯಾಚ್‌ಬ್ಯಾಕ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ ಮಧ್ಯದ ಕ್ರಾಸ್‌ಓವರ್ ಆಗಿ ರೂಪಿಸಿದೆ. ಸಾಮಾನ್ಯ ಹ್ಯಾಚ್‌ಬ್ಯಾಕ್ ಕಾರುಗಳಿಂದ ಮೇಲ್ದರ್ಜೆಗೆ (Upgrade) ಹೋಗಲು ಬಯಸುವ ಮತ್ತು ಸ್ಟೈಲಿಶ್ ಲುಕ್ ಇಷ್ಟಪಡುವ ಗ್ರಾಹಕರಿಗೆ ಇದರ ಇಳಿಜಾರಾದ ರೂಫ್‌ಲೈನ್ (Sloping Roofline), ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಎಸ್‌ಯುವಿ ತರಹದ ಮಸ್ಕುಲರ್ ವಿನ್ಯಾಸವು ಬಹುವಾಗಿ ಇಷ್ಟವಾಗಿದೆ. ಹೀಗಾಗಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹಾಗೂ ಯುಟಿಲಿಟಿ ವೆಹಿಕಲ್ ಎರಡೂ ವಿಭಾಗದ ಗ್ರಾಹಕರಿಗೆ ಇದು ನೆಚ್ಚಿನ ಆಯ್ಕೆಯಾಗಿದೆ.

ಬೆಲೆ ವಿವರಗಳು (ಎಕ್ಸ್-ಶೋರೂಮ್)

ಪೆಟ್ರೋಲ್ ವೇರಿಯಂಟ್‌ನ ಈ ಕಾರು 6.85 ಲಕ್ಷ ರೂ. ನಿಂದ ಆರಂಭವಾಗಿ 11.98 ಲಕ್ಷ ರೂಪಾಯಿವರೆಗೆ ಇದೆ. ಸಿಎನ್‌ಜಿ ವೇರಿಯಂಟ್‌ನ ಫ್ರಾಂಕ್ಸ್ ಎರಡು ಆವೃತ್ತಿಗಳಲ್ಲಿ ಲಭ್ಯವಿದ್ದು, ಇವುಗಳ ಬೆಲೆ ಕ್ರಮವಾಗಿ 7.79 ಲಕ್ಷ ರೂ. ಮತ್ತು 8.59 ಲಕ್ಷ ರೂ. ಆಗಿದೆ.

ಟರ್ಬೋ ಇಂಜಿನ್ ಹಾಗೂ ಅತ್ಯಾಧುನಿಕ ಫೀಚರ್ಸ್

ಕಾರಿನ ತಾಂತ್ರಿಕ ಸಾಮರ್ಥ್ಯವನ್ನು ನೋಡುವುದಾದರೆ, ಇದರಲ್ಲಿ 1.2-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು ಹೆಚ್ಚು ಪವರ್‌ಫುಲ್ ಆದ 1.0-ಲೀಟರ್ ಬೂಸ್ಟರ್‌ಜೆಟ್ ಟರ್ಬೋ-ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ನೀಡಲಾಗಿದೆ. ಇದರೊಂದಿಗೆ ಕಂಪನಿ ಫಿಟೆಡ್ ಸಿಎನ್‌ಜಿ (Factory-fitted CNG) ಮಾದರಿಯೂ ಮೈಲೇಜ್ ಪ್ರಿಯರ ಗಮನ ಸೆಳೆದಿದೆ.

ಪ್ರಮುಖ ಫೀಚರ್ಸ್‌ಗಳು

ಇನ್ನು ಫೀಚರ್ಸ್‌ಗಳ ವಿಚಾರಕ್ಕೆ ಬರುವುದಾದರೆ, 9 ಇಂಚಿನ ಬೃಹತ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಈ ಕಾರ್‌ನಲ್ಲಿದೆ. ಅದರೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿ, 360-ಡಿಗ್ರಿ ಕ್ಯಾಮೆರಾ ಹಾಗೂ ಹೆಡ್-ಅಪ್ ಡಿಸ್ಪ್ಲೇ (HUD), ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಇದೆ.

ಮಾರುತಿಯ ವಿಶ್ವಾಸಾರ್ಹತೆಗೆ ಸಂದ ಜಯ

ಟಾಟಾ, ಹ್ಯುಂಡೈ, ಮಹೀಂದ್ರಾ, ಕಿಯಾ ಮತ್ತು ಸ್ಕೋಡಾದಂತಹ ಜಾಗತಿಕ ದೈತ್ಯ ಸಂಸ್ಥೆಗಳು ಪೈಪೋಟಿ ನೀಡುತ್ತಿರುವ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮಾರುತಿ ಸುಜುಕಿ ತನ್ನದೇ ಆದ ಛಾಪು ಮೂಡಿಸಿದೆ. ಸರಿಯಾದ ವಿನ್ಯಾಸ, ಸೂಕ್ತ ಸಮಯದ ಮಾರುಕಟ್ಟೆ ಪ್ರವೇಶ ಹಾಗೂ ದೇಶದ ಮೂಲೆ ಮೂಲೆಗೂ ವಿಸ್ತರಿಸಿರುವ ವಿಶ್ವಾಸಾರ್ಹ ಸರ್ವಿಸ್ ನೆಟ್‌ವರ್ಕ್ ಮೂಲಕ ಗ್ರಾಹಕರನ್ನು ಹೇಗೆ ಸೆಳೆಯಬಹುದು ಎಂಬುದನ್ನು ಮಾರುತಿ ಮತ್ತೊಮ್ಮೆ ಸಾಬೀತುಪಡಿಸಿದೆ. ಪವರ್, ಪರ್ಫಾರ್ಮೆನ್ಸ್, ಮಾಡರ್ನ್ ಫೀಚರ್ಸ್ ಹಾಗೂ ಅತ್ಯುತ್ತಮ ಮೈಲೇಜ್‌ನ ಪರಿಪೂರ್ಣ ಸಮ್ಮಿಲನವೇ ಫ್ರಾಂಕ್ಸ್ ಕಾರಿನ ಈ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿದೆ.

 

PREV
Read more Articles on
click me!

Recommended Stories

ಟಾಟಾ ನ್ಯಾನೋಗಿಂತಲೂ ಅಗ್ಗದ ಎಲೆಕ್ಟ್ರಿಕ್ ಕಾರ್ ಲಾಂಚ್‌ಗೆ ರೆಡಿ!: ಚಾರ್ಜಿಂಗ್ ಟೆನ್ಷನ್ ಇಲ್ಲ, ಕೇವಲ 2 ನಿಮಿಷದಲ್ಲಿ ಬ್ಯಾಟರಿ ಸ್ವಾಪ್ ಮಾಡಿ!
ಜೂನ್‌ ತಿಂಗಳಲ್ಲಿ ಮಾರುತಿ ಸುಜುಕಿ ಕಾರು ಖರೀದಿ ಮಾಡಿದ್ರೆ ಭಾರೀ ಡಿಸ್ಕೌಂಟ್‌, ಗ್ರಾಹಕರಿಗೆ ಸಿಗಲಿದೆ 2.15 ಲಕ್ಷದವರೆಗಿನ ಲಾಭ