ಹಳೆಯ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದ್ರೆ ಇಳಿಕೆಯಾಗುತ್ತೆ ಕ್ರೆಡಿಟ್ ಸ್ಕೋರ್, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

By Suvarna News  |  First Published Aug 18, 2023, 6:26 PM IST

ಸಾಮಾನ್ಯವಾಗಿ ಹಳೆಯದಾದ ವಸ್ತುಗಳನ್ನು ಬದಲಾಯಿಸಿ ಹೊಸದನ್ನು ಖರೀದಿಸೋದು ಎಲ್ಲರ ಅಭ್ಯಾಸ. ಆದರೆ, ಇದನ್ನು ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ಮಾತ್ರ ಮಾಡ್ಬೇಡಿ. ಹಳೆಯ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡೋದ್ರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ತಗ್ಗುತ್ತದೆ. ಅದು ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ. 


Business Desk:ಕ್ರೆಡಿಟ್ ಕಾರ್ಡ್ ಗೂ ಕ್ರೆಡಿಟ್ ಸ್ಕೋರ್ ಗೂ ಸಂಬಂಧವಿದೆಯಾ? ಖಂಡಿತಾ ಇದೆ. ಕ್ರೆಡಿಟ್ ಕಾರ್ಡ್ ಬಳಕೆ, ಬಿಲ್ ಪಾವತಿ ಅವಧಿ ಇವೆಲ್ಲವೂ ನಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. ಹೀಗಿರುವಾಗ ಹಳೆಯ ಕ್ರೆಡಿಟ್ ಕಾರ್ಡ್ ವೊಂದನ್ನು ಕ್ಲೋಸ್ ಮಾಡುವ ನಿರ್ಧಾರವನ್ನು ನೀವು ಕೈಗೊಂಡರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲವೇ? ಅದು ಹೇಗೆ ಎಂಬ ಪ್ರಶ್ನೆ ಮೂಡಬಹುದು. ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದ್ರೆ ಕ್ರೆಡಿಟ್ ಸ್ಕೋರ್ ಮೇಲೆ ಖಂಡಿತಾ ಪರಿಣಾಮವಾಗುತ್ತದೆ. ತುಂಬಾ ವರ್ಷಗಳ ಕಾಲ ನೀವು ಬಳಸಿದ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡೋದ್ರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ತಗ್ಗುತ್ತದೆ. ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು 5 ಅಂಶಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಈ ಐದರಲ್ಲಿ ಎರಡು ಅತ್ಯಂತ ಪ್ರಮುಖವಾದ ಅಂಶಗಳಾಗಿವೆ. ಅದರಲ್ಲಿ ಒಂದು ಕ್ರೆಡಿಟ್ ಹಿಸ್ಟರಿಯ ಅವಧಿ ಹಾಗೂ ಇನ್ನೊಂದು ಕ್ರೆಡಿಟ್ ಬಳಕೆ. ಹಾಗಾದ್ರೆ ಈ ಎರಡು ಅಂಶಗಳು ಕ್ರೆಡಿಟ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

1.ಕ್ರೆಡಿಟ್ ಹಿಸ್ಟರಿ ಅವಧಿ: ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ ದೀರ್ಘಾವಧಿಯ ಕ್ರೆಡಿಟ್ ಹಿಸ್ಟರಿಯನ್ನು ತೋರಿಸುತ್ತದೆ. ಹಳೆಯ ಕ್ರೆಡಿಟ್ ಕಾರ್ಡ್ ಸಮಯಕ್ಕೆ ಸರಿಯಾಗಿ ಹಣವನ್ನು ಮರುಪಾವತಿಸುವ ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ನಿಮ್ಮ ಕ್ರೆಡಿಟ್ ಹಿಸ್ಟರಿ ಅವಧಿ ನಿಮ್ಮ ಕ್ರೆಡಿಟ್ ಸ್ಕೋರ್ ನ ಶೇ.15ರಷ್ಟನ್ನು ಒಳಗೊಂಡಿದೆ. ಹೀಗಾಗಿ ಹಳೆಯ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡೋದ್ರಿಂದ ನಿಮ್ಮ ಕ್ರೆಡಿಟ್ ಹಿಸ್ಟರಿ ಉದ್ದ ತಗ್ಗುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡೋದ್ರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ನಿಮ್ಮ ದೀರ್ಘವಾದ ಕ್ರೆಡಿಟ್ ಹಿಸ್ಟರಿ ಅಳಿಸಿ ಹೋಗುತ್ತದೆ.

Tap to resize

Latest Videos

ಸಾಲದ ಮೇಲೆ ಬ್ಯಾಂಕ್ ದಂಡ ರೂಪದಲ್ಲಿ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ; ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ RBI

2.ಕ್ರೆಡಿಟ್ ಬಳಕೆ: ಇದು ಕ್ರೆಡಿಟ್ ಸ್ಕೋರ್ ನ ಶೇ.30ರಷ್ಟು ಭಾಗವನ್ನು ಒಳಗೊಂಡಿದೆ. ಅಂದರೆ ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕುವಾಗ ಕ್ರೆಡಿಟ್ ಬಳಕೆ ಮಹತ್ವದ ಪಾತ್ರ ವಹಿಸುತ್ತದೆ. ಕ್ರೆಡಿಟ್ ಬಳಕೆ ಎಂದರೆ ನಿಮಗೆ ಲಭ್ಯವಿರುವ ಕ್ರೆಡಿಟ್ ಅನ್ನು ಎಷ್ಟು ಬಳಸಿದ್ದೀರಿ ಎಂಬುದು. ಹೀಗಿರುವಾಗ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು ಅಂದ್ರೆ ನಿಮ್ಮ ಕ್ರೆಡಿಟ್ ಬಳಕೆ ಶೇ.30ರ ಕೆಳಗಿರುವಂತೆ ನೋಡಿಕೊಳ್ಳುವುದು ಅಗತ್ಯ.  ಇನ್ನು ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡೋದ್ರಿಂದ ನಿಮ್ಮ ಒಟ್ಟಾರೆ ಕ್ರೆಡಿಟ್ ಮಿತಿ ತಗ್ಗುತ್ತದೆ. ಇದು ಕ್ರೆಡಿಟ್ ಬಳಕೆ ಶೇ.30ರಿಂದ ಮೇಲಕ್ಕೇರುವಂತೆ ಮಾಡುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಹಳೆಯ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಬದಲು ಅದನ್ನು ಉಚಿತ ಅಥವಾ ಕಡಿಮೆ ಶುಲ್ಕಕ್ಕೆ ಇಳಿಸಿಕೊಳ್ಳುವ ಪ್ರಯತ್ನ ಮಾಡಿ.

ವೈಯಕ್ತಿಕ ಸಾಲಕ್ಕೆ ಸಂಬಂಧಿಸಿ RBI ಮಹತ್ವದ ಸೂಚನೆ; ಸ್ಥಿರ, ಫ್ಲೋಟಿಂಗ್ ಬಡ್ಡಿದರದ ನಡುವೆ ಬದಲಾವಣೆಗೆ ಅವಕಾಶ

ಹಳೆಯ ಕ್ರೆಡಿಟ್ ಕಾರ್ಡ್ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿರಲು ನೆರವು ನೀಡುತ್ತದೆ. ಹೀಗಾಗಿ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಗಳಿವೆ ಎಂಬ ಕಾರಣಕ್ಕೆ ಹಳೆಯದಾದ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡುವ ನಿರ್ಧಾರ ಕೈಗೊಳ್ಳಬೇಡಿ. 

ಬ್ಯಾಂಕ್ ಗಳಿಂದ ಸಾಲ ಪಡೆಯಲು ಹಾಗೂ ಸಾಲದ ಬಡ್ಡಿದರ ನಿರ್ಧರಿಸುವಲ್ಲಿ ಕ್ರೆಡಿಟ್ ಸ್ಕೋರ್ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಕ್ರೆಡಿಟ್ ಸ್ಕೋರ್  ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡೋದು, ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪ್ರತಿ ತಿಂಗಳು ನಿಗದಿತ ದಿನಾಂಕದಂದು ಪಾವತಿಸೋದು ಮುಂತಾದ ಅನೇಕ ಅಂಶಗಳು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. 
 

click me!