Palm Oil Price: ಸೋಪು, ಶಾಂಪು, ಅಡುಗೆ ಎಣ್ಣೆ ಬೆಲೆ ಮತ್ತಷ್ಟು ದುಬಾರಿ

Published : Apr 25, 2022, 01:13 PM ISTUpdated : Apr 25, 2022, 01:34 PM IST
Palm Oil Price: ಸೋಪು, ಶಾಂಪು, ಅಡುಗೆ ಎಣ್ಣೆ ಬೆಲೆ ಮತ್ತಷ್ಟು ದುಬಾರಿ

ಸಾರಾಂಶ

*ವಿದೇಶಗಳಿಗೆ ಖಾದ್ಯ ತೈಲ ರಫ್ತು ಸ್ಥಗಿತ ನಿರ್ಧಾರ ಪ್ರಕಟಿಸಿರುವ ಇಂಡೋನೇಷ್ಯಾ *ಇಂಡೋನೇಷ್ಯಾ ಜಗತ್ತಿನ ಅತೀದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರ *ಏಪ್ರಿಲ್ 28ರಿಂದ ತಾಳೆ ಎಣ್ಣೆ ರಫ್ತಿನ ಮೇಲೆ ನಿರ್ಬಂಧ ಹೇರಿರುವ ಇಂಡೋನೇಷ್ಯಾ

ನವದೆಹಲಿ (ಏ.25): ಈಗಾಗಲೇ ಜಾಗತಿಕ ಆಹಾರ ಹಣದುಬ್ಬರ (Food Inflation) ದಾಖಲೆ ಮಟ್ಟದಲ್ಲಿ ಏರಿಕೆಯಾಗೋ ಮೂಲಕ ಎಲ್ಲರ ನೆಮ್ಮದಿಗೆಡಿಸಿದೆ. ಈ ಮಧ್ಯೆ ಜಗತ್ತಿನ ಅತೀದೊಡ್ಡ ತಾಳೆ ಎಣ್ಣೆ (Palm Oil) ಉತ್ಪಾದಕ ರಾಷ್ಟ್ರ ಇಂಡೋನೇಷ್ಯಾ (Indonesia) ವಿದೇಶಗಳಿಗೆ ಖಾದ್ಯ ತೈಲ ರಫ್ತು (Export) ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಇದ್ರಿಂದ  ಜಾಗತಿಕ ಆಹಾರ ಹಣದುಬ್ಬರ ಇನ್ನಷ್ಟು ಏರಿಕೆಯಾಗೋ ಸಾಧ್ಯತೆ ಹೆಚ್ಚಿದೆ.

ಕೌಲಾಲಂಪುರ್ ದಲ್ಲಿ ಈಗಾಗಲೇ ಬೇಡಿಕೆ ನೀಡಿ ಜುಲೈನಲ್ಲಿ ಪೂರೈಕೆ (Supply) ಮಾಡಬೇಕಿರೋ ತಾಳೆ ಎಣ್ಣೆ ಬೆಲೆ ಶೇ.6ರಷ್ಟು ಏರಿಕೆ ಕಂಡಿದ್ದು, ಟನ್ ಗೆ 1,550 ಡಾಲರ್ ಆಗಿದೆ. ಮಾರ್ಚ್ 11ರ ಬಳಿಕ ಇದು ಅತ್ಯಧಿಕ ದರವಾಗಿದೆ. ಏಪ್ರಿಲ್ 28ರಿಂದ ತಾಳೆ ಎಣ್ಣೆ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗುವುದು. ಈ ನಿರ್ಬಂಧ ದೇಶೀಯ ಖಾದ್ಯ ತೈಲ ಕೊರತೆ ಸಮಸ್ಯೆ ಬಗೆಹರಿಯುವ ತನಕ ಮುಂದುವರಿಯಲಿದೆ ಎಂದು ಇಂಡೋನೇಷ್ಯಾ ತಿಳಿಸಿದೆ.  

ಮತ್ತೆ ಖಾದ್ಯತೈಲ ಬೆಲೆಯೇರಿಕೆ ಶಾಕ್‌?

ಜಾಗತಿಕ ತಾಳೆ ಎಣ್ಣೆ ಪೂರೈಕೆಯ ಸುಮಾರು ಶೇ.60ರಷ್ಟು ಪಾಲನ್ನು ಹೊಂದಿರುವ ಇಂಡೋನೇಷ್ಯಾದ ಈ ನಿರ್ಧಾರದಿಂದ ರಷ್ಯಾ-ಉಕ್ರೇನ್ ಯುದ್ಧದಿಂದ ಈಗಾಗಲೇ ಗಗನಕ್ಕೇರಿರುವ ಖಾದ್ಯ ತೈಲದ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ. ಅಲ್ಲದೆ, ತಾಳೆ ಎಣ್ಣೆ ಬೆಲೆಯೇರಿಕೆ ಜಾಗತಿಕ ಆಹಾರ ಹಣದುಬ್ಬರ ಇನ್ನಷ್ಟು ಹೆಚ್ಚಳವಾಗಲು ಕಾರಣವಾಗುವ ಅಪಾಯವಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಆಹಾರೋತ್ಪನ್ನಗಳ ಬೆಲೆಯೇರಿಕೆಯಿಂದ ಅನೇಕ ರಾಷ್ಟ್ರಗಳ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ಎಲ್ಲ ರಾಷ್ಟ್ರಗಳು ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಶ್ರೀಲಂಕಾ, ನೇಪಾಳದಂತಹ ಪುಟ್ಟ ಆರ್ಥಿಕತೆಗಳು ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟಿಗೆ  ಸಿಲುಕಿವೆ. ಶ್ರೀಲಂಕಾವಂತೂ ಆರ್ಥಿಕ ದಿವಾಳಿತನದಿಂದ ಸಂಕಷ್ಟ ಎದುರಿಸುತ್ತಿದ್ದು, ವಿದೇಶಿ ವಿನಿಮಯ ತೀವ್ರ ಕುಸಿತ ಕಂಡಿದೆ. ಭಾರತವೂ ಸೇರಿದಂತೆ ಅನ್ಯ ರಾಷ್ಟ್ರಗಳಿಂದ ಶ್ರೀಲಂಕಾ (Srilanka) ಈಗಾಗಲೇ ಆರ್ಥಿಕ ನೆರವು ಪಡೆದಿದ್ದು, ಚೇತರಿಕೆಗೆ ಇನ್ನಷ್ಟು ಸಹಾಯದ ನಿರೀಕ್ಷೆಯಲ್ಲಿದೆ.

ಇನ್ನು ಕಳೆದೆರಡು ವರ್ಷಗಳಿಂದ ಕೊರೋನಾ, ಲಾಕ್ ಡೌನ್ ಕಾರಣದಿಂದ ಸಾಕಷ್ಟು ಹೊಡೆತ ಅನುಭವಿಸಿರುವ ಜಾಗತಿಕ ಆರ್ಥಿಕತೆಗೆ ರಷ್ಯಾ-ಉಕ್ರೇನ್ ಯುದ್ಧ ಮತ್ತಷ್ಟು ಆಘಾತ ನೀಡಿದೆ. ಅದರಲ್ಲೂ ಆಹಾರೋತ್ಪನ್ನಗಳ ಬೆಲೆ ಹೆಚ್ಚಳ ಆರ್ಥಿಕವಾಗಿ ಹಿಂದುಳಿದಿರುವ ರಾಷ್ಟ್ರಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಬಹುತೇಕ ರಾಷ್ಟ್ರಗಳು ತಮ್ಮಲ್ಲಿನ ಉತ್ಪನ್ನಗಳ ದೇಶೀಯ ಲಭ್ಯತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ರಫ್ತಿನ ಮೇಲೆ ನಿರ್ಬಂಧ ವಿಧಿಸುತ್ತಿವೆ. ಈ ಮೂಲಕ ದೇಶದಲ್ಲಿನ ಬೆಲೆಯೇರಿಕೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿವೆ. ಈ ನಡೆಯಿಂದ ಜಾಗತಿಕ ಆಹಾರ ಹಣದುಬ್ಬರ ಇನ್ನಷ್ಟು ಹೆಚ್ಚುವ ಭೀತಿ ನಿರ್ಮಾಣವಾಗಿದೆ. ಇದ್ರಿಂದ ಮುಂದಿನ ದಿನಗಳಲ್ಲಿ ಜನರಿಗೆ ಆಹಾರ ಪದಾರ್ಥಗಳು ಸಿಗದೆ  ಜನರು ಹಸಿವಿನಿಂದ ಕಂಗೆಡುವ ಅಪಾಯವೂ ಇದೆ. 

ವಿಶ್ವದ ಟಾಪ್-5 ಶ್ರೀಮಂತರಲ್ಲಿ ಗೌತಮ್ ಅದಾನಿ, ಈ ಬಿಲಿಯನೇರ್‌ ಕೂಡಾ ರೇಸ್‌ನಲ್ಲಿ ಹಿಂದೆ!

'ಕೇಕ್ ನಿಂದ ಹಿಡಿದು ಸೌಂದರ್ಯ ಪ್ರಸಾಧನಗಳ ತನಕ ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ಖಾದ್ಯ ತೈಲಗಳು ಹಾಗೂ ಅದರ ಕಚ್ಚಾ ವಸ್ತುಗಳ ಪೂರೈಕೆ ಸ್ಥಗಿತದಿಂದ ಜಾಗತಿಕವಾಗಿ ಪ್ಯಾಕೇಜ್ಡ್ ಆಹಾರ ಉತ್ಪಾದನೆ ವೆಚ್ಚದಲ್ಲಿ ಹೆಚ್ಚಳವಾಗಲಿದೆ' ಎಂದು ಫಿಲಿಪ್ ನೋವಾ ಸರಕುಗಳ ಹಿರಿಯ ವ್ಯವಸ್ಥಾಪಕ ಅವ್ತಾರ್ ಸಂಧು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೀಮಿತ ಪೂರೈಕೆ ಹಾಗೂ ಗಗನಕ್ಕೇರುತ್ತಿರುವ ಬೆಲೆಯಿಂದ ಅಮೆರಿಕದಂತಹ ಶ್ರೀಮಂತ ಆರ್ಥಿಕತೆಗಳಲ್ಲಿ ಸಲಾಡ್ ಅಲಂಕಾರಿಕ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳ ಹಣದುಬ್ಬರದಲ್ಲಿ ಗಣನೀಯ ಏರಿಕೆ ದಾಖಲಿದೆ. ಇದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಭಾರತ ಸೇರಿದಂತೆ ಕೆಲವು  ರಾಷ್ಟ್ರಗಳು ಸೋಯಾಬಿನ್, ಸೂರ್ಯಕಾಂತಿಯಂತಹ ದುಬಾರಿ ತೈಲಗಳಿಗೆ ಪರ್ಯಾಯವಾಗಿ ಕಡಿಮೆ ಬೆಲೆಯ ತಾಳೆ ಎಣ್ಣೆಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಇಂಥ ರಾಷ್ಟ್ರಗಳ ಮೇಲೆ ಇಂಡೋನೇಷ್ಯಾದ ನಡೆ ಗಂಭೀರ ಪರಿಣಾಮ ಬೀರಲಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!