ದೇಶದ ದಿಕ್ಕು, ಜನರ ಲಕ್ಕು ಬದಲಿಸಿದ ಡಿಬಿಟಿ; ತೆರಿಗೆ ಹಣ ಸೋರಿಕೆಯಾಗದಂತೆ ಮಾಡಿದ ಮೋದಿ!
ನೇರ ಫಲಾನುಭಗಳ ಖಾತೆಗೆ ಹಣ ತಲುಪಿಸುವ ಯೋಜನೆ 2014ರಲ್ಲಿ ಆರಂಭವಾದ ತರುವಾಯ ಕೇಂದ್ರ ಸರ್ಕಾರವು 7 ಲಕ್ಷ ಕೋಟಿ ಹಣವನ್ನು ಡಿಬಿಟಿ ಯೋಜನೆಯಡಿಯಲ್ಲಿ ವರ್ಗಾವಣೆ ಮಾಡಿ, ತನ್ಮೂಲಕ ಸೋರಿಕೆಯಾಗುತ್ತಿದ್ದ 1.70 ಲಕ್ಷ ಕೋಟಿ ರು. ಉಳಿತಾಯ ಮಾಡಿ ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಿದೆ.
ಬೆಂಗಳೂರು (ಸೆ. 17): ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರು 70 ವಸಂತಗಳನ್ನು ಪೂರೈಸಿದ್ದಾರೆ. ಗುಜರಾತಿನ ವಾಡ್‌ನಗರ ರೈಲು ನಿಲ್ದಾಣದಿಂದ ಆರಂಭವಾದ ಅವರ ಜೀವನದ ಪಯಣವು ಪ್ರಧಾನಿಯಾಗಿ ದೆಹಲಿಯ ಲೋಕಕಲ್ಯಾಣ ಮಾರ್ಗದವರೆಗೆ ನಡೆದುಬಂದಿದೆ.
2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿತು. ಪ್ರಧಾನಿಯಾಗಿ ಅಧಿಕಾರ ಗ್ರಹಣ ಮಾಡಿದ ನರೇಂದ್ರ ಮೋದಿಯವರು ಕಳೆದ 6 ವರ್ಷಗಳಲ್ಲಿ ಹಲವಾರು ಜನಪ್ರಿಯ ಹಾಗೂ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಯಶಸ್ವಿಯಾಗಿದ್ದಾರೆ. ಛಲ ಬಿಡದ ತ್ರಿವಿಕ್ರಮನ ಹಾಗೆ ಕೈಗೊಂಡ ಯೋಜನೆಗಳನ್ನು ಕೇವಲ ಘೋಷಣೆಗೆ ಮತ್ತು ಪ್ರಚಾರಕ್ಕೆ ಸೀಮಿತಗೊಳಿಸದೆ ಅರ್ಹ ಜನರಿಗೆ ತಲುಪುವಂತೆ ಮಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.
ಜನರ ಬದುಕಿನಲ್ಲಿ ಅಚ್ಛೇದಿನ್
ಆರು ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಬಡವರ ಬಗ್ಗೆ ಕೈಗೊಂಡ ಹಲವಾರು ಕಾರ್ಯಕ್ರಮಗಳು ಅವರ ಜೀವನದಲ್ಲಿ ಅಚ್ಛೇದಿನ್ ತಂದಿದೆ. ಶೇಕಡಾ 100ರಷ್ಟುಮನೆಗಳಿಗೆ ವಿದ್ಯುತ್ ಸಂಪರ್ಕ, ಸೂರಿಲ್ಲದವರಿಗೆ ಮನೆಗಳು, ಪ್ರತಿ ಮನೆಗೂ ಶೌಚಾಲಯ, ಪ್ರತಿ ಬಡ ಕುಟುಂಬಗಳಿಗೆ ಅಡುಗೆ ಅನಿಲದ ಉಚಿತ ಸಂಪರ್ಕ, ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಮತ್ತು ಪ್ರತಿ ಮನೆಗೆ ನಲ್ಲಿಯ ಮೂಲಕ ಕುಡಿಯುವ ನೀರು ಕೆಲವು ಉಲ್ಲೇಖಾರ್ಹ ಸಾಧನೆಗಳ ಗರಿ ಅವರಿಗೆ ಸಲ್ಲುತ್ತದೆ.
ದೇಶದಲ್ಲೇ ಬೆಂಗಳೂರಲ್ಲಿ ಮಾತ್ರ ತೆರಿಗೆ ಸಂಗ್ರಹ ಏರಿಕೆ!
ಈ ಎಲ್ಲಾ ಯೋಜನೆಗಳೊಂದಿಗೆ ಸಹಾಯಧನವನ್ನು ನೇರವಾಗಿ ಫಲಾನುಭಗಳ ಖಾತೆಗೆ ವರ್ಗಾಯಿಸುವ ಡಿಬಿಟಿ ಯೋಜನೆಯು ದೇಶದ ಸಂಪನ್ಮೂಲವು ಸೋರಿಕೆಯಾಗದಂತೆ ಮಾಡಿರುವುದು ಬಹುದೊಡ್ಡ ಸಾಧನೆಯಾಗಿದೆ. ನಾವು ಕಟ್ಟುವ ತೆರಿಗೆ ಹಣವು ಯೋಗ್ಯ ರೀತಿಯಲ್ಲಿ ಸೋರಿಕೆಯಾಗದೆ ಬಳಕೆಯಾಗಬೇಕೆಂಬ ಅಪೇಕ್ಷೆ ಪ್ರತಿಯೊಬ್ಬ ನಾಗರಿಕನಿಗೆ ಇರುತ್ತದೆ. ಇದನ್ನು ಚೆನ್ನಾಗಿ ತಿಳಿದಿದ್ದ ಮೋದಿಯವರು ಸರ್ಕಾರದ ಸಹಾಯಧನ ಪಡೆಯುವ ಫಲಾನುಭಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ನಗದು ವರ್ಗಾವಣೆ ಮಾಡುವ ಡಿಬಿಟಿ ಯೋಜನೆಗೆ ಚಾಲನೆ ನೀಡಿದರು.
2013ರಲ್ಲಿ ಅಂದಿನ ಯುಪಿಎ ಸರ್ಕಾರವು ಡಿಬಿಟಿ ಯೋಜನೆಯನ್ನು ಕೇವಲ ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಮೋದಿಯವರು ನೇರನಗದು ವರ್ಗಾವಣೆಯಿಂದ ಸೋರಿಕೆಗೆ ಕಡಿವಾಣ ಹಾಕಬಹುದು ಎಂದು ಅರಿತಿದ್ದ ಕಾರಣ ಡಿಬಿಟಿ ಯೋಜನೆಯನ್ನು ಆದ್ಯತೆಯ ಮೇಲೆ ಜಾರಿಗೆ ತಂದು ಲಕ್ಷಾಂತರ ಕೋಟಿ ತೆರಿಗೆ ಹಣ ಪೋಲಾಗುವುದನ್ನು ತಡೆಯಲು ಸಫಲರಾದರು.
ಡಿಬಿಟಿಗೆ ಜನಧನ್ ಅಡಿಪಾಯ
ನೇರವಾಗಿ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವ ಮುನ್ನ ಭದ್ರವಾದ ಅಡಿಪಾಯ ಡಿಬಿಟಿ ಯೋಜನೆಯ ಯಶಸ್ಸಿಗೆ ಬಹು ಮುಖ್ಯವಾಗಿತ್ತು. ಜನ್‌ಧನ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಯಿತು. ಬ್ಯಾಂಕ್ ಖಾತೆ ತೆರೆದವರಿಗೆ ವೀಮಾ ಸೌಲಭ್ಯ ಮತ್ತು ಶೂನ್ಯ ಬ್ಯಾಲೆನ್ಸ್ ಇಡಲು ಅವಕಾಶ ಮುಂತಾದ ಉತ್ತೇಜನಕರ ಸವಲತ್ತುಗಳ ಮೂಲಕ ಕಡು ಬಡವರೂ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಮಾಡಿದರು.
ಇಲ್ಲಿಯತನಕ 40 ಕೋಟಿ ಜನರು ಜನಧನ್ ಅಡಿಯಲ್ಲಿ ಖಾತೆ ತೆರೆದಿದ್ದಾರೆ ಮತ್ತು ಈ ಖಾತೆಗಳು ಆಧಾರ್ ಕಾರ್ಡ್‌ನೊಂದಿಗೆ ಜೋಡಣೆಯಾಗಿದೆ. ಜನ್‌ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇಡಲು ಅವಕಾಶವಿದ್ದರೂ ಇಲ್ಲಿಯತನಕ 1,30,000 ಕೋಟಿ ಹಣ ಈ ಖಾತೆಯಲ್ಲಿ ಸಂಗ್ರಹವಾಗಿದೆ. ಬಡವರೂ ಉಳಿತಾಯ ಮಾಡಲು ಸಾಧ್ಯವಾಗಿ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಣ್ಣ ಪುಟ್ಟಸಾಲ ಪಡೆಯಲು ಅನುಕೂಲವಾಗಿದೆ.
ಬೇರೆಲ್ಲೂ ಈ ಪರಿ ಇಲ್ಲ, ಭಾರತದ ಆಧಾರ್ ವ್ಯವಸ್ಥೆಗೆ ಬಿಲ್ ಗೇಟ್ಸ್ ಫುಲ್ ಫಿದಾ!
ಎಲ್‌ಪಿಜಿಯೊಂದಿಗೆ ಡಿಬಿಟಿ ಆರಂಭ
ಎಲ್‌ಪಿಜಿ ಸಿಲಿಂಡರ್‌ಗೆ ನೀಡುತ್ತಿದ್ದ ಸಬ್ಸಿಡಿಯನ್ನು ‘ಪೆಹಲ್’ ಯೋಜನೆಯಡಿಯಲ್ಲಿ ಬಳಕೆದಾರರ ಖಾತೆಗೆ ನೇರವಾಗಿ ಸಹಾಯಧನ ವರ್ಗಾವಣೆ ಮಾಡುವ ಮೂಲಕ ಜಾರಿಗೆ ತರಲಾಯಿತು.
ಈ ಯೋಜನೆಯಡಿಯಲ್ಲಿ ಎಲ್ಲರ ಎಲ್‌ಪಿಜಿ ಸಂಪರ್ಕ ಆಧಾರ್ ಕಾರ್ಡಿಗೆ ಜೋಡಣೆಯಾದ ಕೂಡಲೇ ದೇಶದಲ್ಲಿ 4.23 ಕೋಟಿ ನಕಲಿ ಸಂಪರ್ಕಗಳು ರದ್ದಾದವು ಮತ್ತು ನೇರವಾಗಿ ಬಳಕೆದಾರರ ಖಾತೆಗೆ ಸಹಾಯಧನ ವರ್ಗಾವಣೆ ಮಾಡಲು ಆರಂಭವಾದ್ದರಿಂದ ಕಳೆದ 6 ವರ್ಷದಲ್ಲಿ 68 ಸಾವಿರ ಕೋಟಿ ಉಳಿತಾಯವಾಗಿದೆ.
ಪ್ರಧಾನ ಮಂತ್ರಿಗಳು ಸಹಾಯ ಧನವಿರುವ ಎಲ್‌ಪಿಜಿ ಸಿಲಿಂಡರ್ ಬಿಟ್ಟುಕೊಡಿ, ಅದನ್ನು ಬಡವರಿಗೆ ನೀಡಲಾಗುವುದು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಒಂದು ಕೋಟಿ ನಾಗರಿಕರು ಸಹಾಯಧನವಿಲ್ಲದ ಗ್ಯಾಸ್ ಸಿಲಿಂಡರ್ ಪಡೆಯಲು ಆರಂಭಿಸಿದರು. ತತ್ಪರಿಣಾಮವಾಗಿ ದೇಶದ 10 ಕೋಟಿ ಬಡ ಕುಟುಂಬಗಳಿಗೆ ಉಚಿತವಾಗಿ ಉಜ್ವಲಾ ಯೋಜನೆಯಡಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಸಂಪರ್ಕ ನೀಡಲು ಸಾಧ್ಯವಾಯಿತು.
ಪಡಿತರದಲ್ಲಿ 67 ಸಾ.ಕೋ. ಹಣ ಉಳಿಕೆ
ಸಾರ್ವಜನಿಕ ಪಡಿತರ ವಿತರಣೆಯ ವ್ಯವಸ್ಥೆಯಲ್ಲಿ ಸಹಾಯಧನವನ್ನು ನೇರವಾಗಿ ಫಲಾನುಭಗಳ ಖಾತೆಗೆ ವರ್ಗಾವಣೆ ಮಾಡಲು ಆರಂಭಿಸಿದ್ದರ ಪರಿಣಾಮ ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚಿನ ಸೋರಿಕೆಯನ್ನು ತಡೆಯಲು ಸಾಧ್ಯವಾಗಿದೆ ಮತ್ತು ದೇಶಾದ್ಯಂತ 3 ಕೋಟಿ ನಕಲಿ ಕಾರ್ಡ್‌ಗಳು ರದ್ದಾಗಿ ಕಳ್ಳ ಲೆಕ್ಕದ ಮೂಲಕ ಸೋರಿಕೆಯಾಗುತ್ತಿದ್ದ 67 ಸಾವಿರ ಕೋಟಿ ಹಣ ಉಳಿತಾಯವಾಗಿದೆಯೆಂದರೆ ಈ ಯೋಜನೆಯು ಅದೆಷ್ಟುಪ್ರಯೋಜನಕಾರಿ ಎಂದು ಅರ್ಥವಾಗುತ್ತದೆ.
2019ರ ಲೋಕಸಭಾ ಚುನಾವಣೆಗೆ ಮುನ್ನ ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಧಾನಿಗಳು ಘೋಸಿದರು. ಈ ಯೋಜನೆಯನ್ವಯ ರೈತರ ಖಾತೆಗಳಿಗೆ ವಾರ್ಷಿಕ .6000 ಹಣವನ್ನು ಮೂರು ಕಂತುಗಳಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಈವರಗೆ 8.31 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 16,621 ಕೋಟಿ ಹಣ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಒಂದೇ ಒಂದು ಚಿಕ್ಕಾಸು ಮಧ್ಯವರ್ತಿಗಳ ಪಾಲಾಗದೆ ಪೂರ್ತಿ ಹಣ ರೈತರಿಗೆ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನೇರವಾಗಿ ಅವರ ಖಾತೆಗೆ ತಲುಪಿದೆ.
Credit Card ಬಿಲ್, ಕೊಂಚ ಯಾಮಾರಿದ್ರೂ ಬೀಳುತ್ತೆ ಬಡ್ಡಿ: ಈ ನಿಯಮ ನಿಮಗೆ ಗೊತ್ತಿರಲಿ!
ಉದ್ಯೋಗ ಖಾತ್ರಿಯಲ್ಲೂ ಸೋರಿಕೆ ತಡೆ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಕಲಿ ಉದ್ಯೋಗಿಗಳ ಕಾರ್ಡ್ ಸಿದ್ಧಪಡಿಸಿ ನೂರಾರು ಕೋಟಿ ಹಣ ಸೋರಿಕೆಯಾಗುತ್ತಿತ್ತು. ಎಮ್‌ಎನ್‌ಇಆರ್‌ಜಿ ಕಾರ್ಡ್‌ಗಳನ್ನು ಆಧಾರ್‌ಗೆ ಜೋಡಣೆ ಮಾಡಿ ಆ ಉದ್ಯೋಗಿಗಳ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಲು ಪ್ರಾರಂಭಿಸಿದ ಪರಿಣಾಮ 3,500 ಕೋಟಿ ಉಳಿತಾಯವಾಗಿ ಮತ್ತಷ್ಟುಹೆಚ್ಚಿನ ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ.
ಯೂರಿಯಾ ಮತ್ತು ಇನ್ನಿತರ ರಸಗೊಬ್ಬರಗಳಿಗೆ ಸರ್ಕಾರ ಸಹಾಯಧನವನ್ನು ನೀಡುತ್ತದೆ. ಈ ಸಹಾಯಧನ ನೈಜ ಫಲಾನುಭಗಳಿಗೆ ತಲುಪಿಸಲು ಈ ಯೋಜನೆಯನ್ನು ಡಿಬಿಟಿ ವ್ಯಾಪ್ತಿಗೆ ತರಲಾಯಿತು. ಇದರಿಂದ ರಸಗೊಬ್ಬರದ ದುರ್ಬಳಕೆಗೆ ಕಡಿವಾಣ ಹಾಕಿದೆ ಮತ್ತು 125 ಲಕ್ಷ ಟನ್ ರಸಗೊಬ್ಬರ ಬಳಕೆಯಲ್ಲಿ ಕಡಿಮೆಯಾಗಿ ಸರ್ಕಾರಕ್ಕೆ 10 ಸಾವಿರ ಕೋಟಿ ರು. ಸಹಾಯಧನ ನೀಡುವುದು ಉಳಿದಿದೆ.
ರಾಷ್ಟ್ರೀಯ ಸಾಮಾಜಿಕ ಸಹಾಯ ಯೋಜನೆಯಲ್ಲಿ (ಎನ್‌ಎಸ್‌ಎಪಿ) ವಿಧವೆಯರಿಗೆ, ಅಂಗಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ವೇತನ ನೀಡಲಾಗುತ್ತದೆ. ಈ ಎಲ್ಲಾ ಫಲಾನುಭಗಳಿಗೆ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಲು ಆರಂಭವಾದ ಮೇಲೆ 5 ಲಕ್ಷ ನಕಲಿ ಖಾತೆಗಳು ರದ್ದಾಗಿವೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಈಗ ಬ್ಯಾಂಕ್ ಮೂಲಕ ನೀಡಲಾಗುತ್ತಿದೆ. ಹೀಗಾಗಿ 6 ಲಕ್ಷ ನಕಲಿ ಖಾತೆಗಳು ಪತ್ತೆಯಾಗಿ ರದ್ದಾಗಿವೆ ಹಾಗೂ ಸಹಾಯಧನ ಅಪಾತ್ರರ ಕೈ ಸೇರುವುದು ತಪ್ಪಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ವಿದ್ಯಾರ್ಥಿವೇತನವು ಇದಕ್ಕಿಂತ ಭಿನ್ನವಿಲ್ಲ 2 ಲಕ್ಷ ನಕಲಿ ವಿದ್ಯಾರ್ಥಿಗಳ ಖಾತೆಯನ್ನು ಈವರಗೆ ರದ್ದುಪಡಿಸಲಾಗಿದೆ. ಅಂಗನವಾಡಿ ಸೇವಾ ಕೇಂದ್ರಗಳಲ್ಲಿ ಇಲ್ಲಿಯತನಕ 1 ಕೋಟಿ ನಕಲಿ ಹೆಸರುಗಳನ್ನು ರದ್ದುಪಡಿಸಲಾಗಿದೆ. ಅವರ ಹೆಸರಿನಲ್ಲಿ ಅನ್ಯರ ಪಾಲಾಗುತ್ತಿದ್ದ ಸಾರಾರು ರು. ಉಳಿತಾಯವಾಗಿದೆ.
ಹೆಚ್ಚು ಜಿಎಸ್‌ಟಿ ಪರಿಹಾರ ಪಡೆವ 2 ನೇ ರಾಜ್ಯ ಕರ್ನಾಟಕ!
ಲಾಕ್ಡೌನ್‌ನಲ್ಲೂ ಡಿಬಿಟಿ ನೆರವು
ಲಾಕ್‌ಡೌನ್ ಸಂದರ್ಭದಲ್ಲಿ 20 ಕೋಟಿ ಮಹಿಳೆಯರ ಜನ್‌ಧನ್ ಖಾತೆಗೆ 10 ಸಾವಿರ ಕೋಟಿ ಹಣ ವರ್ಗಾಯಿಸಲಾಯಿತು. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದೆ ಈ ಹಣವನ್ನು ನೇರವಾಗಿ ನೀಡಲಾಯಿತ್ತು.
ನೇರ ಫಲಾನುಭಗಳ ಖಾತೆಗೆ ಹಣ ತಲುಪಿಸುವ ಯೋಜನೆಯು 2014ರಲ್ಲಿ ಆರಂಭವಾದ ತರುವಾಯ ಕೇಂದ್ರ ಸರ್ಕಾರವು 7 ಲಕ್ಷ ಕೋಟಿ ಹಣವನ್ನು ಡಿಬಿಟಿ ಯೋಜನೆಯಡಿಯಲ್ಲಿ ವರ್ಗಾವಣೆ ಮಾಡಿ ತನ್ಮೂಲಕ ಸೋರಿಕೆಯಾಗುತ್ತಿದ್ದ 1.70 ಲಕ್ಷ ಕೋಟಿ ರು. ಉಳಿತಾಯ ಮಾಡಿ ದೇಶದ ಆರ್ಥಿಕ ವ್ಯವಸ್ಥೆಗೆ ತನ್ನ ಸಕಾರಾತ್ಮಕ ಕೊಡುಗೆಯನ್ನು ನೀಡಿದೆ.
ದೇಶದಲ್ಲಿ ಭ್ರಷ್ಟವ್ಯವಸ್ಥೆಯು ಮೇಲುಗೈ ಸಾಧಿಸಿದ್ದ ಸಂದರ್ಭದಲ್ಲಿ ನಡೆದ 2ಜಿ ಹಗರಣದಲ್ಲಿ ಒಟ್ಟು 1,76,000 ಸಾವಿರ ಕೋಟಿ ಭ್ರಷ್ಟಾಚಾರ ನಡೆಯಿತ್ತು. ಬದಲಾದ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯಲ್ಲಿ ಕೇವಲ ಒಂದು ಯೋಜನೆಯ ಫಲವಾಗಿ 1,70,000 ಸಾವಿರ ಕೋಟಿ ಉಳಿತಾಯವಾಗಿದೆ.
2014ರಿಂದ ಕೇಂದ್ರ ಸರ್ಕಾರ ವಿವಿಧ ಇಲಾಖೆಗಳ 450 ಯೋಜನೆಗಳನ್ನು ಈ ಯೋಜನೆಯಡಿಯಲ್ಲಿ ತರಲಾಗಿದೆ. ಅತ್ಯಂತ ಪಾರದರ್ಶಕವಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ಮತ್ತು 100 ರು. ಕಳುಸಿದರೆ ಫಲಾನುಭಗೆ 100 ರು. ತಲುಪುವ ವ್ಯವಸ್ಥೆ ಇದೀಗ ಚಾಲ್ತಿಯಲ್ಲಿದೆ.
ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೆ 2014ರ ಮೊದಲು ಸರ್ಕಾರದಿಂದ ನೀಡುತ್ತಿದ್ದ ಸಹಾಯಧನವು ಸೋರಿಕೆಯಾಗಿ ಕಾಣದ ಕೈಗಳಿಗೆ ಸೇರುತ್ತಿದ್ದ ಪ್ರಮಾಣವನ್ನು ಊಹಿಸಲು ಸಾಧ್ಯವಿಲ್ಲ. ಯಾವುದೇ ಕಡಿವಾಣಲ್ಲದೆ ಮಧ್ಯವರ್ತಿಗಳು ಪಟ್ಟಭದ್ರ ಹಿತಾಸಕ್ತಿಗಳು ಬಡವರ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದರು.
ರಾಜ್ಯಗಳಿಗೂ ದೊಡ್ಡ ಉಳಿತಾಯ
ಇದೀಗ ಬಹುತೇಕ ರಾಜ್ಯ ಸರ್ಕಾರಗಳು ಸಹಾಯಧನವನ್ನು ಫಲಾನುಭಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಆರಂಭಿಸಿವೆ. ಹೀಗಾಗಿ ರಾಜ್ಯಗಳೂ ಸಹಾ ನೂರಾರು ಕೋಟಿ ತೆರಿಗೆ ಹಣವನ್ನು ಉಳಿಸುವ ಮತ್ತು ಉದ್ದೇಶಿತ ಸಹಾಯಧನ ಅರ್ಹ ವ್ಯಕ್ತಿಗಳಿಗೆ ತಲುಪಿಸುವ ಕೆಲಸವಾಗುತ್ತಿದೆ.
ನರೇಂದ್ರ ಮೋದಿಯವರು ತಮ್ಮ 6 ವರ್ಷಗಳ ಅಧಿಕಾರದಲ್ಲಿ ಜಾರಿಗೆ ತಂದಿರುವ ಹಲವಾರು ಜನಪರ ಯೋಜನೆಗಳಲ್ಲಿ ನೇರ ವರ್ಗಾವಣೆ ಯೋಜನೆಯು ಒಂದು. ತೆರಿಗೆದಾರರ ಹಣ ಸೋರಿಕೆಯಾಗದೆ ಪಾರದರ್ಶಕವಾಗಿ ಬಳಕೆಗೆ ಅವಕಾಶವಾಗಿರುವ ಈ ಯೋಜನೆಯು ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ.
ನರೇಂದ್ರ ಮೋದಿಯವರ 50 ವರ್ಷಕ್ಕೂ ಹೆಚ್ಚಿನ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜನಪರವಾಗಿ ಅನುಷ್ಠಾನಕ್ಕೆ ತಂದಿರುವ ಡಿಬಿಟಿ ಯೋಜನೆಯು ಬಹು ದೊಡ್ಡ ಮೈಲಿಗಲ್ಲು ಎಂಬುದರಲ್ಲಿ ಯಾವ ಸಂದೇಹವು ಇಲ್ಲ.
- ಎಸ್.ಪ್ರಕಾಶ್ ಶೇಷರಾಘವಾಚಾರ್
ಬೆಂಗಳೂರು