ಚೀನಾಕ್ಕೆ ಮತ್ತೆ ಶಾಕ್| ಸರ್ಕಾರದ ಖರೀದಿಸುವ ವಸ್ತುಗಳ ಮೂಲ ಘೋಷಣೆ ಕಡ್ಡಾಯ| ಯಾವ ದೇಶದ್ದೆಂದು ವ್ಯಾಪಾರಿಗಳು ಘೋಷಿಸಬೇಕು: ಕೇಂದ್ರ
ನವದೆಹಲಿ(ಜೂ.24): ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಗಡಿಯಲ್ಲಿ ಕ್ಯಾತೆ ತೆಗೆದ ನೆರೆ ದೇಶಕ್ಕೆ ತಕ್ಕ ಪಾಠ ಕಲಿಸಬೇಕು ಎಂಬ ಕೂಗಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯ ಸಾಮಗ್ರಿ ಖರೀದಿಸಲು ಇರುವ ಸರ್ಕಾರಿ ಇ- ಮಾರ್ಕೆಟ್‌ಪ್ಲೇಸ್ (ಜಿಇಎಂ)ನಲ್ಲಿ ವ್ಯಾಪಾರಿಗಳು ಇನ್ನು ಮುಂದೆ ತಾವು ಮಾರುವ ವಸ್ತು ಯಾವ ದೇಶದ ಮೂಲದವು ಎಂಬುದನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಉತ್ಪನ್ನಗಳಲ್ಲಿ ಎಷ್ಟುಪ್ರಮಾಣದಲ್ಲಿ ದೇಶೀಯ ಅಂಶವಿದೆ ಎಂಬುದನ್ನೂ ಸೂಚಿಸಬೇಕು ಎಂದು ನಿರ್ದೇಶಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಆತ್ಮನಿರ್ಭರ ಭಾರತ’ (ಸ್ವಾವಲಂಬಿ ಭಾರತ) ಅಭಿಯಾನಕ್ಕೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಭಾರತದ ವಿರುದ್ಧ ತೊಡೆತಟ್ಟಿರುವ ಚೀನಾ ಉತ್ಪನ್ನಗಳಿಗೆ ಗೇಟ್‌ಪಾಸ್ ನೀಡಿ ದೇಶೀ ಉತ್ಪನ್ನಗಳಿಗೆ ಮನ್ನಣೆ ನೀಡುವ ಇರಾದೆಗೆ ನೆರವು ನೀಡಲಿದೆ.
ಚೀನಾ ಹಣಿಯಲು ಮೋದಿ ಸೂಕ್ತ: ನಮೋ ಮೇಲೆ ಶೇ. 89ರಷ್ಟು ಜನರಿಗೆ ನಂಬಿಕೆ!
ಈಗಾಗಲೇ ಇ- ಮಾರ್ಕೆಟ್‌ಪ್ಲೇಸ್‌ನಲ್ಲಿ ಉತ್ಪನ್ನಗಳನ್ನು ಅಪ್‌ಲೋಡ್ ಮಾಡಿರುವವರು ಅವು ಯಾವ ದೇಶದವು ಎಂಬ ಮಾಹಿತಿಯನ್ನು ಸೇರ್ಪಡೆಗೊಳಿಸಬೇಕು. ಇಲ್ಲದಿದ್ದರೆ ಅಂತಹ ಉತ್ಪನ್ನಗಳನ್ನೇ ತೆಗೆದುಹಾಕಲಾಗುತ್ತದೆ ಎಂದು ಪೋರ್ಟಲ್‌ನ ಸಿಇಒ ತಲ್ಲೀನ್ ಕುಮಾರ್ ತಿಳಿಸಿದ್ದಾರೆ.
ಏನಿದು ಇ-ಮಾರ್ಕೆಟ್‌ಪ್ಲೇಸ್?
ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಅಗತ್ಯವಿರುವ ಸಕರು ಮತ್ತು ಸೇವೆಗಳನ್ನು ಆನ್‌ಲೈನ್ ಮೂಲಕ ಖರೀದಿಸಲು 2016ರ ಆಗಸ್ಟ್‌ನಲ್ಲಿ ವೆಬ್‌ಸೈಟ್‌ವೊಂದನ್ನು ಆರಂಭಿಸಲಾಗಿದೆ. ಅದುವೇ ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್. ಸ್ಟೇಷನರಿಯಿಂದ ಹಿಡಿದು ವಾಹನ, ಆಟೋಮೊಬೈಲ್, ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ 18 ಲಕ್ಷ ಉತ್ಪನ್ನಗಳು ಇಲ್ಲಿ ಲಭ್ಯವಿದೆ. 3.94 ಲಕ್ಷ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದಾರೆ.
5 ದಿನದಲ್ಲಿ 40000 ಬಾರಿ ಚೀನಾ ಸೈಬರ್ ದಾಳಿ ಯತ್ನ!
ಫ್ಲಿಪ್‌ಕಾರ್ಟ್, ಅಮೆಜಾನ್‌ಗೂ ಇಂದು ಇದೇ ಸೂಚನೆ?
ಈ ನಡುವೆ, ಬುಧವಾರ ಉದ್ಯಮ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳ ಸಭೆ ಕರೆದಿದೆ. ಇದರಲ್ಲಿ ಉತ್ಪನ್ನಗಳು ಯಾವ ದೇಶದವು ಎಂಬುದನ್ನು ವೆಬ್‌ಸೈಟ್/ಆ್ಯಪ್‌ಗಳಲ್ಲಿ ನಮೂದಿಸುವಂತೆ ಸರ್ಕಾರವು ಇ-ಕಾಮರ್ಸ್ ಕಂಪನಿಗಳಿಗೆ ಸೂಚಿಸುವ ಸಾಧ್ಯತೆ ಇದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನಾ್ಯಪ್‌ಡೀಲ್, ಇ-ಬೇ ಮೊದಲಾದ ಕಂಪನಿಗಳು ಸಭೆಯಲ್ಲಿ ಭಾಗವಹಿಸಲಿವೆ.
‘ಸರ್ಕಾರದ ಇ-ಮಾರ್ಕೆಟ್ ಪ್ಲೇಸ್ ಮೂಲಕ ಉತ್ಪನ್ನಗಳನ್ನು ಮಾರುವವರು ಹೊಸ ಉತ್ಪನ್ನದ ನೋಂದಣಿ ವೇಳೆ ಅದು ಎಲ್ಲಿ ಉತ್ಪಾದನೆ ಆಗಿದೆ ಎಂಬುದನ್ನು ನಮೂದಿಸಬೇಕು. ಈಗಾಗಲೇ ಉತ್ಪನ್ನ ನೋಂದಣಿ ಮಾಡಿಸಿದವರು ಕೂಡ ಉತ್ಪನ್ನವನ್ನು ಉತ್ಪಾದಿಸಿದ ದೇಶದ ಹೆಸರನ್ನು ನಮೂದಿಸಿ ನೋಂದಣಿ ಪರಿಷ್ಕರಿಸಬೇಕು. ಒಂದು ವೇಳೆ ಪರಿಷ್ಕರಿಸದೇ ಹೋದರೆ ಪಟ್ಟಿಯಿಂದ ಆ ಉತ್ಪನ್ನಗಳನ್ನು ತೆಗೆದು ಹಾಕಲಾಗುವುದು’ ಎಂದು ಇ-ಮಾರ್ಕೆಟ್‌ಪ್ಲೇಸ್ ಸಿಇಒ ತಲ್ಲೀನ್ ಕುಮಾರ್ ಹೇಳಿದ್ದಾರೆ.
ಅಲ್ಲದೆ, ‘ಉತ್ಪನ್ನಗಳಲ್ಲಿನ ದೇಶೀಯ ಅಂಶವನ್ನು ನಮೂದಿಸುವುದು ಕೂಡ ಕಡ್ಡಾಯವಾಗಲಿದೆ. ಇದರಿಂದ, ಖರೀದಿದಾರರಿಗೆ ಉತ್ಪನ್ನವು ಭಾರತೀಯ ನಿರ್ಮಿತವೇ ಹಾಗೂ ಉತ್ಪನ್ನದಲ್ಲಿ ಭಾರತದ ಅಂಶ ಎಷ್ಟಿದೆ ಎಂದು ಗೊತ್ತಾಗಲಿದೆ. ಆಗ ಖರೀದಿದಾರರು ಭಾರತೀಯ ನಿರ್ಮಿತ ಅಥವಾ ಸ್ಥಳೀಯ ಅಂಶ ಹೆಚ್ಚಿರುವ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗಲಿದೆ. ‘ಮೇಕ್ ಇನ್ ಇಂಡಿಯಾ’ಗೆ ಇದು ನೆರವಾಗಲಿದೆ’ ಎಂದಿದ್ದಾರೆ.
ಮೋದಿಯನ್ನು ಚೀನಾ ಹೊಗಳೋದೇಕೆ?: ರಾಹುಲ್ ಪ್ರಶ್ನೆ!
ಇ-ಮಾರ್ಕೆಟ್ ಪ್ಲೇಸ್ ವೆಬ್‌ಸೈಟನ್ನು 2016ರಲ್ಲಿ ಸರ್ಕಾರ ಆರಂಭಿಸಿತ್ತು. ಆನ್‌ಲೈನ್ ಮೂಲಕವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಲಾಖೆಗಳು, ಸಾರ್ವಜನಿಕ ವಲಯದ ಕಂಪನಿಗಳು, ಸಶಸ್ತ್ರ ಪಡೆಗಳು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಇದರಿಂದ ನೆರವಾಗುತ್ತಿದೆ. ಈವರೆಗೆ 3,94,461 ಮಾರಾಟಗಾರರು ಹಾಗೂ ಸೇವಾದಾರ ಕಂಪನಿಗಳು ಇದರಲ್ಲಿ ನೋಂದಣಿ ಮಾಡಿಸಿಕೊಂಡಿವೆ. 18,30,688 ಉತ್ಪನ್ನಗಳು ಹಾಗೂ ಸೇವೆಗಳನ್ನು ನೋಂದಾಯಿಸಿವೆ.