ಹಳೇ ಕಾರು ಮಾರಾಟದ ಕಿರಿಕಿರಿಯೇ ಇಲ್ಲ: 3 ವರ್ಷದ ಬಳಿಕ ಶೇ. 75ರಷ್ಟು ಗ್ಯಾರಂಟಿ ಬೆಲೆ ನೀಡಲಿದೆ ಕಿಯಾ ಇಂಡಿಯಾ

Published : Oct 09, 2026, 09:02 PM IST
Kia Car

ಸಾರಾಂಶ

ಕಿಯಾ ಇಂಡಿಯಾ ಹಬ್ಬದ ಸೀಸನ್ ಪ್ರಯುಕ್ತ ತನ್ನ 'ಅಶ್ಯೂರ್ಡ್ ಬೈಬ್ಯಾಕ್ ಪ್ರೋಗ್ರಾಂ' ಅನ್ನು ವಿಸ್ತರಿಸಿದೆ. ಈ ಯೋಜನೆಯಡಿ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ 3 ವರ್ಷಗಳ ನಂತರ ಶೇ. 70 ರಿಂದ 75 ರಷ್ಟು ನಿಗದಿತ ಮರುಮಾರಾಟ ಮೌಲ್ಯ ಸಿಗಲಿದೆ.

ಬೆಂಗಳೂರು (ಅ.9): ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ 'ಕಿಯಾ ಇಂಡಿಯಾ' (Kia India) ಪ್ರಸ್ತುತ ಹಬ್ಬದ ಸೀಸನ್‌ನಲ್ಲಿ (Festive Season) ಕಾರು ಖರೀದಿದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೊಸ ಕಾರು ಖರೀದಿಸುವ ಸಮಯದಲ್ಲೇ ಅದರ ಭವಿಷ್ಯದ 'ರೀಸೇಲ್ ವ್ಯಾಲ್ಯೂ' (ಮರುಮಾರಾಟ ಮೌಲ್ಯ) ಅನ್ನು ನಿಗದಿಪಡಿಸುವ ಸಲುವಾಗಿ ಸಂಸ್ಥೆಯು ತನ್ನ 'ಅಶ್ಯೂರ್ಡ್ ಬೈಬ್ಯಾಕ್ ಪ್ರೋಗ್ರಾಂ' (Assured Buyback Program) ಅನ್ನು ವಿಸ್ತರಿಸಿದೆ. ಈ ಯೋಜನೆಯಡಿ ಪೆಟ್ರೋಲ್ ಮತ್ತು ಡೀಸೆಲ್ (ICE) ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ 3 ವರ್ಷಗಳ ನಂತರ ಶೇ. 75 ರಷ್ಟು ಹಾಗೂ ಎಲೆಕ್ಟ್ರಿಕ್ (EV) ಕಾರುಗಳಿಗೆ ಶೇ. 70 ರಷ್ಟು ನಿಗದಿತ ಮರುಮಾರಾಟ ಮೌಲ್ಯವನ್ನು (Fixed Resale Value) ಕಂಪನಿ ನೀಡಲಿದೆ.

ಗ್ರಾಹಕರು ತಮ್ಮ ಹಳೆಯ ಕಾರನ್ನು ಮಾರಾಟ ಮಾಡುವಾಗ ಅಥವಾ ಹೊಸ ಕಾರಿಗೆ ಅಪ್‌ಗ್ರೇಡ್ ಆಗುವಾಗ ಎದುರಿಸುವ ಬೆಲೆಯ ಅನಿಶ್ಚಿತತೆಯನ್ನು ತಡೆದು, ಅವರಿಗೆ ಪೂರ್ಣ ಭರವಸೆ ನೀಡುವುದು ಈ ಆಕರ್ಷಕ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯಾವೆಲ್ಲಾ ಮಾಡೆಲ್‌ಗಳಿಗೆ ಈ ಆಫರ್ ಸಿಗಲಿದೆ?

ಕಿಯಾ ಇಂಡಿಯಾ ಪ್ರಕಟಿಸಿರುವ ಈ 'ಅಶ್ಯೂರ್ಡ್ ಬೈಬ್ಯಾಕ್' ಯೋಜನೆಯಲ್ಲಿ ಸಂಸ್ಥೆಯ ಜನಪ್ರಿಯ ಮಾಡೆಲ್‌ಗಳಾದ ಕಿಯ ಸೋನೆಟ್ (Kia Sonet), ಸೈರೋಸ್ (Syros), ನ್ಯೂ ಸೆಲ್ಟೋಸ್ (New Seltos), ಕ್ಯಾರೆನ್ಸ್ (Carens), ಕ್ಯಾರೆನ್ಸ್ ಕ್ಲಾವಿಸ್ (Carens Clavis) ಹಾಗೂ ಸೊರೆಂಟೊ (Sorento) ಕಾರುಗಳು ಸೇರಿವೆ. ಹೊಸ ಕಾರು ಖರೀದಿಸುವ ವೇಳೆಯಲ್ಲೇ ಗ್ರಾಹಕರು ಕಿಯಾ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ ಸೂಕ್ತ ನಿಯಮಗಳು ಮತ್ತು ಅರ್ಹತೆಗಳನ್ನು ಪೂರೈಸಿ ಈ ಯೋಜನೆಗೆ ಸೇರ್ಪಡೆಗೊಳ್ಳಬಹುದಾಗಿದೆ.

3, 4 ಮತ್ತು 5 ವರ್ಷಗಳ ಕಾಲಾವಧಿಯ ಆಯ್ಕೆ

ಯೋಜನೆಯ ಭಾಗವಾಗಿ ಗ್ರಾಹಕರಿಗೆ ವಿಭಿನ್ನ ಕಾಲಾವಧಿಯ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ:

ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು: ಈ ಮಾದರಿಯ ಕಾರು ಖರೀದಿಸುವ ಗ್ರಾಹಕರು 3, 4 ಅಥವಾ 5 ವರ್ಷಗಳ 'ಬೈಬ್ಯಾಕ್' ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.

ಎಲೆಕ್ಟ್ರಿಕ್ ಕಾರುಗಳು (EV): ಇವಿ ಕಾರು ಗ್ರಾಹಕರಿಗೆ 3 ಅಥವಾ 4 ವರ್ಷಗಳ ಪ್ಲಾನ್ ಲಭ್ಯವಿರಲಿದೆ.

ಇದರೊಂದಿಗೆ, ವರ್ಷಕ್ಕೆ 10,000 ಕಿ.ಮೀ, 15,000 ಕಿ.ಮೀ ಅಥವಾ 20,000 ಕಿ.ಮೀ ಚಾಲನೆ ಮಾಡುವ ಆಯ್ಕೆಗಳಿದ್ದು, ಒಟ್ಟಾರೆ ಆಯ್ಕೆ ಮಾಡಿದ ಅವಧಿಯಲ್ಲಿ ಗರಿಷ್ಠ 1 ಲಕ್ಷ ಕಿಲೋಮೀಟರ್ ಓಟದ ಮಿತಿಯವರೆಗೆ ಈ ಯೋಜನೆ ಅನ್ವಯವಾಗಲಿದೆ. ಕಾರಿನ ಮರುಮಾರಾಟ ಮೌಲ್ಯವು ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಪ್ಲಾನ್ ಮತ್ತು ನಿಗದಿತ ಷರತ್ತುಗಳ ಮೇಲೆ ಆಧಾರಿತವಾಗಿರುತ್ತದೆ.

ಬೈಬ್ಯಾಕ್ ಯೋಜನೆಯಿಂದ ಗ್ರಾಹಕರಿಗಾಗುವ ಪ್ರಯೋಜನವೇನು?

ಈ ಯೋಜನೆಯ ಕುರಿತು ಮಾಹಿತಿ ಹಂಚಿಕೊಂಡ ಕಿಯಾ ಇಂಡಿಯಾದ ಹಿರಿಯ ಉಪಾಧ್ಯಕ್ಷ (ಸೇಲ್ಸ್ ಮತ್ತು ಮಾರ್ಕೆಟಿಂಗ್) ಸೂದ್, "ಕಾರಿನ ಭವಿಷ್ಯದ ಬೆಲೆಯ ಕುರಿತು ಗ್ರಾಹಕರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಮತ್ತು ಮುಂದಿನ ದಿನಗಳಲ್ಲಿ ಹೊಸ ಕಾರಿಗೆ ಸುಲಭವಾಗಿ ಅಪ್‌ಗ್ರೇಡ್ ಆಗಲು ನೆರವಾಗುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಕಾರು ಖರೀದಿಸುವ ಆರಂಭದಲ್ಲೇ ಅದರ ಭವಿಷ್ಯದ ಬೆಲೆ ತಿಳಿಯುವುದರಿಂದ ಗ್ರಾಹಕರು ತಮ್ಮ ಆರ್ಥಿಕ ಯೋಜನೆಯನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ತಿಳಿಸಿದ್ದಾರೆ.

ಪ್ರಸ್ತುತ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರು ಕಾರಿನ ಮೈಲೇಜ್, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯ ಜೊತೆಗೆ 'ರೀಸೇಲ್ ವ್ಯಾಲ್ಯೂ'ಗೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಯಾ ಇಂಡಿಯಾದ ಈ ಬೈಬ್ಯಾಕ್ ಕೊಡುಗೆಯು ಕಾರು ಮಾಲೀಕತ್ವದ ಅನುಭವವನ್ನು ಮತ್ತಷ್ಟು ಸುಲಭ ಹಾಗೂ ಲಾಭದಾಯಕವಾಗಿಸಲಿದೆ.

PREV
Read more Articles on
click me!

Recommended Stories

ಕಿಯಾ ಕಾರ್ನಿವಲ್ ಖರೀದಿ ಮಾಡ್ತೀರಾ? ಹಬ್ಬದವರೆಗೂ ಕಾಯಿರಿ, ಭರ್ಜರಿ ₹1.70 ಲಕ್ಷ ರೂ.ಗಳ ಬಂಪರ್ ಆಫರ್ ಪಡೆಯಿರಿ
ಭಾರತಕ್ಕೆ ಬರಲಿವೆ 2 ಹೊಸ ಎಸ್‌ಯುವಿಗಳು; ರೆನಾಲ್ಟ್ ಡಸ್ಟರ್ ಹೈಬ್ರಿಡ್, ಹೋಂಡಾ 0 ಆಲ್ಫಾ! ಹೊಸ ಎಸ್‌ಯುವಿಯ ವಿಶೇಷತೆಗಳೇನು?