ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್; ವಿಕಸಿತ ಭಾರತದ ಕನಸಿಗೆ ಅಡಿಪಾಯ ಹಾಕುತ್ತಾ?
2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ಇದ್ದ ಹಿನ್ನೆಲೆಯಲ್ಲಿ ಹಿಂದಿನ ಮೋದಿ ಸರ್ಕಾರ ಕಳೆದ ಫೆಬ್ರವರಿ ತಿಂಗಳಲ್ಲಿ ಮಧ್ಯಂತರ ಬಜೆಟ್ ಮಂಡಿಸಿತ್ತು. ಯಾವುದೇ ಮಹತ್ವದ ಘೋಷಣೆ ಆಗಿರಲಿಲ್ಲ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಕೇಂದ್ರ ಸರ್ಕಾರದ ಮೊದಲ ಬಜೆಟ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಆಗಲಿದೆ. ದಾಖಲೆಯ ಸತತ 7ನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡಪತ್ರ ಮಂಡಿಸಲಿದ್ದಾರೆ. ಇದೇ ವೇಳೆ ಇದು ಮುಂದಿನ 5 ವರ್ಷದ ‘ದಿಕ್ಸೂಚಿ ಬಜೆಟ್’ ಆಗಲಿದ್ದು, 2047ರಲ್ಲಿ ‘ವಿಕಸಿತ ಭಾರತ’ದ (ಅಭಿವೃದ್ಧಿ ಹೊಂದಿದ ಭಾರತ) ಕನಸನ್ನು ನನಸಾಗಿಸುವ ಅಡಿಪಾಯ ಹಾಕುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಬಜೆಟ್ ಮಹತ್ವಾಕಾಂಕ್ಷಿಯಾಗಿರಲಿದೆ ಹಾಗೂ ದೊಡ್ಡ ದೊಡ್ಡ ಘೋಷಣೆ ಮಾಡುವ ಸಂಭವವಿದೆ ಎಂದು ಸುಳಿವು ನೀಡಿದ್ದಾರೆ.
ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಇದು ಮೊದಲ ಬಜೆಟ್ ಆಗಿದೆ. 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ಇದ್ದ ಹಿನ್ನೆಲೆಯಲ್ಲಿ ಹಿಂದಿನ ಮೋದಿ ಸರ್ಕಾರ ಕಳೆದ ಫೆಬ್ರವರಿ ತಿಂಗಳಲ್ಲಿ ಮಧ್ಯಂತರ ಬಜೆಟ್ ಮಂಡಿಸಿತ್ತು. ಯಾವುದೇ ಮಹತ್ವದ ಘೋಷಣೆ ಆಗಿರಲಿಲ್ಲ.
ನಿರ್ಮಲಾ ಸೀತಾರಾಮನ್ ದಾಖಲೆಯ 7ನೇ ಬಜೆಟ್
ನಿರ್ಮಲಾ ಸೀತಾರಾಮನ್ ಈ ಬಜೆಟ್ ಮಂಡನೆಯೊಂದಿಗೆ ಸತತ 7 ಬಜೆಟ್ ಮಂಡಿಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸತತ 6 ಬಜೆಟ್ ಮಂಡಿಸಿದ ಮೊರಾರ್ಜಿ ದೇಸಾಯಿ ದಾಖಲೆ ಮುರಿಯಲಿದ್ದಾರೆ. ನಿರ್ಮಲಾ ಈಗಾಗಲೇ ಸತತ 5 ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಚಿದಂಬರಂ ಮತ್ತು ಯಶವಂತ ಸಿನ್ಹಾ ದಾಖಲೆ ಮುರಿದ್ದಾರೆ. ಆದರೆ ಒಟ್ಟಾರೆ (ಸತತ ಅಲ್ಲ) 10 ಬಜೆಟ್ ಮಂಡಿಸಿದ ದಾಖಲೆ ಈಗಲೂ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಹೆಸರಲ್ಲೇ ಇದೆ.
ಬಜೆಟ್ ಹೇಗಿರಲಿದೆ ಎಂಬುದರ ಮಹತ್ವದ ಸುಳಿವು ನೀಡಿದ ಪ್ರಧಾನಿ ಮೋದಿ
60 ವರ್ಷಗಳ ನಂತರ ಸರ್ಕಾರವು 3ನೇ ಬಾರಿಗೆ ಮರಳಿ ಬಂದು 3ನೇ ಅವಧಿಯ ಮೊದಲ ಬಜೆಟ್ ಅನ್ನು ಮಂಡಿಸುವ ಸೌಭಾಗ್ಯವನ್ನು ಪಡೆದಿರುವುದು ಹೆಮ್ಮೆಯ ವಿಷಯ. ಮಂಗಳವಾರದ ಕೇಂದ್ರ ಬಜೆಟ್ ಮುಂದಿನ 5 ವರ್ಷಗಳ ಪಯಣದ ದಿಕ್ಸೂಚಿಯಾಗಲಿದೆ ಮತ್ತು 2047ರಲ್ಲಿ ‘ವಿಕಸಿತ್ ಭಾರತ್’ ಕನಸನ್ನು ನನಸಾಗಿಸಲು ಅಡಿಪಾಯ ಹಾಕುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್ ನಿರೀಕ್ಷೆಗಳು
- ವಿಕಸಿತ ಭಾರತದ ನಿರ್ಮಾಣಕ್ಕೆ ಮೂಲಸೌಕರ್ಯಕ್ಕೆ ಉತ್ತೇಜನ ಅತ್ಯಗತ್ಯ. ಅದಕ್ಕೆಂದೇ ಉತ್ಪಾದನೆ, ಕೈಗೆಟುಕುವ ವಸತಿ, ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ
- ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಮತ್ತು ಬೃಹತ್ ಉದ್ದಿಮೆಗಳಿಗೆ ಇರುವ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಹೆಚ್ಚಳ ಸಂಭವ
- ಉದ್ಯೋಗ ಸೃಷ್ಟಿ ಸರ್ಕಾರದ ಮುಂದಿರುವ ಸವಾಲು. ಇಕ್ಕೆಂದೇ ಕಂಪನಿಗಳಿಗೆ ಉದ್ಯೋಗ ನೀಡಿಕೆ ಆಧರಿತ ಪ್ರೋತ್ಸಾಹಧನ ಯೋಜನೆ ಘೋಷಣೆ ಸಾಧ್ಯತೆ
- ಕೃಷಿ ಸಂಶೋಧನೆಗೆ ಕಳೆದ ವರ್ಷ ನೀಡಿದ್ದ 9,941 ಕೋಟಿ ರು. ಮೊತ್ತ ಈ ಸಲ ದ್ವಿಗುಣ ಸಾಧ್ಯತೆ, ರೈತರನ್ನು ಉತ್ತೇಜಿಸಲು ಹಾಗೂ ಆಹಾರ ಕೊರತೆ ನೀಗಿಸಲು ಕೃಷಿ ಸಂಶೋಧನೆಗೆ ಒತ್ತು ಸಂಭವ
- ಪ್ರಸ್ತುತ ವಾರ್ಷಿಕ 6,000 ರು. ಇರುವ ಪಿಎಂ-ಕಿಸಾನ್ ಯೋಜನೆ ಸಹಾಯಧನವನ್ನು ಹೆಚ್ಚಿಸುವ ಸಂಭವ
- ತೆರಿಗೆ ಸುಧಾರಣೆಗೆ ಹಲವು ಕ್ರಮಗಳ ಘೋಷಣೆ ಸಂಭವ. ಇದರ ಅಂಗವಾಗಿ ತೆರಿಗೆ ವಿನಾಯ್ತಿ ಮೂಲಮಿತಿ ಹೆಚ್ಚಳ ಸಾಧ್ಯತೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಊಹಾಪೋಹ
- ತೆರಿಗೆ ಸ್ಲಾಬ್‌ಗಳಲ್ಲಿ ಕೂಡ ಬದಲಾವಣೆ ಸಂಭವ, ಶೇ.30 ತೆರಿಗೆ ಸ್ಲಾಬ್ ಪ್ರಸ್ತುತ ಇರುವ 15 ಲಕ್ಷ ರು.ನಿಂದ 30 ಲಕ್ಷ ರು.ಗೆ ಏರಿಸುವ ಸಾಧ್ಯತೆ
- 80ಸಿ ಅಡಿ 2014ರಿಂದ ತೆರಿಗೆ ವಿನಾಯಿತಿ ಮಿತಿ 1.5 ಲಕ್ಷ ರು.ನಲ್ಲೇ ಇದ್ದು, ಬದಲಾಗಿಲ್ಲ, ಇದು 3 ಲಕ್ಷ ರು.ಗೆ ಹೆಚ್ಚಳ ಸಂಭವ
- ಪ್ರಸ್ತುತ ಇರುವ 10 ಸಾವಿರ ರು.ವರೆಗಿನ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ವಿನಾಯ್ತಿ ಹೆಚ್ಚಳ ಸಂಭವ