ಕುಟುಂಬದ ಸೀರೆ ಉದ್ಯಮ ಮುನ್ನಡೆಸಲು ಅಮೆರಿಕದಲ್ಲಿನ ಉನ್ನತ ಹುದ್ದೆ ತ್ಯಜಿಸಿ ಬಂದ ಲಾವಣ್ಯ ನಲ್ಲಿ ಈಗ ಭಾರತದ ಯಶಸ್ವಿ ಮಹಿಳಾ ಉದ್ಯಮಿಗಳಲ್ಲೊಬ್ಬರು.
Business Desk: ಸೀರೆಪ್ರಿಯ ಮಹಿಳೆಯರಿಗೆ ನಲ್ಲಿ ಸಿಲ್ಕ್ ಬಗ್ಗೆ ಗೊತ್ತಿರುತ್ತದೆ. ನಲ್ಲಿ ಸಿಲ್ಕ್ ತನ್ನದೇ ಆದ ವಿಶೇಷ ವಿನ್ಯಾಸದ ಸೀರೆಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಹೊಂದಿದೆ. ನಲ್ಲಿ ಸಿಲ್ಕ್ ಗೆ ಹಲವು ವರ್ಷಗಳ ಇತಿಹಾಸವಿದೆ. ಪ್ರಸ್ತುತ ನಲ್ಲಿ ಸಿಲ್ಕ್ ಐದನೇ ತಲೆಮಾರಿನ ಮಾಲೀಕತ್ವ ಹೊಂದಿದೆ. ಲಾವಣ್ಯ ನಲ್ಲಿ ಅವರು ಕುಟುಂಬದ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಇವರು ಭಾರತದ ಜನಪ್ರಿಯ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ ಕೂಡ. 2005ರಲ್ಲಿ ನಲ್ಲಿ ಗ್ರೂಪ್ ಸೇರಿದ ಲಾವಣ್ಯ ನಾಲ್ಕು ವರ್ಷಗಳ ಬಳಿಕ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ ಎಂಬಿಎ ಪದವಿ ಪಡೆಯಲು ತೆರಳಿದ್ದರು. ಆ ಬಳಿಕ ಅವರು ಚಿಕಾಗೋ ಮೆಕ್ ಕಿನ್ಸೆ & ಕಂಪನಿಯಲ್ಲಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ನಂತರ ಭಾರತಕ್ಕೆ ಹಿಂತಿರುಗಿದ ಅವರು ಮೈಂತ್ರದ ಆದಾಯ ವಿಭಾಗದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು ಕೂಡ. 2015ರಲ್ಲಿ ಮೈಂತ್ರ ತೊರೆದ ಅವರು 2016ರಲ್ಲಿ ಮತ್ತೆ ನಲ್ಲಿಗೆ ಸೇರ್ಪಡೆಗೊಂಡರು. ನಲ್ಲಿಯ ಇ-ಕಾಮರ್ಸ್ ಹಾಗೂ ಒಮ್ನಿ ಚಾನಲ್ ಪ್ಲಾಟ್ ಫಾರ್ಮ್ ಉಪಾಧ್ಯಕ್ಷೆಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
39 ವರ್ಷ ವಯಸ್ಸಿನ ಲಾವಣ್ಯ ರಿಟೇಲ್, ಸ್ಟ್ರ್ಯಾಟಿಜಿ ಹಾಗೂ ಇ-ಕಾಮರ್ಸ್ ವಿಭಾಗದಲ್ಲಿ 18 ವರ್ಷಗಳ ಅನುಭವ ಹೊಂದಿದ್ದಾರೆ. ಇನ್ನು ಆಕೆಯ ಕುಟುಂಬದಿಂದ ಉದ್ಯಮ ರಂಗ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಅವರಿಗಿದೆ. ಲಾವಣ್ಯ ಅವರು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2005-2009ರ ಅವಧಿಯಲ್ಲಿ ನಲ್ಲಿ ಆದಾಯ ದುಪ್ಪಟ್ಟಾಗಿದೆ. ಹಾಗೆಯೇ ನಲ್ಲಿ ಮಳಿಗೆಗಳ ಸಂಖ್ಯೆ 14ರಿಂದ 21ಕ್ಕೆ ಏರಿಕೆಯಾಗಿದೆ.
ರೈತರಿಗೆ ನೆರವು ನೀಡೋ ಈ ಸ್ಟಾರ್ಟ್ ಅಪ್ ವಾರ್ಷಿಕ ವಹಿವಾಟು 550 ಕೋಟಿ; ನಾಲ್ಕೇ ವರ್ಷದಲ್ಲಿ ಯಶಸ್ಸು ಕಂಡ ಗೆಳತಿಯರು
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಲಾವಣ್ಯ ಹಾರ್ವರ್ಡ್ ನಲ್ಲಿ ಭೇಟಿಯಾದ ಅಭಯ್ ಕೊಠಾರಿ ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರು 2011ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಲಾವಣ್ಯ ಉದ್ಯಮ ಅಭಿವೃದ್ಧಿ ಹಾಗೂ ಬೆಳವಣಿಗೆ ಅವಕಾಶಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ರಿಟೇಲ್ ಮಳಿಗೆ ಕಾರ್ಯನಿರ್ವಹಣೆ ಹಾಗೂ ಪ್ರೈವೇಟ್ ಲೇಬಲ್ ಗಳ ಬಗ್ಗೆ ಕೂಡ ಒತ್ತು ನೀಡಿದ್ದರು.
1928ರಲ್ಲಿ ಪ್ರಾರಂಭವಾದ ನಲ್ಲಿ ಸಿಲ್ಕ್ ಜವಳಿ ಹಾಗೂ ರಿಟೇಲ್ ಉದ್ಯಮದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕೋವಿಡ್ -19ಗೂ ಮುನ್ನ ನಲ್ಲಿ ಸಿಲ್ಕ್ಸ್ ಆದಾಯ 750 ಕೋಟಿ ರೂ. ಇತ್ತು. ಇನ್ನೊಂದೆಡೆ ಕಳೆದ ಆರ್ಥಿಕ ಸಾಲಿನಲ್ಲಿ ಇ-ಕಾಮರ್ಸ್ ಉದ್ಯಮದ ಬೆಳವಣಿಗೆಯಲ್ಲಿ ಮೂರು ಪಟ್ಟು ಪ್ರಗತಿ ಕಂಡುಬಂದಿದೆ. ಇನ್ನು ನಲ್ಲಿ ಸಿಲ್ಕ್ಸ್ ನೇಕಾರರಿಂದ ನೇರವಾಗಿ ಸೀರೆಗಳನ್ನು ಖರೀದಿಸುತ್ತದೆ. ಪ್ರಸ್ತುತ 9,000 ನೇಕಾರರ ಸಂಸ್ಥೆಗಳೊಂದಿಗೆ ನಲ್ಲಿ ಸಿಲ್ಕ್ಸ್ ಕಾರ್ಯನಿರ್ವಹಿಸುತ್ತಿದೆ.
ಇಶಾ ಅಂಬಾನಿಯ 8.4 ಲಕ್ಷ ಕೋಟಿ ಮೌಲ್ಯದ ಸಂಸ್ಥೆಯ ಸಕ್ಸಸ್‌ಗೆ ಕಾರಣವಾಗಿರೋ ಭಕ್ತಿ ಮೋದಿ ಯಾರು?
ಇನ್ನು ದೇಶಾದ್ಯಂತ 40 ಮಳಿಗೆಗಳನ್ನು ಹೊಂದಿರುವ ನಲ್ಲಿ, ದಿನಕ್ಕೆ ಸರಾಸರಿ 4,000-4,500 ಸೀರೆಗಳನ್ನು ಮಾರಾಟ ಮಾಡುತ್ತಿದೆ. ಇನ್ನು ಇ-ಕಾಮರ್ಸ್ ವಿಭಾಗವನ್ನು ಕೂಡ ನಲ್ಲಿ ಹೊಂದಿದ್ದು, ಅದನ್ನು ಲಾವಣ್ಯ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇನ್ನು ಲಾವಣ್ಯ ಅವರ ತಂದೆ ರಾಮನಾಥ್ ನಲ್ಲಿ ರಫ್ತು ಹಾಗೂ ಆಪ್ ಲೈನ್ ಮಳಿಗೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಲಾವಣ್ಯ ಅವರ ಸಹೋದರ ನೀರನಾಥ್ ನಲ್ಲಿ ಜ್ಯುವೆಲ್ಲರಿ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ನಲ್ಲಿ ಜ್ಯುವೆಲ್ಲರಿ ಅನ್ನು 2012ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ನಲ್ಲಿ ಸಿಲ್ಕ್ ವಿದೇಶದಲ್ಲಿ ಕೂಡ ಮಳಿಗೆಗಳನ್ನು ಹೊಂದಿದೆ. ಅಮೆರಿಕದಲ್ಲಿ ಎರಡು ಹಾಗೂ ಸಿಂಗಾಪುರದಲ್ಲಿ ನಲ್ಲಿ ಸಿಲ್ಕ್ಸ್ ಒಂದು ಮಳಿಗೆಗಳನ್ನು ಹೊಂದಿದೆ. ಮದುವೆ ಸೀರೆಗಳಿಗೆ ನಲ್ಲಿ ಸಿಲ್ಕ್ ಸಾಕಷ್ಟು ಜನಪ್ರಿಯತೆ ಗಳಿಸಿದೆ.