ಕೋವಿಡ್‌ ಪೂರ್ವ ಅವಧಿಗಿಂತ ಹೆಚ್ಚು ಪೆಟ್ರೋಲ್‌ ಮಾರಾಟ: ಆರ್ಥಿಕತೆ ಚೇತರಿಕೆ

By Suvarna NewsFirst Published Sep 18, 2020, 9:48 AM IST
Highlights

ಲಾಕ್ಡೌನ್‌ ಜಾರಿಗೊಳಿಸಿದ ಮಾ.25ರ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್‌ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. - ಪೆಟ್ರೋಲ್‌ ಶೇ.2, ಎಲ್‌ಪಿಜಿ ಶೇ.12, ವೈಮಾನಿಕ ಇಂಧನ ಶೇ.15ರಷ್ಟುಹೆಚ್ಚಳ

ನವದೆಹಲಿ (ಸೆ.18): ಕೊರೋನಾ ಲಾಕ್ಡೌನ್‌ ಹಿನ್ನೆಲೆಯಲ್ಲಿ ಬೇಡಿಕೆ ಕಳೆದುಕೊಂಡಿದ್ದ ಪೆಟ್ರೋಲ್‌ ಮಾರಾಟ, ಇದೀಗ ಕೋವಿಡ್‌ ಪೂರ್ವ ಸ್ಥಿತಿಗೆ ಮರಳಿದೆ. ಸೆಪ್ಟೆಂಬರ್‌ ತಿಂಗಳ ಮೊದಲ 15 ದಿನದಲ್ಲಿ, ಕಳೆದ ವರ್ಷದ ಇದೇ ಅವಧಿಗಿಂತ ಶೇ.2ರಷ್ಟುಮತ್ತು ಆಗಸ್ಟ್‌ ತಿಂಗಳಿಗಿಂತ ಶೇ.7ರಷ್ಟುಅಧಿಕ ಪೆಟ್ರೋಲ್‌ ಬಳಕೆ ಮಾಡಲಾಗಿದೆ. ಇದು ಆರ್ಥಿಕತೆ ಲಾಕ್‌ಡೌನ್‌ ಕರಿನೆರಳಿನಿಂದ ಹೊರಬರುವ ಸೂಚನೆ ನೀಡಿದೆ.

ಲಾಕ್ಡೌನ್‌ ತೆರವು ಮತ್ತು ಕೊರೋನಾ ಭಯದಿಂದಾಗಿ ತಮ್ಮ ಸ್ವಂತ ವಾಹನ ಅವಲಂಬನೆ ಹೆಚ್ಚಿಸಿರುವುದು ಕೂಡಾ ಪೆಟ್ರೋಲ್‌ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ. ಇದೇ ವೇಳೆ ಡೀಸೆಲ್‌ ಮಾರಾಟ ಕೋವಿಡ್‌ ಪೂರ್ವ ಸ್ಥಿತಿಯ ಶೇ.94ರಷ್ಟನ್ನು ಮುಟ್ಟಿದ್ದು, ಗರಿಷ್ಠ ಮಟ್ಟವನ್ನು ತಲುಪಲು ಶೇ.6ರಷ್ಟುಮಾತ್ರ ಕಡಿಮೆ ಇದೆ. ಅಲ್ಲದೇ ಆಗಸ್ಟ್‌ಗೆ ಹೋಲಿಸಿದರೆ ಡೀಸೆಲ್‌ ಮಾರಾಟ ಶೇ.19ರಷ್ಟುಏರಿಕೆ ಕಂಡಿದೆ.

ಲಾಕ್ಡೌನ್‌ ಜಾರಿಗೊಳಿಸಿದ ಮಾ.25ರ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್‌ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಡೀಸೆಲ್‌ ಅನ್ನು ಸಾರಿಗೆ, ನಿರ್ಮಾಣ ಕಾಮಗಾರಿ ಮತ್ತು ಕೃಷಿ ಕ್ಷೇತ್ರದಲ್ಲಿ ಬಳಕೆ ಮಾಡುವುದರಿಂದ ಅದು ಆರ್ಥಿಕ ಚಟುವಟಿಕೆಯ ಸೂಚ್ಯಂಕ ಎಂದು ಪರಿಗಣಿಸಲಾಗಿದೆ. ಕೇಂದ್ರ ಸರ್ಕಾರ ಜೂನ್‌ನಿಂದ ಲಾಕ್‌ಡೌನ್‌ ನಿಯಮಾವಳಿಗಳನ್ನು ಹಂತ ಹಂತವಾಗಿ ತೆರವುಗೊಳಿಸಿದ್ದರಿಂದ ಡೀಸೆಲ್‌ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಇನ್ನು ಎಲ್‌ಪಿಜಿ ಬಳಕೆ ಪ್ರಮಾಣ ಶೇ.12ರಷ್ಟುಏರಿಕೆ ಕಂಡಿದ್ದರೆ, ವಿಮಾನಿಕ ಇಂಧನ ಮಾರಾಟ ಶೇ.15ರಷ್ಟುಏರಿಕೆ ಕಂಡಿದೆ.

ತೆರಿಗೆ ಹಣ ಸೋರಿಕೆಯಾಗದಂತೆ ಮಾಡಿದ ಮೋದಿ

ಗ್ರಾಮೀಣ ಭಾರತದಲ್ಲಿ ದಿನಬಳಕೆಯ ವಸ್ತು ಖರೀದಿಯಲ್ಲಿ ಏರಿಕೆ ದಾಖಲು
ಕೋವಿಡ್‌ನಿಂದಾಗಿ ಬಹುತೇಕ ಮಲಗಿಕೊಂಡಿದ್ದ ಆರ್ಥಿಕತೆ, ದೇಶದ ಗ್ರಾಮೀಣ ಭಾಗದಲ್ಲಿ ಮತ್ತೆ ಹಾದಿಗೆ ಮರಳುತ್ತಿರುವ ಲಕ್ಷಣಗಳು ಕಂಡುಬಂದಿವೆ. ಗ್ರಾಮೀಣ ಆರ್ಥಿಕತೆಯ ಸುಳಿವು ನೀಡುವ ನಿತ್ಯ ಬಳಕೆ ವಸ್ತುಗಳ ಮಾರಾಟ ಪ್ರಮಾಣವು ಇಂಥದ್ದೊಂದು ಮಾಹಿತಿ ನೀಡಿದೆ.

ದಿನಬಳಕೆ ವಸ್ತುಗಳ ಉತ್ಪಾದನೆಯಲ್ಲಿ ದೇಶದ ಅತಿದೊಡ್ಡ ಕಂಪನಿಯಾದ ಹಿಂದುಸ್ತಾನ್‌ ಯೂನಿಲೀವರ್‌ ಲಿ., ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿವಿಧ ನಿತ್ಯಬಳಕೆಯ ವಸ್ತುಗಳ ಮಾರಾಟದಲ್ಲಿ ಶೇ.6ರಷ್ಟುಏರಿಕೆಯಾಗಿದೆ ಎಂದು ತಿಳಿಸಿದೆ. ಇವುಗಳಲ್ಲಿ ಸೋಪು, ಡಿಟರ್ಜೆಂಟ್‌, ಟೀ ಪುಡಿ, ಪೇಸ್ಟ್‌, ಸೌಂದರ್ಯವರ್ಧಕ, ಐಸ್‌ಕ್ರೀಂ ಸೇರಿದಂತೆ ಹಲವು ವಸ್ತುಗಳು ಸೇರಿವೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಮಾರಾಟದಲ್ಲಿ ಏರಿಕೆ ದಾಖಲಾಗಿರುವುದು ಗ್ರಾಮೀಣ ಭಾಗದಲ್ಲಿ ಜನರು ಮತ್ತೆ ಹಿಂದಿನಂತೆ ಖರೀದಿಯಲ್ಲಿ ತೊಡಗಿರುವುದಕ್ಕೆ ಸಾಕ್ಷ್ಯ ಎಂದು ವರದಿಗಳು ತಿಳಿಸಿವೆ.

ಕುಸಿದ ಆರ್ಥಿಕತೆ ಮೇಲೆತ್ತಲು ಮೋದಿ ಪ್ಲಾನ್

 

click me!