2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಲು ಏನೇನು ಬೇಕು ಎಂಬ ದೂರದೃಷ್ಟಿಯನ್ನು ಹೊಂದುವ ಸಾಧ್ಯತೆ ಇದೆ. ಹೀಗಾಗಿ ನಿರ್ಮಲಾ ಬಜೆಟ್ ನಿರೀಕ್ಷೆ ಏನೇನು ಎಂಬ ಕಿರುಮಾಹಿತಿ ಇಲ್ಲಿದೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆಯ 7ನೇ ಹಾಗೂ ಮೋದಿ-3 ಸರ್ಕಾರದ ಮೊದಲ ಬಜೆಟ್ ಅನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಮೋದಿ ಅವರ ಮೂರನೇ ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ಮುಂದಿನ 5 ವರ್ಷಗಳ ದಿಕ್ಸೂಚಿ ಬಜೆಟ್ ಆಗುವ ಸಾಧ್ಯತೆ ಇದೆ. ಅಲ್ಲದೆ, 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಲು ಏನೇನು ಬೇಕು ಎಂಬ ದೂರದೃಷ್ಟಿಯನ್ನು ಹೊಂದುವ ಸಾಧ್ಯತೆ ಇದೆ. ಹೀಗಾಗಿ ನಿರ್ಮಲಾ ಬಜೆಟ್ ನಿರೀಕ್ಷೆ ಏನೇನು ಎಂಬ ಕಿರುಮಾಹಿತಿ ಇಲ್ಲಿದೆ.
ವರ್ಷಕ್ಕೆ 1.2 ಕೋಟಿ ಉದ್ಯೋಗ ಸೃಷ್ಟಿ ಗುರಿ
undefined
ಭಾರತದ ಅಭಿವೃದ್ಧಿ ಹೊಂದಿದ ದೇಶ ಆಗಲು ವರ್ಷಕ್ಕೆ ಕನಿಷ್ಠ 1.2 ಕೋಟಿ ಉದ್ಯೋಗ ಸೃಷ್ಟಿ ಅಗತ್ಯ. ಆದರೆ ಪ್ರಸ್ತುತ ದೇಶದಲ್ಲಿ ಭಾರತವು ವರ್ಷಕ್ಕೆ 80ರಿಂದ 90 ಲಕ್ಷ ಉದ್ಯೋಗ ಮಾತ್ರ ಸೃಷ್ಟಿ ಆಗುತ್ತಿದೆ. ಹೀಗಾಗಿ ಈ. ಸಮಸ್ಯೆಯನ್ನು ಪರಿಹರಿಸಲು ಹಾಗೂ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಸರ್ಕಾರವು ಕಂಪನಿಗಳಿಗೆ ಉದ್ಯೋಗ ಸಂಯೋಜಿತ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಪರಿಚಯಿಸುವ ಸಾಧ್ಯತೆ ಇದೆ.
ಕೃಷಿ ಸಂಶೋಧನೆಗೆ ದ್ವಿಗುಣ ಮೊತ್ತ ಸಂಭವ
ಬದಲಾದ ಪರಿಸ್ಥಿತಿಯಲ್ಲಿ ಆಹಾರ ಉತ್ಪಾದನೆಗೆ ಎಲ್ಲಿಲ್ಲದ ಮಹತ್ವ ಬಂದಿದ್ದು, ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ ಆಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏಕೆಂದರೆ ಹಲವು ವಿದೇಶಗಳು ಯುದ್ಧದಲ್ಲಿ ತೊಡಗಿರುವ ಕಾರಣ ಆಹಾರ ಧಾನ್ಯಗಳ ಮೇಲೆ ಅವುಗಳ ಮೇಲೆ ಅವಲಂಬಿತ ಆಗುವಂತಿಲ್ಲ. ಅದಕ್ಕೆಂದೇ ಹೆಚ್ಚು ಆಹಾರ ಉತ್ಪಾದನೆಗೆ ನೆರವಾಗುವ ತಳಿಗಳ ಸಂಶೋಧನೆ ಅಗತ್ಯವಾಗಿದ್ದು, ಕೃಷಿ ಸಂಶೋಧನಾ ಮೊತ್ತ ಕಳೆದ ಸಲದ 9,941 ಕೋಟಿ ರು.ಗಿಂತ ದುಪ್ಪಟ್ಟಾಗುವ ಸಾಧ್ಯತೆ ಇದೆ.
ಪಿಎಂ ಕಿಸಾನ್ ಮೊತ್ತ ಹೆಚ್ಚಳ?
ಪ್ರಸ್ತುತ ವಾರ್ಷಿಕ 6,000 ರು. ಇರುವ ಪಿಎಂ-ಕಿಸಾನ್ ಯೋಜನೆ ಸಹಾಯಧನವನ್ನು ಹೆಚ್ಚಿಸುವ ಸಂಭವ ಇದೆ. ಜತೆಗೆ ಬೆಂಬಲ ಬೆಲೆ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಸಮರ ಸಾರಿರುವ ಕಾರಣ ಆ ಬಗ್ಗೆಯೂ ಕೆಲ ಮಹತ್ವದ ಘೋಷಣೆಗಳ ಸಾಧ್ಯತೆ ಇದೆ.
80ಸಿ ಅಡಿ ತೆರಿಗೆ ವಿನಾಯ್ತಿ ಹೆಚ್ಚಳ ಸಂಭವ
80ಸಿ ಅಡಿ 2014ರಿಂದ ತೆರಿಗೆ ವಿನಾಯಿತಿ ಮಿತಿ ಕಳೆದ 10 ವರ್ಷಗಳಿಂದ 1.5 ಲಕ್ಷ ರು.ನಲ್ಲೇ ಇದ್ದು, ಬದಲಾಗಿಲ್ಲ, ಇದು 3 ಲಕ್ಷ ರು.ಗೆ ಹೆಚ್ಚಳ ಸಂಭವವಿದೆ. ಇದರಿಂದ ಜೀವ ವಿಮೆ, ನಿಶ್ಚಿತ ಠೇವಣಿ, ಬಾಂಡ್, ವಸತಿ ಹಾಗೂ ಪಿಪಿಎಫ್‌ನಂತಹ ಸಾಧನಗಳಲ್ಲಿ ಹಣ ವಿನಿಯೋಗಿಸಿ ಸೆಕ್ಷನ್ 80ಸಿ ಅಡಿ 3 ಲಕ್ಷ ರು.ವರೆಗಿನ ಆದಾಯದವರೆಗೆ ವಿನಾಯ್ತಿ ಗಿಟ್ಟಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?
ವಿನಾಯಿತಿ ಮಿತಿಯನ್ನು 3 ಲಕ್ಷ ರು.ನಿಂದ 5 ಲಕ್ಷ ರು.ಗೆ ಹೆಚ್ಚಿಸುವ ಸಂಭವವಿದೆ. ತೆರಿಗೆ ಸ್ಲಾಬ್‌ಗಳಲ್ಲಿ ಕೂಡ ಬದಲಾವಣೆ ನಿರೀಕ್ಷಿಸಲಾಗಿದೆ. ಶೇ.30ರ ತೆರಿಗೆ ಸ್ಲಾಬ್ ಅನ್ನು ಪ್ರಸ್ತುತ ಇರುವ 15 ಲಕ್ಷ ರು.ನಿಂದ 30 ಲಕ್ಷ ರು.ಗೆ ಏರಿಸುವ ಸಾಧ್ಯತೆ ಇದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಊಹಾಪೋಹಗಳಿವೆ. ಇನ್ನು ಪ್ರಸ್ತುತ ಇರುವ 10 ಸಾವಿರ ರು.ವರೆಗಿನ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ವಿನಾಯ್ತಿ ಹೆಚ್ಚಳ ಸಂಭವವಿದೆ.
ಉದ್ದಿಮೆ, ಮೂಲಸೌಕರ್ಯಕ್ಕೆ ಒತ್ತು
ವಿಕಸಿತ ಭಾರತದ ನಿರ್ಮಾಣಕ್ಕೆ ಮೂಲಸೌಕರ್ಯಕ್ಕೆ ಉತ್ತೇಜನ ಅತ್ಯಗತ್ಯ. ಅದಕ್ಕೆಂದೇ ಉತ್ಪಾದನೆ, ಕೈಗೆಟಕುವ ವಸತಿ, ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಮತ್ತು ಬೃಹತ್ ಉದ್ದಿಮೆಗಳಿಗೆ ಇರುವ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಹೆಚ್ಚಳ ಸಂಭವವಿದೆ.
ರೈಲ್ವೆ ಸುರಕ್ಷತೆಗೆ ಹೆಚ್ಚು ಆದ್ಯತೆ
ಈವರೆಗೆ ವಂದೇಭಾರತ್, ಬುಲೆಟ್ ರೈಲು, ಅತ್ಯಾಧುನಿಕ ರೈಲು ನಿಲ್ದಾಣ ನಿರ್ಮಾಣ, ಡಬ್ಲಿಂಗ್, ವಿದ್ಯುದೀಕರಣ- ಇತ್ಯಾದಿಗಳತ್ತ ಹೆಚ್ಚು ಗಮನಹರಿಸಲಾಗಿತ್ತು. ಆದರೆ ಕಳೆದ ವರ್ಷ ಮತ್ತು ಈ ವರ್ಷ ಹೆಚ್ಚು ರೈಲು ಅಪಘಾತಗಳು ಸಂಭವಿಸಿವೆ. ಹೀಗಾಗಿ ರೈಲು ಅಪಘಾತ ತಪ್ಪಿಸುವ ಕವಚ ಯೋಜನೆ ಜಾರಿಗೆ ಹೆಚ್ಚು ಅನುದಾನ ನೀಡುವ ಸಂಭವವಿದೆ. ಜತೆಗೆ ರೈಲು ಚಾಲಕ, ಸಿಬ್ಬಂದಿಗಳಿಗೆ ಸುರಕ್ಷತಾ ತರಬೇತಿ, ಸುರಕ್ಷತಾ ಅಧ್ಯಯನಕ್ಕೆ ಆದ್ಯತೆ ನೀಡುವ ನಿರೀಕ್ಷೆಯಿದೆ.