ಕಣ್ಮರೆಯಾಗುತ್ತಿವೆ ಕರುನಾಡ ದೈತ್ಯ ಬ್ಯಾಂಕುಗಳು; ಕರಾವಳಿ ಆಸ್ಮಿತೆಗೆ ಪೆಟ್ಟು?

By Kannadaprabha News  |  First Published Sep 1, 2019, 4:16 PM IST

ಬ್ಯಾಂಕಿಂಗ್‌ ಕ್ಷೇತ್ರದ ತವರು, ‘ಬ್ಯಾಂಕ್‌ಗಳ ತೊಟ್ಟಿಲು’ ಎಂದು ಕರೆಸಿಕೊಂಡ ಕರ್ನಾಟಕ ಕರಾವಳಿ ಜಿಲ್ಲೆಯಲ್ಲಿ ಹುಟ್ಟಿದ ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರು ಭವಿಷ್ಯದಲ್ಲಿ ನೆನಪು ಮಾತ್ರ. ಕರಾವಳಿಯ ಆರ್ಥಿಕತೆ, ಪ್ರಗತಿ ಹಾಗೂ ಉದ್ಯೋಗ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರಮುಖ ಬ್ಯಾಂಕುಗಳು ಸ್ವಂತ ಹೆಸರನ್ನು ಕಳೆದುಕೊಳ್ಳುತ್ತಿವೆ. 


ಬ್ಯಾಂಕಿಂಗ್‌ ಕ್ಷೇತ್ರದ ತವರು, ‘ಬ್ಯಾಂಕ್‌ಗಳ ತೊಟ್ಟಿಲು’ ಎಂದು ಕರೆಸಿಕೊಂಡ ಕರ್ನಾಟಕ ಕರಾವಳಿ ಜಿಲ್ಲೆಯಲ್ಲಿ ಹುಟ್ಟಿದ ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರು ಭವಿಷ್ಯದಲ್ಲಿ ನೆನಪು ಮಾತ್ರ. ಕರಾವಳಿಯ ಆರ್ಥಿಕತೆ, ಪ್ರಗತಿ ಹಾಗೂ ಉದ್ಯೋಗ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರಮುಖ ಬ್ಯಾಂಕುಗಳು ಸ್ವಂತ ಹೆಸರನ್ನು ಕಳೆದುಕೊಳ್ಳುತ್ತಿವೆ.

ಕಳೆದ ವರ್ಷ ಕರಾವಳಿ ಮೂಲದ ವಿಜಯಾ ಬ್ಯಾಂಕ್‌ ಸಂಯೋಗದೊಂದಿಗೆ ಆರಂಭವಾದ ಪ್ರಕ್ರಿಯೆ ಈಗ ಜಿಲ್ಲೆಯ ನಾಲ್ಕು ಬ್ಯಾಂಕ್‌ಗಳ ವಿಲೀನದೊಂದಿಗೆ ತಾರ್ಕಿಕ ಅಂತ್ಯ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ವಿಭಜಿತ ದಕ್ಷಿಣ ಕನ್ನಡದಲ್ಲಿ ಹುಟ್ಟಿದೇಶದ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದ ಬ್ಯಾಂಕುಗಳ ಇತಿಹಾಸ, ಅವುಗಳ ವಾರ್ಷಿಕ ವಹಿವಾಟು, ವಿಲೀನದ ಹಿಂದಿನ ಉದ್ದೇಶ ಏನು, ಎತ್ತ ಎಂಬ ಸಮಗ್ರ ಮಾಹಿತಿ ಇಲ್ಲಿದೆ.

Tap to resize

Latest Videos

undefined

ಬ್ಯಾಂಕಿಂಗ್ ವಲಯಕ್ಕೆ ಎಲ್ ಐಸಿ ಪ್ರವೇಶ

ಮೂಲ ಹೆಸರಲ್ಲಿ ಕೆನರಾ ಬ್ಯಾಂಕ್‌ ಮಾತ್ರ

2017ರಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಸೇರಿದಂತೆ ಆರು ಬ್ಯಾಂಕ್‌ಗಳು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ವಿಲೀನಗೊಂಡವು. ನಂತರದ ಸರದಿ ಮಂಗಳೂರು ಮೂಲದ ವಿಜಯಾ ಬ್ಯಾಂಕ್‌ ಕಳೆದ ವರ್ಷ ಬ್ಯಾಂಕ್‌ ಆಫ್‌ ಬರೋಡ ಹಾಗೂ ದೇನಾ ಬ್ಯಾಂಕ್‌ ಜೊತೆ ವಿಲೀನಗೊಂಡಿತ್ತು. ಈಗ, ಇದೀಗ ದಕ್ಷಿಣ ಕನ್ನಡ, ಉಡುಪಿಯಲ್ಲಿ ಹುಟ್ಟಿದ ಕಾರ್ಪೊರೇಷನ್‌ ಮತ್ತು ಆಂಧ್ರ ಬ್ಯಾಂಕ್‌ಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಜೊತೆಗೆ ವಿಲೀನಗೊಳ್ಳುತ್ತಿವೆ. ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿಕೇಟ್‌ ಬ್ಯಾಂಕ್‌ ಕೂಡ ವಿಲೀನವಾಗಲಿದೆ.

ಇದರೊಂದಿಗೆ ಕರಾವಳಿಯಲ್ಲಿ ಹುಟ್ಟಿದ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಕೆನರಾ ಬ್ಯಾಂಕ್‌ ಮಾತ್ರ ಮೂಲ ಹೆಸರಿನಲ್ಲಿ ಉಳಿದುಕೊಳ್ಳಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ತಲೆದೋರಿದ ಆರ್ಥಿಕ ಹಿಂಜರಿತ, ಬ್ಯಾಂಕ್‌ ರಾಷ್ಟ್ರೀಕರಣ, ನೋಟು ಅಮಾನ್ಯ ಮುಂತಾದ ಭಾರೀ ಸವಾಲುಗಳ ಹೊರತೂ ದೇಶದ ಬ್ಯಾಂಕಿಂಗ್‌ ಕ್ಷೇತ್ರ ಭದ್ರವಾಗಿ ನಿಂತಿದ್ದ, ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡಿದ್ದ ಕರಾವಳಿಯ ಬ್ಯಾಂಕ್‌ಗಳೀಗ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ.

ಕರುನಾಡಿನ ಬ್ಯಾಂಕ್‌ಗಳ ಇತಿಹಾಸ ಸರ್‌ಎಂವಿ ಸ್ಥಾಪಿಸಿದ್ದ ಎಸ್‌ಬಿಎಂ

ಮೈಸೂರಿನ ಮಹಾರಾಜ ನಾಲ್ಕನೇ ಕೃಷ್ಣರಾಜ ಒಡೆಯರ್‌ ಅವರ ಪೋಷಣೆಯಲ್ಲಿ 1931ರ ಮೇ 19ರಂದು ದಿ ಬ್ಯಾಂಕ್‌ ಆಫ್‌ ಮೈಸೂರು ಲಿಮಿಟೆಡ್‌ ಹೆಸರಿನಲ್ಲಿ ಆರಂಭಗೊಂಡಿತು. ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಈ ಬ್ಯಾಂಕನ್ನು ಸ್ಥಾಪಿಸಿದರು. ಕೇವಲ 20 ಲಕ್ಷ ರು. ಬಂಡವಾಳದಲ್ಲಿ ಆರಂಭವಾದ ಈ ಬ್ಯಾಂಕ್‌ 1953ರಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ತೆರೆದುಕೊಂಡು ಮೈಸೂರು ಬ್ಯಾಂಕ್‌ ಆಗಿ ನಾಮಾಂಕಿತಗೊಂಡು ಸಾರ್ವಜನಿಕ ರಂಗದ ಬ್ಯಾಂಕ್‌ ಆಗಿ ಪರಿವರ್ತನೆಗೊಂಡಿತು.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ ಇದು 2013ರಲ್ಲಿ ಶತಮಾನೋತ್ಸವವನ್ನು ಆಚರಿಸಿತು. 104 ವರ್ಷ ಇತಿಹಾಸದ ಈ ಬ್ಯಾಂಕ್‌, ಇತರೆ ಆರು ಸಹವರ್ತಿ ಬ್ಯಾಂಕ್‌ಗಳ ಜೊತೆಗೆ 2017 ಏ.1ರಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಜೊತೆಗೆ ವಿಲೀನಗೊಂಡಿತು.

ದೈತ್ಯ ಬ್ಯಾಂಕ್ ಆಗಿ ಹೊರಹೊಮ್ಮಿದ ಕೆನರಾ ಬ್ಯಾಂಕ್

ದಶಮಿಯಂದು ಅರಂಭವಾಗಿದ್ದ ವಿಜಯಾ

1931ರ ಅ.23ರ ವಿಜಯದಶಮಿಯಂದು ಸ್ಥಾಪನೆಯಾದ ಕರಾವಳಿಯ ಹೆಮ್ಮೆಯ ಬ್ಯಾಂಕ್‌ ವಿಜಯಾ ಬ್ಯಾಂಕ್‌. ಆರ್ಥಿಕ ಹಿಂಜರಿತದ ಅವಧಿಯಲ್ಲಿ ಅತ್ತಾವರ ಬಾಲಕೃಷ್ಣ ಶೆಟ್ಟಿ(ಎ.ಬಿ.ಶೆಟ್ಟಿ) ಕೇವಲ 5 ಲಕ್ಷ ರು. ಬಂಡವಾಳದಲ್ಲಿ ಈ ಬ್ಯಾಂಕ್‌ನ್ನು ಸ್ಥಾಪಿಸಿದರು. 14 ಮಂದಿ ಬಂಟ ಸಮುದಾಯದವರು ಸೇರಿ ಸ್ಥಾಪಿಸಿದ ಈ ಬ್ಯಾಂಕ್‌ 1958ರಲ್ಲಿ ಶೆಡ್ಯೂಲ್ಡ್‌ ಬ್ಯಾಂಕ್‌ ಆಗಿ ಪರಿವರ್ತನೆಗೊಂಡಿತ್ತು. 1963ರಲ್ಲಿ ಇತರೆ 9 ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಅಖಿಲ ಭಾರತ ಬ್ಯಾಂಕ್‌ ಆಗಿ ರೂಪುಗೊಂಡಿತು.

1965 ರಲ್ಲಿ ಸಂಯುಕ್ತ ಲೋಗೋವನ್ನು ಹೊಂದಿತು. 1969 ನ.11ರಂದು ಈ ಬ್ಯಾಂಕಿನ ಪ್ರಧಾನ ಕಚೇರಿ ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿತು. 1980 ಏ.15ರಂದು ಈ ಬ್ಯಾಂಕ್‌ ರಾಷ್ಟ್ರೀಕೃತ ಬ್ಯಾಂಕ್‌ ಆಯಿತು. ಕಳೆದ ವರ್ಷ ಈ ಬ್ಯಾಂಕನ್ನೂ ಕೇಂದ್ರ ಸರ್ಕಾರ ದೇನಾ ಬ್ಯಾಂಕ್‌ನೊಂದಿಗೆ ವಿಲೀನ ಮಾಡಿತು.

ಹಿಂದು ಶಾಶ್ವತ ನಿಧಿಯೇ ಕೆನರಾ ಬ್ಯಾಂಕ್‌

ಅಮ್ಮೆಂಬಳ ಸುಬ್ಬಾ ರಾವ್‌ ಪೈ 1906 ಜುಲೈ 1ರಂದು ಮಂಗಳೂರಿನಲ್ಲಿ ಕೆನರಾ ಹಿಂದು ಪರ್ಮನೆಂಟ್‌ ಫಂಡ್‌ ಸ್ಥಾಪಿಸಿದ್ದರು. ಇದು ಕೆನರಾ ಬ್ಯಾಂಕ್‌ ಆಗಿ ಪರಿವರ್ತನೆಯಾಗಿದ್ದು 1910ರಲ್ಲಿ. 1969ರಲ್ಲಿ ಬ್ಯಾಂಕ್‌ ರಾಷ್ಟ್ರೀಕರಣಗೊಂಡಿದ್ದು, ಪ್ರಸಕ್ತ ಸುಮಾರು 6,310 ಶಾಖೆಗಳು, 8 ಸಾವಿರದಷ್ಟುಎಟಿಎಂಗಳನ್ನು ಹೊಂದಿದೆ. ಲಂಡನ್‌, ಹಾಂಕಾಂಗ್‌, ಮಾಸ್ಕೋ, ಶಾಂಘೈ, ದುಬೈ, ತಾಂಜಾನಿಯಾ, ನ್ಯೂಯಾರ್ಕ್ಗಳಲ್ಲೂ ಕಚೇರಿಗಳನ್ನು ಹೊಂದಿರುವುದು ವಿಶೇಷ. ಬ್ಯಾಂಕ್‌ನಲ್ಲಿ 58 ಸಾವಿರಕ್ಕೂ ಅಧಿಕ ನೌಕರರಿದ್ದಾರೆ.

ಬ್ಯಾಂಕ್‌ಗಳ ತವರೂರು ದ. ಕನ್ನಡ ಜಿಲ್ಲೆ: ದಶಮಿಯಂದು ಆರಂಭವಾಗಿತ್ತು ವಿಜಯಾ ಬ್ಯಾಂಕ್

6310-ಶಾಖೆಗಳು

8000-ಎಟಿಎಂ

58,000-ನೌಕರರು

38 ರು. ನಿಂದ 3 ಲಕ್ಷ ಕೋಟಿ

ವ್ಯವಹಾರ ನಡೆಸುತ್ತಿರುವ ಕಾರ್ಪ್ 

1906ರ ಮಾ.12ರಂದು ಖಾನ್‌ ಬಹದ್ದೂರ್‌ ಹಾಜಿ ಅಬ್ದುಲ್ಲಾ ಹಾಜಿ ಕಾಶಿಂ ಸಾಹೇಬ್‌ ಬಹದ್ದೂರ್‌ ಅವರು ಉಡುಪಿಯಲ್ಲಿ ದಿ ಕೆನರಾ ಬ್ಯಾಂಕಿಂಗ್‌ ಕಾರ್ಪೋರೇಶನ್‌(ಉಡುಪಿ) ಲಿಮಿಟೆಡ್‌ ಸ್ಥಾಪಿಸಿದ್ದರು. ಇದು ಕಾರ್ಪೊರೇಶನ್‌ ಬ್ಯಾಂಕ್‌ ಎಂದು ಹೆಸರು ಬದಲಿಸಿಕೊಂಡದ್ದು 1972ರಲ್ಲಿ. ಆಗಿನ ಕಾಲದಲ್ಲಿ ಕಟ್ಟುನಿಟ್ಟಾಗಿದ್ದ ಜಾತಿಧರ್ಮವನ್ನು ಮೀರುವುದು ಮಾತ್ರವಲ್ಲ, ಸಹಕಾರ ತತ್ವ ಹರಡುವುದು ಕೂಡ ತಮ್ಮ ಬ್ಯಾಂಕಿನ ಉದ್ದೇಶ ಎಂದು ಸ್ಥಾಪಕ ಕಾಶಿಂ ಸಾಹೇಬ್‌ ಬಹದ್ದೂರ್‌ ಅವರೇ ಹೇಳಿದ್ದರು. ಕಾರ್ಪ್ ಬ್ಯಾಂಕ್‌ ದೇಶದಲ್ಲಿಯೇ ಪ್ರಥಮ ಬಾರಿಗೆ ಕ್ಯಾಶ್‌ ಮ್ಯಾನೇಜ್ಮೆಂಟ್‌ ಸರ್ವೀಸ್, ಗೋಲ್ಡ್, ಬ್ಯಾಂಕಿಂಗ್‌, ಎಂ- ಕಾಮರ್ಸ್‌, ಆನ್‌ಲೈನ್‌ ಎಜುಕೇಶನ್‌ ಲೋನ್‌, ಶೇ. 100 ಗಣಕೀಕರಣ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಾಜಿ ಅಬ್ಲುಲ್ಲಾ ಅವರ 5000 ರು. ಮೂಲ ಬಂಡವಾಳದೊಂದಿಗೆ ಆರಂಭಿಸಿದ ಕಾಪ್‌ರ್‍ ಬ್ಯಾಂಕು ಇಂದು 17,000 ಕೋಟಿ ರು.ಗಳಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. 113 ವರ್ಷಗಳ ಹಿಂದೆ ಆರಂಭವಾದ ಈ ಬ್ಯಾಂಕಿನ ಮೊದಲ ದಿನದ ವ್ಯವಹಾರ ಕೇವಲ 38 ರು. 13 ಅಣೆ 2 ಪೈಸೆಗಳಾಗಿತ್ತು. ಇಂದು ಹಾಂಕಾಂಗ್‌, ದುಬೈಗಳಿಗೂ ಹರಡಿರುವ ಬ್ಯಾಂಕು 3,29,000 ಕೋಟಿ ರು.ಗಳಿಗೂ ಮೀರಿ ವ್ಯವಹಾರ ನಡೆಸುತ್ತಿದೆ.

5 ಸಾವಿರ ರೂ. ವಿತ್'ಡ್ರಾ ಮಾಡಲು OTP: ಇಲ್ಲಿದೆ ಬ್ಯಾಂಕ್‌ ರೂಲ್ಸ್ ಕಾಪಿ!

2600-ಶಾಖೆಗಳು

3140 ಎಟಿಎಂ

17776-ನೌಕರರು

ದೇಶಕ್ಕೆ ಪಿಗ್ಮಿ ಸ್ಕೀಂ ಹೇಳಿಕೊಟ್ಟಿದ್ದೇ ಸಿಂಡ್‌ ಬ್ಯಾಂಕ್‌

8 ಸಾವಿರ ರು. ಮೂಲ ಬಂಡವಾಳದೊಂದಿಗೆ ಉಪೇಂದ್ರ ಅನಂತ್‌ ಪೈ, ವಾಮನ್‌ ಕುಡ್ವ ಮತ್ತು ಡಾ.ಟಿಎಂಎ ಪೈ ‘ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್‌ ಸಿಂಡಿಕೇಟ್‌ ಲಿಮಿಟೆಡ್‌’ನ್ನು 1925ರಲ್ಲಿ ಉಡುಪಿಯಲ್ಲಿ ಸ್ಥಾಪಿಸಿದ್ದರು. 1963ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಎಂಬ ಹೆಸರು ಬಂತು. 1969ರಲ್ಲಿ ರಾಷ್ಟ್ರೀಕರಣಗೊಂಡಿತು. ಕೆನರಾ ಇಂಡಸ್ಟ್ರಿಯಲ್‌ ಆ್ಯಂಡ್‌ ಬ್ಯಾಂಕಿಂಗ್‌, ಸಿಂಡಿಕೇಟ್‌ ಲಿಮಿಟೆಡ್‌ ಬ್ಯಾಂಕು ಕಾಲಕಾಲಕ್ಕೆ ಸುಮಾರು 20 ಸಣ್ಣಪುಟ್ಟಬ್ಯಾಂಕುಗಳನ್ನು ತನ್ನೊಳಗೆ ವಿಲೀನಗೊಳಿಸಿಕೊಂಡಿದೆ.

ಇಂದು ಭಾರತ ಮಾತ್ರವಲ್ಲ ಲಂಡನ್‌, ದೋಹ, ಮಸ್ಕತ್‌ ಸೇರಿದಂತೆ 4000ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. 8000 ರು.ಗಳ ಮೂಲಬಂಡವಾಳ, ಇಂದು 2.99 ಲಕ್ಷ ಕೋಟಿ ರು.ಗಳಷ್ಟುಆಸ್ತಿಯನ್ನು, 6,913 ಕೋಟಿ ರು.ಗಳಷ್ಟುವಾರ್ಷಿಕ ವ್ಯವಹಾರ ಹೊಂದಿದೆ.

ಉಡುಪಿ-ಮಂಗಳೂರಿನ ಹಳ್ಳಿಗಳ ಮೇಲೆ ಕೇಂದ್ರೀಕೃತವಾಗಿ ವ್ಯವಹಾರಕ್ಕೆ ಇಳಿದ ಸಿಂಡಿಕೇಟ್‌ ಬ್ಯಾಂಕು, ಏಜೆಂಟರನ್ನು ನೇಮಿಸಿಕೊಂಡು ಅವರ ಮೂಲಕ ಪ್ರತಿದಿನ ಹಳ್ಳಿಹಳ್ಳಿಗಳನ್ನು ಜನರ ಮನೆ ಬಾಗಿಲಿಗೇ ಹೋಗಿ 2 ಆಣೆ ಸಂಗ್ರಹಿಸಿ, ಅವರ ಖಾತೆಗೆ ಜಮಾ ಮಾಡುವ ಪಿಗ್ಮಿ ಡೆಪಾಸಿಟ್‌ ಸ್ಕೀಂ ಹುಟ್ಟು ಹಾಕಿತು. ಇಲ್ಲಿನ ಹಳ್ಳಿಹಳ್ಳಿಗಳಲ್ಲಿ ಸಣ್ಣಪುಟ್ಟಸಂಪಾದನೆಯ ಪ್ರತಿಯೊಬ್ಬರಿಗೂ ಉಳಿತಾಯದ ರುಚಿ ಹಚ್ಚಿತು. ಇದರ ಯಶಸ್ವಿಯನ್ನು ಕಂಡ ಎಲ್ಲ ಬ್ಯಾಂಕುಗಳು ಇದನ್ನು ಅನುಸರಿಸಿದವು.

4000-ಶಾಖೆಗಳು

35,000-ಉದ್ಯೋಗಿಗಳು

6,919 ಕೋಟಿ-ವಾರ್ಷಿಕ ವ್ಯವಹಾರ

ಕರಾವಳಿ ಅಸ್ಮಿತೆಗೆ ಪೆಟ್ಟು ಎಂಬ ಆತಂಕ

ಹೋಟೆಲ್‌ ಉದ್ಯಮದ ಜೊತೆಗೆ ಶಿಕ್ಷಣ ಮತ್ತು ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡಕ್ಕೆ ದೇಶದಲ್ಲೇ ಪ್ರಮುಖ ಸ್ಥಾನವಿದೆ. ದೇಶದ 27 ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಒಂದೇ ಕಡೆ ನಾಲ್ಕು ಬ್ಯಾಂಕ್‌ಗಳು ಜನಿಸಿದ್ದರೆ, ಅದು ಕರಾವಳಿಯಲ್ಲಿ ಎಂಬುದು ಮಹತ್ವದ ಸಂಗತಿ. ಶತಮಾನಗಳ ಇತಿಹಾಸ ಹೊಂದಿರುವ ಈ ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಲೀನಗೊಳ್ಳುವುದರಿಂದ ಕರಾವಳಿಯ ಅಸ್ಮಿತೆಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು, ಬ್ಯಾಂಕ್‌ ಅಧಿಕಾರಿಗಳು ಹಾಗೂ ನೌಕರರು, ಹಿತೈಷಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬ್ಯಾಂಕುಗಳ ವಿಲೀನದಿಂದ ಶಾಖೆಗಳು ಕಡಿಮೆಯಾದಾಗ ನಿರೀಕ್ಷೆಯಂತೆ ಸಿಬ್ಬಂದಿ ಸಂಖ್ಯೆ ಹೆಚ್ಚು ಕಾಣುತ್ತದೆ. ಆಗ ಸ್ವಯಂ ನಿವೃತ್ತಿಗೆ ಒತ್ತಡ ಬರುತ್ತದೆ. ಒಂದು ವೇಳೆ ನಿವೃತ್ತಿ ತೆಗೆದುಕೊಳ್ಳದಿದ್ದರೆ, ಯಾವುದಾದರೂ ದೂರದ ಶಾಖೆಗೆ ವರ್ಗಾವಣೆ ಮಾಡುತ್ತಾರೆ. ಕೆಲಸ ಬಿಟ್ಟು ಹೋಗಬೇಕಾಗುತ್ತದೆ ಎಂದು ಬ್ಯಾಂಕುಗಳ ನೌಕರ ಸಂಘಟನೆಗಳು ಆತಂಕ ವ್ಯಕ್ತಪಡಿಸಿ, ಕೇಂದ್ರದ ಕ್ರಮವನ್ನು ವಿರೋಧಿಸಿವೆ. ಪ್ರಸಕ್ತ ಬ್ಯಾಂಕಿಂಗ್‌ ಕ್ಷೇತ್ರ ಪ್ರಾದೇಶಿಕತೆಯಿಂದ ಹೊರಬರುತ್ತಿವೆ. ಭಾರತೀಯ ಬ್ಯಾಂಕ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುವ ಉದ್ದೇಶದಿಂದ ವಿಲೀನ ಪ್ರಕ್ರಿಯೆಯನ್ನು ಸಮರ್ಥಿಸುವ ಕರಾವಳಿಯ ಆರ್ಥಿಕ ತಜ್ಞರೂ ಇದ್ದಾರೆ.

ಕರಾವಳಿಯಲ್ಲಿ ಇಲ್ಲ ಪ್ರಧಾನ ಕಚೇರಿಗಳು

ಅವಿಭಜಿತ ದ.ಕ. ಜಿಲ್ಲೆ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ಗಳ ಹುಟ್ಟೂರು. ಇವುಗಳಲ್ಲಿ ವಿಜಯಾ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ಗಳ ಪ್ರಧಾನ ಕಚೇರಿಗಳು ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದವು. ಪ್ರಸ್ತುತ ಸಿಂಡಿಕೇಟ್‌ ಬ್ಯಾಂಕ್‌ನ ಪ್ರಧಾನ ಕಚೇರಿ ಮಣಿಪಾಲ ಹಾಗೂ ಕಾರ್ಪೊರೇಷÜನ್‌ ಬ್ಯಾಂಕ್‌ ಪ್ರಧಾನ ಕಚೇರಿ ಮಂಗಳೂರಿನಲ್ಲಿದೆ. ಇನ್ನು ಮುಂದೆ ಇವೆರಡು ಬ್ಯಾಂಕ್‌ಗಳ ಪ್ರಧಾನ ಕಚೇರಿ ಮಂಗಳೂರಿನಲ್ಲಿ ಇರುವುದು ಅಸಂಭವ. ಕೆನರಾ ಬ್ಯಾಂಕ್‌ ಹೆಸರು ಉಳಿಸಿಕೊಂಡ ಬಗ್ಗೆಯಷ್ಟೇ ಕರಾವಳಿಗರು ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ನಾಲ್ಕರಲ್ಲಿ ಮೂರು ಬ್ಯಾಂಕ್‌ ನಷ್ಟದಲ್ಲಿ

ಕರಾವಳಿಯಲ್ಲಿ ಜನಿಸಿದ ನಾಲ್ಕು ಬ್ಯಾಂಕ್‌ಗಳ ಪೈಕಿ ಮೂರು ಬ್ಯಾಂಕ್‌ಗಳು ಕಳೆದ ಎರಡು ವರ್ಷಗಳಿಂದ ನಷ್ಟದಲ್ಲಿ ಇತ್ತು. ಕಳೆದ ವರ್ಷ ಬ್ಯಾಂಕ್‌ ಆಫ್‌ ಬರೋಡಾ ಜೊತೆ ವಿಲೀನಗೊಂಡ ವಿಜಯಾ ಬ್ಯಾಂಕ್‌ ನಷ್ಟದಲ್ಲಿ ಇರಲಿಲ್ಲ. ಇದನ್ನು ಹೊರತುಪಡಿಸಿದರೆ, ಈಗ ವಿಲೀನಗೊಳ್ಳುತ್ತಿರುವ ಕಾರ್ಪೊರೇಷನ್‌, ಸಿಂಡಿಕೇಟ್‌ ಹಾಗೂ ಕೆನರಾ ಬ್ಯಾಂಕ್‌ಗಳಿಗೆ ನಷ್ಟದ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಕಾರ್ಪೊರೇಷನ್‌ ಬ್ಯಾಂಕ್‌ ಕಳೆದ ನಾಲ್ಕು ವರ್ಷಗಳಿಂದ ನಷ್ಟಅನುಭವಿಸುತ್ತಿದೆ. ವಸೂಲಾಗದ ಹೊರಬಾಕಿ ಸಾಲಗಳಿಂದಾಗಿ ನಷ್ಟದ ಪ್ರಮಾಣ ನಿರಂತರವಾಗಿ ಮುಂದುವರಿದಿದೆ. ಕೆನರಾ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ಗಳು ಕಳೆದ ವರ್ಷ ನಷ್ಟದಲ್ಲಿದ್ದವು. ಈಗ ಇತರೆ ಬ್ಯಾಂಕ್‌ಗಳ ಜೊತೆ ವಿಲೀನಗೊಂಡಿರುವುದು ನಷ್ಟದಲ್ಲಿರುವ ಬ್ಯಾಂಕ್‌ಗಳಿಗೆ ಟಾನಿಕ್‌ ಆಗಲಿದೆಯೇ ಎಂಬುದು ಸದ್ಯದ ಕುತೂಹಲ.

ಬ್ಯಾಂಕುಗಳ ವಿಲೀನ ಏಕೆ?

-ಅಂತಾರಾಷ್ಟ್ರೀಯ ಬ್ಯಾಂಕುಗಳೊಂದಿಗೆ ಪೈಪೋಟಿ

-ಬ್ಯಾಂಕುಗಳ ನಿರ್ವಹಣಾ ವೆಚ್ಚ ಕಡಿತ

-ಅನುತ್ಪಾದಕ ಸಾಲದ ನಿಯಂತ್ರಣ

-ಬ್ಯಾಕಿಂಗ್‌ ಕ್ಷೇತ್ರದ ಮೇಲೆ ಆರ್‌ಬಿಐ ನಿಯಂತ್ರಣ ಹೊಳದಲು ಅನುಕೂಲ

-ಸುಲಭ ಬ್ಯಾಂಕಿಂಗ್‌ ಸೇವೆ ಒದಗಿಸುವುದು

ಮಾಹಿತಿ: ಆತ್ಮಭೂಷಣ್‌, ಸುಭಾಶ್ಚಂದ್ರ ಎಸ್‌.ವಾಗ್ಳೆ

click me!