
ಹಬ್ಬ ಬರ್ತಿದ್ದಂತೆ ಜನರ ಖರೀದಿ ಹೆಚ್ಚಾಗುತ್ತೆ. ಅದ್ರಲ್ಲೂ ವಿಜಯ ದಶಮಿ ದಿನ ವಾಹನ ಖರೀದಿದಾರರ ಸಂಖ್ಯೆ ಹೆಚ್ಚು. ಈ ಬಾರಿ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಹಬ್ಬದ ಸಂದರ್ಭದಲ್ಲಿ ಕಂಪನಿಯು 50 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡಿದೆ.
ವಿಶೇಷ ಅಂದ್ರೆ ದಶಮಿಯ ಒಂದೇ ದಿನ ಟಾಟಾ ಮೋಟಾರ್ಸ್ ನ 10 ಸಾವಿರ ಕಾರುಗಳು ಮಾರಾಟವಾಗಿವೆ. ಟಾಟಾ ಮೋಟಾರ್ಸ್ನ ಕಾರುಗಳು ಮತ್ತು ಎಸ್ಯುವಿಗಳಿಗೆ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಕಳೆದ ಹಲವು ತಿಂಗಳ ಮಾರಾಟದ ದಾಖಲೆಗಳನ್ನು ಗಮನಿಸಿದರೆ, ದೇಶದಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಕಂಪನಿಗಳ ಪೈಕಿ ಟಾಟಾ ಮೋಟಾರ್ಸ್ ಎರಡನೇ ಸ್ಥಾನದಲ್ಲಿದೆ.
ಗ್ರಾಹಕರ ವಿಶ್ವಾಸ ಹೆಚ್ಚಾಗಿರುವುದರಿಂದ ಶೋರೂಮ್ಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಕಾರುಗಳ ಬಗ್ಗೆ ವಿಚಾರಣೆ ನಡೆಸುವುದು, ಬುಕ್ಕಿಂಗ್ ಮಾಡುವುದು ಮತ್ತು ಹೊಸ ವಾಹನಗಳನ್ನು ಡೆಲಿವರಿ ಪಡೆಯುವ ಪ್ರಕ್ರಿಯೆಯೂ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ನ ಮುಖ್ಯ ವಾಣಿಜ್ಯ ಅಧಿಕಾರಿ ಅಮಿತ್ ಕಾಮತ್ ಅವರ ಪ್ರಕಾರ, ಹಬ್ಬದ ಸಮಯದಲ್ಲಿ ಗ್ರಾಹಕರ ಉತ್ಸಾಹ ಹೆಚ್ಚಾಗಿದೆ. ವಿವಿಧ ಪವರ್ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿರುವ ಕಂಪನಿಯ ಕಾರುಗಳು ಮತ್ತು ಎಸ್ಯುವಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನವರಾತ್ರಿ ಸಂದರ್ಭದಲ್ಲಿ ಗ್ರಾಹಕರಿಂದ ವಿಶೇಷವಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಹಬ್ಬದ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಡೆಲಿವರಿ ಮಾಡಲಾಗಿದ್ದು, ದಸರಾ ದಿನವೊಂದರಲ್ಲೇ 10 ಸಾವಿರಕ್ಕೂ ಹೆಚ್ಚು ವಾಹನಗಳು ಗ್ರಾಹಕರ ಕೈ ಸೇರಿವೆ ಎಂದು ಅವರು ತಿಳಿಸಿದ್ದಾರೆ.
ನವರಾತ್ರಿ ಕಾರು ಮಾರಾಟದಲ್ಲಿ ಎಷ್ಟು ಬೆಳವಣಿಗೆ?
ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ನವರಾತ್ರಿ ಸಂದರ್ಭದಲ್ಲಿ ದೇಶದಲ್ಲಿ ಒಟ್ಟು 1,82,728 ಕಾರುಗಳು ಮಾರಾಟವಾಗಿವೆ.
• 2024ರ ನವರಾತ್ರಿ: 1,65,534 ಕಾರುಗಳ ಮಾರಾಟ.
• 2026ರ ನವರಾತ್ರಿ: 1,82,728 ಕಾರುಗಳ ಮಾರಾಟ.
• ಬೆಳವಣಿಗೆ: ಶೇಕಡಾ 10.39
2024ರ ನವರಾತ್ರಿಗೆ ಹೋಲಿಸಿದರೆ ಈ ಬಾರಿ ಕಾರು ಮಾರಾಟದಲ್ಲಿ ಶೇಕಡಾ 10.39ರಷ್ಟು ಬೆಳವಣಿಗೆಯಾಗಿದೆ. ಆದರೆ, 2025ರ ನವರಾತ್ರಿಗೆ ಹೋಲಿಸಿದರೆ ಮಾರಾಟದಲ್ಲಿ ಶೇಕಡಾ 21.91ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ನವರಾತ್ರಿ 11 ದಿನಗಳ ಕಾಲ ನಡೆದಿದ್ದರೆ, ಈ ಬಾರಿ 10 ದಿನಗಳ ಕಾಲ ಮಾತ್ರ ನಡೆದಿರುವುದು ಮಾರಾಟದ ಅಂಕಿಅಂಶಗಳ ಮೇಲೆ ಪರಿಣಾಮ ಬೀರಿದೆ ಎಂದು FADA ತಿಳಿಸಿದೆ. ಒಟ್ಟಿನಲ್ಲಿ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ನ ಕಾರುಗಳಿಗೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆ ದೀಪಾವಳಿ ಮಾರಾಟದ ಮೇಲೂ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ.