ITR Filing: ಅಧಿಕ ತೆರಿಗೆ ರೀಫಂಡ್ ಪಡೆಯಲು ಈ 5 ಟಿಪ್ಸ್ ಅನುಸರಿಸಿ

By Suvarna News  |  First Published Jul 13, 2023, 5:51 PM IST

ನೀವು ಇನ್ನೂ ಐಟಿಆರ್ ಸಲ್ಲಿಕೆ ಮಾಡದಿದ್ರೆ ಹೆಚ್ಚಿನ ತೆರಿಗೆ ಉಳಿತಾಯ ಮಾಡುವ ಬಗ್ಗೆ ಯೋಚಿಸಬಹುದು. ಅಧಿಕ ತೆರಿಗೆ ರೀಫಂಡ್ ಪಡೆಯಲು ನೀವು ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಸೇರಿದಂತೆ  ಕೆಲವೊಂದು ಟಿಪ್ಸ್ ಅನುಸರಿಸಿದ್ರೆ ಸಾಕು, ಫಾರ್ಮ್ -16ನಲ್ಲಿ ತೋರಿಸಿರೋದಕ್ಕಿಂತ ಹೆಚ್ಚಿನ ತೆರಿಗೆ ಉಳಿತಾಯ ಮಾಡಬಹುದು. 


Business Desk:2022-23ನೇ ಹಣಕಾಸು ಸಾಲಿನ (2023-24 ಮೌಲ್ಯಮಾಪನ ವರ್ಷ) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕ. ಈಗಾಗಲೇ ಕೆಲವರು ಐಟಿಆರ್ ಸಲ್ಲಿಕೆ ಮಾಡಿದ್ದರೆ, ಇನ್ನೂ ಕೆಲವರು ಇನ್ನಷ್ಟೇ ಮಾಡಬೇಕಿದೆ.  ಫಾರ್ಮ್ -16 ಅಲ್ಲಿ ತೋರಿಸಿರೋದಕ್ಕಿಂತ ಹೆಚ್ಚಿನ ತೆರಿಗೆ ಉಳಿತಾಯ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಅನೇಕ ತೆರಿಗೆದಾರರು ಹೊಂದಿದ್ದಾರೆ. ಆದರೆ, ಸೂಕ್ತ ಮಾಹಿತಿ ಹೊಂದಿದ್ದರೆ ಫಾರ್ಮ್ -16ರಲ್ಲಿ ತೋರಿಸಿರೋದಕ್ಕಿಂತ ಹೆಚ್ಚಿನ ತೆರಿಗೆ ಉಳಿತಾಯ ಮಾಡಬಹುದು. ಹಾಗೆಯೇ ಹೆಚ್ಚಿನ ತೆರಿಗೆ ರೀಫಂಡ್ ಕೂಡ ಕ್ಲೇಮ್ ಮಾಡಬಹುದು. ಇದಕ್ಕೆ ನೀವು ಮೊದಲು ಮಾಡಬೇಕಾದ ಕೆಲಸವೆಂದ್ರೆ ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡೋದು. ಇನ್ನು ರೀಫಂಡ್ ಪಡೆಯಲು ಆದಾಯ ತೆರಿಗೆ ಇಲಾಖೆ ನಿಮ್ಮ ಐಟಿಆರ್ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಹೀಗಾಗಿ ಈ ಪ್ರಕ್ರಿಯೆ ಎಷ್ಟು ಬೇಗ ಮುಕ್ತಾಯವಾಗುತ್ತದೋ ಅಷ್ಟು ಬೇಗ ನಿಮಗೆ ರೀಫಂಡ್ ಸಿಗುತ್ತದೆ. ಹೀಗೆ ನಿಮ್ಮ ಐಟಿಆರ್ ಸಲ್ಲಿಕೆ ಮೇಲೆ ಅತ್ಯಧಿಕ ರೀಫಂಡ್ ಪಡೆಯಲು ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ.

1.ಸೂಕ್ತವಾದ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿ
ಅತ್ಯಧಿಕ ತೆರಿಗೆ ರೀಫಂಡ್ ಪಡೆಯಲು ನೀವು  ಮೊದಲು ನಿಮ್ಮ ಆದಾಯಕ್ಕೆ ಯಾವ ತೆರಿಗೆ ವ್ಯವಸ್ಥೆ ಸೂಕ್ತವಾಗಿದೆ ಎಂಬುದನ್ನು ಪರಿಶೀಲಿಸಬೇಕು. ಹಳೆಯ ಹಾಗೂ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ತೆರಿಗೆ ಉಳಿತಾಯ ಮಾಡಬಹುದು ಎಂಬುದನ್ನು ಮೊದಲು ಪರಿಶೀಲಿಸಿ. ನೀವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆ (ELSS) ಅಥವಾ ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಿಲ್ಲವಾದ್ರೆ ಅಥವಾ ಗೃಹಸಾಲ ಹೊಂದಿಲ್ಲವಾದರೆ ನಿಮಗೆ ತೆರಿಗೆ ಕಡಿತ ಅಥವಾ ವಿನಾಯಿತಿ ಪ್ರಯೋಜನ ಸಿಗೋದಿಲ್ಲ. ಇಂಥ ಸಂದರ್ಭದಲ್ಲಿ ನೀವು ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡೋದು ಸೂಕ್ತ. ಈ ವ್ಯವಸ್ಥೆಯಲ್ಲಿ ಯಾವುದೇ ತೆಎರಿಗೆ ಕಡಿತ ಅಥವಾ ವಿನಾಯ್ತಿ ಸೌಲಭ್ಯ ಲಭ್ಯವಿರೋದಿಲ್ಲ. ಇನ್ನು ತೆರಿಗೆ ದರಗಳು ಕೂಡ ಕಡಿಮೆಯಿರುತ್ತವೆ.

Tap to resize

Latest Videos

ಐಟಿಆರ್ ಸಲ್ಲಿಕೆ ಮಾಡಲು ಪ್ಯಾನ್ ಕಾರ್ಡ್ ಇಲ್ಲವೆ? ಇ-ಪ್ಯಾನ್ ಡೌನ್​ಲೋಡ್ ಮಾಡಲು ಈ ಸರಳ ವಿಧಾನ ಅನುಸರಿಸಿ

2.ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡಿ
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139(1) ಅಡಿಯಲ್ಲಿ ನಮೂದಿಸಿರುವ ಅಂತಿಮ ದಿನಾಂಕದೊಳಗೆ ತೆರಿಗೆದಾರರು ಐಟಿಆರ್ ಫೈಲ್ ಮಾಡಬೇಕು. ವಿಳಂಬ ಅಥವಾ ತಡವಾದ ರಿಟರ್ನ್ ಸಲ್ಲಿಕೆಗೆ ಸೆಕ್ಷನ್  234F ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ತೆರಿಗೆಗೊಳಪಡುವ ನಿಮ್ಮ ಆದಾಯ 5ಲಕ್ಷ ರೂ.ಗಿಂತ ಅಧಿಕವಿದ್ದರೆ ಆಗ 5,000ರೂ. ತನಕ ದಂಡ ವಿಧಿಸುವ ಸಾಧ್ಯತೆಯಿದೆ. 

3.ಮಾಹಿತಿಗಳನ್ನು ಸರಿ ಹೊಂದಿಸಿ
ಫಾರ್ಮ್ 26AS ಹಾಗೂ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ ನಲ್ಲಿರುವ (AIS) ಮಾಹಿತಿಗಳನ್ನು ನಿಮ್ಮ ನಿಜವಾದ ಆದಾಯದ ಜೊತೆಗೆ ಸರಿಹೊಂದಿಸುವ ಮೂಲಕ ಯಾವುದೇ ಅನಗತ್ಯ ತೊಂದರೆ ಎದುರಾಗದಂತೆ ನೋಡಿಕೊಳ್ಳಿ.

4.ತೆರಿಗೆ ರಿಟರ್ನ್ ಅನ್ನು ಒಂದು ತಿಂಗಳೊಳಗೆ ಇ-ಪರಿಶೀಲಿಸಿ
ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡಿದ ಬಳಿಕ ಅದನ್ನು ಒಂದು ತಿಂಗಳೊಳಗೆ ಪರಿಶೀಲಿಸೋದು ಅಗತ್ಯ. ಪರಿಶೀಲನೆಯಾದ ಬಳಿಕವಷ್ಟೇ ಆ ರಿಟರ್ನ್ ಅನ್ನು ಮುಂದಿನ ಪ್ರಕ್ರಿಯೆಗೊಳಪಡಿಸಲಾಗುತ್ತದೆ. ಹೀಗಾಗಿ ನೀವು ಎಷ್ಟು ಬೇಗ ಐಟಿಆರ್ ಪರಿಶೀಲನೆ ಮಾಡುತ್ತಿರೋ ಅಷ್ಟು ಬೇಗ ನಿಮಗೆ ರೀಫಂಡ್ ಸಿಗುತ್ತದೆ.

ಐಟಿಆರ್ ಸಲ್ಲಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ತೆರಿಗೆ ವಿನಾಯಿತಿ, ಕಡಿತ, ರಿಯಾಯಿತಿ ವ್ಯತ್ಯಾಸ ಅರಿಯೋದು ಅಗತ್ಯ

5. ಅರ್ಹ ಕಡಿತಗಳು ಹಾಗೂ ವಿನಾಯ್ತಿಗಳನ್ನು ಗುರುತಿಸಿ
ತೆರಿಗೆಗೊಳಪಡುವ ಆದಾಯಕ್ಕೆ ಎಷ್ಟು ಕಡಿತಗಳು ಹಾಗೂ ವಿನಾಯ್ತಿಗಳನ್ನು ಕ್ಲೇಮ್ ಮಾಡಬಹುದು ಎಂಬುದನ್ನು ಸಮರ್ಪಕವಾಗಿ ಲೆಕ್ಕ ಹಾಕಿ. ಇದು ನಿಮ್ಮ ತೆರಿಗೆಗೊಳಪಡುವ ಆದಾಯವನ್ನು ತಗ್ಗಿಸುತ್ತದೆ. ಆ ಮೂಲಕ ರೀಫಂಡ್ ಮೊತ್ತವನ್ನು ಹೆಚ್ಚಿಸುತ್ತದೆ. 

click me!