ಹೆಂಡ್ತಿ ಬಂಗಾರ ಕೊಂಡ್ರೆ ಗಂಡನಿಗೆ ಜೇಬು ಖಾಲಿಯಾಯ್ತಲ್ಲ ಎಂಬ ಚಿಂತೆ. ಆದ್ರೆ ಮುಂದೊಂದು ದಿನ ಕಷ್ಟ ಕಾಲದಲ್ಲಿ ಇದೇ ಬಂಗಾರ ಗಂಡನ ಕೈ ಹಿಡಿಯುತ್ತೆ. ಬ್ಯಾಂಕ್‍ನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆಯೋದು ಇತರ ಸಾಲಗಳಿಗಿಂತ ತುಂಬಾ ಸುಲಭ.
ಆರ್ಥಿಕ ಸಂಕಷ್ಟ ಯಾವ ರೂಪದಲ್ಲಿ ಒಕ್ಕರಿಸಿಕೊಳ್ಳುತ್ತೆ ಎಂದು ಹೇಳೋದು ಕಷ್ಟ. ಈಗಂತೂ ಕೊರೋನಾ ಮಹಾಮಾರಿಯಿಂದಾಗಿ ಅನೇಕರು ಉದ್ಯೋಗ ಕಳೆದುಕೊಂಡಿದ್ರೆ,ಇನ್ನೂ ಕೆಲವರಿಗೆ ವೇತನದಲ್ಲಿ ಒಂದಿಷ್ಟು ಭಾಗ ಕಡಿತವಾಗುತ್ತಿದೆ. ಪರಿಣಾಮ ಕಮೀಟ್‍ಮೆಂಟ್‍ಗಳನ್ನು ಪೂರೈಸಿಕೊಳ್ಳಲು ಹೆಣಗಾಡಬೇಕಾದಂತಹ ಪರಿಸ್ಥಿತಿ ಎದುರಾಗಿರುತ್ತೆ. ಸ್ನೇಹಿತರು ಅಥವಾ ಬಂಧುಗಳ ಬಳಿ ಸಾಲ ಕೇಳಲು ಹಿಂಜರಿಕೆ. ಇನ್ನು ಬ್ಯಾಂಕ್‍ನಲ್ಲಿ ವೈಯಕ್ತಿಕ ಸಾಲ ತೆಗೆಯೋಣ ಅಂದ್ಕೊಂಡ್ರೆ ಮೊದಲೇ ತೆಗೆದಿರೋ ಸಾಲಕ್ಕೆ ಇಎಂಐ ಸರಿಯಾಗಿ ಪಾವತಿಸಲಾಗುತ್ತಿಲ್ಲ. ಹೀಗಿರೋವಾಗ ಹೊಸ ಸಾಲ ಸಿಗೋದು ಹೇಗೆ? ಅಲ್ಲದೆ, ಬ್ಯಾಂಕ್‍ನಲ್ಲಿ ಕೇಳೋ ಹತ್ತಾರು ದಾಖಲೆಗಳನ್ನು ಸರಿದೂಗಿಸಿ ನೀಡೋದು ದೊಡ್ಡ ಕೆಲಸವೇ ಸರಿ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಅಪತ್ಬಾಂಧವನಂತೆ ನಿಮ್ಮ ಕೈಹಿಡಿಯೋರು ಯಾರು ಗೊತ್ತಾ? ನಿಮ್ಮ ಬಳಿಯಿರೋ ಬಂಗಾರ. ಹೌದು, ಬ್ಯಾಂಕ್‍ಗಳು ಹಾಗೂ ಫೈನಾನ್ಸ್‍ಗಳಲ್ಲಿ ನಿಮ್ಮ ಬಳಿಯಿರೋ ಚಿನ್ನವನ್ನು ಅಡವಿಟ್ಟು ಸಾಲ ಪಡೆಯಬಹುದು. ಈ ಸಾಲಕ್ಕೆ ನಿರ್ದಿಷ್ಟ ಬಡ್ಡಿ ಕೂಡ ವಿಧಿಸಲಾಗುತ್ತದೆ. ಸಾಲದ ಅವಧಿ ಮುಗಿದ ತಕ್ಷಣ ಬಡ್ಡಿ ಸಹಿತ ನೀವು ಪಡೆದಿರೋ ಅಸಲನ್ನು ಮರುಪಾವತಿಸಬೇಕು. ಗೋಲ್ಡ್ ಲೋನ್ ಪಡೆಯುವ ಬಗ್ಗೆ ನೀವು ಯೋಚಿಸುತ್ತಿದ್ರೆ, ಆ ಕುರಿತು ಒಂದಿಷ್ಟು ಮಾಹಿತಿಗಳು ಇಲ್ಲಿವೆ.
ರಾಜ್ಯಾದ್ಯಂತ ಆಸ್ತಿ ನೋಂದಣಿ ಹೆಚ್ಚಳ
ಸಾಲಕ್ಕೆ ಚಿನ್ನವೇ ಆಧಾರ
ಗೋಲ್ಡ್ ಲೋನ್‍ಗೆ ನಿಮ್ಮ ಬಳಿಯಿರೋ ಚಿನ್ನವೇ ಆಧಾರ. ನಿಮ್ಮ ಬಳಿಯಿರೋ ಬಳೆ, ಸರ ಸೇರಿದಂತೆ ಇತರೆ ಚಿನ್ನದ ಆಭರಣಗಳನ್ನು ಬ್ಯಾಂಕ್ ಅಥವಾ ಬ್ಯಾಂಕೇತರ ಫೈನಾನ್ಸ್ ಸಂಸ್ಥೆ(ಎನ್‍ಬಿಎಫ್‍ಸಿ)ಯಲ್ಲಿ ಅಡವಿಟ್ಟು ಸಾಲ ಪಡೆಯಬಹುದು. ಗೋಲ್ಡ್ ಲೋನ್ ಪ್ರಕ್ರಿಯೆ ಇತರ ಭದ್ರತಾ ಸಾಲಗಳ ಮಾದರಿಯಲ್ಲೇ ಇರುತ್ತದೆ. ಕೆಲವೊಂದು ದಾಖಲೆಗಳ ಜೊತೆ ಚಿನ್ನವನ್ನು ಬ್ಯಾಂಕ್ ಅಥವಾ ಎನ್‍ಬಿಎಫ್‍ಸಿಗೆ ನೀಡಬೇಕು. ನಿಮ್ಮ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಚಿನ್ನದ ಮೌಲ್ಯವನ್ನು ನಿರ್ಧರಿಸಿ ಬ್ಯಾಂಕ್ ನಿರ್ದಿಷ್ಟ ಮೊತ್ತವನ್ನು ನಿಮಗೆ ಸಾಲ ನೀಡುತ್ತೆ. ಬಹುತೇಕ ಸಂದರ್ಭಗಳಲ್ಲಿ ನಿಮ್ಮ ಚಿನ್ನದ ಗುಣಮಟ್ಟ ಹಾಗೂ ಪ್ರಸಕ್ತ ಮಾರುಕಟ್ಟೆ ದರ ಆಧರಿಸಿ ಮೌಲ್ಯ ನಿರ್ಧರಿಸಲಾಗುತ್ತದೆ. ಹಾಗಂತ ನಿಮ್ಮ ಚಿನ್ನಕ್ಕೆ ಎಷ್ಟು ಮೌಲ್ಯ ನಿಗದಿಪಡಿಸಿದ್ದಾರೋ ಅಷ್ಟು ಮೊತ್ತವನ್ನು ಸಾಲವಾಗಿ ನೀಡುತ್ತಾರೆ ಎಂದು ಭಾವಿಸಬೇಡಿ. ಬಹುತೇಕ ಬ್ಯಾಂಕ್‍ಗಳು ನಿಗದಿಪಡಿಸಿದ ಮೌಲ್ಯದ ಶೇ.75-ಶೇ.80ರಷ್ಟು ಮೊತ್ತವನ್ನಷ್ಟೇ ಸಾಲ ನೀಡುತ್ತವೆ. ಉದಾಹರಣೆಗೆ ನೀವು ಅಡವಿಡಲು ಬಯಸಿರೋ ಚಿನ್ನದ ಮೌಲ್ಯ 3ಲಕ್ಷ ರೂ.ವಾಗಿದ್ರೆ ನಿಮಗೆ 2.5ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಸಾಲವಾಗಿ ನೀಡೋದಿಲ್ಲ. ಇನ್ನು ಸಾಲದ ಅವಧಿ, ಮರುಪಾವತಿ ಸಾಮಥ್ರ್ಯ ಕೂಡ ನಿಮ್ಮ ಗೋಲ್ಡ್ ಲೋನ್ ಮೊತ್ತವನ್ನು ನಿರ್ಧರಿಸುತ್ತವೆ.
ಸ್ವಂತ ಮನೆ ಕಟ್ಟುವ ಕನಸಿಗೆ ನೀರೆರೆಯುತ್ತೆ ಪಿಎಂ ಆವಾಸ್ ಯೋಜನೆ
ಅರ್ಹತೆಗಳೇನು?
ಚಿನ್ನ ಹೊಂದಿರೋ ಯಾವುದೇ ವ್ಯಕ್ತಿ ಗೋಲ್ಡ್ ಲೋನ್ ಪಡೆಯಬಹುದು. ಪರ್ಸನಲ್ ಲೋನ್ ರೀತಿಯಲ್ಲಿ ಗೋಲ್ಡ್ ಲೋನ್ ಪಡೆಯಲು ಯಾವುದೇ ಮಾನದಂಡಗಳಿಲ್ಲ. ಯಾವುದೇ ಭಾರತೀಯ ಪ್ರಜೆ ಬ್ಯಾಂಕ್ ಅಥವಾ ಎನ್‍ಬಿಎಫ್‍ಸಿಗಳಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯಬಹುದು. ಹೀಗಾಗಿ ಚಿನ್ನ ಹೊಂದಿರೋ ಮಾಸಿಕ ವೇತನ ಪಡೆಯೋ ಉದ್ಯೋಗಿ, ಉದ್ಯಮಿ, ರೈತ, ಗೃಹಿಣಿ ಯಾರು ಬೇಕಾದ್ರೂ ಗೋಲ್ಡ್ ಲೋನ್ ಪಡೆಯಲು ಅರ್ಹರಾಗಿದ್ದಾರೆ. ಉಳಿದ ಸಾಲಗಳಂತೆ ಇದಕ್ಕೆ ನೀವು ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರಬೇಕಾದ ಅಗತ್ಯವೂ ಇಲ್ಲ.
ಅವಧಿ ಎಷ್ಟು?
ಗೋಲ್ಡ್ ಲೋನ್ ಅವಧಿ ಬ್ಯಾಂಕ್ ಅಥವಾ ಎನ್‍ಬಿಎಫ್‍ಸಿಗಳನ್ನು ಅವಲಂಭಿಸಿರುತ್ತವೆ. ಉಳಿದ ಸಾಲಗಳಿಗೆ ಹೋಲಿಸಿದ್ರೆ ಗೋಲ್ಡ್ ಲೋನ್ ಅವಧಿ ಕಡಿಮೆ. ಸಾಮಾನ್ಯವಾಗಿ 3-12 ತಿಂಗಳ ತನಕ ಇರುತ್ತದೆ. ಕೆಲವು ಬ್ಯಾಂಕ್‍ಗಳಲ್ಲಿ 5 ವರ್ಷಗಳ ಅವಧಿಯ ಗೋಲ್ಡ್ ಲೋನ್ ಕೂಡ ಇರುತ್ತದೆ. ಸಾಲವನ್ನು ರಿನ್ಯೂ ಮಾಡಿ ಅವಧಿ ಹೆಚ್ಚಿಸಿಕೊಳ್ಳಲು ಕೂಡ ಕೆಲವು ಸಂಸ್ಥೆಗಳಲ್ಲಿ ಅವಕಾಶವಿದೆ.
ಮರುಪಾವತಿ ಹೇಗೆ?
ಗೋಲ್ಡ್ ಲೋನ್ ಮರುಪಾವತಿ ವಿಧಾನ ಕೂಡ ನೀವು ಸಾಲ ಪಡೆದಿರೋ ಸಂಸ್ಥೆ ನಿಯಮಗಳನ್ನು ಅವಲಂಭಿಸಿದೆ. ಬಹುತೇಕ ಬ್ಯಾಂಕ್ ಅಥವಾ ಎನ್‍ಬಿಎಫ್‍ಸಿಗಳು ಪ್ರತಿ ತಿಂಗಳು ಬಡ್ಡಿಯನ್ನು ಮಾತ್ರ ಪಾವತಿಸುವಂತೆ ಸೂಚಿಸುತ್ತವೆ. ಅಸಲನ್ನು ಸಾಲದ ಅವಧಿ ಮುಗಿಯೋ ಸಮಯದಲ್ಲಿ ಪಾವತಿಸಬೇಕಾಗುತ್ತದೆ. ನೀವು ಪ್ರತಿ ತಿಂಗಳು ಇಎಂಐ ಮೂಲಕ ಕೂಡ ಸಾಲವನ್ನು ಮರುಪಾವತಿ ಮಾಡಬಹುದು. ಇಎಂಐ ಸಾಲದ ಅಸಲು ಹಾಗೂ ಬಡ್ಡಿ ಭಾಗವನ್ನು ಒಳಗೊಂಡಿರುತ್ತದೆ.
ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಮಾಡಿದ ಕೆಲಸ ನೋಡಿ!
ಬಡ್ಡಿ ದರ ಎಷ್ಟು?
ಗೋಲ್ಡ್ ಲೋನ್ ಸೆಕ್ಯುರ್ಡ್ ಲೋನ್ ಆಗಿರೋ ಕಾರಣ ಉಳಿದ ಸಾಲಗಳಿಗೆ ಹೋಲಿಸಿದ್ರೆ ಬಡ್ಡಿ ಕಡಿಮೆ. ಬಡ್ಡಿ ದರ ಕೂಡ ನೀವು ಸಾಲ ತೆಗೆದುಕೊಳ್ಳೋ ಸಂಸ್ಥೆಯನ್ನು ಆಧರಿಸಿದೆ. ಸಾಮಾನ್ಯವಾಗಿ ಎನ್‍ಬಿಎಫ್‍ಸಿಗಳಿಗೆ ಹೋಲಿಸಿದ್ರೆ ಬ್ಯಾಂಕ್‍ಗಳು ಕಡಿಮೆ ಬಡ್ಡಿ ವಿಧಿಸುತ್ತವೆ. ಗೋಲ್ಡ್ ಲೋನ್ ಪಡೆಯೋ ಮುನ್ನ ಎರಡ್ಮೂರು ಬ್ಯಾಂಕ್ ಅಥವಾ ಎನ್‍ಬಿಎಫ್‍ಸಿಗಳಲ್ಲಿ ವಿಚಾರಿಸಿ ಬಡ್ಡಿಯನ್ನು ತಾಳೆ ಹಾಕಿ ಎಲ್ಲಿ ಸಾಲ ಪಡೆಯಬಹುದು ಎಂಬುದನ್ನು ನಿರ್ಧರಿಸಿ.