Privatization OF Banks:ಸಾರ್ವಜನಿಕ ವಲಯದ 2 ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಚುರುಕು; ಆ ಎರಡು ಬ್ಯಾಂಕುಗಳು ಯಾವುವು?

By Suvarna News  |  First Published May 26, 2022, 2:19 PM IST

ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳ ಖಾಸಗೀಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದು, ಕೆಲವೇ ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. 
 


ನವದೆಹಲಿ (ಮೇ 25): ಕೇಂದ್ರ ಸರ್ಕಾರ (Central Government) ಸಾರ್ವಜನಿಕ ವಲಯದ (public sector) 2 ಬ್ಯಾಂಕುಗಳ ಖಾಸಗೀಕರಣಕ್ಕೆ (privatisation) ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದ ಪ್ರಕ್ರಿಯಗಳನ್ನು ಚುರುಕುಗೊಳಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿರುವುದಾಗಿ ಸುದ್ದಿಸಂಸ್ಥೆ ಪಿಟಿಐ (PTI) ವರದಿ ಮಾಡಿದೆ. 

2021-22ರ ಕೇಂದ್ರ ಬಜೆಟ್ ನಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ (privatization) ಸರ್ಕಾರ ಘೋಷಿಸಿತ್ತು. ಅಲ್ಲದೆ, ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಹೂಡಿಕೆ ಹಿಂತೆಗೆತ (Disinvestment) ನೀತಿಗೂ ಅನುಮೋದನೆ ನೀಡಿತ್ತು. ಕಳೆದ ವರ್ಷವೇ ಕೇಂದ್ರ ವಿತ್ತ ಸಚಿವೆ  (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳ ಖಾಸಗೀಕರಣಕ್ಕೆ  (privatization) ಸಂಬಂಧಿಸಿದ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸರ್ಕಾರ ಬಯಸಿದೆ ಎಂದು ತಿಳಿಸಿದ್ದರು. ಇದಕ್ಕಾಗಿ ಬ್ಯಾಂಕ್ ರಾಷ್ಟ್ರೀಕರಣ ಕಾಯ್ದೆ (Bank Nationalization Acts) 1970 ಹಾಗೂ  1980ಕ್ಕೆ ತಿದ್ದುಪಡಿ (Amendment) ತರಲಾಗುವುದು. ಹಾಗೆಯೇ ಬ್ಯಾಂಕ್ ನಿಯಂತ್ರಣ ಕಾಯ್ದೆ 1949ಕ್ಕೆ ಕೂಡ ತಿದ್ದುಪಡಿ (Amendment) ಮಾಡಲಾಗುತ್ತದೆ. ಹಣಕಾಸು ಸಚಿವಾಲಯದ (Finance Ministry) ಮೂಲಗಳ ಪ್ರಕಾರ, ಈ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿವೆ. 'ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ' ಕರಡು ಪ್ರತಿಯನ್ನು ಕೂಡ ಸಿದ್ಧಪಡಿಸಲು ಸರ್ಕಾರ ಪ್ರಾರಂಭಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಈ ತಿದ್ದುಪಡಿಗೆ ಅನುಮೋದನೆ (Approval) ಸಿಗುವ ಸಾಧ್ಯತೆಯಿದೆ. ಒಮ್ಮೆ ಸಂಸತ್ತಿನಲ್ಲಿ (Parliament) ತಿದ್ದುಪಡಿಗೆ ಅನುಮೋದನೆ ಸಿಕ್ಕರೆ ಆ ಬಳಿಕ ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ.

Tap to resize

Latest Videos

LIC IPO: ಹೂಡಿಕೆದಾರರಿಗೆ ಶೀಘ್ರದಲ್ಲಿ ಸಿಗಲಿದೆಯಾ ಡಿವಿಡೆಂಡ್? ಎಲ್ಐಸಿ ನೀಡಿರುವ ಮಾಹಿತಿಯೇನು?

ಯಾವ ಬ್ಯಾಂಕುಗಳ ಖಾಸಗೀಕರಣ?
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಪ್ರಾರಂಭದಲ್ಲಿ 4 ಮಧ್ಯಮ ಗಾತ್ರದ ಬ್ಯಾಂಕುಗಳನ್ನು ಖಾಸಗೀಕರಣಕ್ಕೆ ಆಯ್ಕೆ ಮಾಡಿದೆ. ಈ ಮೊದಲ ಪಟ್ಟಿಯಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra), ಬ್ಯಾಂಕ್ ಆಫ್ ಇಂಡಿಯಾ (Bank of India). ಇಂಡಿಯನ್ ಒವರ್ ಸೀಸ್ ಬ್ಯಾಂಕ್ (Indian Overseas Bank) ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಸೇರಿವೆ. ಆದ್ರೆ ನೀತಿ ಆಯೋಗ ಇಂಡಿಯನ್ ಒವರ್ ಸೀಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬಹುತೇಕ ಷೇರುಗಳನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಹೀಗಾಗಿ ಸರ್ಕಾರ ನೀತಿ ಆಯೋಗದ ಪ್ರಸ್ತಾವನೆಯ ಪ್ರಕಾರ ಈ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಸಾಧ್ಯತೆಯಿದೆ.

ಮನೆಯನ್ನು Rentಗೆ ನೀಡೋ ಮುನ್ನ ಇವೆಲ್ಲಾ ಗೊತ್ತು ಮಾಡಿಕೊಳ್ಳಿ

ಬಿಪಿಸಿಎಲ್ ಖಾಸಗೀಕರಣ?
ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್  (BPCL) ಖಾಸಗೀಕರಣ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ.  ಬಿಪಿಸಿಎಲ್ ನಲ್ಲಿರುವ ಸರ್ಕಾರದ 52.98 ರಷ್ಟು ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.  ಈ ಸಂಬಂಧ 2020ರ ಮಾರ್ಚ್ ನಲ್ಲಿ ಬಿಡ್ಡಿಂಗ್ ಆಹ್ವಾನಿಸಲಾಗಿತ್ತು. ಪ್ರಾರಂಭದಲ್ಲಿ ಮೂರು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಆದ್ರೆ ಕೊನೆಯಲ್ಲಿ ಒಂದು ಕಂಪನಿ ಮಾತ್ರ ಉಳಿದಿತ್ತು. ಇನ್ನು ಕಂಟೇನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ (Concor) ಮಾರಾಟಕ್ಕೆ ಕೂಡ ಸಿದ್ಧತೆ ನಡೆಯುತ್ತಿದೆ. ಆದ್ರೆ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದು, ಬಗೆಹರಿದ ಬಳಿಕ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಭಾರತೀಯ ಜೀವ ವಿಮಾ ನಿಗಮದಲ್ಲಿನ (LIC) ಶೇ.3.5 ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಿತ್ತು. 
 

click me!