
ಬೆಂಗಳೂರು: ಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಜಾವಾ-ಯೆಜ್ಡಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ದೇಶಾದ್ಯಂತ ಗ್ರಾಹಕರಿಗೆ ತಲುಪುವ ಉದ್ದೇಶದಿಂದ ಬೃಹತ್ ಮಾರಾಟ ಮತ್ತು ಸೇವಾ ಜಾಲ ವಿಸ್ತರಣೆ ಯೋಜನೆಯನ್ನು ಪ್ರಕಟಿಸಿದ್ದು, 2028ರ ಆರ್ಥಿಕ ವರ್ಷದ ವೇಳೆಗೆ 700ಕ್ಕೂ ಹೆಚ್ಚು ಶೋರೂಮ್‌ಗಳನ್ನು ತೆರೆಯುವ ಬೃಹತ್ ಮೈಲಿಗಲ್ಲಿನ ಗುರಿಯನ್ನು ನಿಗದಿಪಡಿಸಿಕೊಂಡಿದೆ. ಪ್ರಸ್ತುತ 2026ನೇ ಸಾಲಿನಲ್ಲಿ ಸಂಸ್ಥೆಯು 500 ಡೀಲರ್‌ಶಿಪ್‌ಗಳ ಮೈಲಿಗಲ್ಲನ್ನು ಸಾಧಿಸುವ ನಿಟ್ಟಿನಲ್ಲಿ ಶರವೇಗದಲ್ಲಿ ಸಾಗುತ್ತಿದೆ.
ಕೇವಲ ಹೊಸ ವಾಹನಗಳನ್ನು ಮಾರಾಟ ಮಾಡುವುದಕ್ಕೆ ಮಾತ್ರ ಸೀಮಿತವಾಗದೆ, ವಾಹನ ಖರೀದಿಸಿದ ನಂತರ ಗ್ರಾಹಕರಿಗೆ ನೀಡಲಾಗುವ ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಕಂಪನಿ ವಿಶೇಷ ಆದ್ಯತೆ ನೀಡಿದೆ. ಗ್ರಾಹಕರಿಗೆ ಅಗತ್ಯವಿರುವ ಅಧಿಕೃತ ಬಿಡಿಭಾಗಗಳು ಯಾವುದೇ ವಿಳಂಬವಿಲ್ಲದೆ ಸುಲಭವಾಗಿ ಸಿಗುವಂತೆ ಪೂರೈಕೆ ಜಾಲವನ್ನು ಬಲಪಡಿಸಲಾಗಿದೆ.
ಅಲ್ಲದೆ, ಶೋರೂಮ್ ಮತ್ತು ಸರ್ವಿಸ್ ಸೆಂಟರ್‌ಗಳನ್ನು ಕೇವಲ ಮಹಾನಗರಗಳಿಗೆ ಸೀಮಿತಗೊಳಿಸದೆ, ದ್ವಿತೀಯ ಮತ್ತು ತೃತೀಯ ಹಂತದ ಸಣ್ಣ ನಗರಗಳಿಗೂ ವಿಸ್ತರಿಸಲಾಗುತ್ತಿದೆ. ಗ್ರಾಹಕರ ವಾಹನಗಳ ನಿಯಮಿತ ನಿರ್ವಹಣೆಗಾಗಿ ದೇಶಾದ್ಯಂತ ಲೆಜೆಂಡ್ಸ್ ಕೇರ್ ಕ್ಯಾಂಪ್ ಎಂಬ ವಿಶೇಷ ಸೇವಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
ಇತ್ತೀಚಿನ ತಲೆಮಾರಿನ ಜಾವಾ ಮತ್ತು ಯೆಜ್ಡಿ ಮೋಟಾರ್‌ಸೈಕಲ್‌ಗಳ ನಿರ್ಮಾಣ ಗುಣಮಟ್ಟ ಪೇಂಟಿಂಗ್ ಹಾಗೂ ಫಿಟ್ಟಿಂಗ್‌ಗಳಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ವರದಿ ಮಾಡಿದ್ದಾರೆ.
ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಕಂಪನಿಯು ತನ್ನ ನೂತನ ಮೋಟಾರ್‌ಸೈಕಲ್‌ಗಳಿಗೆ 4 ವರ್ಷಗಳು ಅಥವಾ 50,000 ಕಿಲೋಮೀಟರ್‌ಗಳ ಉಚಿತ ಸ್ಟ್ಯಾಂಡರ್ಡ್ ವಾರಂಟಿಯನ್ನು ಘೋಷಿಸಿದೆ. ಇದರೊಂದಿಗೆ ಆಸಕ್ತ ಗ್ರಾಹಕರಿಗೆ ವಿಸ್ತೃತ ವಾರಂಟಿ ವಾರ್ಷಿಕ ನಿರ್ವಹಣಾ ಒಪ್ಪಂದ ಹಾಗೂ ತುರ್ತು ರೋಡ್‌ಸೈಡ್ ಸಿಸ್ಟನ್ಸ್ ಸೇವೆಗಳನ್ನೂ ಒದಗಿಸಲಾಗುತ್ತಿದೆ.
ಕಂಪನಿಯ ಈ ಬೃಹತ್ ವಿಸ್ತರಣಾ ಹೆಜ್ಜೆಯ ಕುರಿತು ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, ಕಳೆದ ಕೆಲವು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವಾ ಅನುಭವ ನೀಡುವುದರ ಮೇಲೆ ನಾವು ತೀವ್ರ ಗಮನ ಹರಿಸಿದ್ದೇವೆ. ನೆಟ್‌ವರ್ಕ್ ವಿಸ್ತರಣೆ, ಸರ್ವಿಸ್ ಲಭ್ಯತೆ ಮತ್ತು ಮೂಲ ಬಿಡಿಭಾಗಗಳನ್ನು ಸುಲಭವಾಗಿ ಒದಗಿಸುವ ಮೂಲಕ ಪ್ರತಿಯೊಬ್ಬ ಗ್ರಾಹಕನಿಗೆ ಸಂಪೂರ್ಣ ವಿಶ್ವಾಸಾರ್ಹ ಸೇವೆ ನೀಡುವುದು ನಮ್ಮ ಆಶಯವಾಗಿದೆ. ಜಾವಾ, ಯೆಜ್ಡಿ ಅಥವಾ ಬಿಎಸ್‌ಎ ಮೋಟಾರ್‌ಸೈಕಲ್ ಖರೀದಿಸುವ ಪ್ರತಿಯೊಬ್ಬ ವಾಹನ ಸವಾರನಿಗೂ ಯಾವುದೇ ಕಿರಿಕಿರಿಯಿಲ್ಲದ ತೊಂದರೆರಹಿತ ಅನುಭವ ಸಿಗುವಂತೆ ಮಾಡುವುದೇ ನಮ್ಮ ಮುಖ್ಯ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ, ಜಾವಾ-ಯೆಜ್ಡಿ ಸಂಸ್ಥೆಯು ಹೊಸ ಮಾಡೆಲ್‌ಗಳನ್ನು ಪರಿಚಯಿಸುವುದರ ಜೊತೆಗೆ, ಬಲವಾದ ಸರ್ವಿಸ್ ಮೂಲಸೌಕರ್ಯವನ್ನು ನಿರ್ಮಿಸುವ ಮೂಲಕ ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.