ತರಕಾರಿ ಬೆಲೆಗಳಲ್ಲಿ ಹೆಚ್ಚಳವಾಗಿರೋದು ಜನಸಾಮಾನ್ಯರ ನಿದ್ದೆಗೆಡಿಸಿದೆ. ಆದರೆ, ಮುಂದಿನ ತಿಂಗಳಿಂದ ತರಕಾರಿ ಬೆಲೆಗಳಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
ಮುಂಬೈ (ಆ.24): ದೇಶದಲ್ಲಿ ಗಗನಕ್ಕೇರಿರುವ ತರಕಾರಿ ಬೆಲೆ ಸೆಪ್ಟೆಂಬರ್ ತಿಂಗಳಿಂದ ಇಳಿಕೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಮಾಹಿತಿ ನೀಡಿದ್ದಾರೆ. ತರಕಾರಿಗಳು ಹಾಗೂ ಧಾನ್ಯಗಳ ಬೆಲೆಯೇರಿಕೆ ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7.44ಕ್ಕೆ ಏರಿಕೆಯಾಗಲು ಕಾರಣವಾಗಿವೆ. ಇದು 15 ತಿಂಗಳಲ್ಲೇ ಅತ್ಯಧಿಕ ಏರಿಕೆಯಾಗಿದೆ. ಟೊಮ್ಯಾಟೋ ದರವಂತೂ ದಾಖಲೆಯ ಮಟ್ಟ ತಲುಪುವ ಮೂಲಕ ಹಣದುಬ್ಬರ ಏರಿಕೆಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಹೇಳಬಹುದು. ಕೆಲವು ತಿಂಗಳಿಂದ ಇಳಿಕೆಯ ಹಾದಿಯಲ್ಲಿದ್ದ ಹಣದುಬ್ಬರ ಕಳೆದ ತಿಂಗಳು ಏರಿಕೆಯ ಹಾದಿಯನ್ನು ತಲುಪುವ ಮೂಲಕ ಸಾಮಾನ್ಯ ಜನರ ಜೇಬಿನ ಮೇಲಿನ ಹೊರೆ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ತರಕಾರಿ ಬೆಲೆಯೇರಿಕೆ ಬಗ್ಗೆ ನಿನ್ನೆ (ಬುಧವಾರ) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಭೌಗೋಳಿಕ ಅಥವಾ ಹವಾಮಾನ ಸಂಬಂಧಿ ವಿಚಾರಗಳು ಆಹಾರ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಹೀಗಿದ್ದರೂ ಕೂಡ ಧಾನ್ಯಗಳ ಬೆಲೆಗಳು ಹಿಡಿತದಲ್ಲೇ ಇವೆ ಎಂದಿದ್ದಾರೆ.
ಹಣದುಬ್ಬರ ದರದಲ್ಲಿ ಭಾರೀ ಏರಿಕೆ ಹೊರತಾಗಿಯೂ ಕಳೆದ ಕೆಲವು ತಿಂಗಳಿಂದ ದರದಲ್ಲಿ ನಿಧಾನಗತಿಯ ಇಳಿಕೆ ಕಂಡುಬಂದಿದೆ. ಇದು ಹಣಕಾಸು ನೀತಿಯ ಪರಿಣಾಮ ಎಂದು ಆರ್ ಬಿಐ ಗವರ್ನರ್ ತಿಳಿಸಿದ್ದಾರೆ. ಆಹಾರ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡುಬಂದಿರೋದು ಹಣದುಬ್ಬರ ಅಂದಾಜಿಸಲು ಹಿನ್ನಡೆಯಾಗಿದೆ. ಆದರೆ, 2022ರ ಸೆಪ್ಟೆಂಬರ್ ಬಳಿಕ ಹಣದುಬ್ಬರದ ಮೇಲೆ ನಿಯಂತ್ರಣ ಸಾಧಿಸಲು ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದೆ. ಹೀಗಾಗಿ ಈಗಿನ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಲಿರುತ್ತೇವೆ' ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ವೈಯಕ್ತಿಕ ಸಾಲಕ್ಕೆ ಸಂಬಂಧಿಸಿ RBI ಮಹತ್ವದ ಸೂಚನೆ; ಸ್ಥಿರ, ಫ್ಲೋಟಿಂಗ್ ಬಡ್ಡಿದರದ ನಡುವೆ ಬದಲಾವಣೆಗೆ ಅವಕಾಶ
2022ನೇ ಸಾಲಿನಲ್ಲಿ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳು ಹಣದುಬ್ಬರ ಹೆಚ್ಚಳದ ಬಿಸಿ ಅನುಭವಿಸಿವೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ರೆಪೋ ದರ ಏರಿಕೆ ಮಾಡಲು ಪ್ರಾರಂಭಿಸಿತ್ತು. 2022ರ ಮೇ ಬಳಿಕ ಆರ್ ಬಿಐ ರೆಪೋ ದರದಲ್ಲಿ ಒಟ್ಟು 250 ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡಿದೆ. ಈ ಭಾರೀ ದರ ಏರಿಕೆ ಸಾಲಗಾರರ ಮೇಲಿನ ಹೊರೆ ಹೆಚ್ಚಿಸಿದರೂ ಹಣದುಬ್ಬರಕ್ಕೆ ಕಡಿವಾಣ ಹಾಕಲು ನೆರವು ನೀಡಿತ್ತು.
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೋ ದರವನ್ನು ಶೇ.6.25 ರಿಂದ ಶೇ.6.50ಕ್ಕೆ ಏರಿಕೆ ಮಾಡಲಾಗಿತ್ತು. ಅದಾದ ಬಳಿಕ ನಡೆದ ಎರಡು ಸಭೆಗಳಲ್ಲಿ ಯಾವುದೇ ಹೆಚ್ಚಳ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ಈ ತಿಂಗಳಲ್ಲಿ ನಡೆದ ಆರ್ ಬಿಐ ಎಂಪಿಸಿ ಸಭೆಯಲ್ಲಿ ಕೂಡ ರೆಪೋ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಇನ್ನು ಆರ್ ಬಿಐ ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯಲ್ಲಿ 2024ನೇ ಹಣಕಾಸು ಸಾಲಿನ ಅಂದಾಜು ಹಣದುಬ್ಬರ ದರವನ್ನು ಶೇ.5.4ಕ್ಕೆ ಏರಿಕೆ ಮಾಡಲಾಗಿದೆ. ಈ ವರ್ಷದ ಏಪ್ರಿಲ್ ಹಾಗೂ ಜೂನ್ ನಲ್ಲಿ ನಡೆದ ಎರಡು ಎಂಪಿಸಿ ದ್ವೈಮಾಸಿಕ ಸಭೆಯಲ್ಲಿ ಕೂಡ ರೆಪೋ ದರವನ್ನು ಯಥಾಸ್ಥಿತಿಲ್ಲಿಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ಸಾಲದ ಮೇಲೆ ಬ್ಯಾಂಕ್ ದಂಡ ರೂಪದಲ್ಲಿ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ; ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ RBI
ರೆಪೋ ದರ ಅನ್ನೋದು ಆರ್ ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಗೃಹ, ವಾಹನ, ವೈಯಕ್ತಿಕ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರ ರೆಪೋ ದರ ಏರಿಕೆಯಿಂದ ಸಾಲಗಾರರು ಕಂಗೆಟ್ಟಿದ್ದರು. ಬಡ್ಡಿದರ ಹೆಚ್ಚಳದಿಂದ ಗೃಹ ಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರಿಗೆ ಇಎಂಐ ಮೊತ್ತ ಹೆಚ್ಚುತ್ತದೆ