ಇ-ಕಾಮರ್ಸ್ ತಾಣಗಳು ಗ್ರಾಹಕರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತವೆ. ಇದ್ರಿಂದ ಪಾವತಿ ಶೀಘ್ರವಾಗಿಯೇನೋ ಆಗುತ್ತೆ. ಆದ್ರೆ ಮಾಹಿತಿ ಕಳವಾಗೋ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಆರ್ಬಿಐ 2022 ಜನವರಿಯಿಂದ ಕಾರ್ಡ್ ಟೋಕನೈಸೇಷನ್ ವ್ಯವಸ್ಥೆ ಜಾರಿಗೆ ತರಲಿದೆ.
ಇ-ಕಾಮರ್ಸ್ ಸಂಸ್ಥೆಗಳು (e-commerce companies) ಹಾಗೂ ಆನ್ಲೈನ್ ವ್ಯಾಪಾರಿಗಳು ಗ್ರಾಹಕರ ಡೆಬಿಟ್ (Debit Card) ಅಥವಾ ಕ್ರೆಡಿಟ್ ಕಾರ್ಡ್ (Credit Card) ವಿವರಗಳನ್ನು ಸಂಗ್ರಹಿಸೋದು ಸಾಮಾನ್ಯ. ಇದ್ರಿಂದ ಆ ಸಂಸ್ಥೆಗಳಿಂದ ಏನಾದ್ರು ಖರೀದಿಸಿದ್ರೆ, ಶೀಘ್ರವಾಗಿ ಪಾವತಿಸಲು ಸಾಧ್ಯವಾಗುತ್ತದೆ. ಆದ್ರೆ ಇದ್ರಿಂದ ಅಪಾಯವೂ ಇದೆ. ವಂಚಕರು ನಿಮ್ಮ ಕಾರ್ಡ್ ಮಾಹಿತಿಯನ್ನು ಕಳವು ಮಾಡಿ ದುರುಪಯೋಗಪಡಿಸಿಕೊಳ್ಳೋ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ ಮಾಡೋ ಆನ್ಲೈನ್ ಪಾವತಿ (Online Payment) ಅನ್ನು ಹೆಚ್ಚು ಸುರಕ್ಷಿತವಾಗಿಡಲು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) 2022 ರ ಜನವರಿಯಿಂದ ಕಾರ್ಡ್‌ಗಳ ಟೋಕನೈಸೇಷನ್ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ. ಇದರಿಂದ ಗ್ರಾಹಕರು ಆನ್ಲೈನ್ ವ್ಯಾಪಾರ ಕೇಂದ್ರಗಳಿಗೆ ಪಾವತಿ ಮಾಡೋವಾಗ ಕಾರ್ಡ್ ಮಾಹಿತಿಯನ್ನು ಸೇವ್ ಮಾಡಬೇಕಾದ ಅಗತ್ಯವಿಲ್ಲ. ಹೀಗಾಗಿ ಮುಂದಿನ ವರ್ಷದಿಂದ ನಿಮ್ಮ ಆನ್ಲೈನ್ ಶಾಪಿಂಗ್ ಪಾವತಿಗಳು (Online Shopping Payment) ಹೆಚ್ಚು ಸುರಕ್ಷಿತವಾಗಿರುತ್ತವೆ.
e-Shram portal: ಹೆಸರು ನೋಂದಾಯಿಸಿದ್ರೆ ಕಾರ್ಮಿಕರಿಗೇನು ಲಾಭ?
ಟೋಕನೈಸೇಷನ್ ಅಂದ್ರೇನು?
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಟೋಕನ್ ಎಂಬ ಪರ್ಯಾಯ ಕೋಡ್ನೊಂದಿಗೆ ಬದಲಾಯಿಸೋ ಪ್ರಕ್ರಿಯೆಯನ್ನು ಟೋಕನೈಸೇಷನ್ ಎಂದು ಕರೆಯಲಾಗುತ್ತದೆ. ಇದು ಕಾರ್ಡ್, ಟೋಕನ್ ರಿಕ್ವೆಸ್ಟರ್ (ಕಾರ್ಡ್ ಟೋಕನೈಸೇಷನ್‌ಗೆ (Tokenization) ಗ್ರಾಹಕರ ಮನವಿ ಸ್ವೀಕರಿಸೋ ಸಂಸ್ಥೆ ಅದನ್ನು ಕಾರ್ಡ್ ನೆಟ್ವರ್ಕ್‌ಗೆ ಕಳುಹಿಸುತ್ತದೆ) ಹಾಗೂ ಸಾಧನ...ಈ ಮೂರರ ವಿಶಿಷ್ಟ ಸಂಯೋಜನೆಯಾಗಿದೆ ಎಂದು ಆರ್ಬಿಐ ತಿಳಿಸಿದೆ. ಕಾರ್ಡ್ ಮಾಹಿತಿಗಳನ್ನು ಹಂಚಿಕೊಳ್ಳೋದ್ರಿಂದ ಎದುರಾಗಬಹುದಾದ ವಂಚನೆ ಸಾಧ್ಯತೆಗಳನ್ನು ಇದು ಕಡಿಮೆ ಮಾಡುತ್ತದೆ. ಈ ಟೋಕನ್ ಬಳಸಿ ಪಾಯಿಂಟ್ ಆಪ್ ಸೇಲ್ (PoS) ಟರ್ಮಿನಲ್ ಹಾಗೂ ಕ್ಯುಆರ್ ಕೋಡ್ (QR Code) ಪಾವತಿಗಳಲ್ಲಿ ಕೂಡ ಸಂಪರ್ಕ ರಹಿತ ವ್ಯವಹಾರ ಮಾಡಬಹುದು.
ಕಾರ್ಡ್ ಮಾಹಿತಿ ಸಂಗ್ರಹಿಸದಂತೆ ಸೂಚನೆ
ವ್ಯಾಪಾರಿಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಕಾರ್ಡ್ ಆನ್ ಫೈಲ್ (CoF)ನಲ್ಲಿ ಸಂಗ್ರಹಿಸಿಡುತ್ತಿದ್ದರು. 2022ರ ಜನವರಿ 1ರಿಂದ ಕಾರ್ಡ್ ಮಾಹಿತಿಗಳನ್ನು ಇಲ್ಲಿ ಸಂಗ್ರಹಿಸಿಡದಂತೆ ಆರ್ಬಿಐ ವ್ಯಾಪಾರಿಗಳಿಗೆ ಸೂಚನೆ ನೀಡಿದೆ. ಸಿಒಎಫ್ ವ್ಯವಹಾರದಲ್ಲಿ ಕಾರ್ಡ್ ಹೊಂದಿರೋ ವ್ಯಕ್ತಿ ವ್ಯಾಪಾರಿಗೆ ಮಾಸ್ಟರ್ ಕಾರ್ಡ್ ಅಥವಾ ವೀಸಾ ಪಾವತಿ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅಧಿಕಾರ ನೀಡುತ್ತಾನೆ. ಇ-ಕಾಮರ್ಸ್ ಕಂಪನಿಗಳು, ಏರ್ಲೈನ್ಸ್ ಸಂಸ್ಥೆಗಳು ಹಾಗೂ ಸೂಪರ್ ಮಾರ್ಕೆಟ್ ಚೈನ್‌ಗಳು (Super Market Chains) ಈ ರೀತಿ ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. 2020ರ ಮಾರ್ಚಿನಲ್ಲೇ ಕಾರ್ಡ್ ಮಾಹಿತಿಗಳನ್ನು ಅಳಿಸಿ ಹಾಕುವಂತೆ RBI ಸೂಚನೆ ನೀಡಿತ್ತು. ಆ ಬಳಿಕ ಈ ಗಡುವನ್ನು 2022ರ ಜನವರಿ 1ರ ತನಕ ವಿಸ್ತರಿಸಿದೆ.
ಬ್ಯಾಂಕ್ ಲಾಕರ್ ಹೊಸ ನಿಯಮ: ವಸ್ತು ಕಳೆದು ಹೋದ್ರೆ ಸಿಗಲಿದೆ ಪರಿಹಾರ!
ಹೇಗೆ ಕಾರ್ಯನಿರ್ವಹಿಸುತ್ತದೆ?
ಟೋಕನ್ ರಿಕ್ವೆಸ್ಟರ್ ಒದಗಿಸಿರೋ ಆ್ಯಪ್‌ನಲ್ಲಿ ಮನವಿ ಕಳುಹಿಸೋ ಮೂಲಕ ನೀವು ನಿಮ್ಮ ಕಾರ್ಡ್ಗಳನ್ನು ಟೋಕನೈಸ್ ಮಾಡಬಹುದು. ಟೋಕನ್ ರಿಕ್ವೆಸ್ಟರ್ ಈ ಮನವಿಯನ್ನು ಕಾರ್ಡ್ ನೆಟ್ವರ್ಕ್ಗೆ ಕಳುಹಿಸುತ್ತಾರೆ. ಕಾರ್ಡ್ ನೆಟ್ವರ್ಕ್ ಟೋಕನ್ ನೀಡುವವರ ಅನುಮತಿಯೊಂದಿಗೆ ಕಾರ್ಡ್, ಟೋಕನ್ ರಿಕ್ವೆಸ್ಟರ್ ಹಾಗೂ ಡಿವೈಸ್ ಈ ಮೂರರ ಸಂಯೋಜನೆಗೆ ಅನುಗುಣವಾಗಿ ಟೋಕನ್ ನೀಡುತ್ತದೆ. ಮೊಬೈಲ್ (Mobile), ಟ್ಯಾಬ್ಲೆಟ್ (Tablet) ಮುಂತಾದ ಸಾಧನಗಳ ಮೂಲಕ ಟೋಕನೈಸೇಷನ್ ಮಾಡಬಹುದು. ಸಂಪರ್ಕರಹಿತ ವಹಿವಾಟುಗಳು, ಕ್ಯುಆರ್ ಕೋಡ್ ಹಾಗೂ ಆಪ್ಗಳ ಮುಖಾಂತರ ಮಾಡೋ ಪಾವತಿಗಳಿಗೆ ಈ ಟೋಕನ್ ಬಳಸಬಹುದು.
ಉದ್ಯೋಗಿಗಳು EPF ಎರಡು ಖಾತೆ ತೆರೆಯೋದು ಅಗತ್ಯವೇ?
ಯಾರು ಟೋಕನ್ ನೀಡುತ್ತಾರೆ?
ವೀಸಾ ಹಾಗೂ ಮಾಸ್ಟರ್ ಕಾರ್ಡ್ ಕಂಪನಿಗಳು ಟೋಕನ್ ಒದಗಿಸುತ್ತವೆ. ಇವು ಟೋಕನ್ ಸೇವಾ ಪೂರೈಕೆದಾರರಂತೆ (ಟಿಎಸ್ಪಿ) ಕಾರ್ಯನಿರ್ವಹಿಸುತ್ತವೆ. ಮೊಬೈಲ್ ಪಾವತಿ ಹಾಗೂ ಇ-ಕಾಮರ್ಸ್ ವಹಿವಾಟುಗಳಿಗೆ ಟೋಕನ್ ಒದಗಿಸುತ್ತವೆ. ಹೀಗಾಗಿ ಆನ್ಲೈನ್ ವ್ಯವಹಾರ ನಡೆಸೋ ಸಮಯದಲ್ಲಿ ಗ್ರಾಹಕರು ಕ್ರೆಡಿಟ್ ಕಾರ್ಡ್ ಮಾಹಿತಿಗಳ ಬದಲಿಗೆ ಟೋಕನ್ ಬಳಸಬಹುದು. ಬಳಕೆದಾರರು ಗೂಗಲ್ ಪೇ, ಫೋನ್ ಪೇ ಮುಂತಾದ ಡಿಜಿಟಲ್ ವ್ಯಾಲೆಟ್ನಲ್ಲಿ ಕಾರ್ಡ್ ಮಾಹಿತಿ ನಮೂದಿಸಿದಾಗ ಈ ಪ್ಲ್ಯಾಟ್ಫಾರ್ಮ್ಗಳು ಯಾವುದಾದರೊಂದು ಟಿಎಸ್ಪಿಯಿಂದ ಟೋಕನ್ ಕೋರುತ್ತವೆ. ಆ ಬಳಿಕ ಟಿಎಸ್ಪಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನೀಡಿರೋ ಬ್ಯಾಂಕ್ನಲ್ಲಿ ಮಾಹಿತಿ ಪರಿಶೀಲಿಸಿದ ಬಳಿಕ ಕೋಡ್ ಸೃಷ್ಟಿಸಿ ಅದನ್ನು ಬಳಕೆದಾರರ ಸಾಧನಕ್ಕೆ ರವಾನಿಸುತ್ತದೆ. ಒಮ್ಮೆ ಈ ವಿಶಿಷ್ಟ ಟೋಕನ್ ಸೃಷ್ಟಿಯಾದ್ರೆ ಅದು ಬಳಕೆದಾರನ ಸಾಧನಕ್ಕೆ ಜೋಡಣೆಯಾಗಿರುತ್ತದೆ ಮತ್ತು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿ ಬಾರಿ ಗ್ರಾಹಕ ತನ್ನ ಸಾಧನ ಬಳಸಿ ಪಾವತಿ ಮಾಡೋವಾಗ ಟೋಕನ್ ಹಂಚಿಕೊಳ್ಳೋ ಮೂಲಕ ವ್ಯವಹಾರ ನಡೆಸಲು ಪ್ಲ್ಯಾಟ್ಫಾರ್ಮ್ಗೆ ಸಾಧ್ಯವಾಗುತ್ತದೆ. ಅಲ್ಲದೆ, ಇಲ್ಲಿ ಗ್ರಾಹಕರ ಕಾರ್ಡ್ನ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಳ್ಳಬೇಕಾದ ಅಗತ್ಯವಿರೋದಿಲ್ಲ. ಮೊಬೈಲ್ ವ್ಯಾಲೆಟ್‌ಗಳಾದ (Mobile Wallet) ಪೇಟಿಎಂ (Paytm), ಗೂಗಲ್ ಪೇ (Google Pay), ಆನ್ಲೈನ್ ವ್ಯಾಪಾರ ತಾಣಗಳಾದ ಅಮೇಜಾನ್ (Amazon), ಫ್ಲಿಪ್ಕಾರ್ಟ್ (Flipkart) ಹಾಗೂ ಭೌತಿಕ ಪಾವತಿಗೂ ಟೋಕನ್ ಬಳಸಬಹುದು.