ಅಂಚೆ ಕಚೇರಿ ಹೂಡಿಕೆದಾರರಿಗೆ ಹೊಸ ವರ್ಷದ ಗಿಫ್ಟ್; ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಳ

By Suvarna NewsFirst Published Dec 30, 2022, 8:44 PM IST
Highlights

*ಪರಿಷ್ಕೃತ ಬಡ್ಡಿದರ ಜನವರಿ 1ರಿಂದಲೇ ಜಾರಿಗೆ 
*2023ನೇ ಸಾಲಿನ ಜನವರಿ-ಮಾರ್ಚ್ ಅವಧಿಗೆ ಅನ್ವಯ
*ಸುಕನ್ಯಾ ಸಮೃದ್ಧಿ ಹಾಗೂ ಪಿಪಿಎಫ್ ಬಡ್ಡಿದರದಲ್ಲಿ ಹೆಚ್ಚಳವಿಲ್ಲ
 

ನವದೆಹಲಿ (ಡಿ.30): ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಬಡ್ಡಿದರ ಹೆಚ್ಚಳದ ಗಿಫ್ಟ್ ನೀಡಿದೆ. 2023ನೇ ಸಾಲಿನ ಜನವರಿ-ಮಾರ್ಚ್ ಅವಧಿಗೆ ಅಂಚೆ ಕಚೇರಿಯ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಹೆಚ್ಚಳ ಮಾಡಿದೆ. ಈ ಮೂಲಕ ಹೊಸ ವರ್ಷದಲ್ಲಿ ಉಳಿತಾಯ ಹೆಚ್ಚಿಸಲು ನಾಗರಿಕರಿಗೆ ಉತ್ತೇಜನ ನೀಡಿದೆ. ಅಂಚೆ ಇಲಾಖೆ ಟರ್ಮ್ ಡೆಫಾಸಿಟ್, ನ್ಯಾಷನಲ್ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಇಂದಿನ (ಡಿ.30) ಬಡ್ಡಿದರ ಹೆಚ್ಚಳದ ಬಳಿಕ ವಿವಿಧ ಹೂಡಿಕೆ ಯೋಜನೆಗಳ ಬಡ್ಡಿದರ ಶೇ.4ರಿಂದ ಶೇ. 8ರ ತನಕ ಇದೆ. ಎಲ್ಲ ಠೇವಣಿಗಳ ಮೇಲೆ ಒಟ್ಟಾರೆ ಶೇ.1.1ರಷ್ಟು ಬಡ್ಡಿದರ ಹೆಚ್ಚಳವಾಗಲಿದೆ. ಆದರೆ, ಹೆಣ್ಣು ಮಕ್ಕಳಿಗಾಗಿ ರೂಪಿಸಲಾಗಿರುವ ಉಳಿತಾಯ ಯೋಜನೆಯಾದ ಸುಕನ್ಯಾ ಸಮೃದ್ಧಿ ಹಾಗೂ ಪಿಪಿಎಫ್ ಬಡ್ಡಿದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಪರಿಷ್ಕೃತ ಬಡ್ಡಿದರ ಜನವರಿ 1ರಿಂದಲೇ ಜಾರಿಗೆ ಬರಲಿದೆ. 

ಯಾವ ಯೋಜನೆ ಬಡ್ಡಿದರ ಎಷ್ಟು ಹೆಚ್ಚಳ?
ಒಂದು ವರ್ಷ ಅವಧಿಯ ಟರ್ಮ್ ಡೆಫಾಸಿಟ್ ಮೇಲಿನ ಬಡ್ಡಿದರವನ್ನು ಶೇ.5.50 ರಿಂದ ಶೇ.6.6ಕ್ಕೆ ಹೆಚ್ಚಳ ಮಾಡಲಾಗಿದೆ. ಇನ್ನು ಎರಡು ವರ್ಷಗಳ ಅವಧಿಯ ಟರ್ಮ್ ಡೆಫಾಸಿಟ್ ಮೇಲಿನ ಬಡ್ಡಿದರವನ್ನು ಶೇ.5.70ರಿಂದ ಶೇ.6.8ಕ್ಕೆ ಹೆಚ್ಚಳ ಮಾಡಲಾಗಿದೆ. ಮೂರು ವರ್ಷ ಹಾಗೂ ಐದು ವರ್ಷಗಳ ಅವಧಿಯ ಟರ್ಮ್ ಡೆಫಾಸಿಟ್ ಗಳ ಬಡ್ಡಿದರವನ್ನು ಕ್ರಮವಾಗಿ ಶೇ.5.80ರಿಂದ ಶೇ.6.9ಕ್ಕೆ ಹಾಗೂ ಶೇ.6.70ರಿಂದ ಶೇ.7ಕ್ಕೆ ಹೆಚ್ಚಳ ಮಾಡಲಾಗಿದೆ. ಇನ್ನು ರಾಷ್ಟ್ರೀಯ ಉಳಿತಾಯ ಯೋಜನೆ (NSC) ಬಡ್ಡಿದರವನ್ನು ಶೇ.6.80 ರಿಂದ ಶೇ.7ಕ್ಕೆ ಏರಿಕೆ ಮಾಡಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿದರ ಪ್ರಸ್ತುತ ಶೇ.7.6ಇದ್ದು, ಶೇ.8ಕ್ಕೆ ಏರಿಕೆ ಮಾಡಲಾಗಿದೆ. ತಿಂಗಳ ಆದಾಯ ಯೋಜನೆ (MIS) ಬಡ್ಡಿದರವನ್ನು ಶೇ.6.70ರಿಂದ ಶೇ.7.1ಕ್ಕೆ ಹೆಚ್ಚಿಸಲಾಗಿದೆ. 123 ತಿಂಗಳ ಅವಧಿಯ ಕಿಸಾನ್ ವಿಕಾಸ್ ಪತ್ರದ (KVP)ಬಡ್ಡಿದರವನ್ನು ಶೇ.7ರಿಂದ ಶೇ.7.2ಕ್ಕೆ ಹೆಚ್ಚಳ ಮಾಡಲಾಗಿದೆ. 

ಡಿ.31ರೊಳಗೆ ತೆರಿಗೆ ಉಳಿತಾಯದ ಹೂಡಿಕೆ ಪೂರ್ಣಗೊಳಿಸಿ, ವೇತನದಿಂದ ಟಿಡಿಎಸ್ ಕಡಿತ ತಪ್ಪಿಸಿ

ಈ ಯೋಜನೆಗಳ ಬಡ್ಡಿದರ ಹೆಚ್ಚಳವಾಗಿಲ್ಲ
ಸುಕನ್ಯಾ ಸಮೃದ್ಧಿ ಯೋಜನೆ (SSY) ಬಡ್ಡಿದರ ಪ್ರಸ್ತುತ ಶೇ.7.6ರಷ್ಟಿದ್ದು, ಯಾವುದೇ ಹೆಚ್ಚಳ ಮಾಡಿಲ್ಲ. ಹಾಗೆಯೇ ಅಂಚೆ ಕಚೇರಿ ಉಳಿತಾಯ ಖಾತೆ ಬಡ್ಡಿದರ ಶೇ.4ರಷ್ಟಿದ್ದು, ಯಾವುದೇ ಏರಿಕೆಯಾಗಿಲ್ಲ. ಅಂಚೆ ಕಚೇರಿ ರಿಕರಿಂಗ್ ಡೆಫಾಸಿಟ್ (RD) ಬಡ್ಡಿದರದಲ್ಲಿ ಕೂಡ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ ಶೇ.5.8ರಷ್ಟಿದೆ. 

ಸೆಪ್ಟೆಂಬರ್ ನಲ್ಲಿ ಹೆಚ್ಚಳ ಮಾಡಿದ್ದ ಸರ್ಕಾರ
ಕೇಂದ್ರ ಸರ್ಕಾರ ಎರಡು ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಹೆಚ್ಚಳ ಮಾಡಿರಲಿಲ್ಲ. ಆದರೆ, ಈ ವರ್ಷದ ಸೆಪ್ಟೆಂಬರ್ ನಲ್ಲಿ ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕಕ್ಕೆ 10-30 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು. 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮಾರ್ಗಸೂಚಿಗಳ ಅನ್ವಯ ಈ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಸರ್ಆರದ ಸೆಕ್ಯುರಿಟೀಸ್ (G-secs) ಗಳಿಕೆ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. 

ನಿಮ್ಮಎನ್ ಪಿಎಸ್ ಖಾತೆ ನಿಷ್ಕ್ರಿಯವಾಗಿದೆಯಾ? ಸಕ್ರಿಯಗೊಳಿಸಲು ಹೀಗೆ ಮಾಡಿ

ಸಣ್ಣ ಉಳಿತಾಯ ಯೋಜನೆಗಳು  vs ಬ್ಯಾಂಕ್ ಎಫ್ ಡಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) 2022ನೇ ಸಾಲಿನಲ್ಲಿ ಒಟ್ಟು ಐದು ಬಾರಿ ರೆಪೋ ದರ ಹೆಚ್ಚಳ ಮಾಡಿದೆ. ಇದ್ರಿಂದ ಈ ವರ್ಷ ರೆಪೋ ದರ ಒಟ್ಟು 225 ಬೇಸಿಸ್ ಪಾಯಿಂಟ್ಸ್ ಹೆಚ್ಚಳಗೊಂಡು ಶೇ.4.40 ರಿಂದ ಶೇ. 6.25ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಹುತೇಕ ಬ್ಯಾಂಕ್ ಗಳು ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಕೆಲವು ಸಣ್ಣ ಹಣಕಾಸು ಬ್ಯಾಂಕ್ ಗಳು ಠೇವಣಿಗಳ ಮೇಲೆ ವಾರ್ಷಿಕ ಶೇ.8.25-8.5 ಬಡ್ಡಿ ನೀಡುತ್ತಿವೆ. ಇನ್ನು ಪ್ರಮುಖ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳು 10 ದಿನಗಳಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ.3ರಿಂದ ಹಿಡಿದು ಶೇ.7.5 ಬಡ್ಡಿ ನೀಡುತ್ತಿವೆ. ಇನ್ನು ಹಿರಿಯ ನಾಗರಿಕರ ಠೇವಣಿಗಳ ಮೇಲೆ ಶೇ.8ರ ತನಕ ಬಡ್ಡಿ ನೀಡುತ್ತಿವೆ. 


 

click me!