ಆಟೋಮೊಬೈಲ್ ಇತಿಹಾಸದಲ್ಲೇ ಮಹಾ ದಾಖಲೆ: 382 ಕೋಟಿ ರೂ.ಗೆ ಮಾರಾಟವಾಯ್ತು ಫೆರಾರಿಯ ಮೊದಲ ಇವಿ ಕಾರು!

Published : Aug 18, 2026, 10:40 PM IST
ferrari luce ev car

ಸಾರಾಂಶ

ಫೆರಾರಿಯ ಚೊಚ್ಚಲ ಎಲೆಕ್ಟ್ರಿಕ್ ಕಾರು 'ಫೆರಾರಿ ಲ್ಯೂಸ್ ಚಾಸಿಸ್ ಒ' ದಾಖಲೆಯ 382 ಕೋಟಿ ರೂಪಾಯಿಗೆ ಹರಾಜಾಗಿದೆ, ಇದು ವಿಶ್ವದ ಅತ್ಯಂತ ದುಬಾರಿ ಇವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರನ್ನು ಅಮೆರಿಕದ ಉದ್ಯಮಿ ಹರ್ಬರ್ಟ್ ವರ್ಥೈಮ್ ಖರೀದಿಸಿದ್ದಾರೆ.

ನವದೆಹಲಿ (ಆ.18): ವೇಗ, ಕಾರ್ಯಕ್ಷಮತೆ ಹಾಗೂ ಐಷಾರಾಮಿ ಕಾರುಗಳಿಗೆ ವಿಶ್ವಪ್ರಸಿದ್ಧಿ ಪಡೆದಿರುವ ಫೆರಾರಿ (Ferrari) ಕಂಪನಿಯು ತನ್ನ ಚೊಚ್ಚಲ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಬೆಲೆ ಕೇಳಿ ಇಡೀ ಆಟೋಮೊಬೈಲ್ ಜಗತ್ತೇ ಬೆರಗಾಗಿದೆ. ಫೆರಾರಿ ಸಂಸ್ಥೆಯ ಮೊದಲ ಇವಿ ಕಾರು ಬರೋಬ್ಬರಿ 382 ಕೋಟಿ ರೂಪಾಯಿಗೆ (40 ಮಿಲಿಯನ್ ಅಮೆರಿಕನ್ ಡಾಲರ್) ಹರಾಜಾಗುವ ಮೂಲಕ ಜಗತ್ತಿನ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಕಾರು ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಜಗದ್ವಿಖ್ಯಾತ ಹರಾಜು ಸಂಸ್ಥೆಯಾದ ಬೊನ್‌ಹ್ಯಾಮ್ಸ್/ಸೋಥ್‌ಬೈಸ್ (Sotheby's) ಮೂಲಕ ಈ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಕಾರಿನ ಮೂಲ ಅಂದಾಜು ಮೌಲ್ಯಕ್ಕಿಂತ ಸುಮಾರು 35 ಪಟ್ಟು ಹೆಚ್ಚಿನ ಮೊತ್ತಕ್ಕೆ ಬಿಡ್ ಕೂಗಲಾಗಿದ್ದು, ಹರಾಜು ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲಾಗಿದೆ.

'ಲ್ಯೂಸ್' ಸರಣಿಯ ಮೊದಲ ಇವಿ ಕಾರಿನ ವಿನ್ಯಾಸ ಹಾಗೂ ವೈಶಿಷ್ಟ್ಯ

'ಫೆರಾರಿ ಲ್ಯೂಸ್ ಚಾಸಿಸ್ ಒ' (Chassis O Ferrari Luce) ಸಂಪೂರ್ಣವಾಗಿ ಬ್ಯಾಟರಿಯಿಂದ ಚಲಿಸುವ ಎಲೆಕ್ಟ್ರಿಕ್ ಕಾರಾಗಿದೆ. ಆಪಲ್ ಕಂಪನಿಯ ಮಾಜಿ ಚೀಫ್ ಡಿಸೈನ್ ಆಫೀಸರ್ ಹಾಗೂ ಐಫೋನ್ ವಿನ್ಯಾಸಕ ಸರ್ ಜಾನಿ ಐವ್ (Sir Jony Ive) ಅವರ 'ಲವ್‌ಫ್ರಮ್' (LoveFrom) ಸ್ಟುಡಿಯೋ ಸಹಯೋಗದೊಂದಿಗೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ.

ಬಣ್ಣದ ವಿಶೇಷತೆ: ಈ ಶ್ವೇತವರ್ಣದ ಕಾರಿಗೆ 'ಮದ್ರೆಪೆರ್ಲಾ' (Madreperla) ಹೆಸರಿನ ವಿಶೇಷ ಸೆಮಿ-ಗ್ಲಾಸ್ ಬಣ್ಣವನ್ನು ಬಳಸಲಾಗಿದೆ. ಬೆಳಕಿನ ತೀವ್ರತೆ ಮತ್ತು ವಿಭಿನ್ನ ಕೋನಗಳಿಗೆ ಅನುಗುಣವಾಗಿ ಕಾರಿನ ಬಣ್ಣವು ಹಸಿರಿನಿಂದ ನೇರಳೆ (ಪರ್ಪಲ್) ಬಣ್ಣಕ್ಕೆ ಬದಲಾಗುವ ಅದ್ಭುತ ನೋಟವನ್ನು ಹೊಂದಿದೆ.

ಆಸನ ವ್ಯವಸ್ಥೆ: ಈ ಕಾರು 4 ಬಾಗಿಲುಗಳು ಹಾಗೂ 5 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ.

ಉತ್ಪಾದನೆ: ಇಟಲಿಯ ಮರನೆಲ್ಲೊದಲ್ಲಿ ಈ ಕಾರುಗಳನ್ನು ಜೋಡಣೆ (ಅಸೆಂಬಲ್) ಮಾಡಲಾಗುತ್ತಿದ್ದು, 2027ರ ಆರಂಭದಲ್ಲಿ ಗ್ರಾಹಕರ ಕೈಸೇರಲಿದೆ.

ಎಂಜೈನ್ ಮತ್ತು ಕಾರ್ಯಕ್ಷಮತೆ (Performance)

ಫೆರಾರಿ ಲ್ಯೂಸ್ ಕಾರಿನಲ್ಲಿ ಕ್ವಾಡ್-ಮೋಟಾರ್ ಆಲ್-ವೀಲ್ ಡ್ರೈವ್ ಸಿಸ್ಟಮ್ ನೀಡಲಾಗಿದೆ.

ಪವರ್ & ಟಾರ್ಕ್: ಇದು 1,050hp ಪವರ್ ಹಾಗೂ 990Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟಾಪ್ ಸ್ಪೀಡ್: ಗಂಟೆಗೆ 310 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ.

ಡ್ರೈವಿಂಗ್ ರೇಂಜ್: ಒಂದೇ ಚಾರ್ಜ್‌ನಲ್ಲಿ 530 ಕಿ.ಮೀ ಗಿಂತಲೂ ಹೆಚ್ಚು ದೂರ ಕ್ರಮಿಸಲಿದೆ.

ಫೆರಾರಿ ಕಂಪನಿಯ 'ಟೇಲರ್ ಮೇಡ್' ಪ್ರೋಗ್ರಾಂ ಅಡಿಯಲ್ಲಿ ಅತ್ಯಂತ ವಿಶೇಷ ಫೀಚರ್‌ಗಳೊಂದಿಗೆ ಈ ಕಾರನ್ನು ಸಿದ್ಧಪಡಿಸಲಾಗಿದೆ.

382 ಕೋಟಿ ರೂ. ನೀಡಿ ಕಾರು ಖರೀದಿಸಿದ ಉದ್ಯಮಿ ಯಾರು?

ಹರಾಜು ಸಂಸ್ಥೆಯು ಅಧಿಕೃತವಾಗಿ ಖರೀದಿದಾರರ ಹೆಸರನ್ನು ಬಹಿರಂಗಪಡಿಸದಿದ್ದರೂ, ಕಾನೂನು ದಾಖಲೆಗಳ ಪ್ರಕಾರ ಅಮೆರಿಕದ ಪ್ರಸಿದ್ಧ ಉದ್ಯಮಿ, ಸಂಶೋಧಕ ಹಾಗೂ ಕೋಟ್ಯಧಿಪತಿ ಹರ್ಬರ್ಟ್ ವರ್ಥೈಮ್ (Herbert Wertheim) ಅವರು ಈ ಕಾರನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. 87 ವರ್ಷದ ಹರ್ಬರ್ಟ್ ವರ್ಥೈಮ್ ಅವರಿಗೆ ಹಳೆಯ ಹಾಗೂ ವಿಶೇಷ ಕಾರುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಅವರು ಈ ಹಿಂದೆ ಫೆರಾರಿಯ 'ಡೇಟೋನಾ SP3' (Daytona SP3) ಕಾರನ್ನು ಸಹ 26 ಮಿಲಿಯನ್ ಡಾಲರ್ (ಸುಮಾರು 215 ಕೋಟಿ ರೂ.) ನೀಡಿ ಖರೀದಿಸಿ ಸುದ್ದಿಯಾಗಿದ್ದರು.

PREV
Read more Articles on
click me!

Recommended Stories

Car News; ಸ್ಟೈಲಿಶ್ ಲುಕ್, ಪವರ್‌ಫುಲ್ ಎಂಜಿನ್; ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧುಮುಕಿದ ಸ್ಕೋಡಾ ಸ್ಲಾವಿಯಾ!
25 ಲೀಟರ್ ನೀರಿನ ಬದಲು 100 ಮಿಲಿ ಸಾಕು, ಪುಣೆಯ ನಿತಿನ್‌ ಮಾಡಿದ ಈ ‘ವಾಟರ್‌ಲೆಸ್’ ಕಾರ್ ವಾಶ್‌ ಈಗ ಭಾರೀ ಸದ್ದು